ಭಾನುವಾರ, ಮೇ 22, 2022
27 °C
ಕಾಡಿನ ಮಧ್ಯೆ ಚದುರಿದ ಮನೆಗಳು, ಡಾಂಬರು ರಸ್ತೆ, ಕಾಲು ಸಂಕ ಕಾಣದ ಊರು

ಕೆಸಿನಮನೆಗೆ ಕುಡಿವ ನೀರು, ಆಶ್ರಯ ಮನೆ ಮರೀಚಿಕೆ

ಹೊಸಕೊಪ್ಪ ಶಿವು Updated:

ಅಕ್ಷರ ಗಾತ್ರ : | |

Prajavani

ಕೆಸಿನಮನೆ (ಕೋಣಂದೂರು): ಕೋಣಂದೂರಿನಿಂದ 15 ಕಿ.ಮೀ. ದಟ್ಟ ಕಾಡಿನ ಮಣ್ಣಿನ ಕಾಲು ಹಾದಿಯಲ್ಲಿ ಕ್ರಮಿಸಿದರೆ ಸಿಗುವುದೇ ದೇಮ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಗ್ರಾಮ ಕೆಸಿನಮನೆ. ದೇಮ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ಅತ್ಯಂತ ಕನಿಷ್ಠ ಮೂಲಸೌಕರ್ಯಗಳನ್ನು ಹೊಂದಿದ ಊರು ಇದು.

ಕೆಸಿನಮನೆ ಗ್ರಾಮದಲ್ಲಿ 40 ಮನೆಗಳಿದ್ದು, 185 ಜನರು ವಾಸಿಸುತ್ತಿದ್ದಾರೆ. ಕೃಷಿ ಮತ್ತು ಕೂಲಿ ಕೆಲಸವನ್ನು ಇಲ್ಲಿನ ಜನರು ಆಶ್ರಯಿಸಿದ್ದಾರೆ. ಮುಳುಗಡೆ ಸಂತ್ರಸ್ತರೂ ಆಗಿರುವ ಈ ಭಾಗದ ಜನರು ಬಗರ್‌ಹುಕುಂ ಸಾಗುವಳಿ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಈ ಗ್ರಾಮದ 7 ಹೆಣ್ಣುಮಕ್ಕಳು ಹಾಗೂ 4 ಜನ ಗಂಡುಮಕ್ಕಳು ಕಾಲೇಜು ಅಭ್ಯಾಸ ಮಾಡುತ್ತಿದ್ದಾರೆ. 2 ಹೆಣ್ಣು ಹಾಗೂ 2 ಗಂಡುಮಕ್ಕಳು ಪ್ರೌಢಶಾಲೆಯಲ್ಲಿ 2 ಜನ ಹೆಣ್ಣುಮಕ್ಕಳು ಪ್ರಾಥಮಿಕ ಶಿಕ್ಷಣ, 5 ಮಕ್ಕಳು ಅಂಗನವಾಡಿಯಲ್ಲಿ ಕಲಿಯುತ್ತಿದ್ದಾರೆ. ಎಂಜಿನಿಯರಿಂಗ್ ಮುಗಿಸಿರುವ ಒಬ್ಬ ಯುವಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಡಾಂಬರು ರಸ್ತೆ ಈ ಗ್ರಾಮಕ್ಕೆ ಕನಸಾಗಿಯೇ ಉಳಿದಿದೆ. ಪ್ರತಿ ಮನೆಯ ಸಂಪರ್ಕ ಮಳೆಗಾಲದಲ್ಲಿ ಹರ ಸಾಹಸವಾಗಿದೆ. ಒಂದು ಮಳೆ ಬಂದರೆ ಬೈಕ್ ಹೊರತು ಪಡಿಸಿದರೆ ಕಾರು ಸಂಚಾರ ಕನಸಿನ ಮಾತಾಗುತ್ತದೆ. ಈ ಭಾಗದಲ್ಲಿ ಒಂದು ಅಂಗನವಾಡಿ ಇದೆ. ಅದಕ್ಕೂ ಮಕ್ಕಳು 4 ಕಿ.ಮೀ. ನಡೆದುಕೊಂಡು ಬರಬೇಕಿದೆ. ಈ ಗ್ರಾಮದ ವಾಟಗಾರಿನಲ್ಲಿ ಒಂದು ಕಿರಿಯ ಪ್ರಾಥಮಿಕ ಶಾಲೆ ಇದೆ. ಆದರೆ 10 ವರ್ಷದಿಂದ ಮಕ್ಕಳಿಲ್ಲದೆ ಶಾಲೆಯನ್ನು ಮುಚ್ಚಲಾಗಿದೆ. ಇದರಿಂದಾಗಿ ಈ ಭಾಗದ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳು 7-8 ಕಿ.ಮೀ. ನಡೆದುಕೊಂಡು ಸಾಗಿ ಮಳಲೀಮಕ್ಕಿ ಅಥವಾ ಕೋಣಂದೂರನ್ನು ಆಶ್ರಯಿಸಬೇಕಿದೆ. ಶಾಲೆ ಮಕ್ಕಳ ಸರಾಗ ಪಯಣಕ್ಕೆ ಕಾಲು ಸಂಕಗಳ ಬೇಡಿಕೆ ಇದೆ. ಆದರೆ ಈ ವರೆಗೂ ಒಂದೇ ಒಂದು ಕಾಲು ಸಂಕ ಈ ಗ್ರಾಮದಲ್ಲಿ ನಿರ್ಮಾಣವಾಗಿಲ್ಲ.

ಬಯಲು ಶೌಚ ಗತಿ: ವಿಭಕ್ತ ಕುಟುಂಬಗಳಿಂದ ಫಲಾನುಭವಿಗಳ ಬೇಡಿಕೆಗೆ ಅನುಗುಣವಾದ ಶೌಚಾಲಯಗಳು ನಿರ್ಮಾಣವಾಗಿಲ್ಲ. ಹೀಗಾಗಿ ಮಹಿಳೆಯರು ಮತ್ತು ಮಕ್ಕಳು ಬಯಲು ಶೌಚದಿಂದ ಕಿರಿಕಿರಿ ಅನುಭವಿಸುವಂತಾಗಿದೆ.

ಆಶ್ರಯ ಯೋಜನೆ ಮನೆಗೆ ಹೆಚ್ಚಿದ ಬೇಡಿಕೆ: ಈ ಭಾಗದ ನಿವಾಸಿಗಳಿಗೆ ಆಶ್ರಯ ಯೋಜನೆ ಮನೆಗಳ ಅಗತ್ಯ ಇದೆ. ಗ್ರಾಮ ಪಂಚಾಯಿತಿಯಲ್ಲಿ ಬೇಡಿಕೆಗೆ ಅನುಗುಣವಾದ ಮನೆಗಳು ಮಂಜೂರಾಗುತ್ತಿಲ್ಲ ಎಂಬ ಆರೋಪ ಗ್ರಾಮಸ್ಥರದ್ದು. ಬಹುತೇಕ ಮನೆಗಳು ಬೀಳುವ ಭೀತಿಯಲ್ಲಿವೆ. ಮಳೆಗಾಲಯದಲ್ಲಿ ಗಾಳಿ ಬಂದರೆ ಈ ಭಾಗದ ನಿವಾಸಿಗಳಲ್ಲಿ ಆತಂಕ ಹೆಚ್ಚುತ್ತದೆ.

ವೃದ್ಧಾಪ್ಯ ವೇತನ, ವಿಧವಾ ವೇತನ ಆದೇಶ ಪ್ರತಿ ಸಿಕ್ಕಿ ವರ್ಷಗಳೇ ಕಳೆದಿದ್ದರೂ ಹಣ ಮಾತ್ರ ಬರುತ್ತಿಲ್ಲ ಎಂಬುದು ಈ ಭಾಗದ ಫಲಾನುಭವಿಗಳ ಆರೋಪ. ಗ್ರಾಮದಲ್ಲಿ 4 ತೆರೆದ ಬಾವಿಗಳಿವೆ. ಆದರೆ ಮನೆಗಳು ಸಾಕಷ್ಟು ಅಂತರದಲ್ಲಿರುವುದರಿಂದ ನೀರಿಗಾಗಿ ಕಿ.ಮೀ. ಕ್ರಮಿಸಬೇಕಿದೆ. ಇಲ್ಲಿನ ಜನರು ಕೆರೆ, ಗುಮ್ಮಿ ಬಾವಿಯ ನೀರನ್ನೇ ಇಂದಿಗೂ ಆಶ್ರಯಿಸಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 7-8 ಕಿ.ಮೀ. ದೂರದಲ್ಲಿರುವ ಮಳಲೀಮಕ್ಕಿಗೆ ಬರಬೇಕು. ಈ ಭಾಗದಲ್ಲಿ ಸಂಪರ್ಕಕ್ಕೆ ಯಾವುದೇ ಮೊಬೈಲ್ ನೆಟ್‌ವರ್ಕ್ ಇಲ್ಲ. ಕೊರೊನಾ ಕಾಲದಲ್ಲಿ ವಿದ್ಯಾರ್ಥಿಗಳ ಆನ್‌ಲೈನ್ ಶಿಕ್ಷಣಕ್ಕೆ ಗುಡ್ಡದ ತುದಿ, ಮರದ ಮೇಲೆ ಅಟ್ಟಣಿಗೆ ನಿರ್ಮಿಸಿಕೊಂಡು ಪಾಠ ಕೇಳುವ ಅನಿವಾರ್ಯ ಇತ್ತು. ಮಳೆಗಾಲದಲ್ಲಿ ನೆಟ್‌ವರ್ಕ್‌ ಸಂಪರ್ಕ ಹಾಗೂ ವಿದ್ಯುತ್ ಮರೀಚಿಕೆ.

ಪಕ್ಕಾ ಬುಡಕಟ್ಟು ಜನಾಂಗದಂತೆ ಬದುಕು ಸಾಗಿಸುತ್ತಿರುವ ಈ ಭಾಗದ ವಾಸಿಗಳು ಭೂಮಿ ಹಕ್ಕಿಗಾಗಿ ಸತತ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಆದರೆ ಅವರ ಬದುಕಿಗೆ ಯಾವುದೇ ಆಶಾಭಾವ ಸಿಕ್ಕಿಲ್ಲ. ಅರಣ್ಯ ಇಲಾಖೆಯ ಕಾಯ್ದೆಗಳಿಂದಾಗಿ ಭೂಮಿ ಹಕ್ಕು ಗಗನ ಕುಸುಮವಾಗಿದೆ. ಕೇವಲ ಚುನಾವಣೆ ಸಂದರ್ಭದಲ್ಲಿ ಬಗರ್‌ಹುಕುಂ ಪರ ಧ್ವನಿ ಎತ್ತುವ ಜನಪ್ರತಿನಿಧಿಗಳು ಚುನಾವಣೆ ನಂತರ ಇತ್ತ ಮುಖ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಗ್ರಾಮದ ಸುರೇಶ್.

ಹೊಸದಾಗಿ ಒಂದು ಕೊಳವೆಬಾವಿ ಕೊರೆಸಿದ್ದು, ಅದು ಎಷ್ಟು ಉಪಯೋಗವಾಗುತ್ತದೆಯೋ ನೋಡಬೇಕು ಎನ್ನುತ್ತಾರೆ ಗ್ರಾಮಸ್ಥರು.

***

ನಮ್ಮೂರು ಮೂಲಸೌಕರ್ಯಗಳ ಕೊರತೆಯಿಂದ ನಲುಗುತ್ತಿದೆ. ಯುವಕರು ಹಳ್ಳಿಗಳನ್ನು ತೊರೆದು ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಸರ್ಕಾರಗಳು ಗ್ರಾಮಗಳ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು.

ಕೆ.ಆರ್. ಸಂತೋಷ್ ಕುಮಾರ್, ಗ್ರಾಮಸ್ಥ

***

ಕೆಸಿನಮನೆ ಗ್ರಾಮ ಅತ್ಯಂತ ಹಿಂದುಳಿದ ಗ್ರಾಮ. ಇಲ್ಲಿನ ನಿವಾಸಿಗಳ ಬಹುದಿನಗಳ ಬೇಡಿಕೆಯಾದ ಕುಡಿಯುವ ನೀರು, ಸಮರ್ಪಕ ರಸ್ತೆ ಇಂದಿಗೂ ಈಡೇರಿಲ್ಲ. ಗ್ರಾಮ ಪಂಚಾಯಿತಿಗಳಿಗೆ ಸರ್ಕಾರ ಕೊಡುತ್ತಿರುವ ಅನುದಾನ ಸಾಕಾಗುತ್ತಿಲ್ಲ. ಆಶ್ರಯ ಮನೆಗಳ ಬೇಡಿಕೆ ಹೆಚ್ಚಿದೆ. 

ದಾಕ್ಷಾಯಿಣಿ, ಅಧ್ಯಕ್ಷರು, ದೇಮ್ಲಾಪುರ ಗ್ರಾ.ಪಂ.

***

ಗ್ರಾಮದಲ್ಲಿ ಪಂಚಾಯಿತಿ ವ್ಯಾಪ್ತಿಯ ಕಾಮಗಾರಿಗಳನ್ನು ಹೊರತುಪಡಿಸಿದರೆ ದೊಡ್ಡ ಮೊತ್ತದ ಯಾವುದೇ ಕಾಮಗಾರಿಗಳು ಆಗಿಲ್ಲ. ಪಂಚಾಯಿತಿಗೆ ಬರುವ ಕಡಿಮೆ ಪ್ರಮಾಣದ ಆಶ್ರಯ ಮನೆಗಳಲ್ಲಿ ಆದ್ಯತೆಯ ಮೇರೆಗೆ ಫಲಾನುಭವಿಗಳಿಗೆ ಕೊಡಲಾಗುತ್ತಿದೆ. ನೆಟ್‌ವರ್ಕ್ ಸಮಸ್ಯೆಯಿಂದ ಜಿಪಿಎಸ್‌ಗೆ ಹರಸಾಹಸ ಪಡಬೇಕಿದೆ.

ಶಿಲ್ಪಾ, ಪಿಡಿಒ, ದೇಮ್ಲಾಪುರ ಗ್ರಾ.ಪಂ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು