ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಲವು ಅಭಿರುಚಿವುಳ್ಳ ಡಾ.ಅರುಣ್ ಹೊಸಕೊಪ್ಪ ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ

Published 26 ಮೇ 2024, 14:25 IST
Last Updated 26 ಮೇ 2024, 14:25 IST
ಅಕ್ಷರ ಗಾತ್ರ

ಶಿವಮೊಗ್ಗ: ವಿದ್ಯಾರ್ಥಿ ದೆಸೆಯಿಂದಲೇ ಚಳವಳಿಗಳಲ್ಲಿ ಗುರುತಿಸಿಕೊಂಡು ಹೋರಾಟದ ಮನೋಭಾವ ರೂಢಿಸಿಕೊಂಡಿದ್ದ ಸಾಮಾಜಿಕ ಕಾಳಜಿವುಳ್ಳ, ಪಾದರಸದ ವ್ಯಕ್ತಿತ್ವ ಹೊಂದಿರುವ ಹಾಗೂ ಸದಾ ಹಸನ್ಮುಖಿಯಾದ ಡಾ.ಅರುಣ್ ಹೊಸಕೊಪ್ಪ ಅವರು ಜೂನ್ 3ರಂದು ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಹುರಿಯಾಳು.

ದಶಕಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಯುವ ಸಮುದಾಯದ ನಾಡಿಮಿಡಿತ ಅರಿತವರು. ಪತ್ರಕರ್ತರಾಗಿ, ಸಿನಿಮಾ ನಿರ್ದೇಶಕರಾಗಿ ಹತ್ತು ಹಲವು ಅಭಿರುಚಿ ಹೊಂದಿರುವ ಅವರು ನೈರುತ್ಯ ಪತ್ರಿಕೆ ಸಂಪಾದಕರಾಗಿ ಪತ್ರಿಕೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

ಸಾಮಾಜಿಕ ಚಟುವಟಿಕೆಗಳ ಜೊತೆಗೆ ರಾಜಕೀಯ ಆಸಕ್ತಿ ಬೆಳೆಸಿಕೊಂಡಿರುವ ಇವರು, ನಿರುದ್ಯೋಗಿ ವಿದ್ಯಾವಂತ ಸಮುದಾಯದ ಪರವಾಗಿ, ಶಿಕ್ಷಕರ‌ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸೇವೆ ಸಲ್ಲಿಸುವ ಇಂಗಿತ ಹೊಂದಿ ಜೂನ್‌ 3ರಂದು ನಡೆಯಲಿರುವ ವಿಧಾನ ಪರಿಷತ್‌ನ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ  ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಮೀಪದ ಆಲೂರು-ಹೊಸಕೊಪ್ಪ ಅವರ ಹುಟ್ಟೂರು. ತೀರ್ಥಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿ, ಡಿಪ್ಲೊಮ ಪದವಿ ಪಡೆದರು. ನಂತರ ಶರಾವತಿ ಪ್ರಥಮದರ್ಜೆ ಕಾಲೇಜಿನಲ್ಲಿ ಬಿ.ಎ ಪದವಿ ಪೂರೈಸಿ, ಕುವೆಂಪು ವಿಶ್ವವಿದ್ಯಾಲಯದಲ್ಲಿ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ‘ಕೆಳದಿ ನಾಯಕರ ಕಾಲದ ತೆರಿಗೆ ಪದ್ಧತಿ’ ವಿಷಯದ ಮೇಲೆ ಮಹಾಪ್ರಬಂಧ ಮಂಡಿಸಿ ಪಿಎಚ್‌.ಡಿ ಪದವಿಯನ್ನೂ ಪಡೆದಿದ್ದಾರೆ.

ತೀರ್ಥಹಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಆರಂಭಿಸಿದ ಅವರು, ಶೈಕ್ಷಣಿಕ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆ ಮಾಡುವಲ್ಲಿ ಮುಂಚೂಣಿಯಲ್ಲಿರುವ ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಉತ್ಸುಕತೆ ಹೊಂದಿದ್ದಾರೆ. ಪದವೀಧರರು ಅವಕಾಶ ನೀಡಿದ್ದೇ ಆದರೆ ಚಿಂತಕರ ಚಾವಡಿ ಎಂದೇ ಕರೆಸಿಕೊಂಡಿರುವ ವಿಧಾನ ಪರಿಷತ್ (ಮೇಲ್ಮನೆ)ನ ಸದಸ್ಯರಾಗಿ ಪ್ರಬುದ್ಧತೆ ಪ್ರದರ್ಶಿಸಲು ಎದುರು ನೋಡುತ್ತಿದ್ದಾರೆ.

ಅತಿಥಿ ಉಪನ್ಯಾಸಕರು ಅತ್ಯಲ್ಪ ಗೌರವ ಸಂಭಾವನೆ ಪಡೆದು ತಮ್ಮನ್ನು ನಂಬಿರುವ ಹೆತ್ತವರಿಗೆ, ಮಡದಿ, ಮಕ್ಕಳಿಗೆ ಆಸರೆಯಾಗಲು ಸಾಧ್ಯವಾಗುತ್ತಿಲ್ಲ ಎನ್ನುವ ವಾಸ್ತವ ಸಂಗತಿ ಬಗ್ಗೆ ತಿಳಿದುಕೊಂಡು ಅವರ ಧ್ವನಿಯಾಗಿ ನಿಲ್ಲುವ ಉತ್ಸಾಹ ತೋರರುವ ಮೂಲಕ ಈಗಾಗಲೇ ಎರಡು ಬಾರಿ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಪರಾಜಿತಗೊಂಡಿದ್ದರೂ ಶಿಕ್ಷಕರ ಮನಸ್ಸಿನಿಂದ ದೂರವಾಗಿಲ್ಲ. ಮತ್ತೆ ಆಯ್ಕೆ ಬಯಸಿದ್ದಾರೆ. ಎರಡು ಬಾರಿ ಸೋತರೂ ಶಿಕ್ಷಕರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಅವರ ಮನ ಗೆಲ್ಲುವ ಮೂಲಕ ಈ ಬಾರಿ ಪದವೀಧರರ ಮತ ಪಡೆದು ಜಯ ಗಳಿಸುವ ನಿರೀಕ್ಷೆಯಲ್ಲಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ, ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ ಅವರ ಜೊತೆಗೆ ಹತ್ತಿರದ ಒಡನಾಟ ಹೊಂದಿರುವ ಅರುಣ್ ಅವರಿಗೆ ರಾಜಕೀಯಕ್ಕೆ ಬರುವಂತೆ ಆಹ್ವಾನಿಸಿದ್ದರು. ಕಡೂರು ಕ್ಷೇತ್ರದ ಮಾಜಿ ಶಾಸಕ ವೈ.ಎಸ್.ವಿ. ದತ್ತ‌ ಅವರೂ ಅರುಣ್‌ ಅವರಲ್ಲಿರುವ ಕ್ರಿಯಾಶೀಲತೆ ಮನಗಂಡು ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವಂತೆ ಹಲವು ಬಾರಿ ಹೇಳಿದ್ದರು.

ಸಾರ್ವಜನಿಕ ಜೀವನದಲ್ಲಿ ಜನರ ಅಭ್ಯುದಯವನ್ನು ಬಯಸುವ ಈ ಮೇಲಿನ ರಾಜಕಾರಣಿಗಳ ಬದ್ಧತೆಯನ್ನು ಮನಗಂಡಿರುವ ಡಾ.ಅರುಣ್ ಅವರಿಗೆ ಶಿಕ್ಷಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯುವ ಅದಮ್ಯ ಉತ್ಸಾಹವಿದೆ.

ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ನನ್ನನ್ನು ಆಯ್ಕೆ ಮಾಡಿದರೆ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವ ಶಿಲ್ಪಿಗಳು. ಹಲವು ವರ್ಷಗಳ ಕಾಲ ಉಪನ್ಯಾಸಕನಾಗಿ ಸೇವೆ ಸಲ್ಲಿಸಿರುವುದರಿಂದ ಅವರ ಸಮಸ್ಯೆ ಬಗ್ಗೆ ಅರಿವು ಹೊಂದಿರುವ ನನಗೆ ನಿಮ್ಮ ಕಷ್ಟಸುಖಗಳಿಗೆ ಸ್ಪಂದಿಸುತ್ತೇನೆ. ಈ ಬಾರಿ ನನಗೆ ಒಂದು ಅವಕಾಶ ಮಾಡಿಕೊಡಿ.
–ಡಾ.ಅರುಣ್ ಹೊಸಕೊಪ್ಪ, ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ

ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವುದು. ಅನುದಾನಿತ ಶಾಲೆಗಳಿಗೆ ಸರ್ಕಾರದ ಪ್ರೋತ್ಸಾಹ ಸಿಗದ ಕಾರಣ ಇಂದು ಮುಚ್ಚುವ ಹಂತವನ್ನು ತಲುಪಿದ್ದು, ಅದನ್ನು ಗಮನಿಸಿದಾಗ ಈಗಿನ ವ್ಯವಸ್ಥೆಯು ಇವುಗಳ ಬಗ್ಗೆ ಯೋಚಿಸುತ್ತಲೇ ಇಲ್ಲ ಅನಿಸುತ್ತದೆ. ಅಲ್ಲಿ ಶಿಕ್ಷಕರು ನೌಕರರು ಇಲ್ಲದೆ ಯಾರು ಮಕ್ಕಳನ್ನು ಸೇರಿಸುತ್ತಾರೆ ಎನ್ನುವ ಕನಿಷ್ಠ ಜ್ಞಾನ ಕೂಡ ಸರ್ಕಾರಗಳಿಗೆ ಇಲ್ಲವೇ ಎನಿಸುತ್ತದೆ .ಅದರ ಜೊತೆಗೆ ಯಾವುದೇ ಪಿಂಚಣಿ ಇಲ್ಲದೆ ನಿವೃತ್ತಿ ನಂತರ ಬರಿಗೈಯಲ್ಲಿ ಹೋಗುತ್ತಿರುವ ಶಿಕ್ಷಕರನ್ನು ನೋಡಿದಾಗ ವೇದನೆ ಅನಿಸುತ್ತದೆ. ಇವುಗಳಿಗೆ ಪರಿಹಾರ ಒದಗಿಸುವ ಯೋಚನೆ ಹೊಂದಿದ್ದಾರೆ. ಹಾಗೆಯೇ ಅನೇಕ ಅನುದಾನಿತ ಶಿಕ್ಷಕರು ತಮ್ಮ ಸಂಸ್ಥೆ ಅನುದಾನಕ್ಕೆ ಒಳಪಡುತ್ತದೆ ಎಂಬ ಆಸೆಯಲ್ಲಿ ಕನಿಷ್ಠ ವೇತನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ, ಅಂತಹ ಸಂಸ್ಥೆಗಳಿಗೂ ಕೂಡ ಅನುದಾನ ಕೊಡಿಸುವ ಪ್ರಾಮಾಣಿಕ ಪ್ರಯತ್ನ ನಡೆಸುವ ಇಂಗಿತ ಹೊಂದಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ, ಕೊಡುಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಗೂ ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕು ಒಳಗೊಂಡಿರುವ ನೈರುತ್ಯ ಕ್ಷೇತ್ರದಲ್ಲಿ ಕಳೆದ ಎರಡು ತಿಂಗಳಿನಿಂದ ಪ್ರತಿ ಶಾಲೆಗೆ ಭೇಟಿ ನೀಡಿ ಶಿಕ್ಷಕರನ್ನು ಸಂಪರ್ಕ ಮಾಡಿದ್ದಾರೆ. ಶಿಕ್ಷಕರ ಕ್ಷೇತ್ರ ಪ್ರತಿನಿಧಿಸಿದ ಅಭ್ಯರ್ಥಿಗಳು ಆಯ್ಕೆಯಾದ ನಂತರ ಸಮಸ್ಯೆಗಳಿಗೆ ಓಗೊಟ್ಟಿಲ್ಲ ಎನ್ನುವ ಅಪಸ್ವರ ಶಿಕ್ಷಕ ಸಮೂಹದಿಂದ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಎರಡು ಬಾರಿ ಸ್ಪರ್ಧಿಸಿ ಪ್ರತಿಯೊಬ್ಬ ಶಿಕ್ಷಕರಿಗೂ ವ್ಯೆಯಕ್ತಿಕವಾಗಿ ಪರಿಚಯವಿರುವ ಡಾ.ಅರುಣ್ ಹೊಸಕೊಪ್ಪ ಅವರು ಶಿಕ್ಷಕರು ತಮ್ಮನ್ನು ಈ ಬಾರಿ ಗೆಲ್ಲಿಸುವುದು ನಿಶ್ಚಿತ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT