ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಮನೆಯಂಗಳದ ತುಳಸಿ, ಹೂವಿಗೂ ನಗರ ಪಾಲಿಕೆ ತೆರಿಗೆ!

ಪಾಲಿಕೆ ವಿಶೇಷ ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರ ಆರೋಪ
Last Updated 22 ಮಾರ್ಚ್ 2021, 14:44 IST
ಅಕ್ಷರ ಗಾತ್ರ

ಶಿವಮೊಗ್ಗ: ಮನೆಯ ಸುತ್ತಮುತ್ತ ಬಿಟ್ಟ ಖಾಲಿ ನಿವೇಶನಗಳಿಗೂ ಕರ ವಿಧಿಸಲಾಗುತ್ತಿದೆ. ಮನೆಯ ಅಂಗಳದ ತುಳಸಿ, ದೇವರ ಪೂಜೆಗೆ ಬೆಳೆಸುವ ಹೂಗಳಿಗೂ ತೆರಿಗೆ ಕಟ್ಟುವ ಕಾಲ ಬಂದಿದೆ ಎಂದು ನಗರ ಪಾಲಿಕೆ ವಿರೋಧ ಪಕ್ಷದ ಸದಸ್ಯರಾದ ಬಿ.ಎ.ರಮೇಶ್ ಹೆಗ್ಡೆ, ಎಚ್‌.ಸಿ.ಯೋಗೀಶ್ ದೂರಿದರು.

ನಗರ ಪಾಲಿಕೆ ಸಭಾಂಗಣದಲ್ಲಿ ಸೋಮವಾರ ನಡೆದ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.

ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡಲಾಗಿದೆ. ಖಾಲಿ ನಿವೇಶನ, ಕಟ್ಟಡ, ಮನೆಯ ಸುತ್ತ ಇರುವ ಖಾಲಿ ಜಾಗಕ್ಕೂ ತೆರಿಗೆ ಹೆಚ್ಚಳ ಮಾಡಲಾಗಿದೆ. ಬಡವರು ತೆರಿಗೆ ಕಟ್ಟುವುದು ಹೇಗೆ ಎಂದು ಸದಸ್ಯರಾದ ವಿಶ್ವನಾಥ್, ಯಮುನಾ ರಂಗೇಗೌಡ, ರೇಖಾ ರಂಗನಾಥ್‌ ಧ್ವನಿಗೂಡಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ವಾಸದ ಕಟ್ಟಡಗಳು, ವ್ಯವಹಾರದ ಕಟ್ಟಡಗಳು, ಖಾತೆಯಾಗದ ನಿವೇಶನಗಳು, ಮನೆಗಳು, ಘೋಷಿತ ಕೊಳಚೆ ಪ್ರದೇಶಗಳ ಸ್ಪಷ್ಟ ಮಾಹಿತಿ ಇಲ್ಲ. ದಾಖಲೆಗಳ ನಿರ್ವಹಣೆ ಸರಿಇಲ್ಲ. ಹೊಸ ಬಡಾವಣೆಗಳ ಮನೆಗಳಿಗೆ ತೆರಿಗೆ ವಿಧಿಸಿಲ್ಲ. ಎಲ್ಲವನ್ನೂ ತೆರಿಗೆ ವ್ಯಾಪ್ತಿಗೆ ತರಬೇಕು. ತೆರಿಗೆಯ ಹೊರೆಯಿಂದ ಬಡವರಿಗೆ ರಕ್ಷಣೆ ನೀಡಬೇಕು. ದ್ವಿಗುಣಗೊಂಡ ತೆರಿಗೆ ಭಾರ ಕಡಿಮೆ ಮಾಡಬೇಕು. ಒಂದು ವರ್ಷ ತೆರಿಗೆ ಹೆಚ್ಚಳ ಪ್ರಸ್ತಾಪ ಮುಂದೂಡಬೇಕು ಎಂದು ಆಗ್ರಹಿಸಿದರು.

ಜೆಡಿಎಸ್‌ ಸದಸ್ಯ ನಾಗರಾಜ್ ಕಂಕಾರಿ ಮಾತನಾಡಿ, ತೆರಿಗೆ ಹೆಚ್ಚಳ ಬೇಡ. ಎಲ್ಲಾ ವಾರ್ಡಿನ ಸದಸ್ಯರೂ ತೆರಿಗೆ ಹೆಚ್ಚಳ ವಿರೋಧಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸೋಣ ಎಂದು ಸಲಹೆ ನೀಡಿದರು. ಕಾಂಗ್ರೆಸ್‌ ಸದಸ್ಯರು ಸಹಮತ ವ್ಯಕ್ತಪಡಿಸಿದರು.

ಕಂದಾಯ ನಿರ್ಧಾರದ ಕೋರಿ ಸಾವಿರಾರು ಅರ್ಜಿಗಳು ಪಾಲಿಕೆಗೆ ಬಂದಿವೆ. ಅಂತಹ ಅರ್ಜಿಗಳನ್ನು ವಿಲೇವಾರಿ ಮಾಡುತ್ತಿಲ್ಲ. ಭೂ ಪರಿವರ್ತನೆ ಆಗದೆ ಇರುವವರು, ಈಗಾಗಲೇ ಮನೆಕಟ್ಟಿಕೊಂಡವರು ಇದ್ದಾರೆ. ಅವರನ್ನೂ ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕು. ಬೊಮ್ಮನಕಟ್ಟೆಯಂತಹ ಬಡವರು ವಾಸಿಸುವ ಪ್ರದೇಶಗಳ ಮನೆಗಳಿಗೆ ತೆರಿಗೆ ಕಡಿತ ಮಾಡಬೇಕು ಎಂದು ಒತ್ತಾಯಿಸಿದರು.

ಒಂದು ವರ್ಷದವರೆಗೆ ತೆರಿಗೆ ಹೆಚ್ಚಳ ತಡೆಯಬೇಕು. ಮನೆಯ ಮುಂದಿನ ಖಾಲಿ ಜಾಗಗಳಿಗೆ ತೆರಿಗೆ ರದ್ದು ಮಾಡಬೇಕು ಎಂದು ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಸಭೆ ನಿರ್ಧರಿಸಿತು.

ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್‌ ಗನ್ನಿ, ಆಯುಕ್ತ ಚಿದಾನಂದ ವಟಾರೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT