ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಿ ಇಲ್ಲದ ಹೋರಾಟವೇ ನನ್ನ ಶಕ್ತಿ: ಆಯನೂರು ಮಂಜುನಾಥ್

ವಿಧಾನ ಪರಿಷತ್‌ ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅಭಿಪ್ರಾಯ
Published 30 ಮೇ 2024, 5:14 IST
Last Updated 30 ಮೇ 2024, 5:14 IST
ಅಕ್ಷರ ಗಾತ್ರ

ಶಿವಮೊಗ್ಗ: ಆಯನೂರು ಮಂಜುನಾಥ್, ವಿಧಾನ ಪರಿಷತ್‌ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಈ ಬಾರಿ ಕಾಂಗ್ರೆಸ್‌ನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಳೆದ ಅವಧಿಯಲ್ಲಿ ಇದೇ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಮೇಲ್ಮನೆಗೆ ಆಯ್ಕೆಯಾಗಿದ್ದ ಅವರು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಈ ಬಾರಿ ಕಾಂಗ್ರೆಸ್ ಹುರಿಯಾಳು. ಮತದಾರರು ಈ ಬಾರಿಯೂ ತಮ್ಮನ್ನು ‘ಕೈ’ ಬಿಡುವುದಿಲ್ಲ ಎಂಬ ಭರವಸೆಯಲ್ಲಿರುವ ಅವರು, ಕ್ಷೇತ್ರದ ಆರು ಜಿಲ್ಲೆಗಳಲ್ಲಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಬಿಡುವಿಲ್ಲದ ಓಡಾಟದ ನಡುವೆಯೇ ಅವರು ‘ಪ್ರಜಾವಾಣಿ’ಯೊಂದಿಗೆ ಮಾತಿಗೆ ಸಿಕ್ಕರು.

*ಹೇಗಿದೆ ವಾತಾವರಣ, ಪ್ರಚಾರ ಹೇಗೆ ಸಾಗಿದೆ?

ವಾತಾವರಣ ಖಂಡಿತ ಕಾಂಗ್ರೆಸ್ ಪಕ್ಷಕ್ಕೆ ಪೂರಕವಾಗಿದೆ. ಪ್ರಚಾರ ಕೂಡ ಚೆನ್ನಾಗಿ ನಡೆಯುತ್ತಿದೆ. ಸಮಯದ ಅಭಾವದಿಂದ ಮನೆ ಮನೆಗೆ ಮುಟ್ಟಲು ಆಗುತ್ತಿಲ್ಲ. ಕಾರ್ಯಕರ್ತರು ಪ್ರತಿ ಮತದಾರರನ್ನು ತಲುಪುವ ಕೆಲಸದಲ್ಲಿ ನಿರತರಾಗಿದ್ದಾರೆ.

* ಕಳೆದ ಬಾರಿ ಬಿಜೆಪಿ, ಈಗ ಕಾಂಗ್ರೆಸ್ ಅಭ್ಯರ್ಥಿ. ಮತದಾರರು ಇದನ್ನು ಹೇಗೆ ಸ್ವೀಕರಿಸಿದ್ದಾರೆ?

ಮತದಾರರಲ್ಲಿ ನೌಕರರು ಹಾಗೂ ನೌಕರೇತರರು ಎಂಬ ಎರಡು ವಿಭಾಗಗಳಿವೆ. ನಾನು ಪಕ್ಷ ಬದಲಾವಣೆ ಮಾಡಿರುವುದರಿಂದ ನೌಕರರಿಗೆ ಯಾವುದೇ ಸಮಸ್ಯೆ ಆಗಿಲ್ಲ. ತಮ್ಮ ಪರ ಹೋರಾಡುವ ವ್ಯಕ್ತಿಯಾಗಿ ಅವರು ನನ್ನನ್ನು ಸ್ವೀಕರಿಸಿದ್ದಾರೆ. ಎನ್‌ಪಿಎಸ್ ಸೇರಿದಂತೆ ಬೇರೆ ಬೇರೆ ಸಂದರ್ಭದಲ್ಲಿ ನೌಕರರ ಧ್ವನಿಯಾಗಿ ಕೆಲಸ ಮಾಡಿದ್ದೇನೆ. ನೌಕರರಲ್ಲದವರಲ್ಲಿ ಒಂದಷ್ಟು ಜಿಜ್ಞಾಸೆ ಇರುವುದು ನಿಜ. ಅವರಲ್ಲಿ ಕೆಲವರು ಬಿಜೆಪಿ, ಕಾಂಗ್ರೆಸ್ ಹಾಗೂ ಜಾತಿ ನೋಡುವವರು ಇದ್ದಾರೆ. ಕಾಂಗ್ರೆಸ್‌ನವರು ನನಗೆ, ಬಿಜೆಪಿಯವರು ಆ ಪಕ್ಷದವರಿಗೆ, ಬಂಡಾಯ ನಿಂತಿರುವವರ ಬೆಂಬಲಿಗರು ಅವರಿಗೇ ಬೆಂಬಲಿಸುತ್ತಾರೆ. ಹೀಗಾಗಿ ನನ್ನ ಪಕ್ಷಾಂತರ ಮತದಾರರಲ್ಲಿ ಒಂದು ವಿಷಯವಾಗಿ ಉಳಿದಿಲ್ಲ.

* ನೈರುತ್ಯ ಪದವೀಧರ ಕ್ಷೇತ್ರದ ಮತದಾರರು ಆಯನೂರು ಮಂಜುನಾಥ್ ಅವರಿಗೇ ಏಕೆ ಮತ ಹಾಕಬೇಕು?

ಕಣದಲ್ಲಿರುವ ಪ್ರಮುಖ ಮೂವರು ಅಭ್ಯರ್ಥಿಗಳಿಗೆ ಹೋಲಿಸಿದರೆ ನಾನು 40 ವರ್ಷಗಳಿಂದ ನೌಕರರು, ಅಸಂಘಟಿತರು, ಪದವೀಧರ ನಿರುದ್ಯೋಗಿಗಳ ಪರ ಕೆಲಸ ಮಾಡಿಕೊಂಡು ಬಂದಿದ್ದೇನೆ. ನನ್ನ ಹೊರತಾಗಿ ಉಳಿದ ಮೂವರಿಗೆ ಅಂತಹ ಯಾವುದೇ ಹಿನ್ನೆಲೆ (ಬ್ಯಾಗ್ರೌಂಡ್‌) ಇಲ್ಲ. ಅವರೆಲ್ಲ ರಾಜಕೀಯ ಸ್ಥಾನಮಾನಕ್ಕಾಗಿ ಚುನಾವಣೆಗೆ ನಿಂತಿದ್ದಾರೆ. ದುಡಿದು ತಿನ್ನುವವರ ಪರ ಹೋರಾಡುವ ನಾನು ಮತದಾರರಿಗೆ ಉಳಿದವರಿಗಿಂತಲೂ ಮಾನಸಿಕವಾಗಿ ಹೆಚ್ಚು ಹತ್ತಿರವಾಗಿದ್ದೇನೆ. ಸರ್ಕಾರ ಯಾವುದೇ ಇರಲಿ. ಯಾರೇ ಮುಖ್ಯಮಂತ್ರಿ ಇರಲಿ. ನೌಕರರ ಪರವಾಗಿ ನಿಷ್ಠುರವಾಗಿ ಯಾವುದೇ ರಾಜಿ ಇಲ್ಲದೇ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಈ ಕಾರಣಕ್ಕೆ ನನಗೆ ಮತ ಹಾಕಬೇಕು.

*ಆಯನೂರು ಮಂಜುನಾಥ್ ಪಕ್ಷಾಂತರಿ. ಅವರಿಗೆ ಯಾವುದೇ ತಾತ್ವಿಕತೆ ಇಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದೆ ಎಂಬ ಕಾರಣಕ್ಕೆ ಆ ಪಕ್ಷ ಸೇರ್ಪಡೆಯಾಗಿದ್ದಾರೆ ಎಂದು ವಿರೋಧಿಗಳು ಆರೋಪಿಸುತ್ತಿದ್ದಾರೆ?

ನಾನು ಬಿಜೆಪಿ ಬಿಟ್ಟಾಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರಲಿಲ್ಲ. ಇವತ್ತು ಭ್ರಷ್ಟಾಚಾರ, ಸ್ವಜನಪಕ್ಷಪಾತ, ಸ್ವಾರ್ಥದ ಕಾರಣ ಯಾವ ಪಕ್ಷಕ್ಕೂ ತಾತ್ವಿಕ ನೆಲೆಗಟ್ಟು ಇಲ್ಲ. ಆದರೆ ನನ್ನ ವ್ಯಕ್ತಿಗತ ನೆಲೆಯ ತಾತ್ವಿಕತೆಯ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದೇನೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಇದ್ದಾಗ ಐಫೋನ್ ಕಂಪನಿಯವರ ಒತ್ತಡಕ್ಕೆ ಮಣಿದು ಕಾರ್ಮಿಕರ ಕೆಲಸದ ಸಮಯವನ್ನು 8 ರಿಂದ 12 ಗಂಟೆಗೆ ಹೆಚ್ಚಿಸಲಾಯಿತು. ಮನೆಯ ನಾಯಿ ಸತ್ತಾಗ ಕಣ್ಣೀರು ಹಾಕಿದ ಅಂದಿನ ಸಿಎಂ, ಹೋರಾಟನಿರತ ಅನುದಾನಿತ ಶಾಲಾ ಶಿಕ್ಷಕರು ಸಾವಿಗೀಡಾದಾಗ ಸ್ಪಂದಿಸಲಿಲ್ಲ. ಹಳೆಯ ಪಿಂಚಣಿ ವ್ಯವಸ್ಥೆ ಬಗ್ಗೆ ಸದನದಲ್ಲಿ ಮಾತಾಡಲು ಅವಕಾಶ ಕೊಡಲಿಲ್ಲ. ಕಾಂಗ್ರೆಸ್‌ನವರು ಅತಿಥಿ ಶಿಕ್ಷಕರ ಗೌರವಧನ ಹೆಚ್ಚಿಸಿದ್ದಾರೆ. ಕೆಲಸದ ಅವಧಿಯನ್ನು 8 ಗಂಟೆಗೆ ಇಳಿಸುವುದಾಗಿ, ಹಳೆಯ ಪಿಂಚಣಿ ವ್ಯವಸ್ಥೆ ಮರುಸ್ಥಾಪಿಸುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಬಿಜೆಪಿ ನೌಕರರ ವಿರೋಧಿ ಎಂಬ ತಾತ್ವಿಕತೆಯ ಕಾರಣಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿರುವೆ.

* ಈ ತಾತ್ವಿಕ ಸಂಘರ್ಷದ ಜಿಜ್ಞಾಸೆಯನ್ನು ಮತದಾರರಿಗೆ ತಲುಪಿಸಿದ್ದೀರಾ?

ಕಾರ್ಮಿಕ ವಿರೋಧಿ ಬಿಜೆಪಿ ಜೊತೆ ಹೇಗೆ ಇರಲಿ. ನಾಳೆ ನೌಕರರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದರೂ ನಾನು ಬಂಡಾಯ ಸಾರುತ್ತೇನೆ. ಹೀಗಾಗಿ ನನ್ನ ತಾತ್ವಿಕ ನೆಲೆಗಟ್ಟು ಸರಿಯಾಗಿದೆ ಎಂಬುದನ್ನು ಮತದಾರರಿಗೆ ಕರಪತ್ರ, ಸಾಮಾಜಿಕ ಜಾಲತಾಣದಲ್ಲಿ ಸಂದೇಶ, ಭಾಷಣದ ಮೂಲಕ ತಲುಪಿಸಿರುವೆ. 

* ಈ ಚುನಾವಣೆಯಲ್ಲಿ ನಿಮ್ಮ ನೇರ ಎದುರಾಳಿ ಯಾರು?

ನೇರ ಎದುರಾಳಿ ಬಿಜೆಪಿಯ ಅಭ್ಯರ್ಥಿ ಆಗಬೇಕಿತ್ತು. ಆದರೆ ಅಲ್ಲಿ ಪ್ರಭಾವಿ ಮಾಜಿ ಶಾಸಕ ಬಂಡಾಯವಾಗಿ ಸ್ಪರ್ಧೆಗೆ ಇಳಿದಿದ್ದಾರೆ. ಹೀಗಾಗಿ ಯಾರು ನನಗೆ ಎದುರಾಳಿ ಎಂಬ ಗೊಂದಲ ಉಂಟಾಗಿದೆ.

* ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಆಗಿ ಎಸ್.ಪಿ.ದಿನೇಶ್ ಅವರ ಸ್ಪರ್ಧೆ ನಿಮಗೆ ತೊಡಕಾಗುವುದಿಲ್ಲವೇ?

ಬಂಡಾಯ ಅಭ್ಯರ್ಥಿ ಸ್ಪರ್ಧೆಯಿಂದ ತಕ್ಕಮಟ್ಟಿಗೆ ತೊಡಕು ಆಗಬಹುದು. ಆದರೆ ದಿನೇಶ್ ಪಕ್ಷದ ಮತಕ್ಕಿಂತ ಅವರ ವ್ಯಕ್ತಿಗತ ಸ್ನೇಹದ ಮತಗಳನ್ನು ಪಡೆಯುತ್ತಾರೆ. ಹೀಗಾಗಿ ನನಗೆ ತೊಂದರೆ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT