ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Bandh | ಶಿವಮೊಗ್ಗ: ವಿದ್ಯುತ್  ದರ ಏರಿಕೆ ಖಂಡಿಸಿ ಪ್ರತಿಭಟನೆ

Published 22 ಜೂನ್ 2023, 6:41 IST
Last Updated 22 ಜೂನ್ 2023, 6:41 IST
ಅಕ್ಷರ ಗಾತ್ರ

ಶಿವಮೊಗ್ಗ: ವಿದ್ಯುತ್  ದರ ಏರಿಕೆ ಖಂಡಿಸಿ, ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ ಸಿ) ಮತ್ತು ಮೆಸ್ಕಾಂ ವಿರುದ್ಧ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸದಸ್ಯರು ಇಲ್ಲಿನ ಬೈಪಾಸ್ ರಸ್ತೆ, ಎಂಆರ್ ಎಸ್ ವೃತ್ತದ ಮೆಸ್ಕಾಂ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಕಚೇರಿಗೆ ಮನವಿ ಸಲ್ಲಿಸಿದರು.

ಕೈಗಾರಿಕಾ ಕ್ರಾಂತಿ ಮೂಲಕ ದೇಶದ ಅಭಿವೃದ್ಧಿ ಕನಸು ಕಾಣುತ್ತಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಂಸ್ಥೆಗಳ  ಅಳಿವು- ಉಳಿವಿನ ಪ್ರಶ್ನೆ ಉದ್ಬವಿಸಿದೆ. ಮೆಸ್ಕಾಂನ ವಿದ್ಯುತ್ ಬಿಲ್ ನಲ್ಲಿ ಅವೈಜ್ಞಾನಿಕ ಪದ್ಧತಿ ಅಳವಡಿಸಿ, ಶೇ50 ರಿಂದ 70 ರಷ್ಟು ಹೆಚ್ಚುವರಿ ವಿದ್ಯುತ್ ಬಿಲ್ ಬರಿಸುವ ಸಂಕಷ್ಟದ ಪರಿಸ್ಥಿತಿ ಕೈಗಾರಿಕಾ ಸದಸ್ಯರಲ್ಲಿ ಭಯವನ್ನು ಉಂಟುಮಾಡಿದೆ ಎಂದು ಆತಂಕ ವ್ಯಕ್ತ ಪಡಿಸಿದರು.

ಹೊಸ ವಿದ್ಯುತ್ ಬಿಲ್ ದರ ಕೈಗಾರಿಕೆಗಳು ಹಾಗೂ ಉದ್ಯಮಗಳಿಗೆ ಮಾರಕವಾಗಿದ್ದು, ವ್ಯವಹಾರ ವೈವಾಟಿಗೆ ಮಾರಕ ದುಸ್ಥಿತಿ ತಂದೊಡ್ಡಿದೆ. ಈ ಪದ್ಧತಿ ಇದೇ ರೀತಿ ಮುಂದುವರೆದರೆ ಕೈಗಾರಿಕೆಗಳು ಬಾಗಿಲು ಮುಚ್ಚಿ, ಕೈಸುಟ್ಟುಕೊಳ್ಳುವ ಸ್ಥಿತಿ ಎದುರಾಗಲಿದೆ ಎಂದು ಮನವಿಯಲ್ಲಿ ದೂರಿದರು.

ವಿದ್ಯುತ್ ದರದಲ್ಲಿನ ಫಿಕ್ಸೆಡ್ ಚಾರ್ಜ್ ಅನ್ನು ಹಿಂದಿನಂತೆ ಮುಂದುವರೆಸಿಕೊಂಡು ಹೋಗಲು ಮತ್ತು ಹೊಸ ಸಂಪರ್ಕಗಳಿಗೆ ಮಾತ್ರ ಅನ್ವಯಿಸುವಂತೆ ಕ್ರಮ ಜರುಗಿಸಬೇಕು. ವಿದ್ಯುತ್ ಶಕ್ತಿಯ ಯೂನಿಟ್ ದರವನ್ನು ಮಾರ್ಚ್ 2023ರ ನಿಗದಿತ ದರವನ್ನೇ ಮುಂದುವರೆಸಬೇಕು.

ಫ್ಲ್ಯುಯಲ್ ಕಾಸ್ಟ್ ಅಸ್ಥಿರ ಪದ್ಧತಿಯಲ್ಲಿದ್ದು,  ಅತಿ ಹೆಚ್ಚು ಹೊರೆಯಾಗುತ್ತಿದೆ ಮತ್ತು ಕರ್ನಾಟಕದಲ್ಲಿ ಹೆಚ್ಚು ಜಲವಿದ್ಯುತ್ ಉತ್ಪಾದನೆ ಆಗುತ್ತಿದ್ದು, ಫ್ಯುಯಲ್ ಕಾಸ್ಟ್ ನ ಹೊರೆ ಕಡಿಮೆ ಇದೆ. ಸರ್ಕಾರ ಶೇ 50ರಷ್ಟು ವಿನಾಯಿತಿಯನ್ನು ಘೋಷಿಸಬೇಕು ಎಂದು ಆಗ್ರಹಿಸಿದರು.

ವಿದ್ಯುತ್ ದರದ ಮೇಲಿನ ತೆರಿಗೆಯನ್ನು ಹಾಲಿ ಶೇ 9ರಿಂದ 3 ಕ್ಕೆ ಇಳಿಸಿ ಇನ್ನೂ ಮೂರು ನಾಲ್ಕು ವರ್ಷಗಳು ಶೇ 3ರಷ್ಟು ದರವನ್ನು ನಿಗದಿಪಡಿಸಬೇಕು. ಎಂಎಸ್‌ಎಂಇ ಉದ್ಯಮಗಳಿಗೆ ಸರ್ಕಾರದ ಅನುದಾನವನ್ನು ನಿಗದಿಪಡಿಸಬೇಕು. ಮೆಸ್ಕಾಂ ಖಾಸಗಿ ವಿದ್ಯುತ್ ಶಕ್ತಿ ಕಂಪನಿಗಳಿಂದ ವಿದ್ಯುತ್ತನ್ನು ಖರೀದಿಸಿ ಸುಮಾರು 15 ಪೈಸೆ ಯೂನಿಟ್ ಗೆ ಅದರ ವೆಚ್ಚವನ್ನು ಸೇರಿಸಿ ಕೈಗಾರಿಕೆಗಳಿಗೆ ಮರು ವಿತರಣೆ ಮಾಡುವ ಮೂಲಕ ಉದ್ಯಮಕ್ಕೆ ಸಹಾಯ ಮಾಡಬೇಕು. ಮೆಸ್ಕಾಂ ಗೆ ಬಾಕಿ ಇರುವ ₹11 ಸಾವಿರ ಕೋಟಿ ಹಣವನ್ನು ವಸೂಲಿ ಮಾಡಲು ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ಆರು ತಿಂಗಳಿಗೊಮ್ಮೆ ವಿದ್ಯುತ್ ಪರಿಷ್ಕರಣೆಯನ್ನು ಬಿಟ್ಟು ಎರಡು ವರ್ಷಗಳಿಗೊಮ್ಮೆ ಪರಿಷ್ಕರಣೆ ಮಾಡುವ ಪದ್ಧತಿಯನ್ನು ಅನುಸರಿಸುವುದು ಮತ್ತು ಅಳವಡಿಸಿಕೊಳ್ಳಬೇಕು. ಬಿಲ್ಲಿಂಗ್ ದಿನಾಂಕಗಳನ್ನು ಮೆಸ್ಕಾಂನಿಂದ ಪ್ರತಿ ತಿಂಗಳ 1 ರಿಂದ 30, 31 ರವರೆಗೆ ಮಾತ್ರ ಪರಿಗಣಿಸಬೇಕು ಎಂದು ಮನವಿ ಮಾಡಿದೆ.

ಅವೈಜ್ಞಾನಿಕ ವಿದ್ಯುತ್ ದರ ಪರಿಷ್ಕರಣೆಯ ಅನ್ಯಾಯದಿಂದ ಕೈಗಾರಿಕೆ ಮತ್ತು ವ್ಯಾಪಾರೋದ್ಯಮಗಳನ್ನು ಹಾಗೂ ಸಾಮಾನ್ಯ ಜನರನ್ನ ಕೆಇಆರ್‌ಸಿ ಮತ್ತು ಮೆಸ್ಕಾಂ ನ ನೀತಿಗಳಿಂದ ರಕ್ಷಿಸಿ ಸಮುದಾಯದ ಮತ್ತು ಆರ್ಥಿಕ ಅಭಿವೃದ್ಧಿಗೆ ಪೂರಕವಾದಂತಹ ವಾತಾವರಣ ನಿರ್ಮಾಣ ಮಾಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

**

ಈ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ. ವಿದ್ಯುತ್ ದರ ಏರಿಕೆಯಿಂದ ಕೈಗಾರಿಕೆಗಳು ಬಾಗಿಲು ಮುಚ್ಚುವ ಸ್ಥಿತಿ ಎದುರಾಗಿದೆ. ಸರ್ಕಾರ ಕೂಡಲೆ ಈ ಸಮಸ್ಯೆಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಸ್ತೆಗಿಳಿದು ಹೋರಾಟ ನಡೆಸಲಾಗುವುದು.

- ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಅಧ್ಯಕ್ಷ ಎನ್.ಗೋಪಿನಾಥ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT