ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹600 ಸಾಲಕ್ಕಾಗಿ ಮಹಿಳೆ ಕೊಲೆ! | ನಾಲ್ಕೇ ದಿನದಲ್ಲಿ ಆರೋಪಿಗಳ ಬಂಧನ

ಅಚ್ಚಲು ಗ್ರಾಮದಲ್ಲಿ ಹತ್ಯೆ ಪ್ರಕರಣ: ನಾಲ್ಕೇ ದಿನದಲ್ಲಿ ಆರೋಪಿಗಳ ಬಂಧನ
Last Updated 13 ಸೆಪ್ಟೆಂಬರ್ 2022, 6:16 IST
ಅಕ್ಷರ ಗಾತ್ರ

ರಾಮನಗರ: ಬಿಡಿಗಾಸಿನ ಸಾಲ ತೀರಿಸಲಾರದೆ ಮಹಿಳೆಯನ್ನೇ ಕೊಂದು ಆಕೆಯ ಒಡವೆ ದೋಚಿದ್ದ ಆರೋಪಿಗಳನ್ನು ಪೊಲೀಸರು ನಾಲ್ಕೇ ದಿನದೊಳಗೆ ಬಂಧಿಸಿ ಜೈಲಿಗಟ್ಟಿದ್ದಾರೆ.

ತಾಲ್ಲೂಕಿನ ಅಚ್ಚಲು ಕಾಲೊನಿಯ ನಿವಾಸಿ ಕೆಂಪಮ್ಮ (45) ಮೃತಪಟ್ಟಿದ್ದು, ಈಕೆಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ಅದೇ ಗ್ರಾಮದ ಲಿಂಗರಾಜು (19), ರವಿ(21) ಎಂಬುವರನ್ನು ಬಂಧಿಸಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿಯಾದ ಕಾನೂನಿನ ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಬಾಲಮಂದಿರದ ವಶಕ್ಕೆ ನೀಡಲಾಗಿದೆ.

₹600ಕ್ಕೆ ಕೊಲೆ: ಕೆಂಪಮ್ಮ ತಮ್ಮ ಗ್ರಾಮದಲ್ಲಿ ಸಣ್ಣದಾಗಿ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸಿದ್ದರು. ಆರೋಪಿ ಲಿಂಗರಾಜು ಈ ಮಹಿಳೆ ಬಳಿ ₹600 ಸಾಲ ಪಡೆದಿದ್ದರು. ಸಾಲ ವಾಪಸ್ ನೀಡುವಂತೆ ಮಹಿಳೆ ಒತ್ತಾಯಿಸಿದಾಗ ಆರೋಪಿಯು ಹಣ ನೀಡುವ ಬದಲಿಗೆ ಸಾಲ ಕೊಟ್ಟವಳನ್ನೇ ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಂತೋಷ್ ಬಾಬು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಆರೋಪಿಗಳು ಮಹಿಳೆಯ 22 ಗ್ರಾಂ ಚಿನ್ನವನ್ನು ಕಸಿದುಕೊಂಡಿದ್ದರು. ತಾಳಿ ಕೀಳಬಾರದು ಎಂಬ ಉದ್ದೇಶಕ್ಕೆ ಕೇವಲ ಚೈನ್, ಓಲೆಯನ್ನು ಕಿತ್ತುಕೊಂಡಿದ್ದರು. ಒಬ್ಬ ಮಹಿಳೆ ಬಳಿ ₹600 ಸಾಲ ಮಾಡಿದ್ದು, ಮತ್ತೊಬ್ಬ ಆರೋಪಿ ತನ್ನ ವೈಯಕ್ತಿಕ ಸಾಲಕ್ಕೆ ಈಕೆಯ ಒಡವೆ ಮೇಲೆ ಕಣ್ಣಿಟ್ಟಿದ್ದ’ ಎಂದು ಅವರು ವಿವರಿಸಿದರು.

ತನ್ನ ಸ್ನೇಹಿತ ರವಿ ಹಾಗೂ ಮತ್ತೊಬ್ಬ ಬಾಲಕನ ಜೊತೆಗೂಡಿ ಲಿಂಗರಾಜು ಕೊಲೆಗೆ ಯೋಜನೆ ರೂಪಿಸಿದ್ದರು. ಕಳೆದ ಗುರುವಾರ ಸಂಜೆ ಅರ್ಕಾವತಿ ನದಿ ದಡದಲ್ಲಿ ಮೇಯುತ್ತಿದ್ದ ಹಸುವನ್ನು ಮನೆಗೆ ಕರೆತರಲು ಕೆಂಪಮ್ಮ ತೆರಳಿದ್ದ ವೇಳೆ ಆರೋಪಿಗಳು ಆಕೆಯ ಕುತ್ತಿಗೆಗೆ ವೈರ್ ಬಿಗಿದು ಕೊಲೆ ಮಾಡಿದ್ದಾರೆ. ಬಳಿಕ ಆಕೆಯ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಅರ್ಕಾವತಿ ನದಿಗೆ ಎಸೆಯಲು ಮುಂದಾಗಿದ್ದರು. ಆದರೆ ಈ ವೇಳೆ ಆರೋಪಿಗಳ ಸಂಬಂಧಿಕರು ಮತ್ತೊಂದು ದಡದಲ್ಲಿ ಮೀನು ಹಿಡಿಯುತ್ತಿದ್ದರು. ಹೀಗಾಗಿ ದಡದಲ್ಲೇ ಶವ ಬಿಸಾಕಿ ಆರೋಪಿಗಳು ಪರಾರಿಯಾಗಿದ್ದರು.

ಡಿವೈಎಸ್‌ಪಿ ಮೋಹನ್ ಕುಮಾರ್, ಗ್ರಾಮೀಣ ಠಾಣೆ ಇನ್‌ಸ್ಪೆಕ್ಟರ್‌ ಗಿರಿರಾಜ್, ಎಸ್‍ಐ ರಾಮಚಂದ್ರಯ್ಯ, ಸಿಬ್ಬಂದಿಯಾದ ಪುರಂದರ ವಿಠಲ, ಮಹೇಶ್, ವಸಂತ ದೊಡ್ಡಮನಿ, ರಾಜೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT