ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈರುತ್ಯ ಪದವೀಧರ ಕ್ಷೇತ್ರ: ಹಣಾಹಣಿಗೆ ಕಾಂಗ್ರೆಸ್–ಮೈತ್ರಿ ಅಭ್ಯರ್ಥಿಗಳ ಸಜ್ಜು

ನಾಮಪತ್ರ ಸಲ್ಲಿಕೆ ಆರಂಭ
Published 10 ಮೇ 2024, 5:06 IST
Last Updated 10 ಮೇ 2024, 5:06 IST
ಅಕ್ಷರ ಗಾತ್ರ

ಶಿವಮೊಗ್ಗ: ಲೋಕಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ವಿಧಾನಪರಿಷತ್‌ಗೆ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಎರಡು ಸ್ಥಾನಗಳಿಗೆ ಚುನಾವಣೆ ಗರಿಗೆದರಿದೆ.

ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ‌ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ (ಚನ್ನಗಿರಿ, ಹೊನ್ನಾಳಿ ತಾಲ್ಲೂಕುಗಳು ಮಾತ್ರ) ಜಿಲ್ಲೆಗಳು ಈ ಕ್ಷೇತ್ರಗಳ ವ್ಯಾಪ್ತಿಗೆ ಬರುತ್ತವೆ.

ನೈರುತ್ಯ ಪದವೀಧರರ ಕ್ಷೇತ್ರವನ್ನು ಕಳೆದ ಬಾರಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಆಯನೂರು ಮಂಜುನಾಥ್ ಪ್ರತಿನಿಧಿಸುತ್ತಿದ್ದರು. ಕಳೆದ ವಿಧಾನಸಭೆ ಚುನಾವಣೆ ವೇಳೆ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ತ್ಯಜಿಸಿ ಜೆಡಿಎಸ್ ಸೇರ್ಪಡೆಗೊಂಡು ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಹೀಗಾಗಿ ಆ ಸ್ಥಾನ ತೆರವಾಗಿತ್ತು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಈಗ ಮತ್ತೆ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ. ಪದವೀಧರ ಕ್ಷೇತ್ರಕ್ಕೆ ಬಿಜೆಪಿ ಇನ್ನೂ ತನ್ನ ಅಭ್ಯರ್ಥಿ ಅಂತಿಮಗೊಳಿಸಬೇಕಿದೆ.

ನೈರುತ್ಯ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್‌ನ ಎಸ್.ಎಲ್.ಭೋಜೇಗೌಡ ಪ್ರತಿನಿಧಿಸುತ್ತಿದ್ದರು. ಈಗ ಅವರ ಅವಧಿ ಮುಗಿದಿದೆ. ಹಾಲಿ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಕಾರಣಕ್ಕೆ ಎಸ್.ಎಲ್.ಭೋಜೇಗೌಡ ಜೆಡಿಎಸ್‌–ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಶಿಕ್ಷಕರ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಕೊಡಗು ಜಿಲ್ಲೆಯ ಕೆ.ಕೆ. ಮಂಜುನಾಥ್‌ಗೆ ಟಿಕೆಟ್ ಅಂತಿಮಗೊಂಡಿದೆ. ಈ ಹಿಂದೆ ಶಿಕ್ಷಕರ ಸಂಘದ ಅಧ್ಯಕ್ಷರಾಗಿದ್ದ ಅವರು, ಸ್ವತಂತ್ರ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿ ಅತ್ಯಂತ ಕಡಿಮೆ ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ. ಕಾಂಗ್ರೆಸ್ ಪಕ್ಷ ತಿಂಗಳ ಹಿಂದೆಯೇ ತನ್ನ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿರುವುದರಿಂದ ಇಬ್ಬರೂ ಈಗಾಗಲೇ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಕಡಿದಾಳ್ ಗೋಪಾಲ್
ಕಡಿದಾಳ್ ಗೋಪಾಲ್

ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ..

ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ಸ್ಪರ್ಧೆಗೆ ನಾಮಪತ್ರ ಸಲ್ಲಿಕೆ ಮೇ 9ರಿಂದ ಆರಂಭವಾಗಿದೆ. ಮೇ 16 ಕೊನೆಯ ದಿನ. ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಮೇ 17ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಮೇ 20ರ ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ವಾಪಸ್ ಪಡೆಯಬಹುದಾಗಿದೆ. ಜೂನ್ 3ರಂದು ಬೆಳಿಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ.

ಎರಡೂ ಕ್ಷೇತ್ರಗಳ ಮತದಾರರ ವಿವರ..

ನೈರುತ್ಯ ಶಿಕ್ಷಕರ ಕ್ಷೇತ್ರದ ಆರು ಜಿಲ್ಲೆಗಳ ವ್ಯಾಪ್ತಿಯಲ್ಲಿ 2023ರ ಡಿಸೆಂಬರ್ 30ರವರೆಗೆ 19380 ಮತದಾರರು ಇದ್ದರು. 2024ರ ಮೇ 6ರವರೆಗೆ ಹೊಸದಾಗಿ 4333 ಮಂದಿ ಅರ್ಜಿ ಹಾಕಿದ್ದಾರೆ.  ನೈರುತ್ಯ ಪದವೀಧರ ಕ್ಷೇತ್ರದ ವ್ಯಾಪ್ತಿಯಲ್ಲಿ 2023ರ ಡಿಸೆಂಬರ್ 30ರವರೆಗೆ 74218 ಮಂದಿ ಮತದಾರರು ಇದ್ದರು. 2024ರ ಮೇ 6ರವರೆಗೆ ಹೊಸದಾಗಿ 11390 ಮಂದಿ ಅರ್ಜಿ ಹಾಕಿದ್ದಾರೆ.

ಶಿವಮೊಗ್ಗ: ಬಿಜೆಪಿಗೆ ಟಿಕೆಟ್‌ಗೆ ಐವರ ಅರ್ಜಿ

ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ತನ್ನ ಪಾರಮ್ಯ ಮುಂದುವರೆಸಲು ಸಿದ್ಧತೆ ನಡೆಸಿದೆ. ಪಕ್ಷದ ಟಿಕೆಟ್‌ಗೂ ಬೇಡಿಕೆ ಹೆಚ್ಚಿದೆ. ಕ್ಷೇತ್ರವನ್ನು ಈಚೆಗೆ ಸತತವಾಗಿ ಶಿವಮೊಗ್ಗ ಜಿಲ್ಲೆಯವರೇ ಪ್ರತಿನಿಧಿಸಿದ್ದಾರೆ. ಈ ಬಾರಿಯೂ ಆ ಪರಂಪರೆ ಮುಂದುವರೆಯಲಿದೆಯೇ ಇಲ್ಲವೇ ಟಿಕೆಟ್ ಬೇರೆ ಜಿಲ್ಲೆಯವರಿಗೆ ಸಿಗಲಿದೆಯೇ ಎಂಬುದು ಪ್ರಶ್ನೆಯಾಗಿದೆ. ಶಿವಮೊಗ್ಗ ಜಿಲ್ಲೆಯಿಂದ ಗಿರೀಶ್ ಪಟೇಲ್ ಡಾ.ಧನಂಜಯ ಸರ್ಜಿ ಎಸ್.ದತ್ತಾತ್ರಿ ಎಸ್. ಜ್ಞಾನೇಶ್ವರ್ ಸಂತೋಷ್ ಬಳ್ಳೇಕೆರೆ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಪಕ್ಷ ನಿಷ್ಠೆ ಜಾತಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಮಾಡಿದ ಪ್ರಯತ್ನ ಅಂತಿಮವಾಗಿ ಟಿಕೆಟ್‌ಗೆ ಮಾನದಂಡವಾಗಲಿದೆ ಎಂದು ಹೇಳಲಾಗುತ್ತಿದೆ.

ಬಂಡಾಯದ ಬಿಸಿ ತಣಿಸುವ ಪ್ರಯತ್ನ..

ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಈ ಹಿಂದೆ ಎರಡು ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದ ಎಸ್.ಪಿ.ದಿನೇಶ್ ಅವರಿಗೆ ಈ ಬಾರಿ ಪಕ್ಷದ ಟಿಕೆಟ್ ಕೈ ತಪ್ಪಿದೆ. ಇದು ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ ಚುನಾವಣೆಯಲ್ಲಿ ಆಯನೂರು ಮಂಜುನಾಥ್ ವಿರುದ್ಧ ಕಾಂಗ್ರೆಸ್‌ನಿಂದ ಎಸ್‌.ಪಿ.ದಿನೇಶ್ ಸ್ಪರ್ಧಿಸಿದ್ದರು. ಈ ಬಾರಿ ಆಯನೂರು ಕಾಂಗ್ರೆಸ್ ಅಭ್ಯರ್ಥಿ ಆಗಿದ್ದರಿಂದ ಸಿಡಿದೆದ್ದಿರುವ ದಿನೇಶ್ ಬಂಡಾಯದ ಬಾವುಟ ಹಾರಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿ ಆಗಿ ಸ್ಪರ್ಧೆಗೆ ಮುಂದಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಆಯನೂರು ಮಂಜುನಾಥ್ ಹಾಲಿ ಆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಕಾರಣ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಹೇಳುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ದಿನೇಶ್ ಅವರನ್ನು ಸಮಾಧಾನಪಡಿಸಲು ಪ್ರಯತ್ನ ನಡೆದಿದೆ ಎಂದು ಹೇಳಿದರು.

ನೈರುತ್ಯ ಪದವೀಧರ ಕ್ಷೇತ್ರದ ಟಿಕೆಟ್‌ಗೆ ಶಿವಮೊಗ್ಗ ಜಿಲ್ಲೆಯಿಂದಲೇ ಹೆಚ್ಚಿನ ಪೈಪೋಟಿ ಇದೆ. ಐವರು ಅರ್ಜಿ ಸಲ್ಲಿಸಿದ್ದು ಹೈಕಮಾಂಡ್‌ಗೆ ಕಳುಹಿಸಲಾಗಿದೆ. ಎರಡು ಮೂರು ದಿನಗಳಲ್ಲಿ ಪಕ್ಷದ ಅಭ್ಯರ್ಥಿ ಹೆಸರು ಅಂತಿಮಗೊಳ್ಳಲಿದೆ.
–ಟಿ.ಡಿ.ಮೇಘರಾಜ್, ಬಿಜೆಪಿ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ
ನೈರುತ್ಯ ಶಿಕ್ಷಕರ ಕ್ಷೇತ್ರದ ಜೆಡಿಎಸ್–ಬಿಜೆಪಿ ಅಭ್ಯರ್ಥಿಯಾಗಿ ಸದ್ಯ ಮೇ 13ಕ್ಕೆ ಭೋಜೇಗೌಡರು ನಾಮಪತ್ರ ಸಲ್ಲಿಸಲಿದ್ದಾರೆ. ಈ ಚುನಾವಣೆಯಲ್ಲೂ ಮೈತ್ರಿ ಮುಂದುವರೆಯಲಿದೆ ಎಂದು ನಾವು ಭಾವಿಸಿದ್ದೇವೆ. ಅಂತಿಮ ತೀರ್ಮಾನ ವರಿಷ್ಠರು ತೆಗೆದುಕೊಳ್ಳಲಿದ್ದಾರೆ.
–ಕಡಿದಾಳ್ ಗೋಪಾಲ್‌, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ
ಟಿಕೆಟ್ ಸಿಗದೇ ಮುನಿಸಿಕೊಂಡಿರುವ ಎಸ್‌.ಪಿ.ದಿನೇಶ್ ಅವರೊಂದಿಗೆ ನಾನೂ ಚರ್ಚಿಸಿರುವೆ. ಪಕ್ಷದ ಹೈಕಮಾಂಡ್ ಕೂಡ ಸಂಧಾನದಲ್ಲಿ ತೊಡಗಿದೆ. ಅವರು ಕಣದಿಂದ ಹಿಂದಕ್ಕೆ ಸರಿಯುವ ವಿಶ್ವಾಸವಿದೆ.
–ಆರ್.ಪ್ರಸನ್ನಕುಮಾರ್‌, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT