ಮಂಗಳವಾರ, ಜನವರಿ 18, 2022
24 °C
ತಾ.ಪಂ ಕೆಡಿಪಿ ಸಭೆಯಲ್ಲಿ ಅರಣ್ಯಾಧಿಕಾರಿಗಳ ಅಶಿಸ್ತು

ಅಧಿಕಾರಿಗಳಿಂದ ನಾಡಗೀತೆಗೆ ಅಗೌರವ: ಶಾಸಕ ಗರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸನಗರ: ‘ನಾಡಗೀತೆ ಹಾಡುತ್ತಿರುವಾಗ ಸಮವಸ್ತ್ರದ ಟೋಪಿ ಧರಿಸದೆ ನಿಂತಿದ್ದೀರಲ್ಲ. ನೀವೇನು ಅಧಿಕಾರಿಗಳೋ.. ನಾಡಗೀತೆಗೆ ಗೌರವ ನೀಡದ ನೀವು ದೇಶಕ್ಕೇನು ಗೌರವ ನೀಡುತ್ತೀರಾ.. ನಾಚೀಕೆ ಅಗೋಲ್ವ ನಿಮಗೆ.. ಕ್ಯಾಪ್ ಹಾಕದೆ ಬಂದು ಇಲ್ಲಿ ಷೋ ಕೊಡೋಕೆ ಬಂದಿದ್ದೀರ’ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಮೊದಲಿಗೆ ನಾಡಗೀತೆ ಹಾಡುತ್ತಿರುವಾಗ ಸಮವಸ್ತ್ರ ಧರಿಸಿದ ಅರಣ್ಯ ಅಧಿಕಾರಿಗಳು ಟೋಪಿ ಧರಿಸದೆ ಹಾಗೇ ನಿಂತಿರುವುದನ್ನು ಗಮನಿಸಿದ ಶಾಸಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ನಿಮ್ಮ ಬಳಿ ಸಮವಸ್ತ್ರದ ಕ್ಯಾಪ್ ಇರುವುದು ಏಕೆ? ಹಾಗೆಯೇ ನಿಂತಿದ್ದೀರಲ್ಲ.. ಹೇಗೆ ಕೆಲಸ ಮಾಡುತ್ತೀರಿ? ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳಿ’ ಎಂದು ತಾಕೀತು ಮಾಡಿದರು.

ಆದರೂ ಕೆಲ ಅಧಿಕಾರಿಗಳು ಕ್ಯಾಪ್ ತರದಿದ್ದನ್ನು ಗಮನಿಸಿದೆ ಶಾಸಕರು, ‘ಇವರಿಗೆಲ್ಲ ನೋಟಿಸ್ ನೀಡಿ’ ಎಂದು ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.

ಆಸ್ಪತ್ರೆ ಸೋರುತ್ತಿದೆ: ಇಲ್ಲಿನ ಆಸ್ಪತ್ರೆಯು ಸೋರುತ್ತಿದೆ. ಹೆಂಚು ಹಾಕಿಸಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುರೇಶ್ ಹೇಳಿದರು.

ಇದಕ್ಕೆ ಉತ್ತರಿಸಿದ ಶಾಸಕರು, ‘ಗುಣಮಟ್ಟದ ಕಾಮಗಾರಿ ನಡೆದಿದ್ದರೆ ಸೋರುತ್ತಿರಲಿಲ್ಲ. ಮುಂದೆ ನೋಡೋಣ’ ಎಂದರು.

ತಾಲ್ಲೂಕಿನಲ್ಲಿ ವೈದ್ಯರ ಕೊರತೆ ಇದೆ. ಜನೌಷಧ ಕೇಂದ್ರದಲ್ಲಿ ನೌಕರರು ಇಲ್ಲ. ಸದ್ಯದಲ್ಲೇ ಸಿಬ್ಬಂದಿ ನೇಮಕ ಮಾಡ
ಲಾಗುವುದು ಎಂದರು. 

ಕಾಲೇಜಿನಲ್ಲಿ ಗಾಂಜಾ ಘಮಲು
ಇಲ್ಲಿನ ಕೊಡಚಾದ್ರಿ ಪದವಿ ಕಾಲೇಜಿನಲ್ಲಿ ಗಾಂಜಾ ಮಾರಾಟ ನಡೆಯುತ್ತಿದೆ ಎಂದು ಸದಸ್ಯರು ದೂರಿದರು.

ಗಾಂಜಾ ಮಾರಾಟಕ್ಕೆ ಅಧಿಕಾರಿಗಳು ಕಠಿಣ ಕ್ರಮ ಅನುಸರಿಸಬೇಕು ಎಂದು ಶಾಸಕ ಹಾಲಪ್ಪ ಸೂಚಿಸಿದರು. ಆಡಳಿತಾಧಿಕಾರಿ ಜಯಲಕ್ಷಮ್ಮ, ಇಒ ಪ್ರವೀಣ ಕುಮಾರ್, ಸದಸ್ಯ ಶಾಬುದ್ದೀನ್, ಪವಿತ್ರ ಕೆ.ಸಿ., ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಜಯರಾಮ್ ಇದ್ದರು.

ಪತ್ನಿ ಮೊಬೈಲ್‌ ನಂಬರ್ ನೆನಪಿದೆಯಾ?
ಸಭೆಯಲ್ಲಿ ಸಮರ್ಪಕ ಉತ್ತರ ನೀಡುವಲ್ಲಿ ವಿಫಲರಾದ ಡೆಪ್ಯೂಟಿ ಆರ್‌ಎಫ್ಒ ಒಬ್ಬರು ತಮ್ಮ ಮೇಲಧಿಕಾರಿ ಮೊಬೈಲ್ ನಂಬರ್‌ ಹುಡುಕುತ್ತಿದ್ದಾಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಹಾಲಪ್ಪ, ‘ಏನ್ರೀ ನಿಮ್ಮ ಮೇಲಧಿಕಾರಿ ನಂಬರ್‌ ನೆನಪಿಲ್ಲವಾ? ಎಂದು ರೇಗಿದರು.

ಕೊನೆಗೂ ಅಧಿಕಾರಿ ನಂಬರ್ ಕೊಡದಿದ್ದಾಗ ಬೇಸತ್ತ ಶಾಸಕರು, ‘ನಿಮ್ಮ ಪತ್ನಿಯ ನಂಬರ್ ಆದರೂ ನೆನಪಿದೆಯಾ’ ಎಂದು ಪ್ರಶ್ನಿಸಿದರು. ‘ನೆನಪಿದೆ ಸಾರ್.. ಹೇಳ್ತಿನಿ’ ಎಂದು ಅಧಿಕಾರಿ ನಂಬರ್ ಹೇಳಿದಾಗ ಸಭೆ ನಗೆಗಡಲಲ್ಲಿ ತೇಲಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.