ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸೂರು ಮಹರ್ಷಿ ಶಾಲೆಗೆ ಅಗ್ರ ಪ್ರಶಸ್ತಿ

ವಂಡರ್‌ಲಾ ಪರಿಸರ ಮತ್ತು ಇಂಧನ ಸಂರಕ್ಷಣೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
Last Updated 27 ಫೆಬ್ರುವರಿ 2020, 14:33 IST
ಅಕ್ಷರ ಗಾತ್ರ

ರಾಮನಗರ: ಹೊಸೂರಿನ ಮಹರ್ಷಿ ವಿದ್ಯಾಮಂದಿರ ಹಿರಿಯ ಪ್ರಾಥಮಿಕ ಶಾಲೆಯು 2019–20ನೇ ಸಾಲಿನ ವಂಡರ್‌ಲಾ ಪರಿಸರ ಮತ್ತು ಇಂಧನ ಸಂರಕ್ಷಣೆ ಅಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ಬಿಡದಿ ಬಳಿಯ ವಂಡರ್‌ಲಾ ಮನೋರಂಜನಾ ಪಾರ್ಕ್‌ನಲ್ಲಿ ಗುರುವಾರ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನಡೆಯಿತು. ಮಹರ್ಷಿ ಶಾಲೆ ಮೊದಲ ಬಹುಮಾನವಾಗಿ ₹ 50 ಸಾವಿರ ಹಾಗೂ ಟ್ರೋಫಿಯನ್ನು ಪಡೆಯಿತು. ಸಾತನೂರಿನ ದೆಹಲಿ ಪಬ್ಲಿಕ್‌ ಶಾಲೆ ಹಾಗೂ ಬೆಂಗಳೂರಿನ ಧರ್ಮರಾಮ್‌ ಕಾಲೇಜು ಕ್ರೈಸ್ತ್‌ ಶಾಲೆ ದ್ವಿತೀಯ ಬಹುಮಾನವಾಗಿ ತಲಾ ₹25 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಸ್ವೀಕರಿಸಿದವು.

ಕೊಡಗಿನ ಕೂರ್ಗ್‌ ಪಬ್ಲಿಕ್‌ ಶಾಲೆ, ಶಿವಮೊಗ್ಗದ ಹಾವಳ್ಳಿಯ ಜ್ಞಾನದೀಪ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಮಾರತಹಳ್ಳಿಯ ವಾಗ್ದೇವಿ ವಿಲಾಸ ಶಾಲೆ ತಂಡಗಳು ಮೂರನೇ ಬಹುಮಾನ ಹಂಚಿಕೊಂಡವು. ಈ ಶಾಲೆಗಳಿಗೆ ತಲಾ ₹15 ಸಾವಿರ ನಗದು ಬಹುಮಾನ ನೀಡಲಾಯಿತು.

ಈ ಬಾರಿ ಪರಿಸರ ಸಂರಕ್ಷಣೆಗೆ ಶ್ರಮಿಸಿದ ಶಿಕ್ಷಕರಿಗೂ ಪ್ರಶಸ್ತಿ ವಿತರಿಸಿದ್ದು ವಿಶೇಷ. ದಕ್ಷಿಣ ಕನ್ನಡ ಜಿಲ್ಲೆಯ ಡಿಕೆಝಡ್‌ಪಿಎಂಎಚ್‌ಪಿ ಶಾಲೆಯ ಭಾಸ್ಕರ್‌ ನಾಯಕ್ ಮೊದಲ, ಅದೇ ಜಿಲ್ಲೆಯ ಸತ್ಯಸಾಯಿ ಲೋಕ ಸೇವಾ ಶಾಲೆಯ ಸುನಿಲ್‌ ದ್ವಿತೀಯ ಹಾಗೂ ಚನ್ನಪಟ್ಟಣ ತಾಲ್ಲೂಕಿನ ಇಗ್ಗಲೂರು ಸರ್ಕಾರಿ ಪ್ರೌಢಶಾಲೆಯ ಚಂದ್ರಶೇಖರ್ ಮೂರನೇ ಬಹುಮಾನ ಪಡೆದರು. ಇವರಿಗೆ ಕ್ರಮವಾಗಿ ₨20 ಸಾವಿರ, ₹5 ಸಾವಿರ ಹಾಗೂ ₹10 ಸಾವಿರ ನಗದು ಪುರಸ್ಕಾರ ವಿತರಿಸಲಾಯಿತು. ಜೊತೆಗೆ 30 ಶಾಲೆಗಳಿಗೆ ವಂಡರ್‌ಲಾ ವಿಶೇಷ ಮಾನ್ಯತಾ ಪ್ರಶಸ್ತಿ ನೀಡಲಾಯಿತು.

ಚಿತ್ರನಟಿ ರಾಧಿಕಾ ನಾರಾಯಣ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ‘ಇಂದು ಪರಿಸರದ ಕಾಳಜಿ ನಮ್ಮ ಆಯ್ಕೆ ಅಲ್ಲ, ಕರ್ತವ್ಯವಾಗಿದೆ. ಇಲ್ಲಿನ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಭೀಕರ ಆಗಲಿದೆ’ ಎಂದು ಎಚ್ಚರಿಸಿದರು. ಗ್ರೇಟಾನಂತಹ ಯುವಜನರನ್ನು ವಿದ್ಯಾರ್ಥಿಗಳು ಮಾದರಿಯಾಗಿ ಸ್ವೀಕರಿಸಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ವಂಡರ್‌ಲಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್‌ ಜೋಸೆಫ್‌ ಮಾತನಾಡಿ ‘ಈಚಿನ ದಿನಗಳಲ್ಲಿ ಪರಿಸರದ ಸಮತೋಲನದಲ್ಲಿ ಏರುಪೇರಾಗುತ್ತಿರುವುದು ಆತಂಕಕಾರಿ ಸಂಗತಿ. ಇನ್ನಾದರೂ ನಾವು ಅದರ ಸಂರಕ್ಷಣೆಯತ್ತ ಗಮನ ಹರಿಸಬೇಕಿದೆ’ ಎಂದರು. ಈ ಸಾಲಿನ ಪ್ರಶಸ್ತಿಗೆ 200ಕ್ಕೂ ಹೆಚ್ಚು ಶಾಲೆಗಳಿಂದ ಅರ್ಜಿಗಳು ಬಂದಿದ್ದವು. ಅದರಲ್ಲಿ 85 ಶಾಲೆಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿತ್ತು’ ಎಂದು ಮಾಹಿತಿ ನೀಡಿದರು.

ಕಂಪನಿಯ ಸಿಎಫ್‌ಒ ಸತೀಶ್‌ ಶೇಷಾದ್ರಿ, ಬೆಂಗಳೂರು ಪಾರ್ಕ್‌ನ ಮುಖ್ಯಸ್ಥ ಎಂ.ಬಿ. ಮಹೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT