ಸೋಮವಾರ, ಡಿಸೆಂಬರ್ 5, 2022
19 °C

ಕನಕ ನಗರ: ಮೂರು ದಿನಗಳ ಭಂಡಾರ ಜಾತ್ರೆಗೆ ವಿದ್ಯುಕ್ತ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕನಕ ಜಯಂತಿಯ ಸಂಭ್ರಮದ ನಡುವೆಯೇ ಇಲ್ಲಿನ ಕನಕ ನಗರದ ಬೀರಪ್ಪನ ಗುಡಿಯಲ್ಲಿ ನೂರಾರು ಮಹಿಳೆಯರು ಸಾಮೂಹಿಕವಾಗಿ ಅರಿಶಿನ ಬೀಸುವ ಮೂಲಕ ಮೂರು ದಿನಗಳ ಭಂಡಾರ ಜಾತ್ರೆಗೆ ವಿದ್ಯುಕ್ತ ಚಾಲನೆ ನೀಡಿದರು.

ಅರಿಶಿನದ ಜೊತೆಗೆ 108 ಗಿಡ ಮೂಲಿಕೆಗಳನ್ನು ಕುಟ್ಟಿ ಪುಡಿ ಮಾಡಿ ಗುಡಿಯೊಳಗೆ ರಾಶಿ ಮಾಡಲಾಯಿತು.

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಸಂಕಲ್ಪ ಮಾಡಿದ್ದ ಮಹಿಳೆಯರು ಹನಿ ನೀರೂ ಕುಡಿಯದೇ ಉಪವಾಸ ಇದ್ದು ಪಾಳಿಯಲ್ಲಿ ಕುಳಿತು ಅರಿಶಿನ ಕೊಂಬು ಕುಟ್ಟಿದರು.

ಶಾಸಕ ಕೆ.ಎಸ್.ಈಶ್ವರಪ್ಪ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಶ್ರೀಕಾಂತ್ ಬೀರಪ್ಪನ ಗುಡಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಕನಕದಾಸರ ಮೂರ್ತಿಗೆ ಹೂಮಾಲೆ ಅರ್ಪಿಸಿದರು.

ಪ್ರಸಾದದ ವ್ಯವಸ್ಥೆ: ಭಂಡಾರ ಜಾತ್ರೆಗೆ ಬರುವ ಎಲ್ಲರಿಗೂ ದೇವಸ್ಥಾನ ಸಮಿತಿಯವರು ಪ್ರಸಾದದ ವ್ಯವಸ್ಥೆ ಮಾಡಿದ್ದಾರೆ. ಮುಂಜಾನೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಎರಡು ಹೊತ್ತು ಊಟದ ವ್ಯವಸ್ಥೆ ಮಾಡಲಾಗಿದೆ.

ಜಾತ್ರೆಯ ವಾತಾವರಣ: ದೇವಸ್ಥಾನದ ಸುತ್ತಲೂ ಜಾತ್ರೆಯ ಸಂಭ್ರಮ ನೆಲೆಗೊಂಡಿದೆ. ಮಾರಾಟ ಮಳಿಗೆಗಳು, ಆಟಿಕೆ ಸಾಮಗ್ರಿಗಳು ತಲೆ ಎತ್ತಿವೆ.

ಕಲ್ಯಾಣಿ ಸ್ಪರ್ಶ ಇಂದು: ಭಂಡಾರ ಜಾತ್ರೆ ಹಿನ್ನೆಲೆಯಲ್ಲಿ ಶನಿವಾರ ದೇವರಿಗೆ ಕಲ್ಯಾಣಿ ಸ್ಪರ್ಶ ಕಾರ್ಯ ನಡೆಯಲಿದೆ. ದೇವರ ಮೂರ್ತಿಯನ್ನು ತಂದು ಕಲ್ಯಾಣಿಯಲ್ಲಿ ಪೂಜೆ ಮಾಡಿ ದೇವಸ್ಥಾನದ ಎದುರು ಪ್ರತಿಷ್ಠಾಪಿಸಲಾಗುತ್ತದೆ.

ಕಲ್ಯಾಣಿ ಪೂಜೆಯಲ್ಲಿ ಪಾಲ್ಗೊಳ್ಳಲು ಈಶ್ವರಾನಂದ ಪುರಿ ಸ್ವಾಮೀಜಿ ಬರಲಿದ್ದು, ಅವರನ್ನು ಶಿವಾಲಯದಿಂದ ಪೂರ್ಣಕುಂಭದ ನೇತೃತ್ವದಲ್ಲಿ ಸ್ವಾಗತಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ 300 ಜೋಗತಿಯರು ಪಾಲ್ಗೊಳ್ಳಲಿದ್ದಾರೆ. ಜೋಗತಿಯರಿಗೆ ಪಾದಪೂಜೆ ಹಾಗೂ ಮಡಿಲ ಅಕ್ಕಿ ಹಾಕುವ ಕಾರ್ಯ ಇದೇ ವೇಳೆ ನಡೆಯಲಿದೆ. ಎಲ್ಲರಿಗೂ ಉಡಿತುಂಬಲಾಗುತ್ತದೆ. ಸಂಜೆ ಚೌಡಿಕೆಯವರು ಬರಲಿದ್ದಾರೆ. ನಂತರ 400ಕ್ಕೂ ಹೆಚ್ಚು ಜನರಿಂದ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಮಾಜಿ ಉಪಮೇಯರ್ ಫಾಲಾಕ್ಷಿ ತಿಳಿಸಿದರು.

ಈಶ್ವರಾನಂದ ಪುರಿ ಶ್ರೀಗಳ ನೇತೃತ್ವದಲ್ಲಿ ಭಾನುವಾರ ಬುತ್ತಿ ಪೂಜೆ ನಡೆಯಲಿದೆ. ಭಕ್ತರು ಮನೆಯಿಂದ ರೊಟ್ಟಿ, ಪಲ್ಯ, ಬುತ್ತಿ ತರಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮೇಯರ್ ಶಿವಕುಮಾರ್, ಮಾಜಿ ಮೇಯರ್ ಎಸ್.ಕೆ.ಮರಿಯಪ್ಪ, ಮಾಜಿ ಶಾಸಕ ಆರ್.ಪ್ರಸನ್ನ ಕುಮಾರ್, ಜ್ಞಾನೇಶ್ವರ್, ಪ್ರಭು, ದೇವಸ್ಥಾನ ಸಮಿತಿಯ ಹೊನ್ನಪ್ಪ, ನವುಲೆ ಈಶ್ವರಪ್ಪ, ರಂಗನಾಥ್, ಮೋಹನ್, ಆನಂದ್, ವಿನಯ್, ಮಧುಸೂದನ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.