ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರನ್ನು ಕೆಣಕಿದರೆ ಬೀದಿಗಿಳಿಯುತ್ತೇವೆ

ಅರಣ್ಯ ಕಾನೂನು ಹೆಸರಲ್ಲಿ ಕಿರುಕುಳ ಸಲ್ಲ: ನೆಂಪೆ ದೇವರಾಜ್
Last Updated 6 ಸೆಪ್ಟೆಂಬರ್ 2022, 5:18 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ‘ಗಡಿ ಕಾಲುವೆಯಿಂದ ಮಳೆ ನೀರು ಸಾಗುವಳಿ ಜಮೀನಿಗೆ ನುಗ್ಗಿ ಅಪಾರ ಹಾನಿ ಉಂಟಾಗಿದೆ. ಅರಣ್ಯ ಇಲಾಖೆ ನಷ್ಟದ ಹೊಣೆ ಹೊತ್ತು ರೈತರಿಗೆ ಸೂಕ್ತ ಪರಿಹಾರ ಧನ ನೀಡಬೇಕು. ಇಲ್ಲದಿದ್ದರೆ ಸಾಕು ಪ್ರಾಣಿಗಳೊಂದಿಗೆ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕುತ್ತೇವೆ’ ಎಂದು ಮಲೆನಾಡು ಸಂಘರ್ಷ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ನೆಂಪೆ ದೇವರಾಜ್ ಎಚ್ಚರಿಸಿದರು.

ತಾಲ್ಲೂಕು ಕಚೇರಿ ಮುಂಭಾಗ ದೇಮ್ಲಾಪುರ, ಹುಂಚದಕಟ್ಟೆ ಗ್ರಾಮಸ್ಥರು ಅರಸಾಳು ವಲಯಾರಣ್ಯ ವಿಭಾಗ ಗಡಿ ಕಾಲುವೆ ನಿರ್ಮಿಸಿದ ಪರಿಣಾಮ ರೈತರ ಸಾಗುವಳಿ ಪ್ರದೇಶಕ್ಕೆ ಮಳೆ ನೀರು ಹರಿಯುತ್ತಿದೆ ಎಂದು ಆರೋಪಿಸಿ ಸೋಮವಾರ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಆಲೂರು, ಹೊಸಕೊಪ್ಪ, ಕಾರಕೋಡ್ಲು, ದೇಮ್ಲಾಪುರ ಸೇರಿ ಅನೇಕ ಗ್ರಾಮಗಳಲ್ಲಿ ಅರಣ್ಯ ಇಲಾಖೆ ಮಾರ್ಚ್ ತಿಂಗಳಲ್ಲಿ ಗಡಿಕಾಲುವೆ ನಿರ್ಮಿಸಿದೆ. ಅರಣ್ಯ ಸಂರಕ್ಷಣೆ ಕಾನೂನು ಹಳ್ಳಿಗರ ಜೀವನಕ್ಕೆ ಮಾರಕವಾಗಿದ್ದು, ತಿದ್ದುಪಡಿ ಕುರಿತು ಕೇಂದ್ರ, ರಾಜ್ಯ ಸರ್ಕಾರ ಗಂಭೀರವಾಗಿ ಯೋಚಿಸಬೇಕು. ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಕಾಟ ಹಳ್ಳಿಯಲ್ಲಿ ಹೆಚ್ಚಾಗಿದೆ. ಹಳ್ಳಿಗರು ಬೀದಿಗಿಳಿದರೆ ಅದರ ಪರಿಣಾಮವನ್ನು ಸರ್ಕಾರಎದುರಿಸಬೇಕಾಗುತ್ತದೆ’ ಎಂದರು.

‘ರೈತರಿಗೆ ಕಿರುಕುಳ ನೀಡದಂತೆ ಹಲವು ಬಾರಿ ಮನವಿ ಮಾಡಿದರೂ ಅರಣ್ಯ ಇಲಾಖೆ ಸ್ಪಂದಿಸುತ್ತಿಲ್ಲ. ಕಾನೂನು ಹೆಸರಲ್ಲಿ ಅರಣ್ಯ ಇಲಾಖೆ ಕೆಟ್ಟ ವರ್ತನೆ ತೋರಿದರೆ ರೈತರು ಸುಮ್ಮನಿರಲಾರರು. ನೆಡುತೋಪು, ಕಾಲುವೆ ಕಾಮಗಾರಿ ಹೆಸರಲ್ಲಿ ಲಕ್ಷಾಂತರ ರೂಪಾಯಿ ಅಕ್ರಮ ನಡೆದಿದ್ದು, ಸರ್ಕಾರ ತನಿಖೆ ನಡೆಸಬೇಕು. ರೈತರಿಗೆ ಆಗುತ್ತಿರುವ ಅನ್ಯಾಯ ತಡೆಯಬೇಕು’ ಎಂದು ಮಲೆನಾಡು ಸಂಘರ್ಷ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಹೊಸಕೊಪ್ಪ ಸುಂದರೇಶ್ ಆಗ್ರಹಿಸಿದರು.

ಹೋರಾಟ ಸಮಿತಿ ಮುಖಂಡರಾದ ಹೊಸಕೊಪ್ಪ ಚೇತನ್ ಮಾತನಾಡಿದರು. ಜಿ.ಎನ್. ಪ್ರಕಾಶ್, ಕೊರೋಡಿ ಕೃಷ್ಣಪ್ಪ ಇದ್ದರು.

‘ಅರಣ್ಯ ಬೆಳೆಸಿರುವುದು ರೈತರು; ಇಲಾಖೆಯಲ್ಲ’
ಹಳ್ಳಿಯಲ್ಲಿ ಪಾರಂಪರಿಕ ಅರಣ್ಯ ಬೆಳೆಸಿರುವುದು ರೈತರೇ ಹೊರತು ಇಲಾಖೆಯಲ್ಲ. ಕಾಡು ನಾಶಕ್ಕೆ ಅರಣ್ಯ ಇಲಾಖೆಯ ಕಾರ್ಯಕ್ರಮಗಳೇ ಕಾರಣ. ರೈತರ ಸಮಸ್ಯೆಯನ್ನು ಪರಿಹಾರ ಮಾಡಲಾಗದಷ್ಟು ಸರ್ಕಾರ ಆಯೋಗ್ಯತನ ಮೆರೆಯಬಾರದು. ಅನ್ನಕೊಡುವ ರೈತರಿಗೆ ಅನ್ಯಾಯ ಮಾಡಿದರೆ ಬುದ್ಧಿ ಕಲಿಸಲು ಗೊತ್ತಿದೆ.
– ಶಿವಾನಂದ ಕರ್ಕಿ, ಹೋರಾಟ ಸಮಿತಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT