ಗುರುವಾರ , ಜುಲೈ 29, 2021
24 °C
ಎನಗಿಂತ ಕಿರಿಯರಿಲ್ಲ ಎಂಬ ಶರಣರ ತತ್ವಕ್ಕೆ ಬದ್ಧರಾಗಿರುವ ಎಚ್‌.ಆರ್‌.ನರಸಯ್ಯ

ಮಾಗಡಿ: ಶಿಕ್ಷಕ ವೃತ್ತಿಯೊಂದಿಗೆ ಸಂಗೀತ ಸೇವೆ

ದೊಡ್ಡಬಾಣಗೆರೆ ಮಾರಣ್ಣ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ಸತ್ಯ, ಧರ್ಮ,ಸಾಹಿತ್ಯ, ಸಂಗೀತ, ಜನಪದ ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ಸಾರ್ಥಕತೆ. ಸತ್ಯ ಮತ್ತು ಧರ್ಮದ ದಾರಿ ಕಠಿಣವಾದರೂ ಅದೇ ಮಾನವ ಧರ್ಮದ ಮೂಲಾಧಾರ. ಪೂರ್ವಿಕರು ಬಾಲ್ಯದಲ್ಲಿ ಕಲಿಸಿದ ನಂಬಿಕೆಗಳೇ ಬದುಕಿನ ಬಹುಮುಖ್ಯ ಸಂಪತ್ತು ಎಂಬುದು ನಿವೃತ್ತ ಶಿಕ್ಷಕ ಎಚ್‌.ಆರ್‌.ನರಸಯ್ಯ ಅವರ ಮನದ ಮಾತು. ಶಿಕ್ಷಕ ವೃತ್ತಿ, ಸಂಗೀತ ಗಾಯನ, ಕೃಷಿಯಲ್ಲೂ ಅವರದ್ದು ಸಾರ್ಥಕ ಬದುಕು. ಸರಳ ಜೀವನ.

ಸಾಂಸ್ಕೃತಿಕ ರಂಗಗಳ ಉಪಾಸನೆಯಿಂದ ಬದುಕಿನಲ್ಲಿ ಶಾಶ್ವತ ಸುಖ ಪಡೆಯಬಹುದು. ಗುರುವಿನ ಆಶ್ರಯದ ಕಠಿಣ ಹಾದಿಯಲ್ಲಿ ಸಾಗಬೇಕು ಎಂದು ತಾಯಿ ಬಾಲ್ಯದಲ್ಲಿ ಹೇಳುತ್ತಿದ್ದ ಮಾತು, ಗಾದೆ, ಪದಗಳು ಇಂದಿಗೂ ಮಾರ್ಗದರ್ಶಿ ಎನ್ನುತ್ತಾರೆ ಅವರು.

ತಿಪ್ಪಸಂದ್ರ ಹೋಬಳಿ ಚಾರಿತ್ರಿಕ ಹೊನ್ನಾಪುರದ ರಂಗಮ್ಮ –ರಂಗಯ್ಯ ಅವರ ಪುತ್ರರಾಗಿ ಜನಿಸಿದ ನರಸಯ್ಯ, ಬಾಲ್ಯದಲ್ಲೇ ಶಾಸ್ತ್ರೀಯ ಸಂಗೀತ, ಭಜನೆ, ಹರಿಕಥೆ, ಜನಪದ ಗಾಯನ ಕಲಿಯುತ್ತಾ ಬೆಳೆದವರು. ಪ್ರಾಥಮಿಕ ಶಿಕ್ಷಣಕ್ಕಾಗಿ ತುಮಕೂರು ಸೇರುತ್ತಾರೆ. ಶಾಲೆಯಲ್ಲಿ ಶಿಕ್ಷಕರು ಹಾಡುತ್ತಿದ್ದ ಪದ್ಯಗಳು, ದೇವರ ನಾಮಗಳನ್ನು ಸುಶ್ರಾವ್ಯವಾಗಿ ಕಲಿತು ಭೇಷ್‌ ಎನಿಸಿಕೊಳ್ಳುತ್ತಾರೆ.

ರಜೆ ದಿನಗಳಲ್ಲಿ ಸ್ವಗ್ರಾಮಕ್ಕೆ ಬಂದಾಗ ಅಲ್ಲಿ ನಡೆಯುತ್ತಿದ್ದ ದೇವರ ಉತ್ಸವಗಳಲ್ಲಿ ಮಹಿಳೆಯರು ಹಾಡುತ್ತಿದ್ದ ಜನಪದ ಪದಗಳು, ಕೋಲಾಟ, ಭಾವಗೀತೆ, ಭಕ್ತಿಗೀತೆ, ರಂಗಗೀತೆ, ಭಜನೆ, ಊರಹಬ್ಬ, ಜಾತ್ರಾ ಉತ್ಸವಗಳಲ್ಲಿ ನಡೆಯುತ್ತಿದ್ದ ಹರಿಕಥೆಗಳನ್ನು ತನ್ಮಯವಾಗಿ ಕೇಳಿಸಿಕೊಳ್ಳುತ್ತಿದ್ದರು.

ಸಿದ್ದಾರ್ಥ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಟಿಸಿಎಚ್ ಶಿಕ್ಷಣ ಪಡೆದರು. ಸರ್ಕಾರಿ ಶಾಲಾ ಶಿಕ್ಷಕರಾಗಿ 30 ವರ್ಷಗಳ ಕಾಲ ಕೆಲಸ ಮಾಡಿದರು. ಶಿಕ್ಷಕರಾಗಿ ಕೆಲಸ ನಿರ್ವಹಿಸಿದ ಕಡೆಗಳೆಲ್ಲಾ ಮಕ್ಕಳಿಗೆ ಜನಪದ ಗಾಯನ, ಕಥನಕಾವ್ಯಗಳ ಸಂಗ್ರಹ, ದೇವರ ನಾಮ, ಭಜನೆ ಪದ ಕಲಿಸುವುದರಲ್ಲಿ ತೃಪ್ತಿಕಂಡರು. ಶಿಕ್ಷಕ ಸೇವಾವಧಿ ಉದ್ದಕ್ಕೂ ಸಾವಿರಾರು ಸಂಗೀತದ ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ನೂರಾರು ಮಕ್ಕಳನ್ನು ಸಂಗೀತದತ್ತ ಸೆಳೆದರು.

ವಿವಿಧ ಸಂಘ –ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ. ಶಿಕ್ಷಕ ವೃತ್ತಿ ಅಪಾರವಾಗಿ ಪ್ರೀತಿಸುವ ನರಸಯ್ಯ. ಇಳಿವಯಸ್ಸಿನಲ್ಲೂ ಯುವಕರಿಗೆ ಕಲಿಸಿಕೊಡುತ್ತಿದ್ದಾರೆ. ಶ್ರಾವಣ ಮಾಸದಲ್ಲಿ ಶನಿಮಹಾತ್ಮನ ಕಥಾ ಕಾಲಕ್ಷೇಪ ಈಗಲೂ ನಡೆಸಿಕೊಡುತ್ತಾರೆ.

ಹಾರ್ಮೋನಿಯಂ, ತಬಲ, ಖಂಜರ ನುಡಿಸುವ ಕಲೆಯೂ ಸಿದ್ಧಿಸಿದೆ. ಎನಗಿಂತ ಕಿರಿಯರಿಲ್ಲ ಎಂಬ ಶರಣರ ತತ್ವಕ್ಕೆ ಬದ್ಧರಾಗಿ ಬದುಕುತ್ತಿದ್ದಾರೆ. ಪತ್ನಿ ಶಿವಲಿಂಗಮ್ಮ, ಮಕ್ಕಳಾದ ಸುನಿಲ್‌ಕುಮಾರ್ ಮತ್ತು ಧನುಷ್ ಇವರ ಮಾರ್ಗದರ್ಶನದಲ್ಲಿ ಸಾಗಿದ್ದಾರೆ. ಕುದೂರಿನ ಸ್ವಾಮಿ ವಿವೇಕಾನಂದ ಕಲಾ ಅಧ್ಯಕ್ಷ ಎಚ್.ರಾಜಶೇಖರ್‌ ಅವರು ನೀಡಿದ ಪ್ರೊತ್ಸಾಹ ಸ್ಮರಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು