ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ವಿಮಾನ ಹಾರಾಟ: ಸ್ಟಾರ್‌ ಏರ್‌ಲೈನ್ಸ್ ಆಸಕ್ತಿ

ಆರಂಭದಲ್ಲಿ ಶಿವಮೊಗ್ಗ–ಬೆಂಗಳೂರು ನಡುವೆ ವಿಮಾನ ಸೇವೆ: ಸಂಸದ ಬಿ.ವೈ. ರಾಘವೇಂದ್ರ
Last Updated 19 ಜನವರಿ 2023, 6:07 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ಸೋಗಾನೆಯಿಂದ ವಿಮಾನ ಹಾರಾಟ ನಡೆಸಲು ಸ್ಟಾರ್‌ ಏರ್‌ಲೈನ್ಸ್‌ನವರು ಮುಂದೆ ಬಂದಿದ್ದಾರೆ. ಆರಂಭದಲ್ಲಿ ಶಿವಮೊಗ್ಗದಿಂದ–ಬೆಂಗಳೂರಿಗೆ ವಿಮಾನ ಸಂಚಾರ ಆರಂಭವಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.

ಸೋಗಾನೆ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೇರೆ ಬೇರೆ ಸಂಸ್ಥೆಗಳೊಂದಿಗೂ ವಿಮಾನ ಸಂಚಾರ ಆರಂಭಿಸಲು ಮಾತುಕತೆ ನಡೆಯುತ್ತಿದೆ’ ಎಂದರು.

‘ಫೆಬ್ರುವರಿ ಕೊನೆಯ ವಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಬರಲಿದ್ದು, ವಿಮಾನ ನಿಲ್ದಾಣ ಲೋಕಾರ್ಪಣೆಯ ಜೊತೆಗೆ ₹ 7500 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಶಿವಮೊಗ್ಗದ ಸ್ಮಾರ್ಟ್ ಸಿಟಿ ಯೋಜನೆ ಕೂಡ ಇದೇ ವೇಳೆ ಉದ್ಘಾಟನೆ ಆಗಲಿದೆ’ ಎಂದು ಹೇಳಿದರು.

‘ರಾಜ್ಯದ ಬೇರೆ ಬೇರೆ ಕಡೆ ವಿಮಾನ ನಿಲ್ದಾಣಗಳು ಉದ್ಘಾಟನೆ ಆಗಿ ಎರಡು ವರ್ಷಗಳ ನಂತರ ಕಾರ್ಯಾರಂಭ ಮಾಡಿರುವ ನಿದರ್ಶನ ಇದೆ. ಆದರೆ ಶಿವಮೊಗ್ಗ ವಿಮಾನ ನಿಲ್ದಾಣ ಕಾರ್ಯಾರಂಭಕ್ಕೆ ಈಗಾಗಲೇ ಚಾಲನೆ ದೊರೆತಿದೆ. ಸರ್ಕಾರ ಬ್ರಿಗೇಡಿಯರ್ ಪೂರ್ವಿಮಠ್ ಅವರನ್ನು ತಾಂತ್ರಿಕ ಸಲಹೆಗಾರರಾಗಿ ನೇಮಕ ಮಾಡಿದೆ. ಇಲ್ಲಿನ ಸಿಬ್ಬಂದಿಗೆ ಈಗಾಗಲೇ ಬೆಂಗಳೂರಿನಲ್ಲಿ ತರಬೇತಿ ಆರಂಭವಾಗಿದೆ’ ಎಂದರು.

‘ಮಲೆನಾಡಿನ ಜನರ ಬಹಳ ದಿನದ ಕನಸು ನನಸಾಗುತ್ತಿದೆ. ಇಚ್ಛಾ ಶಕ್ತಿಯ ನಾಯಕರ ಅಶೀರ್ವಾದದಿಂದ ಈ ಸರ್ಕಾರದ ಅವಧಿಯಲ್ಲಿಯೇ ವಿಮಾನ ನಿಲ್ದಾಣದ ಕೆಲಸ ಪೂರ್ಣಗೊಳಿಸಲು ಸಾಧ್ಯವಾಗಿದೆ. ಈಗಾಗಲೇ ಒಮ್ಮೆ ಡಿಜಿಸಿಎ ಅಧಿಕಾರಿಗಳು ಭೇಟಿ ನೀಡಿ ಸಲಹೆ ನೀಡಿ ಹೋಗಿದ್ದಾರೆ. ಅವರು ತೋರಿಸಿದ್ದ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಅವರು ಶೀಘ್ರ ಮತ್ತೊಮ್ಮೆ ಬಂದು ಪರಿಶೀಲಿಸಿ ಅನುಮತಿ ನೀಡಲಿದ್ದಾರೆ’ ಎಂದರು.

‘ಕೋಟೆ ಗಂಗೂರಿನಲ್ಲಿ ರೈಲ್ವೆ ಕೋಚಿಂಗ್ ಡಿಪೊ, ಶಿವಮೊಗ್ಗ–ರಾಣೆಬೆನ್ನೂರು ರೈಲು ಮಾರ್ಗ, ₹ 3000 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗೂ ಪ್ರಧಾನಿ ಇದೇ ವೇಳೆ ಚಾಲನೆ ನೀಡಲಿದ್ದಾರೆ’ ಎಂದು ರಾಘವೇಂದ್ರ ಹೇಳಿದರು.

ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡಲು ಅಧಿಕಾರಿ, ಸಿಬ್ಬಂದಿಗಳನ್ನು ಸರ್ಕಾರವೇ ನೇಮಕ ಮಾಡಲಿದೆ. ಸ್ಥಳೀಯರಿಗೆ ಹೌಸ್‌ ಕೀಪಿಂಗ್ ವಿಭಾಗದಲ್ಲಿ ಉದ್ಯೋಗಾವಕಾಶ ಸಿಗಲಿದೆ ಎಂದು ಅಧಿಕಾರಿಯೊಬ್ಬರು ಇದೇ ವೇಳೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಈ ವೇಳೆ ವಿಧಾನಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್. ರುದ್ರೇಗೌಡ, ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ, ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಭದ್ರಾವತಿಯ ಬಿಜೆಪಿ ಮುಖಂಡ ಮಂಗೋಟಿ ರುದ್ರೇಶ್, ಧರ್ಮಪ್ರಸಾದ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಜಗದೀಶ್, ಬಳ್ಳೇಕೆರೆ ಸಂತೋಷ್ ಹಾಜರಿದ್ದರು.

‘ಭೂಮಿ ಕೊಟ್ಟ ರೈತರಿಗೆ ಅಭಿನಂದನೆ’

ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂಮಿ ಕೊಟ್ಟಿರುವ ರೈತರಿಗೆ ಅಭಿನಂದನೆ ಸಲ್ಲಿಸುವುದಾಗಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಗಾನೆ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆ ವಿಮಾನ ಇಳಿಯುವ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ದೇಶದಲ್ಲಿಯೇ ಅತ್ಯಂತ ಕಡಿಮೆ ವೆಚ್ಚದಲ್ಲಿ ಈ ವಿಮಾನ ನಿಲ್ದಾಣ ನಿರ್ಮಾಣ ಆಗಿದ್ದು, ಅದನ್ನು ಯಾರಿಗೂ ಕಲ್ಪನೆ ಮಾಡಿಕೊಳ್ಳಲು ಆಗುವುದಿಲ್ಲ. ಈ ಬಗ್ಗೆ ಪ್ರಧಾನಿ ಅವರಿಗೂ ಮಾಹಿತಿ ನೀಡಿ ಬಂದಿದ್ದೇನೆ. ಇದಕ್ಕೆ ಸಂಸದ ರಾಘವೇಂದ್ರ ಹಾಗೂ ಅಧಿಕಾರಿಗಳ ಶ್ರಮ ಕಾರಣ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT