ಮಂಗಳವಾರ, ಜನವರಿ 31, 2023
27 °C
ಸ್ವಾತಂತ್ರ್ಯ ದಿನದ ರಜೆ ಕಳೆಯಲು ಹೋಗಿದ್ದ ಬೆಂಗಳೂರಿನ ನಿವಾಸಿ

ಕನಕಪುರ: ಸೆಲ್ಫಿ ತೆಗೆದುಕೊಳ್ಳಲು ಹೋಗಿ ನೀರು ಪಾಲದ ಯುವಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ರಭಸವಾಗಿ ಹರಿಯುತ್ತಿದ್ದ ನದಿಯ ಬಂಡೆಯ ಮೇಲೆ ಸೆಲ್ಫಿ ತೆಗೆದುಕೊಳ್ಳಲು ಹೋದ ಬೆಂಗಳೂರು ಮೂಲದ ಯುವಕನೊಬ್ಬ ಕಾಲು ಜಾರಿ ನೀರಿಗೆ ಬಿದ್ದು ಕೊಚ್ಚಿ ಹೋದ ಘಟನೆ ತಾಲ್ಲೂಕಿನ ಚುಂಚಿ ಫಾಲ್ಸ್‌ನಲ್ಲಿ ನಡೆದಿದೆ.

ಬೆಂಗಳೂರಿನ ಶಂಕರ ಮಠದ ನಿವಾಸಿ ತಿಮ್ಮೇಗೌಡರ ಪುತ್ರ ಪ್ರವೀಣ್ ಚಂದ್ರ (26) ಮೃತಪಟ್ಟಿರುವ ಯುವಕ. ಈತ ಖಾಸಗಿ ಕಂಪನಿ ಒಂದರಲ್ಲಿ ಎಚ್ ಆರ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ.

ಆಗಸ್ಟ್‌‌ 15ರ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ರಜೆ ಸಿಕ್ಕಿದ್ದರಿಂದ ಭಾನುವಾರ ತನ್ನ ಇಬ್ಬರು ಸ್ನೇಹಿತರ ಜೊತೆಗೂಡಿ ತಾಲೂಕಿನ ಪ್ರವಾಸಿ ತಾಣಗಳಾದ ಸಂಗಮ, ಮೇಕೆದಾಟು ಮತ್ತು ಚುಂಚಿ ಫಾಲ್ಸ್‌ಗೆ ಬಂದಿದ್ದಾರೆ.

ಮೊದಲಿಗೆ ಸಂಗಮಕ್ಕೆ ತೆರಳಿ ಅಲ್ಲಿಂದ ಮೇಕೆದಾಟು ವೀಕ್ಷಣೆ ಮಾಡಿ ನಂತರದಲ್ಲಿ ಚುಂಚಿ ಫಾಲ್ಸ್‌ಗೆ ಬಂದಿದ್ದರು. ಕಳೆದ ಕೆಲವು ದಿನಗಳ ಹಿಂದೆ ಬಿಡದೆ ಸುರಿದ ಮಳೆಯಿಂದಾಗಿ ಚುಂಚಿ ಫಾಲ್ಸ್‌ನಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. 

ಆದಾಗ್ಯೂ, ರಭಸವಾಗಿ ಹರಿಯುತ್ತಿದ್ದ ನೀರಿನ ಮಧ್ಯೆ ಇರುವ ಒಂದು ಬಂಡೆಯ ಮೇಲೆ ಇಬ್ಬರು ಸ್ನೇಹಿತರು ಹೋಗಿದ್ದು, ಸಂತ್ರಸ್ತ ಪ್ರವೀಣ್ ಚಂದ್ರ ಬಂಡೆಯ ಕೊನೆ ಭಾಗದಲ್ಲಿ ಕಾಲು ನೀರಿಗೆ ಸೋಕುವಂತೆ ಕುಳಿತು ಸ್ವಲ್ಪಹೊತ್ತು ನೀರಿನಲ್ಲಿ ಆಟವಾಡಿದ್ದಾನೆ. ನಂತರ ಮೇಲೆದ್ದು ಸೆಲ್ಫಿ ಫೋಟೊ ತೆಗೆದುಕೊಳ್ಳುವಾಗ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ ಎಂದು ಅವರ ಜೊತೆಯಲ್ಲಿದ್ದ ಸ್ನೇಹಿತರು ತಿಳಿಸಿದ್ದಾರೆ. 

ಆ ಸ್ಥಳದಲ್ಲಿ ನೀರು ಸುಮಾರು 30 ಅಡಿಯಷ್ಟು ಆಳವಾಗಿದ್ದು, ನೀರಿನಲ್ಲಿ ಬೀಳುತ್ತಿದ್ದಂತೆ ಅತಿ ರಭಸವಾಗಿ ಹರಿಯುತ್ತಿದ್ದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಘಟನೆ ನಡೆದ ತಕ್ಷಣ ಪೋಷಕರಿಗೆ ಮಾಹಿತಿ ನೀಡಿದ್ದು, ಮೃತರ ತಂದೆ ಸಾತನೂರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ಸಾತನೂರು ಸಬ್‌ ಇನ್‌ಸ್ಪೆಕ್ಟರ್‌ ರವಿಕುಮಾರ್‌, ಸಿಬ್ಬಂದಿ, ನುರಿತ ಈಜುಗಾರರು ಮತ್ತು ಅಗ್ನಿಶಾಮಕ ದಳದವರ ಸಹಕಾರದಿಂದ ಭಾನುವಾರ, ಸೋಮವಾರ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ. ಘಟನೆ ನಡೆದ ಸ್ಥಳದಿಂದ ಪ್ರವೀಣ್ ದೇಹವು 1 ಕಿ.ಮೀ ದೂರದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಸಾತನೂರು ಪೊಲೀಸರು ಮಂಗಳವಾರ ಸಂಜೆ ವೇಳೆಗೆ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ, ದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು