ಸೋಮವಾರ, ಮಾರ್ಚ್ 8, 2021
30 °C
ರೋಲ್‌ಕಾಲ್‌ ಮಾಡುವವರ ಬೆದರಿಕೆಗೆ ಮಣಿಯುವುದಿಲ್ಲ: ಶಾಸಕ ಮಂಜುನಾಥ್‌

ವಂದಾರಗುಪ್ಪೆಯಲ್ಲೇ ರೇಷ್ಮೆ ಮಾರುಕಟ್ಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಈ ಹಿಂದೆ ನಿರ್ಧಾರ ಆದಂತೆ ರಾಮನಗರ–ಚನ್ನಪಟ್ಟಣ ಮಧ್ಯಭಾಗದಲ್ಲೇ ಹೈಟೆಕ್‌ ರೇಷ್ಮೆಗೂಡು ಮಾರುಕಟ್ಟೆ ಸ್ಥಾಪನೆ ಆಗಲಿದೆ. ಇದನ್ನು ಯಾರೂ ತಡೆಯಲಾಗದು ಎಂದು ಶಾಸಕ ಎ. ಮಂಜುನಾಥ್‌ ಹೇಳಿದರು.

‘ರಾಮನಗರ-ಚನ್ನಪಟ್ಟಣ ಭವಿಷ್ಯದಲ್ಲಿ ಮಹಾನಗರ ಪಾಲಿಕೆಯಾಗಿ ಘೋಷಣೆಯಾಗಬಹುದು. ಇದರ ಮಧ್ಯೆ ಮಾರುಕಟ್ಟೆ ನಿರ್ಮಾಣವಾದರೆ ರೈತರಿಗೆ ಅನುಕೂಲ ಆಗಲಿದೆ. ಜೊತೆಗೆ ಈಗ ಇರುವ ಮಾರುಕಟ್ಟೆಗಳು ಮುಂದುವರಿಯಲಿದ್ದು, ಅವುಗಳನ್ನು ಸ್ಥಳಾಂತರ ಮಾಡುವುದಿಲ್ಲ. ರೋಲ್‌ಕಾಲ್ ಮಾಡುವ, ಚಂದಾ ಎತ್ತುವವರ ಬೆದರಿಕೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ’ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈಗಿರುವ ರೇಷ್ಮೆ ಮಾರುಕಟ್ಟೆ 2 ಎಕರೆಯಲ್ಲಿದ್ದು, ಪ್ರತಿನಿತ್ಯ 20–24 ಟನ್ ವಹಿವಾಟು ನಡೆಸಲು ಮಾತ್ರ ಸಾಧ್ಯವಿದೆ. ಸ್ಥಳಾವಕಾಶದ ಕೊರತೆಯಿಂದ ಯಾವ ಸೌಕರ್ಯಗಳನ್ನೂ ಕಲ್ಪಿಸಲು ಆಗುತ್ತಿಲ್ಲ. ಹೀಗಾಗಿ ವಂದಾರಗುಪ್ಪೆ ಬಳಿ 15 ರಿಂದ 20 ಎಕರೆ ಜಾಗದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಾಣವಾಗಲಿದ್ದು, ಆ ಮಾರುಕಟ್ಟೆಗೂ ರಾಮನಗರದ ಹೆಸರನ್ನೇ ಇಡಲಾಗುತ್ತದೆ. ₹ 75 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ನಬಾರ್ಡ್‍ನಿಂದ ₹ 35 ಕೋಟಿ ಅನುದಾನವೂ ಸಿಕ್ಕಿದೆ. ಬೆಳೆಗಾರರು ಹಾಗೂ ರೀಲರ್ಸ್‍ಗಳು ಬೇಕಾದರೆ ವಹಿವಾಟು ನಡೆಸಬಹುದು. ಯಾರಿಗೂ ಬಲವಂತ ಮಾಡುವ ಪ್ರಶ್ನೆಯೇ ಇಲ್ಲ. ಅವಳಿ ಪಟ್ಟಣಗಳು ಕ್ಷಿಪ್ರಗತಿಯಲ್ಲಿ ಪ್ರಗತಿ ಹೊಂದುತ್ತವೆ. ಇದನ್ನು ಮಾರುಕಟ್ಟೆ ಸ್ಥಾಪನೆಗೆ ವಿರೋಧ ಮಾಡುತ್ತಿರುವವರು ಅರ್ಥ ಮಾಡಿಕೊಳ್ಳಬೇಕು ಎಂದರು.

ಈಗ ಮಾರುಕಟ್ಟೆ ಬಗ್ಗೆ ಚಕಾರ ಎತ್ತುತ್ತಿರುವವರು ಈ ಹಿಂದೆ ರಾಮನಗರ ಜಿಲ್ಲೆ ರಚನೆ, ರಾಜೀವ್‌ಗಾಂಧಿ ಆರೋಗ್ಯ ವಿವಿ ಸ್ಥಾಪನೆಗೂ ವಿರೋಧ ಮಾಡಿದವರು. ಜಿಲ್ಲೆಯ ಅಭಿವೃದ್ಧಿಯನ್ನು ಬಯಸದ ಇಂತಹ ರೋಲ್‌ಕಾಲ್ ವ್ಯಕ್ತಿಗಳ ಮಾತುಗಳಿಗೆ ರೀಲರ್‌ಗಳು ಕಿವಿಗೊಡಬಾರದು ಎಂದರು.

ರೀಲರ್ಸ್‍ಗಳು ತಮ್ಮ ಸಮಸ್ಯೆಗಳನ್ನು ಗಮನಕ್ಕೆ ತಂದರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ಸಚಿವ ಸಿ.ಪಿ. ಯೋಗೇಶ್ವರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ಅವರೊಂದಿಗೆ ಚರ್ಚಿಸಿ ಬಗೆಹರಿಸಲು ಸಹಕಾರ ನೀಡುತ್ತೇವೆ ಎಂದು ಹೇಳಿದರು.

ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ರವಿ ಮಾತನಾಡಿ, ‘ರಾಮನಗರ -ಚನ್ನಪಟ್ಟಣ ಮಧ್ಯಭಾಗದಲ್ಲಿ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣಕ್ಕೆ ರೇಷ್ಮೆ ಬೆಳೆಗಾರರ ಸಂಪೂರ್ಣ ಸಹಕಾರವಿದೆ. ರೀಲರ್ಸ್‍ಗಳು ಬೆಳೆಗಾರರ ಹಿತ ಮರೆತು ತಮ್ಮ ಅನುಕೂಲ ಮಾತ್ರ ನೋಡಿಕೊಳ್ಳುವುದು ಸರಿಯಲ್ಲ’ ಎಂದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗೌತಮ್ ಗೌಡ ಇದ್ದರು.

ಮಾರುಕಟ್ಟೆಗೆ ವಿರೋಧ ಸರಿಯಲ್ಲ: ಡಿಸಿಎಂ ಅಶ್ವತ್ಥನಾರಾಯಣ

‘ಜಿಲ್ಲಾ ಕೇಂದ್ರದಲ್ಲಿದ್ದ ರೇಷ್ಮೆ ಮಾರುಕಟ್ಟೆಯನ್ನು ಚನ್ನಪಟ್ಟಣಕ್ಕೆ ಸ್ಥಳಾಂತರ ಮಾಡುವುದಕ್ಕೆ ಯಾವುದೇ ರಾಜಕೀಯ ಕಾರಣವಿಲ್ಲ. ಅಲ್ಲಿ ನೂತನ ಮಾರುಕಟ್ಟೆ ನಿರ್ಮಾಣ ಮಾಡುತ್ತಿರುವುದು ರೈತರಿಗಾಗಿಯೇ ಹೊರತು ದಲ್ಲಾಳಿಗಳಿಗಾಗಿ ಅಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ‌ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದರು.

ಕನ್ನಿಕಾ ಪರಮೇಶ್ವರಿ ದೇವಾಲಯದ ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ರಾಮನಗರದಲ್ಲಿ ಮಾರುಕಟ್ಟೆ ವಿಸ್ತರಣೆ ಮಾಡಲು ಕೆಲ ಅಡ್ಡಿಗಳಿದ್ದವು. ಈಗಿನ ಮಾರುಕಟ್ಟೆ ಪಕ್ಕದ ಜಮೀನು ಬಿಕ್ಕಟ್ಟು ನ್ಯಾಯಾಲಯದಲ್ಲಿದೆ. ಎಲ್ಲರಿಗೂ ತಿಳಿದಂತೆ ರಾಮನಗರ ರೇಷ್ಮೆಗೂಡು ಮಾರುಕಟ್ಟೆ ಜಗತ್ತಿನಲ್ಲಿಯೇ ಪ್ರಸಿದ್ಧವಾದದ್ದು, ಹೀಗಾಗಿ ಇದನ್ನು ವಿಸ್ತರಿಸಿ ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಬೇಕು ಎಂಬ ಉದ್ದೇಶ ಸರ್ಕಾರಕ್ಕೆ ಇತ್ತು. ಆದರೆ, ಕೆಲ ಅಡ್ಡಿಗಳು ಎದುರಾದ ಕಾರಣ ಚನ್ನಪಟ್ಟಣ ಬಳಿ ವಿಶಾಲ ಜಾಗದಲ್ಲಿ ಮಾರುಕಟ್ಟೆ ಬರುತ್ತಿದೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು