ಮಂಗಳವಾರ, ಫೆಬ್ರವರಿ 7, 2023
27 °C
ನಿರ್ದಿಷ್ಟ ಬೆಳೆಗೆ ಗುಣಮಟ್ಟದ ಕಾರ್ಯಯೋಜನಾ ವಿಧಾನ ಅಗತ್ಯ; ಕೇಂದ್ರ ವಿಜ್ಞಾನಿಗಳ ಸಲಹೆ

ಅಡಿಕೆ- 45,000 ಹೆಕ್ಟೇರ್‌ಗೆ ಎಲೆಚುಕ್ಕಿ ವಿಸ್ತರಣೆ: ಆರಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೀರ್ಥಹಳ್ಳಿ: ‘ಅಡಿಕೆ ಕೇವಲ ದುಡ್ಡಿನ ಬೆಳೆಯಾಗಿ ಮಾತ್ರ ದೇಶದಲ್ಲಿ ಗುರುತಾಗಿತ್ತು. ಅದಕ್ಕೆ ತಗಲುವ ರೋಗಗಳ ಕುರಿತು ಮಾಹಿತಿ ಕೊರತೆ ಇನ್ನೂ ಮುಂದುವರಿದಿದೆ. ತಾಲ್ಲೂಕಿನ 650 ಹೆಕ್ಟೇರ್‌ ಸೇರಿ ರಾಜ್ಯದಲ್ಲಿ 45,000 ಹೆಕ್ಟೇರ್ ಪ್ರದೇಶದಲ್ಲಿನ ಅಡಿಕೆ ತೋಟ ಎಲೆಚುಕ್ಕಿ ರೋಗಕ್ಕೆ ತುತ್ತಾಗಿದೆ’ ಎಂದು ಗೃಹ ಸಚಿವ ಹಾಗೂ ಅಡಿಕೆ ಟಾಸ್ಕ್‌ ಫೋರ್ಸ್‌ ಅಧ್ಯಕ್ಷ ಆರಗ ಜ್ಞಾನೇಂದ್ರ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಅಡಿಕೆಯ ಎಲೆಚುಕ್ಕಿ ರೋಗ ಸಂಶೋಧನೆಗೆ ಬಂದ ಕೇಂದ್ರದ ವಿಜ್ಞಾನಿಗಳ ತಂಡದೊಂದಿಗೆ ಅವರು ಚರ್ಚಿಸಿದರು.

‘ಎಲೆಚುಕ್ಕಿ ರೋಗ ಕುರಿತ ಸಂಶೋಧನೆಗೆ ಈಗಾಗಲೇ ₹ 50 ಲಕ್ಷ ನೀಡಲಾಗಿದೆ. ಅಡಿಕೆ ಟಾಸ್ಕ್‌ ಫೋರ್ಸ್‌ನಲ್ಲಿ ₹ 3 ಕೋಟಿ ಮೀಸಲಾಗಿದೆ. ಅದನ್ನು ಬಿಡುಗಡೆಗೊಳಿಸಲು ಅವಕಾಶ ಇದೆ. ತಾಂತ್ರಿಕ ಸಲಕರಣೆಗಳಿಗೆ ಸರ್ಕಾರದಿಂದ ವಿಶೇಷ ನಿಧಿ ಒದಗಿಸಲಾಗುವುದು. ಸಿಬ್ಬಂದಿ ಕೊರತೆ ನೀಗಿಸಲು ಹೆಚ್ಚುವರಿಯಾಗಿ ತಾತ್ಕಾಲಿಕ ಸಿಬ್ಬಂದಿ ಆಯ್ಕೆಮಾಡಿಕೊಳ್ಳಿ’ ಎಂದು ಸೂಚಿಸಿದರು.

‘ಸಾಂಬಾರು ಪದಾರ್ಥಕ್ಕೆ ಇರುವಂತೆ ನಿರ್ದಿಷ್ಟ ಬೆಳೆಗೆ ಗುಣಮಟ್ಟದ ಕಾರ್ಯ ಯೋಜನಾ ವಿಧಾನ ರೂಪಿಸಬೇಕು. ಕೇವಲ ಒಂದು ಸಿಂಪಡಣೆಯಿಂದ ಹೆಚ್ಚುವರಿ ಲಾಭ ಪಡೆಯುವ ಔಷಧ ಅಗತ್ಯ ಇದೆ. 15ರಿಂದ 30 ಬಾರಿ ಔಷಧ ಸಿಂಪಡಣೆ ಮಾಡುವುದು ಅಪಾಯಕಾರಿ. ಅದರ ಬದಲು ಪರ್ಯಾಯ ಬೆಳೆಗಳ ಕಡೆಗೆ ಗಮನ ಹರಿಸಬಹುದು. ಮಣ್ಣಿನಲ್ಲಿ ಪೊಟ್ಯಾಷ್‌ ಪ್ರಮಾಣ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗುತ್ತಿದ್ದು, ರಾಸಾಯನಿಕ ಬಳಕೆಯಲ್ಲಿ ಜಾಗ್ರತೆ ವಹಿಸುವುದು ಅತ್ಯಂತ ಮಹತ್ವ’ ಎಂದು ಸಿಪಿಸಿಆರ್‌ಐ ಸಸ್ಯರೋಗ ಶಾಸ್ತ್ರ ಮುಖ್ಯಸ್ಥ ಡಾ.ವಿನಾಯಕ ಹೆಗ್ಡೆ ಹೇಳಿದರು.

‘1994ರಲ್ಲಿ ಕಾಫಿ ಬೆಳೆಯಲ್ಲಿ ಈ ರೋಗ ಮೊದಲಿಗೆ ಕಂಡು ಬಂದಿದೆ. ಯುದ್ಧೋಪಾದಿಯಲ್ಲಿ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ. ಅಲ್ಲದೇ ವಿಜ್ಞಾನಿಗಳ ಸಲಹೆಗಿಂತ ಹೆಚ್ಚಿನ ಪ್ರಮಾಣದ ಔಷಧ ಸಿಂಪಡಣೆಯೂ ನಡೆಯುತ್ತಿದೆ. ಒಂದು ಲೀಟರ್‌ ನೀರಿಗೆ 2 ಮಿಲೀ ಔಷಧದ ಬದಲು 20 ಮಿಲೀ ಔಷಧ ಬಳಕೆಯಾಗುತ್ತಿದೆ. ಪ್ರತಿಕೂಲ ಹವಮಾನ ಇನ್ನಷ್ಟು ಹಾನಿ ಮಾಡುತ್ತಿದೆ’ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.‌ ಜೀವರಾಜ್, ಕಾಸರಗೋಡು ಕೇಂದ್ರೀಯ ತೋಟ ಬೆಳಗಳ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಡಾ.ಮುರುಳೀಧರ್, ವಿಜ್ಞಾನಿ ಡಾ.ಮೃತ್ಯುಂಜಯ ಸಿ.ವಾಲಿ, ಕ್ಯಾಲಿಕಟ್‌ ಅಡಿಕೆ ಮತ್ತು ಸಾಂಬಾರು ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯ ಮುಖ್ಯಸ್ಥ ಡಾ. ಹೋಮಿ ಚೆರಿಯನ್, ಮಂಗಳೂರು ತೋಟಗಾರಿಕೆ ವಿಶ್ವವಿದ್ಯಾಲಯದ ನಿರ್ದೇಶಕ ಡಾ.ಎಚ್.ಆರ್. ನಾಯ್ಕ್, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಅರುಣ್‌ ಕುಮಾರ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು