ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ತವ್ಯ ಲೋಪ ಎಸಗುವವರ ವಿರುದ್ಧ ಕ್ರಮ, ಮೆಗ್ಗಾನ್ ವೈದ್ಯಕೀಯ ಸೇವೆಗೆ ಚುರುಕು

ಪ್ರತಿ ವಾರ್ಡ್ ಮುಂದೆ ಕರ್ತವ್ಯನಿರತ ವೈದ್ಯರ ಹೆಸರು
Last Updated 30 ಏಪ್ರಿಲ್ 2021, 10:41 IST
ಅಕ್ಷರ ಗಾತ್ರ

ಶಿವಮೊಗ್ಗ: ಮೆಗ್ಗಾನ್‌ ಆಸ್ಪತ್ರೆಯ ಪ್ರತಿ ವಾರ್ಡ್‌ಗಳ ಮುಂದೆ ಆಯಾ ದಿನ ಕೆಲಸ ನಿರ್ವಹಿಸುವ ವೈದ್ಯರ ಹೆಸರು ಪ್ರಕಟಿಸಬೇಕು. ಕರ್ತವ್ಯ ಲೋಪ ಎಸಗುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸೂಚಿಸಿದರು.

ಶಿವಮೊಗ್ಗ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ನಡೆದ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಆಸ್ಪತ್ರೆಯಲ್ಲಿ ಕೋವಿಡ್ ಹಾಗೂ ಕೋವಿಡೇತರ ರೋಗಿಗಳ ಚಿಕಿತ್ಸೆಗೆ ವೈದ್ಯರು, ಶುಶ್ರೂಷಕರ ಕೊರತೆ ಇಲ್ಲ. ವೈದ್ಯಕೀಯ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು ಕಡ್ಡಾಯವಾಗಿ ಪ್ರತಿದಿನ ಕರ್ತವ್ಯಕ್ಕೆ ಹಾಜರಾಗಬೇಕು. ಮೆಗ್ಗಾನ್‌ ಆಸ್ಪತ್ರೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲ ಮೂಲಸೌಲಭ್ಯಗಳೂ ಇವೆ. ವೈದ್ಯಕೀಯ ಸೇವೆ ಇನ್ನಷ್ಟು ಉತ್ತಮ ಪಡಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮಾತನಾಡಿ, ಶುಶ್ರೂಷಕಿಯರ ಸಮರ್ಪಕ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿ, ವರದಿ ಸಲ್ಲಿಸಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸಲಾಗಿದೆ. ಇದೇ ರೀತಿ ಕರ್ತವ್ಯಕ್ಕೆ ನಿಯೋಜಿಸಲಾಗುವ ವಿವಿಧ ವಿಭಾಗಗಳ ಮುಖ್ಯಸ್ಥರು ಪ್ರತಿ ದಿನವೂ ವರದಿ ಸಲ್ಲಿಸಬೇಕು. ಈ ಆದೇಶ ಉಲ್ಲಂಘಿಸುವುದು ಕ್ರಿಮಿನಲ್ ಅಪರಾಧ. ಅಂತಹವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್‌, ಕೋವಿಡ್ ಪರೀಕ್ಷಾ ಫಲಿತಾಂಶ ವಿಳಂಬವಾಗುತ್ತಿರುವ ಕಾರಣ ಸಕಾಲದಲ್ಲಿ ಚಿಕಿತ್ಸೆ ಆರಂಭಿಸಲು ತೊಡಕಾಗುತ್ತಿದೆ. ಕೋವಿಡ್ ರೋಗಿಗಳ ವಾರ್ಡ್‍ಗೆ ಅವರ ಸಂಬಂಧಿಕರು ಯಾವುದೇ ಸುರಕ್ಷತಾ ಕಿಟ್ ಧರಿಸದೆ ನೇರವಾಗಿ ತೆರಳಲು ಅವಕಾಶ ನೀಡಬಾರದು. ಪಾಸಿಟಿವ್ ಬಂದ ವ್ಯಕ್ತಿಗಳ ಹೋಂ ಐಸೋಲೇಷನ್ ಕಟ್ಟುನಿಟ್ಟಿನಿಂದ ಜಾರಿಗೊಳಿಸಬೇಕು. ಮನೆಯಿಂದ ಹೊರಗೆ ಬರಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

ವಿಧಾನ ಪರಿಷತ್ ಸದಸ್ಯ ಆರ್‌.ಪ್ರಸನ್ನ ಕುಮಾರ್, ಲಸಿಕೆ ನೀಡುವ ವ್ಯವಸ್ಥೆ ಸರಿಪಡಿಸಬೇಕು. ಲಸಿಕಾ ಕೇಂದ್ರಗಳ ಮುಂದೆ ಈಗಾಗಲೇ ಜನರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ತಕ್ಷಣ ಸರಿಪಡಿಸಬೇಕು ಎಂದು ತಾಕೀತು ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್, ವೈದ್ಯಕೀಯ ಕಾಲೇಜು ನಿರ್ದೇಶಕ ಡಾ.ಸಿದ್ದಪ್ಪ, ಮೇಯರ್ ಸುನಿತಾ ಅಣ್ಣಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT