ಮಂಗಳವಾರ, ಮಾರ್ಚ್ 21, 2023
29 °C

ರೇಷ್ಮೆ ಬೆಳೆಗಾರರಿಗೆ ನೆರವಾಗಿದ್ದ ಪ್ರಣವ್; ಕಾಂಗ್ರೆಸ್ ಕಚೇರಿಯಲ್ಲಿ ಶ್ರದ್ಧಾಂಜಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಯ್ಯದ್ ಜಿಯಾವುಲ್ಲಾ ಮಾತನಾಡಿ ’ದೇಶದ ಅಖಂಡತೆ ಬಗ್ಗೆ ಚಿಂತನೆ ನಡೆಸಿ, ನಿಷ್ಠೆ, ಧೈರ್ಯ ಮೈಗೂಡಿಸಿಕೊಂಡಿದ್ದ ಮುತ್ಸದ್ದಿ ರಾಜಕಾರಣಿ ಅವರಾಗಿದ್ದರು. ಜನಸಾಮಾನ್ಯರ ಬಗ್ಗೆ ಚಿಂತನೆ ಮಾಡುವ ವ್ಯಕ್ತಿತ್ವವನ್ನು ಉಳ್ಳವರಾಗಿದ್ದರು’ ಎಂದು ಸ್ಮರಿಸಿದರು.

’2011ರ ನವೆಂಬರ್‌ನಲ್ಲಿ ದೆಹಲಿಯ ಸಂಸತ್ ಭವನದಲ್ಲಿ ಅವರನ್ನು ರಾಮನಗರ ಜಿಲ್ಲಾ ಕಾಂಗ್ರೆಸ್‍ನ ಪದಾಧಿಕಾರಿಗಳು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಆಗ ಚೀನಾ ರೇಷ್ಮೆ ಆಮದಿನಿಂದ ರೇಷ್ಮೆ ಬೆಳೆಗಾರರು ಮತ್ತು ರೀಲರ್ಸ್‍ಗಳಿಗೆ ಆಗುತ್ತಿರುವ ತೊಂದರೆ ಬಗ್ಗೆ ತಿಳಿಸಿದ್ದೆವು. ಅದರ ಫಲವಾಗಿ ಮುಂದಿನ ಬಜೆಟ್‍ನಲ್ಲಿಯೇ ಆಮದು ಶುಲ್ಕ ಹೆಚ್ಚಿಸಿದರು. ಆಗ ರೈತರು ಬೆಳೆದ ರೇಷ್ಮೆಗೂಡಿಗೆ ಹೆಚ್ಚು ಬೆಲೆ ಸಿಕ್ಕಿತು. ರೀಲರ್‌ಗಳು ನಂಬಿದ್ದ ರೇಷ್ಮೆ ಉದ್ಯಮ ಮತ್ತಷ್ಟು ಚೇತರಿಕೆ ಕಂಡಿತು’ ಎಂದು ಅವರ ಸೇವೆ ನೆನೆದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ಮಾತನಾಡಿ, ಪ್ರಣಬ್ ಮುಖರ್ಜಿ ಕಾಂಗ್ರೆಸ್‍ನ ಆಧಾರ ಸ್ಥಂಭವಾಗಿದ್ದರು. ಐದು ದಶಕಗಳ ಕಾಲ ಸುದೀರ್ಘ ರಾಜಕೀಯ ಜೀವನದ ಅಜಾತಶತ್ರುವಾಗಿದ್ದ ಅವರ ಮಾಗದರ್ಶನ ಪಕ್ಷಕ್ಕೆ ಅತ್ಯವಶ್ಯಕವಾಗಿತ್ತು. ಒಬ್ಬ ರಾಜಕಾರಣಿಯಾಗಿ ಭಾರತ ರತ್ನ ಪ್ರಶಸ್ತಿ ಪಡೆದಿದ್ದ ಅವರನ್ನು ಕಳೆದುಕೊಂಡಿರುವುದು ದೇಶದ ಜನತೆಗೆ ನೋವು ತಂದಿದೆ ಎಂದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಬಿ.ಸಿ.ಪಾರ್ವತಮ್ಮ, ಮುಖಂಡರಾದ ಮುತ್ತುರಾಜು, ಷಡಕ್ಷರಿ, ಉಮೇಶ್, ಕುಮಾರಮೋಹನ್, ಜಬ್ಬಿ, ಇಸ್ಮಾಯಿಲ್, ಗಾಯಿತ್ರಿಬಾಯಿ, ಲೀಲಾವತಿ, ಕುಸುಮ, ಕಚೇರಿ ಸಹಾಯಕ ತಿಮ್ಮಯ್ಯ ಮತ್ತಿತರರು ಇದ್ದರು.

ಬಿಜೆಪಿ ಕಾರ್ಯಾಲಯದಲ್ಲಿ ಸ್ಮರಣೆ

ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಣಬ್‌ ಮುಖರ್ಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರದೇವರು, ನಗರ ಘಟಕದ ಅಧ್ಯಕ್ಷ ಶಿವಾನಂದ, ವಕೀಲ ವಿನೋದ್ ಭಗತ್‌ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು