ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೋಷಕಾಂಶ ಕೊರತೆ ನೀಗಿಸಲು ಸಾರವರ್ಧಿತ ಅಕ್ಕಿ: ಭಗವಾನ್ ಸಿಂಗ್

ಎಫ್‌ಸಿಐನಿಂದ ಪ್ರಾಯೋಗಿಕವಾಗಿ ಶಿವಮೊಗ್ಗ, ದಾವಣಗೆರೆ, ಉತ್ತರಕನ್ನಡದಲ್ಲಿ ವಿತರಣೆ
Published : 22 ಜುಲೈ 2022, 5:21 IST
ಫಾಲೋ ಮಾಡಿ
Comments

ಶಿವಮೊಗ್ಗ: ‘ಆಹಾರದ ಭದ್ರತೆ ಜೊತೆಗೆ ಪೋಷಕಾಂಶಗಳ ಖಾತರಿ ನೀಡಲು ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ಸಾರವರ್ಧಿತ ಅಕ್ಕಿ ವಿತರಣೆ ಮಾಡಲು ಕ್ರಮ ಕೈಗೊಂಡಿದ್ದೇವೆ’ ಎಂದು ಭಾರತ ಆಹಾರ ನಿಗಮ (ಎಫ್‌ಸಿಐ) ಶಿವಮೊಗ್ಗ ವಿಭಾಗದ ವ್ಯವಸ್ಥಾಪಕ ಭಗವಾನ್ ಸಿಂಗ್ ತಿಳಿಸಿದರು.

‘ದೇಶದಲ್ಲಿ ಬಹಳಷ್ಟು ಜನ ಪೋಷಕಾಂಶದ ಕೊರತೆಯಿಂದ ಬಳಲುತ್ತಿರುವುದನ್ನು ಮನಗಂಡು ಕೇಂದ್ರ ಸರ್ಕಾರ ಸಾರವರ್ಧಿತ ಅಕ್ಕಿಯನ್ನು ಪಡಿತರ ವ್ಯವಸ್ಥೆ ಮತ್ತು ಮಧ್ಯಾಹ್ನದ ಬಿಸಿಯೂಟದಲ್ಲಿ ನೀಡಲು ಮುಂದಾಗಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮಹಿಳೆಯರು, ಮಕ್ಕಳು ಸೇರಿ ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿರುವ ಎಲ್ಲರಿಗೂ ಇದರಿಂದ ಅನುಕೂಲವಾಗಲಿದೆ. ಆರಂಭದಲ್ಲಿ ಅತಿ ಹೆಚ್ಚು ಪೋಷಕಾಂಶದ ಕೊರತೆ ಇರುವ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಸಾರವರ್ಧಿತ ಅಕ್ಕಿ ಪೂರೈಕೆಯಾಗಲಿದೆ. 2024ರ ಹೊತ್ತಿಗೆ ದೇಶದಾದ್ಯಂತ ಪೂರೈಕೆಯಾಗಲಿದೆ’ ಎಂದರು.

‘ದೇಶದಲ್ಲಿ ಶೇ 70ರಷ್ಟು ಜನರು ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿದ್ದಾರೆ. ಇದನ್ನು ನೀಗಿಸಲು ಜನರು ತಮ್ಮ ಮುಖ್ಯ ಆಹಾರವಾಗಿ ಹೆಚ್ಚಾಗಿ ಬಳಸುವ ಅಕ್ಕಿಯನ್ನು ಸಾರವರ್ಧಿತವಾಗಿಸಲು ಸರ್ಕಾರ ಕ್ರಮ ಕೈಗೊಂಡಿದೆ’ ಎಂದುವಿಭಾಗೀಯ ಕಚೇರಿಯ ಗುಣಮಟ್ಟ ನಿಯಂತ್ರಣದ ವ್ಯವಸ್ಥಾಪಕ ಶಿವಕುಮಾರ್ ಹೇಳಿದರು.

ಸಾರವರ್ಧಿತ ಅಕ್ಕಿಯಲ್ಲಿ ಅವಶ್ಯಕ ವಿಟಮಿನ್, ಮಿನರಲ್ ಮತ್ತು ಇತರೆ ಪೋಷಕಾಂಶಗಳು ಇರಲಿವೆ. ಈ ಪೋಷಕಾಂಶಗಳನ್ನು ಮಿಶ್ರಣ ಮಾಡಿ ಯಂತ್ರದ ಮೂಲಕ ಎಫ್‍ಆರ್‌ಕೆ (ಫಾರ್ಟಿಫೈಡ್ ರೈಸ್ ಕರ್ನಲ್ಸ್) ಅಕ್ಕಿ ತಯಾರಿಸಲಾಗುತ್ತದೆ. ಇದನ್ನು ಪಡಿತರದಲ್ಲಿ ನೀಡುವ ಅಕ್ಕಿಯೊಂದಿಗೆ ಮಿಶ್ರಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ನ್ಯಾಯಬೆಲೆ ಅಂಗಡಿಗಳಲ್ಲಿ ಮೇ ತಿಂಗಳಿಂದ ಜುಲೈವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ 18,316 ಮೆಟ್ರಿಕ್ ಟನ್, ದಾವಣಗೆರೆಯಲ್ಲಿ 5,500 ಮೆಟ್ರಿಕ್ ಟನ್ ಮತ್ತು ಉತ್ತರ ಕನ್ನಡದಲ್ಲಿ 8,026 ಮೆಟ್ರಿಕ್ ಟನ್ ಸಾರವರ್ಧಿತ ಅಕ್ಕಿ ವಿತರಿಸಲಾಗಿದೆ. ಮಧ್ಯಾಹ್ನದ ಬಿಸಿಯೂಟಕ್ಕೆ ಕಳೆದ ವರ್ಷ ಆಗಸ್ಟ್‌ನಿಂದ ಇಲ್ಲಿಯವರೆಗೆ ಶಿವಮೊಗ್ಗದಲ್ಲಿ 3,577 ಮೆಟ್ರಿಕ್ ಟನ್, ದಾವಣಗೆರೆಯಲ್ಲಿ 3,532 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 1,494 ಮೆಟ್ರಿಕ್ ಟನ್ ಸಾರವರ್ಧಿತ ಅಕ್ಕಿ ನೀಡಲಾಗಿದೆ. ಶಿವಮೊಗ್ಗ ವ್ಯಾಪ್ತಿಗೊಳಪಡುವ 8 ಕಂದಾಯ ಜಿಲ್ಲೆಗಳಿಗೆ ಇದುವರೆಗೆ 23,183 ಮೆಟ್ರಿಕ್ ಟನ್ ಸಾರವರ್ಧಿತ ಅಕ್ಕಿ ವಿತರಿಸಲಾಗಿದೆ ಎಂದು ತಿಳಿಸಿದರು.

ಕೇಂದ್ರದ ಮಾಹಿತಿ ಸಚಿವಾಲಯದ ಅಧಿಕಾರಿ ಅಕ್ಷತಾ ಹಾಜರಿದ್ದರು.

***

ಪ್ಲಾಸ್ಟಿಕ್ ಅಕ್ಕಿ ಎಂಬ ಗೊಂದಲಬೇಡ
‘ಸಾರವರ್ಧಿತ ಅಕ್ಕಿಯನ್ನು ಸುಲಭವಾಗಿ ಗುರುತಿಸಲು ಅಕ್ಕಿಚೀಲದ ಮೇಲೆ +ಎಫ್ ಎಂಬ ನೀಲಿ ಬಣ್ಣದ ಚಿಹ್ನೆ ಇರುತ್ತದೆ. ಈ ಅಕ್ಕಿಯನ್ನು ಎನ್‍ಎಬಿಎಲ್ ಮಾನ್ಯತೆ, ಎಫ್‍ಎಸ್‍ಎಸ್‍ಎಐ ಪರವಾನಗಿ ಸೇರಿದಂತೆ ಎಲ್ಲ ನಿಯಮಾವಳಿ ಅನುಸರಿಸಿ ತಯಾರಿಸಲಾಗಿರುತ್ತದೆ. ಈ ಅಕ್ಕಿಯ ಸೇವನೆಯಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಇರುವುದಿಲ್ಲ. ಅನೇಕರು ಇದು ಪ್ಲಾಸ್ಟಿಕ್ ಅಕ್ಕಿ ಎಂದು ಗೊಂದಲಕ್ಕೀಡಾಗಿದ್ದೂ ಇದೆ. ಆದರೆ, ಇದು ಸಾರವರ್ಧಿತ ಅಕ್ಕಿಯಾಗಿದ್ದು, ಎಲ್ಲರೂ ಇದರ ಪ್ರಯೋಜನ ಪಡೆಯಬೇಕು’ ಎಂದು ಗುಣಮಟ್ಟ ನಿಯಂತ್ರಣ ವಿಭಾಗದ ವ್ಯವಸ್ಥಾಪಕ ಶಿವಕುಮಾರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT