ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಶತಾಯುಷಿ ಸಂಗೀತ ವಿದ್ವಾನ್‌ ಅಯ್ಯಂಗಾರ್‌ಗೆ ಸನ್ಮಾನ

Published 7 ಜೂನ್ 2024, 14:08 IST
Last Updated 7 ಜೂನ್ 2024, 14:08 IST
ಅಕ್ಷರ ಗಾತ್ರ

ರಾಮನಗರ: ನೂರನೇ ವರ್ಷಕ್ಕೆ ಕಾಲಿಟ್ಟ ರಾಮನಗರದ ಹಿರಿಯ ಸಂಗೀತ ವಿದ್ವಾನ್ ಬಿ.ಎಸ್. ನಾರಾಯಣ ಅಯ್ಯಂಗಾರ್ ಅವರಿಗೆ ಕನಕಪುರದ ದಮ್ಮ ದೀವಿಗೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶುಕ್ರವಾರ ಸನ್ಮಾನಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಅವರು ಅಯ್ಯಂಗಾರ್ ಅವರಿಗೆ ಮೈಸೂರು ಪೇಟ ತೊಡಿಸಿ, ಹೂವಿನಹಾರ ಹಾಕಿ ಗೌರವಿಸಿದರು.

ಬಳಿಕ ಮಾತನಾಡಿದ ಮಲ್ಲಿಕಾರ್ಜುನ್, ‘ಸಂಗೀತ ಕ್ಷೇತ್ರಕ್ಕೆ ಬಿ.ಎಸ್. ನಾರಾಯಣ ಅಯ್ಯಂಗಾರ್ ಅವರು ತಮ್ಮದೇ ಆದ ಕೊಡುಗೆ ನೀಡಿದ್ಧಾರೆ. ನೂರು ವರ್ಷ ಪೂರೈಸಿರುವ ಅವರನ್ನು ಜಿಲ್ಲೆಯ ಜನರ ಪರವಾಗಿ ಗೌರವಿಸಿದ್ದೇನೆ. ಇಂತಹ ಹಿರಿಯ ಸಂಗೀತ ಕಲಾವಿದರನ್ನು ಸರ್ಕಾರ ಗುರುತಿಸಿ ಸರಿಯಾದ ಮನ್ನಣೆ ನೀಡದಿರುವುದು ಬೇಸರದ ಸಂಗತಿ’ ಎಂದರು.

ಭಾರತೀಯ ರೆಡ್‌ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಎಸ್. ರುದ್ರೇಶ್ವರ ಮಾತನಾಡಿ, ‘ಅಯ್ಯಂಗಾರ್ ಅವರ ಸಂಗೀತ ಶಾಲೆಗೆ 73 ವರ್ಷಗಳ ಹೆಗ್ಗಳಿಕೆ ಇದೆ. 1948ರಿಂದ ಪ್ರತಿವರ್ಷವೂ ನಾಡಿನ ಪ್ರಸಿದ್ಧ ಸಂಗೀತ ವಿದ್ವಾಂಸರನ್ನು ಆಹ್ವಾನಿಸಿ ಪುರಂದರದಾಸ ಹಾಗೂ ತ್ಯಾಗರಾಜರ ಆರಾಧನಾ ಮಹೋತ್ಸವ ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ’ ಎಂದು ಹೇಳಿದರು.

‘ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮೂರು ತಿಂಗಳಿಗೊಮ್ಮೆ ಅಯ್ಯಂಗಾರ್ ಅವರು ತ್ರೈಮಾಸಿಕ ಸಂಗೀತಾರಾಧನೆ ನಡೆಸಿಕೊಂಡು ಬರುತ್ತಿದ್ದಾರೆ. 70 ವರ್ಷಗಳ ಇವರ ಸಂಗೀತಾರಾಧನೆಯ ಸೇವೆಗೆ ಇದುವರೆಗೆ ಯಾವುದೇ ಸರ್ಕಾರಿ ಇಲಾಖೆಗಳ ಸಹಕಾರವಿಲ್ಲದೆ ಸ್ವಂತ ಹಣದಿಂದ ನಡೆಸುತ್ತಿರುವುದು ಹೆಮ್ಮೆಯ ವಿಷಯ’ ಎಂದು ಬಣ್ಣಿಸಿದರು.

ವಿದ್ವಾನ್ ಎಸ್.ಎನ್. ರಂಗರಾಜು, ಎಸ್.ಎನ್. ಶ್ರೀನಿವಾಸ ಪ್ರಸನ್ನ, ಉಮಾ ರಂಗರಾಜು, ಸಂಗೀತ ವಿದುಷಿ ಸುಪರ್ಣ ಶ್ರೀನಿವಾಸ ಪ್ರಸನ್ನ, ಶ್ರೀನಿವಾಸ್, ಸುದರ್ಶನ್, ಜಯಲಕ್ಷ್ಮಿ ಶ್ರೀಧರ್, ರಮಣಿ ರಂಗರಾಜನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT