ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗರ್ ಹುಕುಂ ಸಾಗುವಳಿದಾರರ ಪರ ಧ್ವನಿ ಎತ್ತದ ರಾಘವೇಂದ್ರ: ಮಧು ಬಂಗಾರಪ್ಪ ಆರೋಪ

ಶಿಕಾರಿಪುರ: ಗೀತಾ ಶಿವರಾಜಕುಮಾರ್ ಚುನಾವಣಾ ಪ್ರಚಾರ ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ ಆರೋಪ
Published 26 ಮಾರ್ಚ್ 2024, 16:12 IST
Last Updated 26 ಮಾರ್ಚ್ 2024, 16:12 IST
ಅಕ್ಷರ ಗಾತ್ರ

ಶಿಕಾರಿಪುರ: ‘ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲೆಯ ಬಗರ್ ಹುಕುಂ ಸಾಗುವಳಿದಾರರು ಹಾಗೂ ಶರಾವತಿ ಮುಳುಗಡೆ ಸಂತ್ರಸ್ತರ ಪರ ಸಂಸತ್ತಿನಲ್ಲಿ ಧ್ವನಿ ಎತ್ತಲಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಆರೋಪಿಸಿದರು.

ಪಟ್ಟಣದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

‘ನಾನು ಸೊರಬ ಶಾಸಕನಾಗಿದ್ದ ಸಂದರ್ಭದಲ್ಲಿ 6,200 ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಿದ್ದೇನೆ. ಆದರೆ ಸಂಸದ ರಾಘವೇಂದ್ರ ಹಕ್ಕು ಪತ್ರ ಕೊಡುವ ಕೆಲಸ ಮಾಡಲಿಲ್ಲ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಹಾಗೆ ಗೀತಕ್ಕ ನಿಮ್ಮ ಪರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಲಿದ್ದಾರೆ’ ಎಂದರು.

‘ಬರಗಾಲದ ಸಂದರ್ಭದಲ್ಲಿ ಬಡವರಿಗೆ ಅಕ್ಕಿ ನೀಡಲು ತಂದೆ ಬಂಗಾರಪ್ಪ ಅವರಿಗೆ ಗೀತಕ್ಕ ಹಣದ ಸಹಾಯ ಮಾಡಿದ್ದರು. ಬಂಗಾರಪ್ಪ ಪುತ್ರಿಯನ್ನು ನಿಮ್ಮ ಮಡಿಲಿಗೆ ಹಾಕಿದ್ದೇವೆ. ಅಧಿಕ ಮತಗಳ ಅಂತರದಿಂದ ಗೆಲ್ಲಿಸಿ’ ಎಂದು ಮನವಿ ಮಾಡಿದರು.

‘ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. 5 ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಚುನಾವಣೆಯಲ್ಲಿ ನನ್ನ ಪರ ಮತ ಚಲಾಯಿಸುವ ಮೂಲಕ ಗೆಲ್ಲಿಸಿ, ನಿಮ್ಮ ಸೇವೆ ಮಾಡಲು ಅವಕಾಶ ನೀಡಬೇಕು. ಗೆದ್ದ ಬಳಿಕ ನಿಮ್ಮ ನಡುವೆಯೇ ಇದ್ದು, ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತೇನೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್‌ ಭರವಸೆ ನೀಡಿದರು.

‘ನನ್ನ ಪತ್ನಿ ಗೀತಾ ಮಾತನಾಡುವುದು ಕಡಿಮೆ. ಆದರೆ ಜಾಸ್ತಿ ಕೆಲಸ ಮಾಡುತ್ತಾರೆ. ಜನರಿಗೆ ಒಳಿತು ಮಾಡಲೆಂದೇ ರಾಜಕಾರಣಕ್ಕೆ ಬಂದಿದ್ದಾರೆ. ಅವರ ಜೊತೆ ನಾನು ಹಾಗೂ ಮಧು ಬಂಗಾರಪ್ಪ ಇರುತ್ತೇವೆ. ನಮ್ಮ ಮೇಲೆ ನಂಬಿಕೆ ಇಟ್ಟು ಗೀತಾ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿ’ ಎಂದು ನಟ ಶಿವರಾಜಕುಮಾರ್‌ ಮನವಿ ಮಾಡಿದರು. 

ಶಿಕಾರಿಪುರಕ್ಕೆ ಮಂಗಳವಾರ ಆಗಮಿಸಿದ ಲೋಕಸಭೆ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರನ್ನು ಕಾರ್ಯಕರ್ತರು ಸ್ವಾಗತಿಸಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು.
ಶಿಕಾರಿಪುರಕ್ಕೆ ಮಂಗಳವಾರ ಆಗಮಿಸಿದ ಲೋಕಸಭೆ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರನ್ನು ಕಾರ್ಯಕರ್ತರು ಸ್ವಾಗತಿಸಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು.

ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್, ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಎಸ್.ಪಿ.ನಾಗರಾಜಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರಿವಾಳ ಶಿವರಾಮ್, ಶಿರಾಳಕೊಪ್ಪ ಬ್ಲಾಕ್ ಅಧ್ಯಕ್ಷ ವೀರನಗೌಡ, ಮುಖಂಡರಾದ ನಗರದ ಮಹಾದೇವಪ್ಪ, ಶ್ರೀಕಾಂತ್, ಭದ್ರಾವತಿಯ ಬಿ.ಕೆ. ಮೋಹನ್, ಕಲಗೋಡು ರತ್ನಾಕರ, ಅನಿತಾ ಕುಮಾರಿ, ರಮೇಶ್, ಬಲ್ಕೀಶ್ ಬಾನು, ಮಾರವಳ್ಳಿ ಉಮೇಶ್, ರಾಘವೇಂದ್ರನಾಯ್ಕ, ಉಳ್ಳಿ ದರ್ಶನ್, ಜೋಗಿಹಳ್ಳಿ ವೀರೇಶ್ ಉಪಸ್ಥಿತರಿದ್ದರು.

ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಜನಸಮೂಹ ದೃಶ್ಯ
ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಜನಸಮೂಹ ದೃಶ್ಯ

ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ

 ಪಟ್ಟಣಕ್ಕೆ ಆಗಮಿಸಿದ ಗೀತಾ ಶಿವರಾಜಕುಮಾರ್ ಅವರಿಗೆ ಪಕ್ಷದ ಕಾರ್ಯಕರ್ತರು ಶಿವಮೊಗ್ಗ ರಸ್ತೆಯಲ್ಲಿ ಅದ್ದೂರಿ ಸ್ವಾಗತ ನೀಡಿದರು. ಪಟಾಕಿ ಸಿಡಿಸಿ ಜೈಕಾರ ಕೂಗಿದರು. ಬೈಕ್ ರ‍್ಯಾಲಿ ಮೂಲಕ ತೆರೆದ ವಾಹನದಲ್ಲಿ ಗೀತಾ ಅವರನ್ನು ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ಕರೆತಂದರು. ದೇವಸ್ಥಾನದಲ್ಲಿ ಅವರು ವಿಶೇಷ ಪೂಜೆ ಸಲ್ಲಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT