ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೌರ್ಜನ್ಯ ಪ್ರಕರಣಗಳ ಶೀಘ್ರ ವಿಲೇವಾರಿ ಮಾಡಿ

ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸಭೆ: ಅಧಿಕಾರಿಗಳಿಗೆ ಸೂಚನೆ
Last Updated 23 ಜೂನ್ 2022, 4:05 IST
ಅಕ್ಷರ ಗಾತ್ರ

ಶಿವಮೊಗ್ಗ: ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಸಮುದಾಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ದೌರ್ಜನ್ಯ ಪ್ರತಿಬಂಧ ಕಾಯ್ದೆಯಡಿ ದಾಖಲಾದ ಪ್ರಕರಣಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಪರಿಶೀಲಿಸಿ ಪರಿಹಾರ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಬುಡಕಟ್ಟುಗಳ ಜಾಗೃತಿ ಮತ್ತು ಉಸ್ತುವಾರಿ (ದೌರ್ಜನ್ಯ ಪ್ರತಿಬಂಧ) ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಹಳ್ಳಿಗಳಲ್ಲಿನ ಸಮಸ್ಯೆಗಳ ಪಟ್ಟಿ ಮಾಡಿ ನೀಡಿ, ದಿನಾಂಕ ನಿಗದಿಪಡಿಸಿ ಅರ್ಧ ದಿನ ಬಂದು ಸಮಸ್ಯೆಗಳನ್ನು ಪರಿಹರಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

‘ಪ್ರತಿ ತಿಂಗಳು ಮರಳು ಬಳಕೆ ಮಾಡಿದ ಇಲಾಖೆಗಳಿಂದ ವರದಿ ಪಡೆದು ನೀಡಬೇಕು ಹಾಗೂ ಸಿ.ಸಿ. ಟಿ.ವಿ ಫೂಟೆಜ್ ನೀಡಬೇಕು. ಒಂದು ವೇಳೆ ನೀಡದಿದ್ದರೆ ನೋಟಿಸ್ ನೀಡಲಾಗುವುದು’ ಎಂದು ಭೂವಿಜ್ಞಾನ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಕಟ್ಟಡ ಕಾರ್ಮಿಕರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಭೋವಿ ಜನಾಂಗದವರಿಗೆ ಕಾರ್ಮಿಕ ಕಾರ್ಡ್ ಹಾಗೂ ಇತರೆ ಸೌಲಭ್ಯಗಳು ಕಾರ್ಮಿಕ ಇಲಾಖೆಯಿಂದ ಸಿಗುತ್ತಿಲ್ಲ. ಸಂತೇಕಡೂರು, ಸೋಗಾನೆ, ಮತ್ತೂರು ಪ್ರದೇಶದಲ್ಲಿ ಪ್ರಭಾವಿ ವ್ಯಕ್ತಿಗಳು ಸರ್ಕಾರಿ ಭೂಮಿ ಖರೀದಿಸಿ,
ಮಾರಾಟ ಮಾಡುವ ಮಾಫಿಯಾ ಹೆಚ್ಚುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಜಿಲ್ಲಾಧಿಕಾರಿ ತಾಕೀತು ಮಾಡಿದರು.

‘ಶಿವಮೊಗ್ಗ ಸುತ್ತಮುತ್ತ ಇರುವ ಉದಾಹರಣೆಗೆ ಹಸೂಡಿಯಂತಹ ಗ್ರಾಮಗಳು ನಗರಕ್ಕೆ ಹತ್ತಿರವಿದ್ದರೂ ಜನರು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಸ್‍ಸ್ಸಿ, ಎಸ್‍ಟಿ, ತಮಿಳಿಗರು ಇತರೆ ಹಿಂದುಳಿದ ಜನಾಂಗದವರಿದ್ದು ನಿರ್ಗತಿಕರಾಗಿದ್ದಾರೆ ಎಂದು ಸಮಿತಿ ಸದಸ್ಯ ಜಗದೀಶ್ ತಿಳಿಸಿದರು.

ಸಮಿತಿ ಸದಸ್ಯ ನಾಗರಾಜ, ‘ವಿದ್ಯಾನಗರದ ಸರ್ಕಾರಿ ಶಾಲೆಗೆ ಸೇರಿದ ಜಾಗವನ್ನು ಪ್ರಭಾವಿ ವ್ಯಕ್ತಿ ಕಬಳಿಸುವ ಯತ್ನ ಮಾಡುತ್ತಿದ್ದು, ಎಸ್‍ಡಿಎಂಸಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪಾಲಿಕೆ ಆಯುಕ್ತರು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದು, ಅವರ ಹೆಸರಿನಲ್ಲಿರುವ ಖಾತೆಯನ್ನು ರದ್ದುಪಡಿಸಿ ಶಾಲೆಗೆ ನ್ಯಾಯ ಒದಗಿಸಬೇಕು. ಹಾರನಹಳ್ಳಿ ಹಾಗೂ ಇತರೆಡೆ ಪರವಾನಗಿ ಇಲ್ಲದೇ
ಬಾರ್ ಮತ್ತು ವೈನ್ ಶಾಪ್‍ಗಳನ್ನು ಪ್ರಭಾವಿ ವ್ಯಕ್ತಿಗಳು ನಡೆಸುತ್ತಿದ್ದಾರೆ’ ಎಂದು ಜಿಲ್ಲಾಧಿಕಾರಿಯ ಗಮನ ಸೆಳೆದರು.

ಸಮಿತಿ ಸದಸ್ಯ ರಾಜಕುಮಾರ್, ‘ಪೊಲೀಸ್ ಕ್ವಾಟ್ರಸ್ ಹಿಂಭಾಗ ಶೋಷಿತ ಸಮುದಾಯದ ಅಭಿವೃದ್ಧಿಗಾಗಿ ಮೀಸಲಾಗಿದ್ದ ಜಾಗವನ್ನು ನೀಡಬೇಕು. ರಾಮಿನಕೊಪ್ಪದಲ್ಲಿ ಬಡವರಿಂದ ಮೇಲ್ವರ್ಗದವರಿಗೆ ಭೂಮಿಯನ್ನು ಬಿಡಿಸಿಕೊಡಲಾಗುತ್ತಿದ್ದು, ಈ ಬಗ್ಗೆ ಕ್ರಮ ವಹಿಸಬೇಕು. ವಿದ್ಯಾನಗರದ ದಲಿತ ಹುಡುಗನ ಮೇಲಿನ ದೌರ್ಜನ್ಯ ಪ್ರಕರಣ ದಾಖಲಾಗಿ ಒಂದು ವರ್ಷ ಕಳೆದರೂ ಪರಿಹಾರ ದೊರೆತಿಲ್ಲ. ಸೊರಬ ತಾಲ್ಲೂಕಿನ ಚೌಟಿ ಗ್ರಾಮದಲ್ಲಿ ₹1 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣವಾಗಿದ್ದು, ಹಾಳಾಗಿದೆ. ಈ ಬಗ್ಗೆ ವಿಚಾರಣೆ ನಡೆಸಬೇಕು’ ಎಂದು ಮನವಿ ಮಾಡಿದರು.

ಸಮಿತಿ ಸದಸ್ಯ ಬಸವರಾಜ ಹಸ್ವಿ, ‘ಸೊರಬ ತಾಲ್ಲೂಕಿನ ಗ್ರಾಮವೊಂದರಲ್ಲೇ 16 ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಕೂಡಲೇ ಕ್ರಮ ವಹಿಸಬೇಕು. ಇನ್ನೊಂದು ಗ್ರಾಮದಲ್ಲಿ ಭೂ ಮಾಲಿಕನಿಂದ ಗೇಣಿದಾರನನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಬಿ.ಎಂ, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ, ಸಾಗರ ಉಪವಿಭಾಗದ ತಹಶೀಲ್ದಾರ್ ನಾಗರಾಜ್, ಶಿವಮೊಗ್ಗ ತಹಶೀಲ್ದಾರ್ ಡಾ.ನಾಗರಾಜ್ ಹಾಜರಿದ್ದರು.

***

2022ನೇ ಸಾಲಿನಲ್ಲಿ ದೌರ್ಜನ್ಯ ಪ್ರತಿಬಂಧ ಕಾಯ್ದೆಯಡಿ ಒಟ್ಟು 41 ಪ್ರಕರಣ ದಾಖಲಾಗಿದ್ದು, 27 ಪ್ರಕರಣಗಳಿಗೆ ಪರಿಹಾರ ಮಂಜೂರು ಮಾಡಲಾಗಿದೆ. 6 ಪ್ರಕರಣ ಬಾಕಿ ಇದ್ದು, ಸುಳ್ಳು ಜಾತಿಯವು 8 ಪ್ರಕರಣಗಳಾಗಿವೆ. ಒಟ್ಟು ₹ 82 ಲಕ್ಷ ಪರಿಹಾರ ನೀಡಲಾಗಿದೆ.

ನಾಗರಾಜ್, ಉಪನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT