ಶಿವಮೊಗ್ಗ: ಇಲ್ಲಿನ ಮಹಾನಗರ ಪಾಲಿಕೆ ಆಯೋಜಿಸಿದ್ದ ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಕರೆತಂದಿದ್ದ ಸಕ್ರೆಬೈಲಿನ ಆನೆ ನೇತ್ರಾವತಿ (27) ಸೋಮವಾರ ತಡರಾತ್ರಿ ಹೆಣ್ಣು ಮರಿಗೆ ಜನ್ಮನೀಡಿದೆ. ಈ ಹಿನ್ನೆಲೆಯಲ್ಲಿ ಇದರಿಂದ ದಸರಾ ಭಾಗವಾದ ಸಾಂಪ್ರದಾಯಿಕ ಜಂಬೂಸವಾರಿ ಮೆರವಣಿಗೆಯನ್ನು ರದ್ದುಪಡಿಸಲಾಯಿತು.
ದಸರಾ ಮೆರವಣಿಗೆಗೆ ಕರೆತಂದಿದ್ದ ಮೂರು ಆನೆಗಳನ್ನು ವಾಸವಿ ಶಾಲೆ ಆವರಣದಲ್ಲಿ ಬೀಡುಬಿಟ್ಟಿದ್ದವು. ಅಲ್ಲಿಯೇ ಮರಿಯ ಜನನವಾಗಿದೆ. ತಾಯಿ ಆನೆ ಮತ್ತು ಮರಿ ಆನೆ ಆರೋಗ್ಯವಾಗಿವೆ.
ವಿಷಯ ತಿಳಿದು ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ ಹಾಗೂ ವೈದ್ಯ ಡಾ.ವಿನಯ್ ಸ್ಥಳಕ್ಕೆ ಬಂದು ಪರಿಶೀಲಿಸಿ ನೇತ್ರಾವತಿಯನ್ನು ಮರಿಯೊಂದಿಗೆ ಲಾರಿಯಲ್ಲಿ ಸಕ್ರೆಬೈಲು ಬಿಡಾರಕ್ಕೆ ಕರೆದೊಯ್ಯಲು ವ್ಯವಸ್ಥೆ ಮಾಡಿದರು.
ಜಂಬೂ ಸವಾರಿ ರದ್ದು: ಅಂಬಾರಿ ಹೊರಲಿದ್ದ ‘ಸಾಗರ‘ ಆನೆಯ ಅಕ್ಕಪಕ್ಕ ಎರಡು ಆನೆಗಳು ಇಲ್ಲದ್ದರಿಂದ ಜಂಬೂಸವಾರಿ ರದ್ದುಗೊಳಿಸಿದ ಮಹಾನಗರ ಪಾಲಿಕೆ ಆಡಳಿತ, ಭುವನೇಶ್ವರಿ ಪುತ್ಥಳಿಯನ್ನು ವಾಹನದ ಮೂಲಕ ಮೆರವಣಿಗೆ ನಡೆಸಲು ನಿರ್ಧರಿಸಿತು. ಮೆರವಣಿಗೆಯಲ್ಲಿ ಸಾಗರ ಹಾಗೂ ಹೇಮಾವತಿ ಪಾಲ್ಗೊಂಡಿದ್ದವು.
ಮಾಹಿತಿ ಇರಲಿಲ್ಲ: ಜಂಬೂಸವಾರಿಗೆ ನೇತ್ರಾವತಿಯನ್ನು ಕರೆತಂದರೂ ಅದು ಗರ್ಭ ಧರಿಸಿರುವ ಮಾಹಿತಿ ಸಕ್ರೆಬೈಲು ಆನೆ ಬಿಡಾರದ ಮಾವುತ ಹಾಗೂ ವೈದ್ಯರಿಗೆ ಇರಲಿಲ್ಲ ಎಂಬುದು ಚರ್ಚೆಗೆ ಗ್ರಾಸವಾಗಿದೆ. ಗರ್ಭ ಧರಿಸಿದ್ದ ಆನೆಯನ್ನೇ ಕರೆತಂದು ತಾಲೀಮು ನಡೆಸಲಾಗಿದೆ ಎಂಬ ಆಕ್ರೋಶವೂ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ.
ಮೈಸೂರು ದಸರಾ ಜಂಬೂ ಸವಾರಿಗೆ ಆನೆಗಳ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಆಗ ಆರೋಗ್ಯ ಪರೀಕ್ಷೆ ನಡೆದಿದ್ದು, ನೇತ್ರಾವತಿ ಗರ್ಭಿಣಿ ಎಂಬುದು ಗೊತ್ತಾಗಿರಲಿಲ್ಲ. ಶಿವಮೊಗ್ಗ ದಸರಾ ಹಿನ್ನೆಲೆಯಲ್ಲಿ ನೇತ್ರಾವತಿಯನ್ನು ಮೈಸೂರಿಗೆ ಕಳುಹಿಸಿರಲಿಲ್ಲ ಎಂದು ಆನೆ ಬಿಡಾರದ ಸಿಬ್ಬಂದಿ ಹೇಳುತ್ತಾರೆ.
ನೇತ್ರಾವತಿ ಈಗ 5ನೇ ಬಾರಿಗೆ ಮರಿ ಹಾಕಿದೆ. ಇದರೊಂದಿಗೆ ಸಕ್ರೆಬೈಲಿನ ಬಿಡಾರದಲ್ಲಿ ಆನೆಗಳ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.