ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ನಮ್ಮೆಲ್ಲರ ಪ್ರೇರಕ ಶಕ್ತಿ: ಶಿವಮೊಗ್ಗ ಡಿ.ಸಿ

ಡಾ.ಬಿ.ಆರ್ ಅಂಬೇಡ್ಕರ್ ಅವರ 133ನೇ ಜಯಂತಿ ಕಾರ್ಯಕ್ರಮ
Published 14 ಏಪ್ರಿಲ್ 2024, 16:11 IST
Last Updated 14 ಏಪ್ರಿಲ್ 2024, 16:11 IST
ಅಕ್ಷರ ಗಾತ್ರ

ಶಿವಮೊಗ್ಗ: ದೇಶ ಸ್ವಾತಂತ್ರ್ಯ ಪಡೆದ ನಂತರ ಶಾಂತಿಯುತ ಹಾಗೂ ಅತ್ಯುತ್ತಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾರ ಕೊಡುಗೆ ನೀಡಿದವರು ಬಾಬಾ ಸಾಹೇಬ್ ಅಂಬೇಡ್ಕರ್. ಅವರು ನಮಗೆಲ್ಲ ಪ್ರೇರಕ ಶಕ್ತಿ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ಜಿಲ್ಲಾಡಳಿತದಿಂದ ಭಾನುವಾರ ಆಯೋಜಿಸಿದ್ದ ಡಾ.ಬಿ.ಆರ್ ಅಂಬೇಡ್ಕರ್ ಅವರ 133ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಅಂಬೇಡ್ಕರ್ ಅಸ್ಪೃಶ್ಯತೆಯಿಂದ ಮುಕ್ತಿ ನೀಡಿ, ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ಅವರು ಕೇವಲ ಸಂವಿಧಾನ ಶಿಲ್ಪಿಯಲ್ಲ, ಅರ್ಥಿಕ ತಜ್ಞ, ರಾಜನೀತಿಜ್ಞ. ಶೋಷಿತ ವರ್ಗ ಮಾತ್ರವಲ್ಲ ಕಾರ್ಮಿಕರು, ಮಹಿಳೆಯರ ಹಕ್ಕು ಮತ್ತು ಕಾಯ್ದೆಗಳನ್ನು ತರುವಲ್ಲಿ ಅವರ ಪಾತ್ರ ಬಹಳ ಮುಖ್ಯ. ಯಾವುದೇ ಒಂದು ವರ್ಗಕ್ಕೆ ಅವರು ಸೀಮಿತವಾಗಿಲ್ಲ. ಅವರು ಸರ್ವಜನಾಂಗದ ನಾಯಕ. ಪ್ರತಿ ದಿನ ನಾವು ಕಚೇರಿ, ಇತರೆ ಕೆಲಸಗಳಿಗೆ ತೆರಳುವಾಗ ಸಂವಿಧಾನದ ಪ್ರಸ್ತಾವನೆಯನ್ನು ಓದಿ ಅಥವಾ ನೆನಪಿಸಿಕೊಂಡರೆ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಗುತ್ತದೆ’ ಎಂದರು.

ಎಸ್ಪಿ ಜಿ.ಕೆ. ಮಿಥುನ್ ಕುಮಾರ್ ಮಾತನಾಡಿ, ‘ಅಂಬೇಡ್ಕರ್ ಜ್ಞಾನದ ಸಂಪತ್ತು. ಅವರು ಓದಿರುವಷ್ಟು ನಾವು ಓದಲು 100 ಜನ್ಮ ಬೇಕಾಗುತ್ತದೆ. ಅಂಬೇಡ್ಕರ್ ಅವರು ಹಾಕಿಕೊಟ್ಟಿರುವ ಮೌಲ್ಯಗಳನ್ನು ನಾವು ಪಾಲಿಸಬೇಕಾಗಿದೆ. ಬಡ ಕುಟುಂಬದ ಹಿನ್ನೆಲೆಯ ನಾವು ಈ ಸ್ಥಾನಕ್ಕೆ ಬರಲು ಸಂವಿಧಾನ ಕಾರಣ. ಯುಪಿಎಸ್‍ಸಿ, ಕೆಪಿಎಸ್‍ಸಿ ಪರೀಕ್ಷೆಗಳ ಮೂಲಕ ನಾವು ಈ ಹುದ್ದೆಗೆ ಬರಲು ಕಾರಣವಾಗಿದ್ದು ಜೀವನ ಪೂರ್ತಿ ಅವರನ್ನು ನೆನೆಪಿಸಿಕೊಳ್ಳುತ್ತೇವೆ’ ಎಂದರು.

ಅಂಬೇಡ್ಕರ್ ಚರ್ಚೆ ಮತ್ತು ಚಿಂತನೆಗಳಲ್ಲಿ ನಂಬಿಕೆ ಇಟ್ಟಿದ್ದರು. ಮನುಷ್ಯರ ನಡುವೆ ಅನೇಕ ಭಿನ್ನಾಭಿಪ್ರಾಯಗಳು ಇರುತ್ತವೆ. ಅವುಗಳನ್ನು ಚರ್ಚೆ ಮಾಡಿ, ಮಾತನಾಡಿ ಬಗೆಹರಿಸಿಕೊಳ್ಳಬಹುದು ಎಂದರು.

ಸಂವಿಧಾನ ರಚಿಸುವಾಗ ಅನೇಕ ದೇಶಗಳ ಲಿಖಿತ ಸಂವಿಧಾನಗಳನ್ನು ಅಧ್ಯಯನ ಮಾಡಿ ಸದೃಢವಾದ ಸಂವಿಧಾನವನ್ನು ಅಂಬೇಡ್ಕರ್ ನಮಗೆ ನೀಡಿದ್ದಾರೆ ಎಂದು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಹೇಳಿದರು. 

ಜಿಲ್ಲಾ ಪಂಚಾಯಿತಿ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ ಮಾತನಾಡಿ, ‘ಅಂಬೇಡ್ಕರ್ ರಾಜನೀತಿಜ್ಞ. ಕಾರ್ಮಿಕರು, ಶೋಷಿತರು, ಮಹಿಳೆಯರು ಸೇರಿದಂತೆ ದೇಶದ ಎಲ್ಲ ವರ್ಗಗಳ ಏಳ್ಗೆಗಾಗಿ ದುಡಿದವರು’ ಎಂದು ಸ್ಮರಿಸಿದರು.

ಕುವೆಂಪು ವಿವಿ ಎನ್‍ಎಸ್‍ಎಸ್ ಸಂಯೋಜಕಿ ಶುಭಾ ಮರವಂತೆ ಮಾತನಾಡಿ, ‘ಮಹಾ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರರ ಕಿಡಿ ಮತ್ತು ಕುಡಿ ನಮ್ಮೆಲ್ಲರಲ್ಲಿ ಇದ್ದು ನಾವೆಲ್ಲ ಅವರ ಪ್ರತಿನಿಧಿಗಳು. ಅವರ ವ್ಯಕ್ತಿತ್ವ ಮತ್ತು ಸಾಧನೆಯ ಎರಡು ಮುಖಗಳನ್ನು ನಾವು ಕಾಣಬಹುದು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂವಿಧಾನದ ಪ್ರಸ್ತಾವನೆ ಬೋಧಿಸಲಾಯಿತು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಲ್ಲೇಶಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶ್ರೀನಿವಾಸ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT