ಗುರುವಾರ , ಡಿಸೆಂಬರ್ 1, 2022
20 °C
ಅಭಿನಂದನಾ ಸಮಾರಂಭದಲ್ಲಿ ಬಿ.ಎಸ್.ಯಡಿಯೂರಪ್ಪ ಭರವಸೆ

ಬಗರ್‌ಹುಕುಂ ಸಾಗುವಳಿದಾರರ ಒಕ್ಕಲೆಬ್ಬಿಸಲು ಬಿಡೆವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಕಾರಿಪುರ: ‘ನಾನು ಬದುಕಿರುವವರೆಗೂ ಬಗರ್‌ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ’ ಎಂದು ಶಾಸಕ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

ಕೇಂದ್ರ ಬಿಜೆಪಿ ಮಂಡಳಿ ಸದಸ್ಯರಾಗಿ ಆಯ್ಕೆಯಾದ ಕಾರಣ ಪಟ್ಟಣದಲ್ಲಿ ತಾಲ್ಲೂಕು ಬಿಜೆಪಿಯಿಂದ ಮಂಗಳವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಭೂಮಿ ಸಾಗುವಳಿಗಾಗಿ ಹೊಸದಾಗಿ ಕಾಡು ಕಡಿಯಬೇಡಿ. ಪ್ರಸ್ತುತ ಸಾಗುವಳಿ ಮಾಡುತ್ತಿರುವ ಭೂಮಿಯಿಂದ ನಿಮ್ಮನ್ನು ಒಕ್ಕಲೆಬ್ಬಿಸುವ ಕಾನೂನಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಜತೆ ಮಾತನಾಡಿದ್ದೇನೆ’ ಎಂದರು. 

‘ಪ್ರಧಾನಿ ನರೇಂದ್ರ ಮೋದಿ ದೊಡ್ಡ ಜವಾಬ್ದಾರಿಯನ್ನು ನನಗೆ ನೀಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಪ್ರವಾಸ ಮಾಡಿ ರಾಜ್ಯದಲ್ಲಿ 150 ಸ್ಥಾನದಲ್ಲಿ ಬಿಜೆಪಿ ಗೆಲ್ಲಿಸಲು ಶ್ರಮ ಹಾಕುತ್ತೇನೆ’ ಎಂದು ಹೇಳಿದರು.

‘ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಸಂಘಟನೆ ಮಾಡಬೇಕು. ಶೇ 80ರಷ್ಟು ಬಿಜೆಪಿಗೆ ಮತ ದೊರೆಯುವಂತೆ ಶ್ರಮ ಹಾಕಿದಾಗ ಮಾತ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಅವರನ್ನು ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಲು ಸಾಧ್ಯವಾಗುತ್ತದೆ’ ಎಂದರು.

‘ಶಿಕಾರಿಪುರ ತಾಲ್ಲೂಕಿನ ಜನತೆ ಯಡಿಯೂರಪ್ಪ ಅವರಂತಹ ನಾಯಕನನ್ನು ರಾಷ್ಟ್ರಕ್ಕೆ ನೀಡಿದ್ದಾರೆ. ನನ್ನನ್ನು ಸಂಸದ ಮಾಡಲು ಹಾಗೂ ವಿಜಯೇಂದ್ರನನ್ನು ಶಾಸಕ ಮಾಡಲು ಯಡಿಯೂರಪ್ಪ ಪಕ್ಷ ಸಂಘಟನೆ ಮಾಡುತ್ತಿಲ್ಲ. ಪಕ್ಷವನ್ನು ಇನ್ನಷ್ಟು ಎತ್ತರ ಮಟ್ಟಕ್ಕೆ ಕೊಂಡೊಯ್ಯಲು ಸಂಘಟನೆಗೆ ಮುಂದಾಗಿದ್ದಾರೆ. ಸಂಸದನಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸೇತುವೆಯಾಗಿ ಜಿಲ್ಲೆಗೆ ಅಗತ್ಯವಾದ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇನೆ’ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಬಿಜೆಪಿಯಲ್ಲಿ ದೊಡ್ಡ ಸ್ಥಾನವನ್ನು ಯಡಿಯೂರಪ್ಪ ಅವರಿಗೆ ನೀಡಿದ್ದಾರೆ. ರಾಜಕೀಯದಲ್ಲಿ ಯಡಿಯೂರಪ್ಪ ಭೀಷ್ಮ ಇದ್ದಂತೆ’ ಎಂದು ಬಣ್ಣಿಸಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ‘ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಸರ್ವರಿಗೂ ಸಮಬಾಳು ಸಮಪಾಲು ತತ್ವದ ಅಡಿ ಆಡಳಿತ ನಡೆಸಿದ್ದಾರೆ’ ಎಂದು ಶ್ಲಾಘಿಸಿದರು.

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಡಿ.ಟಿ.ಮೇಘರಾಜ್, ಸೊರಬ ಮುಖಂಡ ತಲ್ಲೂರು ರಾಜು, ಮುಖಂಡರಾದ ಭದ್ರಾಪುರ ಹಾಲಪ್ಪ, ಎಂ.ಬಿ.ಚನ್ನವೀರಪ್ಪ, ಗಾಯತ್ರಿದೇವಿ, ಕಬಾಡಿ ರಾಜಪ್ಪ, ತೊಗರ್ಸಿ ಸಣ್ಣ ಹನುಮಂತಪ್ಪ, ಶ್ರೀಪಾದ್ ಭಟ್, ನಿವೇದಿತಾ, ವಿಜಯಭಾಸ್ಕರ್, ವೀರೇಂದ್ರ ಪಾಟೀಲ್, ಆನವಟ್ಟಿ ಅರವಿಂದ್, ಬಿ.ಡಿ. ಭೂಕಾಂತ್, ರೇಖಾಬಾಯಿ ಮಂಜುನಾಥ್ ಸಿಂಗ್ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು