ಸೋಮವಾರ, ಜೂನ್ 21, 2021
23 °C

ಮುಚ್ಚಿ ಹೋಗಿರುವ ಕೆರೆಗಳಿಗೆ ಮತ್ತೆ ಪುನರ್‌ಜೀವ ನೀಡುವ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಮುಚ್ಚಿಹೋಗಿರುವ ಕೆರೆಗಳಿಗೆ ಮತ್ತೆ ಪುನರ್‌ಜೀವ ನೀಡುವ ಅಭಿಯಾನಕ್ಕೆ ಶಿವಮೊಗ್ಗದ ಪರಿಸರಾಸಕ್ತರು ಶುಕ್ರವಾರ ಚಾಲನೆ ನೀಡಿದರು. ಆ ಮೂಲಕ ಕೆರೆಗಳ ಸಂರಕ್ಷಣೆಯ ಕಹಳೆ ಮೊಳಗಿಸಿದರು.

ಮಲ್ಲಿಗೇನಹಳ್ಳಿ ವಾಜಪೇಯಿ ಬಡಾವಣೆಯ ಸರ್ವೇ ನಂಬರ್‌ 52ರ ಕ್ಯಾದಿಗೆಕಟ್ಟೆ ಕೆರೆ ಸಂಪೂರ್ಣ ಹೂಳು ತುಂಬಿಕೊಂಡಿತ್ತು. ಅಲ್ಲಿ ಕೆರೆ ಇರುವ ಸುಳಿವೇ ಇರಲಿಲ್ಲ. ಸುಮಾರು 8 ಎಕರೆ ವಿಸ್ತೀರ್ಣದ ಕೆರೆ 2 ಎಕರೆಗೆ ಸಂಕುಚಿತಗೊಂಡಿತ್ತು. ಈ ಕೆರೆಯ ಹೂಳೆತ್ತುವ ಕೆಲಸಕ್ಕೆ ಪರಿಸರಾಸಕ್ತರು ನಿರ್ಧರಿಸಿದ್ದು, ರಾಜ್ಯದಲ್ಲೇ ಮಾದರಿ ಕೆರೆಯಾಗಿಸಲು ನೀಲನಕ್ಷೆ ರೂಪಿಸಿದ್ದಾರೆ.

ಕೆರೆಯ ಹೂಳು ತೆಗೆದು ನೀರು ಸಂಗ್ರಹಣೆಗೆ ಅವಕಾಶ ನೀಡಿದೆ. ಕೆರೆಯ ಸುತ್ತಮುತ್ತ ಗಿಡ ಮರಗಳನ್ನು ಬೆಳೆಸುವುದು, ಸಾರ್ವಜನಿಕರ ವಾಯುವಿಹಾರಕ್ಕೂ ಅನುಕೂಲಕರ ವಾತಾವರಣ ನಿರ್ಮಿಸುವ ಕೆಲಸ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ವಾಜಪೇಯಿ ಬಡಾವಣೆಯಲ್ಲಿ ನಿರ್ಮಾಣವಾಗುವ ಎಲ್ಲಾ ಮನೆಗಳ ಮೇಲ್ಚಾವಣಿಯ ಮಳೆ ನೀರು ಪೈಪುಗಳ ಮೂಲಕ ನೇರವಾಗಿ ಕೆರೆ ಸೇರುವಂತೆ ಮಳೆ ನೀರು ಸಂಗ್ರಹದ ಗುರಿ ಹೊಂದಲಾಗಿದೆ. 

ಯೋಜನೆಯ ತಜ್ಞ ಯೇಸು ಪ್ರಕಾಶ್ ಮಾತನಾಡಿ, ‘ಕೆರೆಗಳು ಪರಿಸರದ ಜೀವಕೋಶಗಳು. ಅವುಗಳನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಕೆರೆಗೆ ಜೀವ ಕೊಡುವುದರ ಜತೆಗೆ ದೇಶದಲ್ಲೇ ಮಾದರಿ ಕೆರೆಯಾಗಿಸಲಾಗುವುದು. ಈಗಾಗಲೇ ಸುಮಾರು 6 ಕೆರೆಗಳಿಗೆ ಮರು ಜೀವ ನೀಡಿದ್ದೇವೆ’ ಎಂದರು.

ಪರಿಸರಾಸಕ್ತರ ತಂಡದ ಸದಸ್ಯ ಸತೀಶ್, ಕೆರೆಯ ಸುತ್ತಮುತ್ತ ಸ್ಥಳೀಯ ಸಸ್ಯ ಪ್ರಭೇದ ಬೆಳೆಸಲಾಗುವುದು. ಅತ್ಯಂತ ಕಡಿಮೆ ಜಾಗದಲ್ಲಿ ಹೆಚ್ಚು ಸಸಿ ಬೆಳೆಸುವುದು, ಪರಿಸರವನ್ನು ಉತ್ತಮವಾಗಿಸುವ ಸಸ್ಯಗಳನ್ನು ಆಯ್ಕೆ ಮಾಡಿಕೊಳ್ಳುವೆವು ಎಂದು ವಿವರ ನೀಡಿದರು.

ಕೆರೆಗೆ ಮರು ಜೀವ ನೀಡುವ ಮೂಲಕ 2 ಕೋಟಿ ಲೀಟರ್ ನೀರು ಸಂಗ್ರಹಿಸಲಾಗುವುದು. ಇದರಿಂದ ಸುತ್ತಲ ಕೊಳವೆಬಾವಿಗಳಲ್ಲಿ ಅಂತರ್ಜಲ ಹೆಚ್ಚಾಗುವುದು. ಪ್ರಾಣಿ, ಪಕ್ಷಿಗಳಿಗೆ ಬೇಸಿಗೆಯಲ್ಲೂ ನೀರು ದೊರಕುವುದು. ಮೋಹಕ ಹಸಿರು ತಾಣವಾಗುವುದು. ಬಡಾವಣೆಯ ತಾಪಮಾನ ಕಡಿಮೆಯಾಗುವುದು. ಸೌಂದರ್ಯ ವೃದ್ಧಿಸುವುದು ಎಂದು ಪ್ರೊ.ಬಿ.ಎಂ.ಕುಮಾರಸ್ವಾಮಿ ಹೇಳಿದರು.

ಪರಿಸರವಾದಿಗಳಾದ ಪ್ರೊ.ಚಂದ್ರಶೇಖರ್, ಕಾಟನ್ ಜಗದೀಶ್, ಶ್ರೀಧರ್, ಬಾಲಕೃಷ್ಣ ನಾಯ್ಡು, ಸತೀಶ್ ಕುಮಾರ್, ತ್ಯಾಗರಾಜ್, ಪ್ರಕಾಶ್, ಮೋಹನ್, ಉಮೇಶ್‌ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು