ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆ ಚುರುಕು: ರಸ್ತೆ ದುರಸ್ತಿಗೆ ಒತ್ತು

ರಾಮನಗರ–ಚನ್ನಪಟ್ಟಣದಲ್ಲಿ ಅತಿವೃಷ್ಟಿ ಹಾನಿ ಸರಿಪಡಿಸುವ ಕಾರ್ಯ ಆರಂಭ
Last Updated 4 ಸೆಪ್ಟೆಂಬರ್ 2022, 5:04 IST
ಅಕ್ಷರ ಗಾತ್ರ

ರಾಮನಗರ: ಮಳೆಯಿಂದ ನಲುಗಿದ ರಾಮನಗರ–ಚನ್ನಪಟ್ಟಣ ಅವಳಿ ನಗರಗಳಲ್ಲಿ ಮೂಲ ಸೌಕರ್ಯದ ಪುನರ್ ನಿರ್ಮಾಣ ಮಾಡುವ ಕಾರ್ಯ ಆರಂಭಗೊಂಡಿದ್ದು, ಜಿಲ್ಲಾಡಳಿತ ಹಾಗೂ ಸ್ಥಳೀಯ ನಗರಸಭೆಗಳಿಗೆ ಈ ಕಾರ್ಯ ಸವಾಲಾಗಿದೆ.

ಅತಿವೃಷ್ಟಿಯಿಂದ ನಗರ ಪ್ರದೇಶಗಳಲ್ಲಿ ಭಾರಿ ಹಾನಿಯಾಗಿದ್ದು, ಜನಜೀವನ ಬಹುತೇಕ ಅಸ್ತವ್ಯಸ್ತವಾಗಿದೆ. ಅಪಾರ ಪ್ರಮಾಣದ ಆಸ್ತಿಪಾಸ್ತಿಗೆ ಹಾನಿಯಾಗಿದೆ. ರಾಮನಗರ ನಗರಸಭೆ ವ್ಯಾಪ್ತಿಯ ಏಳು ವಾರ್ಡ್‌ಗಳಲ್ಲಿ ಅತಿಹೆಚ್ಚು ಹಾನಿ ಸಂಭವಿಸಿದ್ದು, ಭಕ್ಷಿ ಕೆರೆಯ ಪ್ರವಾಹದಿಂದ ಈ ಭಾಗದ ಜನರ ಬದುಕು ದುಸ್ತರವಾಗಿದೆ. ಈ ಪ್ರದೇಶಗಳಲ್ಲಿ ಸದ್ಯ ಸ್ವಚ್ಛತೆ ಕಾರ್ಯ ಸಮರೋಪಾದಿಯಲ್ಲಿ ನಡೆದಿದ್ದು, ನಗರಸಭೆ ಸಿಬ್ಬಂದಿ, ಸಂಘ–ಸಂಸ್ಥೆಗಳೂ ಕೈ ಜೋಡಿಸಿವೆ.

ಬಹುತೇಕ ಕಡೆಗಳಲ್ಲಿ ಚರಂಡಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಅದನ್ನು ದುರಸ್ತಿ ಮಾಡಲಾಗುತ್ತಿದೆ. ರಸ್ತೆಯಲ್ಲಿ ಬಿದ್ದಿರುವ ಕೆಸರಿನ ರಾಶಿ ಜೊತೆಗೆ ಮನೆಗಳಲ್ಲಿನ ಕಸಗಳನ್ನೂ ತೆರವುಗೊಳಿಸಲಾಗುತ್ತಿದೆ. ಪ್ರತಿ ಬೀದಿಗಳಲ್ಲಿ ಹೈಪೋಕ್ಲೋರೈಡ್‌ ದ್ರಾವಣ ಸಿಂಪಡಣೆ ಮೂಲಕ ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ತೀವ್ರ ಹಾನಿಗೆ ಒಳಗಾಗಿ ಆಶ್ರಯ ಕಳೆದುಕೊಂಡಿರುವ ಸಂತ್ರಸ್ತರಿಗೆ ಅಂಬೇಡ್ಕರ್ ಭವನದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಇದಲ್ಲದೆ ಮನೆಗಳಿಗೆ ಆಹಾರ ಧಾನ್ಯ ಪೂರೈಕೆಯೂ ನಡೆದಿದೆ.

ಎಲ್ಲೆಲ್ಲಿ ಹಾನಿ: ರಾಮನಗರ ನಗರಸಭೆ ವ್ಯಾಪ್ತಿಯ ಕೋತ್ತಿಪುರ, ಟಿಪ್ಪು ನಗರ, ಅರ್ಕೇಶ್ವರ ಕಾಲೊನಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಟ್ಟು 2,250 ಮನೆಗಳಿಗೆ ನೀರು ನುಗ್ಗಿದೆ. ಈ ಎಲ್ಲಾ ಮನೆ ಮಾಲೀಕರಿಗೂ ಆರ್‌ಟಿಜಿಎಸ್ ಮೂಲಕ ತಲಾ ₹ 10 ಸಾವಿರ ತುರ್ತು ಪರಿಹಾರ ಸಂದಾಯ ಆಗುತ್ತಿದೆ.

ಇದಲ್ಲದೆ 150 ಮನೆಗಳಿಗೆ ಹೆಚ್ಚು ಹಾಗೂ 100 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಎ, ಬಿ ಮತ್ತು ಸಿ ಎಂದು ಮೂರು ಹಂತದಲ್ಲಿ ಹಾನಿಯ ಮೌಲ್ಯದ ಅಂದಾಜು ನಡೆದಿದ್ದು, ಸ್ಥಳೀಯ ತಹಶೀಲ್ದಾರ್‌ ನೇತೃತ್ವದ ತಂಡವು ಹಾನಿ ಪ್ರಮಾಣವನ್ನು ನಿರ್ಧರಿಸಲಿದೆ. ಅದರ ಆಧಾರದಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ನಿಗದಿ ಆಗಲಿದೆ. ರಾಮನಗರದ ಟಿಪ್ಪುನಗರ ವ್ಯಾಪ್ತಿಯಲ್ಲಿ ಸೇತುವೆ ಹಾನಿಯಾಗಿದ್ದು, ಅಲ್ಲಿ ಇಡೀ ಸೇತುವೆ ಮರು ನಿರ್ಮಾಣ ಆಗಲಿದೆ.

ರಾಮನಗರ ನಗರಸಭೆ ಅಧಿಕಾರಿಗಳು, ಸ್ವಚ್ಛತಾ ಸಿಬ್ಬಂದಿ ಸಂಪೂರ್ಣ ಸ್ವಚ್ಛತೆ ಮತ್ತು ಪುನರ್ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಇಲ್ಲಿನ 130 ಪೌರ ಕಾರ್ಮಿಕರ ಜೊತೆಗೆ ಕನಕಪುರ ನಗರಸಭೆ ವ್ಯಾಪ್ತಿಯ 50 ಕಾರ್ಮಿಕರೂ ಈ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ. 12 ಟ್ರ್ಯಾಕ್ಟರ್ ಹಾಗೂ 12 ಜೆಸಿಬಿ ಯಂತ್ರಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದೆ.

40 ಕಿ.ಮೀ. ರಸ್ತೆಗೆ ಹಾನಿ: ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 40 ಕಿ.ಮೀ ಉದ್ದದ ರಸ್ತೆಗೆ ಹಾನಿಯಾಗಿದೆ. ಫಿಲೇಚರ್‌ಗಳಿಗೆ ಆದ ಹಾನಿಯನ್ನೂ ಸೇರಿಸಿ ಒಟ್ಟು ₹ 130 ಕೋಟಿ ನಷ್ಟ ಅಂದಾಜಿಸಲಾಗಿದೆ.

ಚನ್ನಪಟ್ಟಣ ನಗರಸಭೆ ವ್ಯಾಪ್ತಿಯಲ್ಲಿ ಸ್ಥಳೀಯ 76 ಕಾರ್ಮಿಕರ ಜೊತೆಗೆ ಕನಕಪುರದ 20 ಮಂದಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿ ಆಗಿದ್ದಾರೆ. 4 ಜೆಸಿಬಿ ಹಾಗೂ 3 ಟ್ರ್ಯಾಕ್ಟರ್‌ಗಳನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಇಲ್ಲಿ ಸುಮಾರು 32 ಕಿ.ಮೀ. ಉದ್ದದಷ್ಟು ರಸ್ತೆಗೆ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT