ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

KSRTC ರಾಮನಗರ ವಿಭಾಗ: ವರ್ಷದಲ್ಲಿ 4.19 ಕೋಟಿ ನಾರಿಯರ ಪ್ರಯಾಣ

ರಾಮನಗರ ವಿಭಾಗ: ವರ್ಷದ ಪ್ರಯಾಣಿಕರ ಟಿಕೆಟ್ ಮೌಲ್ಯ ಬರೋಬ್ಬರಿ ₹112.39 ಕೋಟಿ
Published 15 ಜೂನ್ 2024, 4:55 IST
Last Updated 15 ಜೂನ್ 2024, 4:55 IST
ಅಕ್ಷರ ಗಾತ್ರ

ರಾಮನಗರ: ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡುವ ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆ ಜಾರಿಯಾಗಿ ಒಂದು ವರ್ಷವಾಗಿದೆ. ಈ ಅವಧಿಯಲ್ಲಿ ರಾಮನಗರ ವಿಭಾಗದ ಆರು ಘಟಕಗಳಲ್ಲಿ 4.19 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಉಚಿತ ಪ್ರಯಾಣದ ಟಿಕೆಟ್‌ ಮೌಲ್ಯವೇ ಬರೋಬ್ಬರಿ ₹112.39 ಕೋಟಿ.

ಮಹಿಳೆಯರಿಗೆ ಸ್ವಾವಲಂಬನೆಗೆ ಪೂರಕವಾಗಿ ಕಾಂಗ್ರೆಸ್ ಪಕ್ಷವು 2023ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ ಐದು ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆ ಸಹ ಒಂದಾಗಿತ್ತು. ಪಕ್ಷವು ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತಿದ್ದಂತೆ, ಕಳೆದ ಜೂನ್ 11ರಂದು ‘ಶಕ್ತಿ’ಯನ್ನು ಜಾರಿಗೊಳಿಸಿತ್ತು.

ಸರ್ಕಾರದ ಈ ಮಹತ್ವಕಾಂಕ್ಷಿ ಯೋಜನೆಗೆ ಕೂಲಿ ಮಾಡುವ ಮಹಿಳೆಯರಿಂದಿಡಿದು ಕಚೇರಿಗೆ ಹೋಗುವ ನಾರಿಯರು, ಶಾಲಾ–ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರು, ಗೃಹಿಣಿಯರು ಸೇರಿದಂತೆ ಎಲ್ಲಾ ರೀತಿಯ ಮಹಿಳೆಯರು ಸರ್ಕಾರದ ಈ ಮಹತ್ವಕಾಂಕ್ಷಿ ಯೋಜನೆಯ ಫಲಾನುಭವಿಗಳಾಗಿದ್ದಾರೆ.

‘ಶಕ್ತಿ ಯೋಜನೆಯು ಅಂತರರಾಜ್ಯ ಬಸ್‌ಗಳನ್ನು ಹೊರತುಪಡಿಸಿ ರಾಜ್ಯದೊಳಗಿನ ಬಸ್‌ಗಳ ಪ್ರಯಾಣಕ್ಕೆ ಮಾತ್ರ ಅನ್ವಯವಾಗಲಿದೆ. ವಿಭಾಗದ ಸಾಮಾನ್ಯ, ವೇಗದೂತ ಹಾಗೂ ನಗರ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರು ತಮ್ಮ ಗುರುತಿನ ಚೀಟಿ ತೋರಿಸಿ ಉಚಿತ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದಾರೆ’ ಎಂದು ಕೆಎಸ್‌ಆರ್‌ಟಿಸಿ ರಾಮನಗರ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಮನಗರದಲ್ಲಿ ಹೆಚ್ಚು: ‘ಯೋಜನೆಯಡಿ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ರಾಮನಗರ ಘಟಕದಲ್ಲಿ ಅತಿ ಹೆಚ್ಚು 96.29 ಲಕ್ಷ ಮಹಿಳೆಯರು ಪ್ರಯಾಣಿಸಿದ್ದಾರೆ. ಅದರ ಟಿಕೆಟ್ ಮೌಲ್ಯ ₹20.43 ಕೋಟಿ. ಆನೇಕಲ್ ಘಟಕದಲ್ಲಿ ಅತಿ ಕಡಿಮೆ 36.75 ಲಕ್ಷ ಮಂದಿ ಯೋಜನೆಯ ಪ್ರಯೋಜನ ಪಡೆದಿದ್ದು, ಅಲ್ಲಿನ ಟಿಕೆಟ್ ಮೌಲ್ಯ ₹11.22 ಕೋಟಿಯಾಗಿದೆ’ ಎಂದು ಹೇಳಿದರು.

‘ಪ್ರಯಾಣಿಕರ ಟಿಕೆಟ್ ಮೌಲ್ಯದ ವಿಷಯದಲ್ಲಿ ಕನಕಪುರ ಮುಂದಿದೆ. ಇಲ್ಲಿ 88.33 ಲಕ್ಷ ಮಂದಿ ಪ್ರಯಾಣಿಸಿದ್ದು, ₹25.61 ಕೋಟಿ ಮೌಲ್ಯದ ಟಿಕೆಟ್‌ಗಳನ್ನು ನೀಡಲಾಗಿದೆ. ನಂತರದ ಸ್ಥಾನದಲ್ಲಿರುವ ಚನ್ನಪಟ್ಟಣದಲ್ಲಿ 90.22 ಲಕ್ಷ ಮಹಿಳೆಯರು ಪ್ರಯಾಣ ಮಾಡಿದ್ದು, ಇಲ್ಲಿ ₹21.54 ಕೋಟಿ ಮೌಲ್ಯದ ಟಿಕೆಟ್‌ಗಳನ್ನು ಹರಿಯಲಾಗಿದೆ’ ಎಂದು ಮಾಹಿತಿ ನೀಡಿದರು.

ಶೈಲಾ ಶ್ರೀನಿವಾಸ್ ಲೇಖಕಿ
ಶೈಲಾ ಶ್ರೀನಿವಾಸ್ ಲೇಖಕಿ

ಶಕ್ತಿ ಯೋಜನೆ ಮಹಿಳೆಯರ ಸ್ವಾವಲಂಬನೆಗೆ ಪೂರಕವಾಗಿರುವುದರಲ್ಲಿ ಎರಡು ಮಾತಿಲ್ಲ. ಆದರೆ ಯೋಜನೆ ಬಂದಾಗಿನಿಂದ ಹೆಚ್ಚಾಗಿರುವ ಪ್ರಯಾಣಿಕರು ಸಂಖ್ಯೆಯನ್ನು ನಿಭಾಯಿಸಲು ಸರ್ಕಾರ ಹೆಚ್ಚುವರಿ ಬಸ್‌ಗಳನ್ನು ಬಿಡಬೇಕು

– ಶೈಲಾ ಶ್ರೀನಿವಾಸ್ ಲೇಖಕಿ ರಾಮನಗರ

ಮಹಿಳೆಯರನ್ನು ಆರ್ಥಿಕವಾಗಿ ಸದೃಢವಾಗಿಸುವುದರಲ್ಲಿ ಶಕ್ತಿ ಯೋಜನೆಯು ಮಹತ್ವದ ಪಾತ್ರ ವಹಿಸಿದೆ. ಮತ ಬ್ಯಾಂಕ್ ರಾಜಕಾರಣಕ್ಕಾಗಿ ಯೋಜನೆಯನ್ನು ನಿಲ್ಲಿಸುವ ಆಲೋಚನೆಯನ್ನು ರಾಜಕಾರಣಿಗಳು ನಿಲ್ಲಿಸಬೇಕು

–ಸಿ. ಜಯಲಕ್ಷ್ಮಮ್ಮ ಸಂಚಾಲಕಿ ರಾಮನಗರ ಜಿಲ್ಲಾ ಅಂಗನವಾಡಿ ನೌಕರರ ಸಂಘ

ಯೋಜನೆಯು ನಿಜಕ್ಕೂ ಮಹಿಳೆಯರಿಗೆ ‘ಶಕ್ತಿ’ ತುಂಬಿದೆ. ಕೂಲಿ ಮಾಡುವ ಮಹಿಳೆಯರು ಉದ್ಯೋಗಿಗಳು ವಿದ್ಯಾರ್ಥಿನಿಯರಿಗೆ ಹೆಚ್ಚಿನ ಅನುಕೂಲವಾಗಿದ್ದು ಅವರ ಆರ್ಥಿಕ ಹೊರೆಯನ್ನು ಸ್ವಲ್ಪಮಟ್ಟಿಗೆ ತಗ್ಗಿಸಿದೆ

– ನಾಗಮ್ಮ ಬ್ಲಾಕ್ ಅಧ್ಯಕ್ಷೆ ರಾಮನಗರ ಟೌನ್ ಮಹಿಳಾ ಕಾಂಗ್ರೆಸ್

‘ಲಾಭದತ್ತ ಸಾಗಿದ ವಿಭಾಗ’

‘ಶಕ್ತಿ ಯೋಜನೆ ಜಾರಿಯಾದ ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ನಷ್ಟದಲ್ಲಿದ್ದ ವಿಭಾಗವು ಸುಮಾರು ಲಾಭದತ್ತ ಹೆಜ್ಜೆ ಇಟ್ಟಿದೆ. ವಿಭಾಗವು ಶಕ್ತಿ ಯೋಜನೆಯಡಿ ಬಸ್‌ ಹತ್ತುವವರ ಜೊತೆಗೆ ಶಕ್ತಿಯೇತರ ಪ್ರಯಾಣಿಕರು ಬರುತ್ತಿರುವುದು ಇದಕ್ಕೆ ಕಾರಣ. ಯೋಜನೆಯು ದುಡಿಯುವ ವರ್ಗದ ಮಹಿಳೆಯರ ಪಾಲಿಗೆ ವರದಾನವಾಗಿದೆ. ವಾರಾಂತ್ಯ ಹೊರತುಪಡಿಸಿಯೂ ಬಸ್ಸುಗಳಲ್ಲಿ ಧಾರ್ಮಿಕ ಕೇಂದ್ರ ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರ ಸಂಖ್ಯೆ ಏರಿಕೆಯಾಗಿದೆ. ಬೆಳಿಗ್ಗೆ ಮತ್ತು ಸಂಜೆಯಷ್ಟೇ ಅಲ್ಲದೆ ಬೇರೆ ಸಮಯದಲ್ಲೂ ಬಸ್ಸುಗಳು ತುಂಬಿರುತ್ತವೆ’ ಎಂದು ಕೆಎಸ್‌ಆರ್‌ಟಿಸಿ ರಾಮನಗರ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT