ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಗ್ರಾಹಕರ ಸಂಖ್ಯೆ ಇಳಿಮುಖ, ಬಿಸಿಲಿಗೆ ಬಸವಳಿದ ಬೀದಿ ವ್ಯಾಪಾರಿಗಳು

Published 5 ಮೇ 2024, 5:01 IST
Last Updated 5 ಮೇ 2024, 5:01 IST
ಅಕ್ಷರ ಗಾತ್ರ

ರಾಮನಗರ: ‘ಈ ಸಲದಷ್ಟು ಬಿಸಿಲ ಬೇಗೆಯನ್ನು ಇತ್ತೀಚಿನ ವರ್ಷಗಳಲ್ಲೇ ನೋಡಿರಲಿಲ್ಲ. ನೆರಳಿನ ಕೋಣೆಯಲ್ಲಿ ಕೆಲಸ ಮಾಡುವವರಿಗೆ ಸೆಕೆಯ ಚಿಂತೆಯಾದರೆ, ಬೀದಿ ವ್ಯಾಪಾರದಲ್ಲೇ ಬದುಕು ಕಟ್ಟಿಕೊಂಡಿರುವ ನಾವು ಈ ಬಿರು ಬಿಸಿಲಲ್ಲೇ ಬೇಯದೆ ವಿಧಿ ಇಲ್ಲ. ನಾವಷ್ಟೇ ಅಲ್ಲ, ನಮ್ಮ ತರಕಾರಿಯೂ ಬೆಂದು ಬಾಡಿ ಹೋಗದಂತೆ ನೋಡಿಕೊಳ್ಳುವುದೇ ದೊಡ್ಡ ಚಾಲೆಂಜು ನೋಡಿ...’

ನಗರದ ಕೆಂಗಲ್ ಹನುಮಂತಯ್ಯ ವೃತ್ತದ ಬಳಿಯ ಅರ್ಕಾವತಿ ಸೇತುವೆ ರಸ್ತೆ ಬದಿ, ಪ್ಲಾಸ್ಟಿಕ್ ಸೂರು ಮತ್ತು ಛತ್ರಿಯ ಆಶ್ರಯದಲ್ಲಿ ತರಕಾರಿ ಸೇರಿದಂತೆ ಇತರ ವ್ಯಾಪಾರ ಮಾಡುವ ಬೀದಿ ವ್ಯಾಪಾರಿಗಳು, ತಮ್ಮ ಬಿಸಿಲ ಬದುಕಿನ ಬಂಡಿಯ ಕುರಿತು ಆಡಿದ ಮಾತುಗಳಿವು.

‘ಈ ಬಿಸಿಲು ನಮ್ಮ ವ್ಯಾಪಾರಕ್ಕೆ ಹೊಡೆತ ಕೊಟ್ಟಿದೆ. ಬಿಸಿಲಿನ ಕಾರಣಕ್ಕೆ ಜನ ಮಾರುಕಟ್ಟೆಗೆ ಬರುವುದನ್ನು ಕಡಿಮೆ ಮಾಡಿದ್ದಾರೆ. ಅದರಲ್ಲೂ ಬೀದಿ ವ್ಯಾಪಾರಿಗಳಲ್ಲಿ ಖರೀದಿ ಮಾಡುವವರು ಇಳಿಮುಖವಾಗಿದ್ದಾರೆ. ಯಾವಾಗ ಈ ಬಿಸಿಲು ಹೋಗಿ ಮಳೆರಾಯ ಕೃಪೆ ತೋರುತ್ತಾನೊ ಎಂದು ಕಾಯುತ್ತಿದ್ದೇವೆ. ಇಲ್ಲದಿದ್ದರೆ, ವ್ಯಾಪಾರವಿಲ್ಲದೆ ಬದುಕು ಮತ್ತಷ್ಟು ಕಷ್ಟಕರವಾಗುವುದರಲ್ಲಿ ಎರಡು ಮಾತಿಲ್ಲ’ ಎಂದು ತಮ್ಮ ಪರಿಸ್ಥಿತಿ ಬಿಚ್ಚಿಟ್ಟರು.

ಐಜೂರು ವೃತ್ತ, ಮಾಗಡಿ ರಸ್ತೆ, ಹಳೆ ಬಸ್ ನಿಲ್ದಾಣದ ವೃತ್ತ, ಮುಖ್ಯ ರಸ್ತೆ, ಕೋರ್ಟ್ ರಸ್ತೆಯ ಆಸುಪಾಸುಗಳಲ್ಲಿ ಬೀದಿ ವ್ಯಾಪಾರ ಮಾಡುತ್ತಾ ವ್ಯಾಪಾರಿಗಳು ಬದುಕು ಕಟ್ಟಿಕೊಂಡಿದ್ದಾರೆ. ಬಿಸಿಲು, ಗಾಳಿ, ಮಳೆ ಏನೇ ಬಂದರೂ ವ್ಯಾಪಾರ ಬಿಡುವಂತಿಲ್ಲ. ಬಿಟ್ಟರೆ, ವ್ಯಾಪಾರಿಗಳಿಗೆ ಆ ದಿನದ ದುಡಿಮೆ ಖೋತಾ.

ಬಿಸಿಲಿಗೆ ಸುಳಿಯದ ಗ್ರಾಹಕರು: ‘ಬಿಸಿಲ ಕಾರಣಕ್ಕೆ ಮಾರುಕಟ್ಟೆಯಲ್ಲಿ ಗ್ರಾಹಕರ ಸಂಖ್ಯೆ ತೀವ್ರ ಇಳಿಮುಖವಾಗಿದೆ. ಬಂದರೆ ಬೆಳಿಗ್ಗೆಯೇ ಬರುತ್ತಾರೆ. ಇಲ್ಲವಾದರೆ ಸಂಜೆ ಆರು ಗಂಟೆಯ ಬಳಿಕ ಕಾಣಿಸಿಕೊಳ್ಳುತ್ತಾರೆ. ತೀರಾ ಅನಿವಾರ್ಯವಿದ್ದವರಷ್ಟೇ ಬಿಸಿಲ ಹೊತ್ತ‌ಲ್ಲಿ ಬರುತ್ತಾರೆ. ಸ್ಥಿತಿವಂತರು ಮೋರ್, ರಿಲಾಯನ್ಸ್, ಸೂಪರ್ ಮಾರ್ಕೆಟ್‌ನಂತಹ ಹವಾನಿಯಂತ್ರಿತ ಮಳಿಗೆಗಳಿಗೆ ಹೋಗುತ್ತಾರೆ. ಕೆಳ ಮಧ್ಯಮ ವರ್ಗದವರು, ಬಡವರು ಹಾಗೂ ಕಾರ್ಮಿಕರು ನಮ್ಮಲ್ಲೇ ಬಂದು ಖರೀದಿಸುತ್ತಾರೆ’ ಎಂದು ವ್ಯಾಪಾರಿ ವಿಶ್ವನಾಥ್ ಹೇಳಿದರು.

‘ಬಿಸಿಲಿರಲಿ ಬಿಡಲಿ ನಾವು ಬೆಳಿಗ್ಗೆಯಿಂದ ಸಂಜೆವರೆಗೆ ಮಾರುಕಟ್ಟೆ ಬಿಟ್ಟು ಕದಲುವಂತಿಲ್ಲ. ಅಂದು ಖರೀದಿಸಿ ತರುವ ತರಕಾರಿಯನ್ನು ಅಂದೇ ಖಾಲಿ ಮಾಡಿದರೆ ನಮಗೂ ಮೂರು ಕಾಸು ಉಳಿಯುತ್ತದೆ. ಇಲ್ಲವಾದರೆ, ಅಂದಿನ ದುಡಿಮೆ ನಷ್ಟವಾದಂತೆ. ಮೊನ್ನೆ ಮಳೆಗೂ ಮುಂಚೆ ಬಂದ ಬಿರುಗಾಳಿಗೆ ನಮ್ಮವರ ಪ್ಲಾಸ್ಟಿಕ್ ಮತ್ತು ಛತ್ರಿಗಳು ಹಾರಿ ಹೋದವು. ಇಂತಹವು ಆಗಾಗ ನಡೆಯುತ್ತಿರುತ್ತವೆ’ ಎಂದರು.

ನೀರಿನ ದಾಹ: ‘ಬಿಸಿಲಿನಿಂದಾಗಿ ಮುಂಚೆ ದಿನಕ್ಕೆ ಎರಡ್ಮೂರು ಬಾಟಲಿ ನೀರು ಕುಡಿಯುತ್ತಿದ್ದವರು, ಹೆಚ್ಚಾಗಿರುವ ಬಿಸಿಲ ಝಳಕ್ಕೆ ಇದೀಗ ನಾಲ್ಕೈದು ಬಾಟಲಿ ನೀರು ಕುಡಿದರೂ ದಾಹ ಹಿಂಗುತ್ತಿಲ್ಲ. ನಮಗಷ್ಟೇ ಅಲ್ಲದೆ ತರಕಾರಿಗಳಿಗೂ ಐದತ್ತು ನಿಮಿಷಕ್ಕೊಮ್ಮೆ ನೀರು ಎರಚುತ್ತಾ ಅವು ಒಣಗದಂತೆ ನೋಡಿಕೊಳ್ಳಬೇಕು’ ಎಂದು ವ್ಯಾಪಾರಿ ನಿಂಗಮ್ಮ ಹೇಳಿದರು.

‘ವಿವಿಧ ರೀತಿಯ ಸೊಪ್ಪು, ಹೂವು, ತಕಾರಿಗಳು, ಹಣ್ಣುಗಳ ಮೇಲೆ ನೀರು ಎರಚದಿದ್ದರೆ ಬೇಗನೆ ಬಾಡುತ್ತವೆ. ಗ್ರಾಹಕರು ಬಾಡಿದ ತರಕಾರಿಗಳನ್ನು ಖರೀದಿಸಲು ಹಿಂದೇಟು ಹಾಕುತ್ತಾರೆ. ಹಾಗಾಗಿ, ಕೆಲವರು ಒದ್ದೆಯಾದ ಗೋಣಿಚೀಲವನ್ನು ಸೊಪ್ಪು ಮತ್ತು ತರಕಾರಿಗಳ ಮೇಲೆ ಹೊದಿಸುತ್ತಾರೆ. ಹೇಗಾದರೆ ಮಾಡಿ ತರಕಾರಿಗಳು ಬಾಡದಂತೆ ನೋಡಿಕೊಳ್ಳಬೇಕಲ್ಲವೇ. ಬಾಡಿ ಹೋದರೆ ಹಾಕಿದ ಬಂಡವಾಳವೂ ಕೈ ಸೇರುವುದಿಲ್ಲ’ ಎಂದು ತಿಳಿಸಿದರು.

ಬಿಸಿಲ ಬೇಗೆಯಿಂದಾಗಿ ಛತ್ರಿ ಹಿಡಿದು ಮಾರುಕಟ್ಟೆಗೆ ಬಂದ ಮಹಿಳೆಯೊಬ್ಬರು ಸೌತೆಕಾಯಿ ಖರೀದಿಗೆ ಮುಂದಾದರು
ಪ್ರಜಾವಾಣಿ ಚಿತ್ರಗಳು: ಚಂದ್ರೇಗೌಡ
ಬಿಸಿಲ ಬೇಗೆಯಿಂದಾಗಿ ಛತ್ರಿ ಹಿಡಿದು ಮಾರುಕಟ್ಟೆಗೆ ಬಂದ ಮಹಿಳೆಯೊಬ್ಬರು ಸೌತೆಕಾಯಿ ಖರೀದಿಗೆ ಮುಂದಾದರು ಪ್ರಜಾವಾಣಿ ಚಿತ್ರಗಳು: ಚಂದ್ರೇಗೌಡ
ಬಿಸಿಲಿನಿಂದಾಗಿ ಗ್ರಾಹಕರ ಸುಳಿವಿಲ್ಲದಿದ್ದರಿಂದ ಮಹಿಳೆಯೊಬ್ಬರು ಮೊಬೈಲ್ ನೋಡುತ್ತಾ ಕುಳಿತಿದ್ದರು
ಪ್ರಜಾವಾಣಿ ಚಿತ್ರಗಳು: ಚಂದ್ರೇಗೌಡ
ಬಿಸಿಲಿನಿಂದಾಗಿ ಗ್ರಾಹಕರ ಸುಳಿವಿಲ್ಲದಿದ್ದರಿಂದ ಮಹಿಳೆಯೊಬ್ಬರು ಮೊಬೈಲ್ ನೋಡುತ್ತಾ ಕುಳಿತಿದ್ದರು ಪ್ರಜಾವಾಣಿ ಚಿತ್ರಗಳು: ಚಂದ್ರೇಗೌಡ

ನಸುಕಿನಿಂದಲೇ ಕಾಯಕ ಶುರು

ತುತ್ತಿನ ಚೀಲ ತುಂಬಿಸಿಕೊಳ್ಳುವುದಕ್ಕಾಗಿ ಬೀದಿ ವ್ಯಾಪಾರಿಗಳು ಬೆಳಿಗ್ಗೆ 8.30ರಿಂದ ರಾತ್ರಿ 8 ಗಂಟೆಯವರೆಗೆ ಬೀದಿಯಲ್ಲೇ ಇರುತ್ತಾರೆ. ಇವರ ಕಾಯಕ ಶುರುವಾಗುವುದೇ ಬೆಳಿಗ್ಗೆ 5.30ರ ಸುಮಾರಿಗೆ. ಹೊತ್ತಿಗೆ ಮುಂಚೆ ಏಳುವ ಕೆಲವರು ಬೆಂಗಳೂರಿಗೆ ಹೋಗಿ ತರಕಾರಿ ಸೇರಿದಂತೆ ತಮಗೆ ಬೇಕಾದುದ್ದನ್ನು ಖರೀದಿಸಿಕೊಂಡು ಬಂದರೆ ಉಳಿದವರು ಸ್ಥಳೀಯ ಎಪಿಎಂಸಿಯನ್ನು ಅವಲಂಬಿಸಿದ್ದಾರೆ. ಕೆಲವರು ನಿಗದಿತ ಸ್ಥಳದಲ್ಲಿ ವ್ಯಾಪಾರ ಮಾಡಿದರೆ ಉಳಿದವರು ತಳ್ಳುಗಾಡಿಗಳೇ ವ್ಯಾಪಾರ ತಾಣ. ಬೆಳಿಗ್ಗೆಯಿಂದ ರಾತ್ರಿವರೆಗೆ ವ್ಯಾಪಾರ ಮುಗಿಸಿದ ಬಳಿಕ ತಮ್ಮ ಸ್ಥಳವನ್ನು ಹದ್ದುಬಸ್ತಿ ಮಾಡಿ ಮನೆಗೆ ಹೋಗುತ್ತಾರೆ. ತಳ್ಳುಗಾಡಿಯವರು ಟಾರ್ಪಲಿನ್‌ನಿಂದ ಗಾಡಿಯನ್ನು ಮುಚ್ಚಿ ಹಗ್ಗದಿಂದ ಕಟ್ಟಿ ಒಂದೆಡೆ ನಿಲ್ಲಿಸಿ ಹೋಗುತ್ತಾರೆ.

‘ನಿತ್ಯ ವ್ಯಾಪಾರ ಮುಗಿಸಿದ ಬಳಿಕ ದೇವರ ಮೇಲೆ ಭಾರ ಹಾಕಿ ನಮ್ಮ ವ್ಯಾಪಾರದ ಗಾಡಿ ಮತ್ತು ನಮ್ಮ ಜಾಗಕ್ಕೆ ಯಾವುದೇ ಹಾನಿಯಾಗದಿರಲಿ ಎಂದು ಬೇಡಿಕೊಂಡು ಮನೆಗೆ ಹೋಗುತ್ತೇವೆ. ಇದುವರೆಗೆ ಯಾವ ವ್ಯಾಪಾರಿಗೂ ಜಾಗ ಮತ್ತು ಗಾಡಿಗೆ ಹಾನಿಯಾಗಿರುವ ಅಂತಹ ದೊಡ್ಡ ನಿದರ್ಶನಗಳಿಲ್ಲ’ ಎಂದು ವ್ಯಾಪಾರಿ ರಾಜಣ್ಣ ಹೇಳಿದರು.

ನಾವು ವ್ಯಾಪಾರ ಮಾಡುವ ಜಾಗದಲ್ಲಿ ಬಿಸಿಲು– ಮಳೆ–ಗಾಳಿಯಿಂದ ರಕ್ಷಣೆ ಸಿಗುವಂತೆ ನಗರಸಭೆಯವರು ವ್ಯವಸ್ಥೆ ಮಾಡಿಕೊಟ್ಟರೆ ಬೀದಿ ವ್ಯಾಪಾರಿಗಳು ತುಂಬಾ ಅನುಕೂಲವಾಗುತ್ತದೆ
– ನಾಗೇಂದ್ರ, ಬೀದಿ ವ್ಯಾಪಾರಿ
ಬಿಸಿಲು ಅಂತ ನಾವು ಒಳಗೆ ಕುಳಿತರೆ ಹೊಟ್ಟೆ ತುಂಬುವುದಿಲ್ಲ. ಬಿಸಿಲೊ–ಮಳೆಯೊ ಏನಿದ್ದರೂ ನಿಭಾಯಿಸಿಕೊಂಡು ಸಂಜೆವರೆಗೆ ವ್ಯಾಪಾರ ಮಾಡಿದರೆ ಮಾತ್ರ ನಮ್ಮ ಹೊಟ್ಟೆ ತುಂಬೋದು
–ಜಯಮ್ಮ, ಬೀದಿ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT