ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ | ನಿರಂತರ ಕುಡಿಯುವ ನೀರಿಗೆ ದಿನಗಣನೆ

ನೆಟಕಲ್ ಜಲ ಸಂಗ್ರಹಗಾರದಿಂದ ರಾಮನಗರಕ್ಕೆ ನೀರು ಪೂರೈಕೆಗೆ ಪ್ರಾಯೋಗಿಕ ಚಾಲನೆ ಯಶಸ್ವಿ
Published 8 ಜುಲೈ 2024, 4:25 IST
Last Updated 8 ಜುಲೈ 2024, 4:25 IST
ಅಕ್ಷರ ಗಾತ್ರ

ರಾಮನಗರ: ನಗರದ ಜನರು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ಸಿಗುವ ದಿನಗಳು ದೂರವಿಲ್ಲ. ಕಳೆದು ಐದು ವರ್ಷಗಳಿಂದ ಜನರು ಚಾತಕಪಕ್ಷಿಯಂತೆ ಕಾಯುತ್ತಿದ್ದ 24X7 ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಯ ಕಾಮಗಾರಿ ಪೂರ್ಣಗೊಂಡಿದೆ. ನಗರದ ಮನೆ ಮನೆಗಳಿಗೆ ದೂರದ ಕಾವೇರಿ ನೀರು ಹರಿಯಲು ದಿನಗಣನೆ ಶುರುವಾಗಿದೆ.

ಯೋಜನೆ ಜಾರಿಯ ಹೊಣೆ ಹೊತ್ತಿರುವ ಕರ್ನಾಟಕ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿಯು (ಕೆಯುಡಬ್ಲ್ಯೂಎಸ್‌ಡಿಬಿ) ನೀರು ಪೂರೈಕೆಗೆ ಇತ್ತೀಚೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಿದೆ. ನೆಟಕಲ್ ಜಲಾಶಯದಿಂದ ಟಿ.ಕೆ. ಹಳ್ಳಿ ನೀರು ಸಂಸ್ಕರಣ ಘಟಕಕ್ಕೆ ಬಂದಿರುವ ಕಾವೇರಿ ನೀರು, ಅಲ್ಲಿಂದ ಅರಳಾಳುಸಂದ್ರ ಪಂಪಿಂಗ್ ಘಟಕ ಪೈಪ್‌ಲೈನ್‌ ಮೂಲಕ ಕಾವೇರಿ ನೀರು ರಾಮನಗರದ ಬೋಳಪ್ಪನಹಳ್ಳಿ ಮತ್ತು ಕೊತ್ತಿಪುರದಲ್ಲಿರುವ ಜಲ ಸಂಗ್ರಹಗಾರವನ್ನು ಯಶಸ್ವಿಯಾಗಿ ತಲುಪಿದೆ. ಇದರೊಂದಿಗೆ ನಿರಂತರ ನೀರಿನ ಕನಸು ನನಸಾಗುವ ದಿನ ಸನ್ನಿಹಿತವಾಗಿದೆ.

2018ರಲ್ಲಿ ಮಂಜೂರು:

ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಜಿಲ್ಲಾ ಕೇಂದ್ರಕ್ಕೆ ಕಾವೇರಿ ನೀರು ಹರಿಸುವ ಮಹತ್ವಕಾಂಕ್ಷಿ ಯೋಜನೆಗೆ 2019ರ ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಂಜೂರಾತಿ ಸಿಕ್ಕಿತ್ತು. ಆಗ ಜಿಲ್ಲೆಯವರೇ ಆದ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಮತ್ತು ಡಿ.ಕೆ. ಶಿವಕುಮಾರ್ ಜಲ ಸಂಪನ್ಮೂಲ ಸಚಿವರಾಗಿದ್ದರು.

ಸುಮಾರು 68 ಕಿ.ಮೀ. ದೂರದಲ್ಲಿರುವ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ನೆಟಕಲ್‌ ಜಲ ಸಂಗ್ರಹಗಾರದಿಂದ ನೀರು ತರುವ ಯೋಜನೆಯ ಕಾಮಗಾರಿ 2022ರಲ್ಲೇ ಪೂರ್ಣಗೊಳ್ಳಬೇಕಿತ್ತು. ವಿವಿಧ ಕಾರಣಗಳಿಗಾಗಿ ಕುಂಟುತ್ತಾ ಸಾಗಿದ ಯೋಜನೆಯು, ಅರ್ಧ ದಶಕದಲ್ಲಿ ಹಲವು ಏಳುಬೀಳುಗಳನ್ನು ಕಂಡು ಪೂರ್ಣಗೊಂಡಿದೆ.

2052ರವರೆಗೆ ಸಮಸ್ಯೆ ಇಲ್ಲ:

2052ರವರೆಗೆ ರಾಮನಗರದ ನೀರಿನ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಯೋಜನೆಯನ್ನು ರೂಪಿಸಲಾಗಿದೆ. ತೊರೆಕಾಡನಹಳ್ಳಿಯಿಂದ ಪೂರೈಕೆಯಾಗುವ ನೀರಿನ ಸಂಗ್ರಹಕ್ಕಾಗಿ ರಾಮನಗರದ ಕೊತ್ತೀಪುರದಲ್ಲಿ 200 ಲಕ್ಷ ಲೀಟರ್ ಹಾಗೂ ಬೋಳಪ್ಪನಹಳ್ಳಿಯಲ್ಲಿ 100 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದೆ. ನೀರನ್ನು ಪಂಪ್ ಮಾಡಲು 800 ಎಚ್‌.ಪಿ ಯಂತ್ರಗಳನ್ನು ಅಳವಡಿಸಲಾಗಿದೆ.

ಸದ್ಯ ನಗರಸಭೆಯವರು ಪೂರೈಕೆ ಮಾಡುತ್ತಿರುವ ನೀರಿನ ಅಕ್ರಮ ಸಂಪರ್ಕ ಪಡೆದವರೂ ನಗರದಲ್ಲಿದ್ದಾರೆ. ಹೊಸ ಯೋಜನೆಯಿಂದ ನೀರು ಪೂರೈಕೆ ಆರಂಭವಾಗುವುದಕ್ಕೆ ಮುಂಚೆ, ಈಗಾಗಲೇ ಅಕ್ರಮ ಸಂಪರ್ಕ ಪಡೆದಿರುವವರು ಸಕ್ರಮ ಮಾಡಿಕೊಳ್ಳಲು ಮಂಡಳಿ ಅವಕಾಶ ಕಲ್ಪಿಸಿದೆ. ಇಲ್ಲದಿದ್ದರೆ, ಹೊಸ ಯೋಜನೆಯ ನೀರು ಬಂದಾಗ, ಹಳೆ ಸಂಪರ್ಕಗಳು ಬಂದ್ ಆಗಲಿವೆ. ಇನ್ಮುಂದೆ ಯಾರೂ ಅಕ್ರಮವಾಗಿ ನೀರಿನ ಸಂಪರ್ಕ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಮಂಡಳಿ ಅಧಿಕಾರಿಗಳು ತಿಳಿಸಿದರು.

ಯೋಜನೆಯಿಂದ ರಾಮನಗರವಷ್ಟೇ ಮತ್ತು ಯೋಜನಾ ಪ್ರದೇಶದ ಮಾರ್ಗದಲ್ಲಿರುವ ಗ್ರಾಮಗಳ ನೀರಿನ ಬವಣೆಗೂ ಪರಿಹಾರ ಸಿಗಲಿದೆ. ಪೈಪ್‌ಲೈನ್ ಮಾರ್ಗದಲ್ಲಿರುವ ಅರಳಾಳುಸಂದ್ರ, ನಂಜಾಪುರ, ಲಕ್ಕೋಜನಹಳ್ಳಿ, ಹೊಸದೊಡ್ಡಿ, ಚಿಕ್ಕೇನಹಳ್ಳಿ, ಚನ್ನಮಾನಹಳ್ಳಿ, ಬನ್ನಿಕುಪ್ಪೆ ಹಾಗೂ ಅಂಜನಾಪುರ ಗ್ರಾಮಗಳಿಗೂ ನೀರು ಪೂರೈಕೆ ಮಾಡಲಾಗುತ್ತದೆ.

‘ಶೀಘ್ರ ಮನೆ ಮನೆಗೆ ನೀರು’

‘ರಾಮನಗರಕ್ಕೆ 24X7 ನೀರು ಪೂರೈಸುವ ಯೋಜನೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ. ನೆಟ್ಕಲ್ ಸಮನಾಂತರ ಜಲಾಶಯದಿಂದ ಸುಮಾರು 68 ಕಿ.ಮೀ. ದೂರವಿರುವ ರಾಮನಗರಕ್ಕೆ ನೀರು ಪೂರೈಸುವಾಗ ಎದುರಾಗುವ ತೊಂದರೆಗಳನ್ನು ಪ್ರಾಯೋಗಿಕ ಹಂತದಲ್ಲಿ ಸರಿಪಡಿಸಲಾಗುತ್ತಿದೆ. ನೀರು ಸೋರಿಕೆ ಯಂತ್ರದಲ್ಲಿ ದೋಷ ಸೇರಿದಂತೆ ವಿವಿಧ ರೀತಿಯ ಸಮಸ್ಯೆಗಳನ್ನು ಪಟ್ಟಿ ಮಾಡಿ ಪರಿಹರಿಸಲಾಗುತ್ತಿದೆ. ಎಲ್ಲವೂ ಸರಿ ಹೋದ ಬಳಿಕ ಸದ್ಯದಲ್ಲೇ ಮನೆ ಮನೆಗೆ ನೀರು ಹರಿಯಲಿದೆ’ ಎಂದು ಕರ್ನಾಟಕ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲ್ಯೂಎಸ್‌ಡಿಬಿ) ರಾಮನಗರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪವಿತ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸತತ ಪ್ರಯತ್ನಕ್ಕೆ ಸಿಕ್ಕ ಫಲ’

‘ನಗರಕ್ಕೆ ನಿರಂತರ ನೀರು ಪೂರೈಕೆ ಯೋಜನೆಯು ಪ್ರಾಯೋಗಿಕವಾಗಿ ಯಶಸ್ವಿಯಾಗಿರುವುದು ನನ್ನ ಸತತ ಪ್ರಯತ್ನಕ್ಕೆ ಸಿಕ್ಕ ಫಲ. ಇದರ ಹಿಂದೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ. ಸುರೇಶ್ ಶ್ರಮವಿದೆ. ಕಳೆದ ಆಗಸ್ಟ್‌ನಲ್ಲಿ ಯೋಜನಾ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಗೆ ಎದುರಾಗಿದ್ದ ಎಲ್ಲಾ ಅಡೆತಡೆಗಳನ್ನು ನಿವಾರಿಸಿದೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸರಣಿ ಸಭೆ ನಡೆಸಿ ಬೆನ್ನು ಬಿದ್ದಿದ್ದರಿಂದ ನೀರು ಬಂದಿದೆ. ಜನರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರದ ಈ ಯೋಜನೆಯ ಸಾಕಾರವು ನನ್ನ ಸೇವೆಯನ್ನು ಸಾರ್ಥಕಗೊಳಿಸಿದೆ’. – ಎಚ್‌.ಎ. ಇಕ್ಬಾಲ್ ಹುಸೇನ್ ಶಾಸಕ

‘ಕಡೆಗೂ ಕನಸು ನನಸು

‘ನಾನು 2018ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ರಾಮನಗರಕ್ಕೆ ನಿರಂತರ ನೀರು ಪೂರೈಸುವ ಈ ಯೋಜನೆಗೆ ಅನುಮೋದನೆ ನೀಡಿದ್ದೆ. ಪ್ರಾಯೋಗಿಕವಾಗಿ ಜಿಲ್ಲೆಗೆ ನೀರು ಹರಿದಿರುವುದು ನನಗಷ್ಟೇ ಅಲ್ಲ ಸ್ಥಳೀಯರ ಸಂಭ್ರಮಕ್ಕೆ ಕಾರಣವಾಗಿದೆ. ನನಗೆ ರಾಜಕೀಯ ಜನ್ಮ ಕೊಟ್ಟ ಈ ನೆಲದ ಋಣ ತೀರಿಸುವ ನಿಟ್ಟಿನಲ್ಲಿ ಕಡೆವರೆಗೂ ಶ್ರಮಿಸುವೆ’. – ಎಚ್.ಡಿ. ಕುಮಾರಸ್ವಾಮಿ ಕೇಂದ್ರ ಸಚಿವ

ನೆಟಕಲ್ ಜಲಾಶಯದಿಂದ ಟಿ.ಕೆ. ಹಳ್ಳಿಯಲ್ಲಿ ನಿರ್ಮಿಸಿರುವ ನೀರು ಶುದ್ಧೀಕರಣ ಮತ್ತು ಪೂರೈಕೆ ಘಟಕಕ್ಕೆ ಹರಿದ ಕಾವೇರಿ ನೀರು
ನೆಟಕಲ್ ಜಲಾಶಯದಿಂದ ಟಿ.ಕೆ. ಹಳ್ಳಿಯಲ್ಲಿ ನಿರ್ಮಿಸಿರುವ ನೀರು ಶುದ್ಧೀಕರಣ ಮತ್ತು ಪೂರೈಕೆ ಘಟಕಕ್ಕೆ ಹರಿದ ಕಾವೇರಿ ನೀರು
ಪೈಪ್‌ಲೈನ್ ಮೂಲಕ ರಾಮನಗರಕ್ಕೆ ಹರಿದು ಬಂದ ನೀರು
ಪೈಪ್‌ಲೈನ್ ಮೂಲಕ ರಾಮನಗರಕ್ಕೆ ಹರಿದು ಬಂದ ನೀರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT