ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವಿ ಕಾಲೇಜುಗಳ ಪ್ರವೇಶಾತಿ ಹೆಚ್ಚಳ ನಿರೀಕ್ಷೆ

ಭದ್ರಾವತಿ: ದ್ವಿತೀಯ ಪಿಯು– ಶೇ 100ರಷ್ಟು ಫಲಿತಾಂಶ
Last Updated 3 ಆಗಸ್ಟ್ 2021, 4:10 IST
ಅಕ್ಷರ ಗಾತ್ರ

ಭದ್ರಾವತಿ: ಇಲ್ಲಿನ ಸರ್ಕಾರಿ ಪದವಿ ಕಾಲೇಜುಗಳು ವಿದ್ಯಾರ್ಥಿಗಳ ಪ್ರವೇಶಾತಿ ಕೊರತೆ ಎದುರಿಸುತ್ತಿದ್ದವು. ಆದರೆ, ಈ ಬಾರಿಯ ಪಿಯು ಫಲಿತಾಂಶ ಆ ಕೊರತೆಯನ್ನು ನೀಗಿಸುತ್ತಿದ್ದು, ಸದ್ಯ 400 ಪ್ರವೇಶಾತಿ ಅರ್ಜಿಗಳು ಖಾಲಿಯಾಗಿವೆ. ಈ ಬೆಳವಣಿಗೆ ಪ್ರವೇಶ ಹೆಚ್ಚಳದ ನಿರೀಕ್ಷೆ ಹುಟ್ಟಿಸಿದೆ.

ತಾಲ್ಲೂಕಿನ ಸರ್ಕಾರಿ ಪದವಿ ಕಾಲೇಜುಗಳು ಸುಸಜ್ಜಿತ ಕಟ್ಟಡ, ಮೂಲ ಸೌಲಭ್ಯ, ಲೈಬ್ರರಿ, ಲ್ಯಾಬ್ ಸೇರಿ ಉತ್ತಮ ಅಧ್ಯಾಪಕ ವೃಂದ ಹಾಗೂ ಸ್ನಾತಕೋತ್ತರ ಪದವಿ ಕಾಲೇಜು ಹೊಂದಿದ್ದರೂ ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿದ್ದವು. ಆದರೆ, ಈ ಬಾರಿ ಅದಕ್ಕೆ ಅಂತ್ಯ ಹಾಡುವ ಕಾಲ ಬಂದಿದೆ ಎನ್ನುವ ಅಧ್ಯಾಪಕರು ಇದಕ್ಕಾಗಿ ಸಿದ್ಧತೆ ಸಹ ನಡೆಸಿದ್ದಾರೆ.

‘ಕೊರೊನಾ ಸಂಕಷ್ಟ ಕಾಲದಲ್ಲಿ ಬೇರೆಡೆ ವಿದ್ಯಾರ್ಥಿಗಳನ್ನು ಕಳುಹಿಸಿ ಶಿಕ್ಷಣ ಕೊಡಿಸುವ ಇಚ್ಛೆಯಿಂದ ಬಹಳಷ್ಟು ಪೋಷಕರು ಹಿಂದೆ ಸರಿದಿದ್ದು, ಸರ್ಕಾರಿ ಪದವಿ ಕಾಲೇಜುಗಳಿಗೆ ಬೇಡಿಕೆ ಹೆಚ್ಚಲಿದೆ’ ಎನ್ನುತ್ತಾರೆ ಹೊಸಮನೆ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ.ಧನಂಜಯ.

‘ಪದವಿ ಪ್ರವೇಶಕ್ಕೆ ಅರ್ಜಿಗಳ ವಿತರಣೆ ಕಾರ್ಯ ನಡೆದಿದ್ದು, ಆನ್‌ಲೈನ್ ಮೂಲಕ ಸಲ್ಲಿಕೆಗೆ ಆ. 4ರಿಂದ ಅವಕಾಶ ಮಾಡಿಕೊಡಲಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ನಾಲ್ಕು ಕಾಲೇಜುಗಳು: ತಾಲ್ಲೂಕಿನಲ್ಲಿ ಒಟ್ಟು ನಾಲ್ಕು ಪದವಿ ಕಾಲೇಜುಗಳಿದ್ದು, ನಗರದಲ್ಲಿ ಬೊಮ್ಮನಕಟ್ಟೆ ವಿಜ್ಞಾನ ಕಾಲೇಜು, ನ್ಯೂಟೌನ್ ಭಾಗದಲ್ಲಿ ಸರ್‌ ಎಂ.ವಿ ಕಲಾ ಮತ್ತು ವಾಣಿಜ್ಯ ಕಾಲೇಜು, ಹೊಸಮನೆ ಸರ್ಕಾರಿ ಪದವಿ ಕಾಲೇಜು ಹಾಗೂ ಹೊಳೆಹೊನ್ನೂರಿನಲ್ಲಿ ಸರ್ಕಾರಿ ಪದವಿ ಕಾಲೇಜು ಇವೆ.

‘ವಿಜ್ಞಾನ ವಿಷಯ ಹೊಂದಿರುವ ಬೊಮ್ಮನಕಟ್ಟೆ ಕಾಲೇಜಿನಲ್ಲಿ ಒಟ್ಟು 270 ಮಂದಿಗೆ ಅವಕಾಶವಿದೆ. ಇಲ್ಲಿ ಪಿಸಿಎಂ, ಪಿಎಂಸಿಎಸ್, ಸಿಬಿಜೆಡ್, ಸಿಜಡ್‌ಎಂಬಿ, ಬಿಸಿಬಿಟಿ, ಬಿಸಿಎ ಐಚ್ಛಿಕವಿದೆ’ ಎನ್ನುತ್ತಾರೆ ಪ್ರಾಂಶುಪಾಲ ಡಾ.ವಿಷ್ಣುಮೂರ್ತಿ.

‘ಈ ಬಾರಿ ಹೆಚ್ಚುವರಿಯಾಗಿ ಪ್ರವೇಶ ನೀಡುವ ಸಂಬಂಧ ಕಾಲೇಜು ಶಿಕ್ಷಣ ಇಲಾಖೆ ಒಪ್ಪಿಗೆ ಸೂಚಿಸಿದೆ. ಈ ಅವಕಾಶವನ್ನು ವಿದ್ಯಾರ್ಥಿಗಳಿಗೆ ಒದಗಿಸುವ ನಿಟ್ಟಿನಲ್ಲಿ ನಾವು ಸಿದ್ಧರಿದ್ದೇವೆ. ಇದರ ಸದುಪಯೋಗಕ್ಕೆ ವಿದ್ಯಾರ್ಥಿಗಳು ಮುಂದಾಗಬೇಕು’ ಎಂದು ಪತ್ರಿಕೆಗೆ ಪ್ರತಿಕ್ರಿಯಿಸಿದರು.

‘ಕಾಲೇಜಿನಲ್ಲಿ ಪದವಿ ಜತೆಗೆ ಮೂರು ಸ್ನಾತಕೋತ್ತರ ಪದವಿ ತರಗತಿಗಳು ಇದ್ದು, ಉನ್ನತ ಶ್ರೇಣಿ ಅಧ್ಯಾಪಕರು, ಸುಸಜ್ಜಿತ ಲ್ಯಾಬ್ ನಮ್ಮಲ್ಲಿದೆ. ಇಲ್ಲಿನ ವಿದ್ಯಾರ್ಥಿಗಳು ಶಿವಮೊಗ್ಗಕ್ಕೆ ಹೋಗುವ ಬದಲು ಇಲ್ಲಿಯ ಸೌಲಭ್ಯ ಪಡೆಯಲು ಮುಂದಾಗಬೇಕು’ ಎಂದರು.

ಕಲಾ ವಿಭಾಗದಲ್ಲಿ ಹೆಚ್ಚು ಅವಕಾಶ: ‘ಹೊಸಮನೆ ಸರ್ಕಾರಿ ಪದವಿ ಕಾಲೇಜಿನಲ್ಲಿ ಎಚ್ಇಪಿ, ಎಚ್ಇಎಸ್, ಎಚ್ಎಸ್‌ಕೆ ವಿಷಯಗಳಿದ್ದು, ಒಟ್ಟು 240 ವಿದ್ಯಾರ್ಥಿಗಳಿಗೆ ಅವಕಾಶವಿದೆ. ಬಿ.ಕಾಂ ವಿಭಾಗದಲ್ಲಿ 60 ಮಂದಿಗೆ ಅವಕಾಶವಿದ್ದು, ಇನ್ನೂ 30 ಮಂದಿಗೆ ಹೆಚ್ಚು ಮಾಡುವ ಪ್ರಸ್ತಾವವನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ’ ಎಂದು ಪ್ರಾಂಶುಪಾಲ ಡಾ.ಬಿ.ಜಿ.ಧನಂಜಯ ತಿಳಿಸಿದರು.

ಸರ್‌ ಎಂ.ವಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕಲಾ ವಿಷಯಕ್ಕೆ 400 ವಿದ್ಯಾರ್ಥಿಗಳ ಪ್ರವೇಶಾತಿಗೆ ಅವಕಾಶ ಇದ್ದು, ಅಲ್ಲಿ ಆಂಗ್ಲ ಹಾಗೂ ಕನ್ನಡ ಐಚ್ಛಿಕ ವಿಷಯದ ಅಧಯನಕ್ಕೆ ಅವಕಾಶವಿದೆ. ಬಿ.ಕಾಂ, ಬಿಬಿಎ ಪದವಿಗೆ ತಲಾ 180 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿದೆ.

ಹೊಳೆಹೊನ್ನೂರು ಸರ್ಕಾರಿ ಪದವಿ ಕಾಲೇಜಿನಲ್ಲಿ ಒಟ್ಟು 240 ವಿದ್ಯಾರ್ಥಿಗಳಿಗೆ ಅವಕಾಶವಿದೆ. ಅದರಲ್ಲಿ ಬಿಎ, ಪದವಿ ಹಾಗೂ ಬಿ.ಕಾಂ, ಬಿಬಿಎ ಪದವಿಗೂ ಅವಕಾಶವಿದ್ದು, ಸದ್ಯಕ್ಕೆ ಈ ಎಲ್ಲ ಸರ್ಕಾರಿ ಕಾಲೇಜುಗಳಿಂದ ಈವರೆಗೆ ಸುಮಾರು 400 ವಿದ್ಯಾರ್ಥಿಗಳು ಅರ್ಜಿ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT