ಬುಧವಾರ, ಜನವರಿ 26, 2022
26 °C

ಕೃಷಿ ಕಾಯ್ದೆ ವಾಪಸ್‌: ಸದನದಲ್ಲಿ ಅಂಗೀಕರಿಸುವವರೆಗೂ ಹೋರಾಟ- ರಾಜಪ್ಪ ಮಾಸ್ತರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೊರಬ: ಕೇಂದ್ರದ ಮೂರು ವಿವಾದಿತ ಕೃಷಿ ಕಾನೂನುಗಳನ್ನು ವಾಪಸ್‌ ಪಡೆಯುವುದಾಗಿ ಪ್ರಧಾನಿ ಘೋಷಿಸಿದ್ದರೂ ಸದನದಲ್ಲಿ ತೀರ್ಮಾನ ಕೈಗೊಂಡು ಸರ್ಕಾರ ಆದೇಶ ಹೊರಡಿಸುವವರೆಗೂ ಚಳವಳಿ ಮುಂದುವರಿಯುತ್ತದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಾಜಪ್ಪ ಮಾಸ್ತರ್ ಹೇಳಿದರು.

ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಮೂವ್‌ಮೆಂಟ್ ಫಾರ್ ಜಸ್ಟೀಸ್, ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ರೈತರ ನಿರಂತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆದಿರುವುದು ರೈತರ ಹೋರಾಟಕ್ಕೆ ಜಯ ದೊರೆತಂತಾಗಿದೆ. ಪ್ರಧಾನಿ ಸಂಸತ್‌ನಲ್ಲಿಯೇ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ರಾಜ್ಯ ಸರ್ಕಾರವೂ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುವವರೆಗೂ ಚಳವಳಿ ನಿರಂತರವಾಗಿರುತ್ತದೆ ಎಂದರು.

ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಎನ್.ಕೆ. ಮಂಜುನಾಥ ಗೌಡ ಮಾತನಾಡಿ, ‘ಕರಾಳ ಕಾಯ್ದೆಗಳ ವಿರುದ್ಧ ಪ್ರಜಾಸತ್ತಾತ್ಮಕವಾಗಿ ಪ್ರತಿರೋಧ ತೋರಿದ ಎಲ್ಲಾ ರೈತರಿಗೆ ನಮನಗಳನ್ನು ಸಲ್ಲಿಸುತ್ತೇನೆ. ಹೋರಾಟದಲ್ಲಿ ಸುಮಾರು 700 ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಮೃತಪಟ್ಟ ರೈತರ ಕುಟುಂಬಗಳಿಗೆ ಕೇಂದ್ರ ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ಘೋಷಿಸಬೇಕು’ ಎಂದು ಆಗ್ರಹಿಸಿದರು.

‘ಅಕಾಲಿಕ ಮಳೆಯಿಂದ ಹಾನಿಯಾಗಿರುವ ಬೆಳೆಗಳ ಸಮೀಕ್ಷೆ ನಡೆಸಿ, ತಕ್ಷಣವೇ ಸೂಕ್ತ ಪರಿಹಾರ ಘೋಷಿಸಬೇಕು’ ಎಂದು ಒತ್ತಾಯಿಸಿದರು.

ನಂತರ ತಹಶೀಲ್ದಾರ್ ಶಿವಾನಂದ ರಾಣೆ ಅವರ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ರೈತ ಸಂಘದ ತಾಲ್ಲೂಕು ಅಧ್ಯಕ್ಷ ಈಶ್ವರಪ್ಪ ಕೊಡಕಣಿ, ಮೂವ್‌ಮೆಂಟ್ ಫಾರ್ ಜಸ್ಟೀಸ್ ಅಧ್ಯಕ್ಷ ಎಂ.ಸಲೀಂ, ಮೇಘರಾಜ ಬೆಟ್ಟದಕೂರ್ಲಿ, ಮಂಜುನಾಥ ಆರೇಕೊಪ್ಪ, ನಾಗರಾಜ ಬೆಣಗೇರಿ, ಪರಮೇಶ್ವರ ಬೆಣಗೇರಿ, ಚಂದ್ರಗೌಡ ಗಿಣಿವಾಲ, ಚಂದ್ರಪ್ಪ ಬೆಣಗೇರಿ, ಶಿವಕುಮಾರ್ ಕಮನವಳ್ಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು