ಶಿವಮೊಗ್ಗ: ಮಧ್ಯ ಕರ್ನಾಟಕದ ಐದಾರು ಜಿಲ್ಲೆಗಳಲ್ಲಿ ಕುಡಿಯುವ ನೀರು ಹಾಗೂ ನೀರಾವರಿಗೆ ಆಸರೆಯಾಗಿರುವ ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ಎಡದಂಡೆ ಕಾಲುವೆಗೆ ನೀರು ಸೋರಿಕೆಯ ದುರಸ್ತಿ ಕಾರ್ಯ 3 ತಿಂಗಳ ಹಿಂದೆ ಟೆಂಡರ್ ಹಂತದಲ್ಲಿಯೇ ಸ್ಥಗಿತಗೊಂಡಿದೆ. ಇದರಿಂದ ನಿತ್ಯ 180 ಕ್ಯುಸೆಕ್‌ನಷ್ಟು ನೀರು ಜಲಾಶಯದಿಂದ ಕಾಲುವೆಗೆ ಸೋರಿಕೆಯಾಗುತ್ತಿದೆ. ಇದು ಭದ್ರಾ ಜಲಾಶಯದ ಸುರಕ್ಷತೆಗೂ ಸವಾಲಾಗಿ ಪರಿಣಮಿಸಿದೆ ಎಂದು ಹೇಳಲಾಗಿದೆ.
ಭದ್ರಾ ಎಡದಂಡೆ ಕಾಲುವೆಯ ವಿಸ್ತಾರ ಶಿವಮೊಗ್ಗ ಹಾಗೂ ಭದ್ರಾವತಿ ತಾಲ್ಲೂಕುಗಳಲ್ಲಿ 77 ಕಿ.ಮೀ ದೂರ ಹಾದು ಹೋಗಿದೆ. ಕಾಲುವೆಯಲ್ಲಿ ಸಾಮಾನ್ಯವಾಗಿ ಪ್ರತಿ ದಿನ 360 ಕ್ಯುಸೆಕ್ ನೀರು ಹರಿಯುತ್ತದೆ. ಸೋರಿಕೆ ಪ್ರಮಾಣ ಅದರ ಅರ್ಧದಷ್ಟು ಇದೆ.
ಎಡದಂಡೆ ಕಾಲುವೆಗೆ ನೀರು ಸೋರಿಕೆ ಆಗುತ್ತಿರುವುದು ಕಂಡು ಬರುತ್ತಿದ್ದಂತೆಯೇ ದುರಸ್ತಿ ಕಾರ್ಯಕ್ಕೆ ₹ 6.37 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿದ್ದ ಕರ್ನಾಟಕ ನೀರಾವರಿ ನಿಗಮ (ಕೆಎನ್‌ಎನ್) 2024ರ ಏಪ್ರಿಲ್ 25ರಂದು ಟೆಂಡರ್ ಕರೆದಿತ್ತು. ಆಗ ನೀತಿ ಸಂಹಿತೆ ಜಾರಿಯಲ್ಲಿದ್ದರಿಂದ ಚುನಾವಣಾ ಆಯೋಗದಿಂದ ಅನುಮತಿ ಪಡೆದು ಮೇ 1ರಂದು ಟೆಂಡರ್‌ನ ಪತ್ರಿಕಾ ಪ್ರಕಟಣೆ ಕೂಡ ನೀಡಲಾಗಿತ್ತು.
ಹೇಮಾವತಿ ನಾಲೆಯ ಸೋರಿಕೆ ತಡೆಗೆ ರೂಪಿಸಿದ್ಧ ಯೋಜನಾ ವೆಚ್ಚಕ್ಕಿಂತ ಭದ್ರಾ ಎಡದಂಡೆ ಕಾಲುವೆಯ ದುರಸ್ತಿ ಕಾರ್ಯದ ಟೆಂಡರ್ ಮೊತ್ತ ಹೆಚ್ಚಾಗಿದೆ ಎಂದು ಆರೋಪಿಸಿ, ಶಿವಮೊಗ್ಗ, ಭದ್ರಾವತಿ ತಾಲ್ಲೂಕಿನ ಬಾರಂದೂರು ಹಾಗೂ ಶಂಕರಘಟ್ಟದ ಮೂವರು ಮಾಹಿತಿ ಹಕ್ಕು ಕಾರ್ಯಕರ್ತರು ಜಲಸಂಪನ್ಮೂಲ ಇಲಾಖೆಗೆ ದೂರು ಸಲ್ಲಿಸಿದ್ದರು. ಹೀಗಾಗಿ ದುರಸ್ತಿ ಕಾರ್ಯ ತಡೆ ಹಿಡಿದ ಸರ್ಕಾರ, ಯೋಜನಾ ವೆಚ್ಚದ ಪರಿಶೀಲನೆಗೆ ತಜ್ಞರ ನೇತೃತ್ವದ ತಾಂತ್ರಿಕ ಸಮಿತಿ ರಚಿಸಿತ್ತು.
ಪರಿಶೀಲನೆ ನಡೆಸಿದ ತಾಂತ್ರಿಕ ಸಮಿತಿ, ಹೇಮಾವತಿ ನಾಲೆ ಸೋರಿಕೆಯ ದುರಸ್ತಿಗೂ ಇಲ್ಲಿನ ಕಾಮಗಾರಿಗೂ ತಾಂತ್ರಿಕತೆಯಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಯೋಜನಾ ವೆಚ್ಚದಲ್ಲಿ ಅನಗತ್ಯ ಹೆಚ್ಚಳ ಆಗಿಲ್ಲ ಎಂದು ಕಳೆದ ಜೂನ್‌ನಲ್ಲಿ ವರದಿ ನೀಡಿದೆ. ಆ ವೇಳೆಗೆ ಮಳೆ ಆರಂಭವಾಗಿದ್ದರಿಂದ ಟೆಂಡರ್‌ಗೆ ಒಪ್ಪಿಗೆ ಕೊಡುವ ವಿಚಾರದಲ್ಲಿ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.
1962ರಲ್ಲಿ ಗಾರೆ, ಸುಣ್ಣ ಹಾಗೂ ಕಲ್ಲು ಬಳಸಿ ಭದ್ರಾ ಜಲಾಶಯ ಕಟ್ಟಲಾಗಿದೆ. ಅದರ ನೆಲಮಟ್ಟದಿಂದ 35 ಅಡಿ ಎತ್ತರದಲ್ಲಿ ಕಲ್ಲು ಕಿತ್ತು ಹೋಗಿವೆ. ಅಲ್ಲಿಂದಲೇ ಕಾಲುವೆಗೆ ನೀರು ಸೋರಿಕೆ ಆಗುತ್ತಿದೆ. ಟೆಂಡರ್ ಕರೆದಾಗ ಜಲಾಶಯದಲ್ಲಿ ನೀರಿನ ಒತ್ತಡವೂ ಕಡಿಮೆ ಇತ್ತು. ಈಗ ಜಲಾಶಯದಲ್ಲಿ 150 ಅಡಿ ಆಳದಲ್ಲಿ ನೀರಿನಲ್ಲಿ ಮುಳುಗಿ ಕೆಲಸ ಮಾಡಬೇಕಿದೆ. ಸದ್ಯ ಕಾಲುವೆಗಳಿಗೆ ನೀರು ಹರಿಸುವ ಗೇಟ್‌ಗಳಿಗೆ ಇನ್ನೂ ತೊಂದರೆ ಆಗಿಲ್ಲ ಎಂದು ಮೂಲಗಳು ಹೇಳುತ್ತವೆ.
‘ಭದ್ರಾ ಜಲಾಶಯದಿಂದ ಎಡದಂಡೆ ಕಾಲುವೆಗೆ ನೀರಿನ ಸೋರಿಕೆ ಗಮನಕ್ಕೆ ಬಂದಿಲ್ಲ. ಸದ್ಯ ಕಾಲುವೆಗೆ ನೀರು ಹರಿಸಿದ್ದೇವೆ. ಅದು ಹೋಗುತ್ತಿದೆ. ಸೋರಿಕೆ ಆಗುತ್ತಿರುವ ಬಗ್ಗೆ ನಿಮ್ಮ ಬಳಿ ಬಳಿ (ಪ್ರಜಾವಾಣಿ) ದಾಖಲೆ ಇದ್ದರೆ ಕೊಡಿ’ ಎಂದು ಕೆಎನ್‌ಎನ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಅಮ್ಮಿನಭಾವಿ ಕೇಳಿದರು. ದುರಸ್ತಿಗೆ ಟೆಂಡರ್ ಕರೆಯಲಾಗಿತ್ತಲ್ಲ? ಎಂಬ ಪ್ರಶ್ನೆಗೆ, ‘ಅದು ನನಗೆ ಗೊತ್ತಿಲ್ಲ’ ಎಂದು ಹೇಳಿ ಕರೆ ಕಡಿತಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.