ಶನಿವಾರ, ಅಕ್ಟೋಬರ್ 1, 2022
20 °C

ಆಗ ದೇಶದ ಪರ ಘೋಷಣೆ ಕೂಗಿದರೂ ತಪ್ಪು: ಸ್ವಾತಂತ್ರ್ಯ ಹೋರಾಟಗಾರ ಡಿ.ಗುಡ್ಡಪ್ಪ

ರವಿ.ಆರ್.ತಿಮ್ಮಾಪುರ Updated:

ಅಕ್ಷರ ಗಾತ್ರ : | |

Prajavani

ಆನವಟ್ಟಿ: ‘ಸವದತ್ತಿಯ ಕೆ.ಕೆ.ನಾಯ್ಕ ಅವರ ನಾಯಕತ್ವ, ಸ್ಥಳೀಯವಾಗಿ ಅಗಸನಹಳ್ಳಿಯ ದಿವಗಂತ ಶಂಕರಪ್ಪ ಅವರ ಮುಖಂಡತ್ವದಲ್ಲಿ, ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸುತ್ತಿದ್ದೆವು. ಬೆಳಗಾಗುತ್ತಲ್ಲೇ ದೇಶದ ಪರ ಜಯಘೋಷಗಳನ್ನು ಶುರು ಮಾಡುತ್ತಿದ್ದೆವು. 1944ರ ಹೊತ್ತಿನಲ್ಲಿ ಮನೆಯಿಂದ ಹೊರಗೆ ಯಾರೂ ಬರುವಂತಿರಲಿಲ್ಲ. ನಾಲ್ಕು ಜನ ಕೂಡಿ ಮಾತನಾಡುವ ಹಾಗೆ ಇರಲಿಲ್ಲ. ಕಟ್ಟುನಿಟ್ಟಿನ ನಿರ್ಬಂಧ ಬ್ರಿಟಿಷ್ ಸರ್ಕಾರ ವಿಧಿಸಿತ್ತು’ ಎಂದು ಸ್ವಾತಂತ್ರ್ಯ ಹೋರಾಟಗಾರ ಅಗಸನಹಳ್ಳಿಯ ಡಿ.ಗುಡ್ಡಪ್ಪ ಸ್ಮರಿಸುತ್ತಾರೆ.

94 ವರ್ಷ ವಯಸ್ಸಿನ ಗುಡ್ದಪ್ಪ ಈಗ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟದ ದಿನಗಳನ್ನು ನೆನಪಿಸಿದರೆ ಉತ್ಸಾಹಗೊಳ್ಳುತ್ತಾರೆ. ನೆನಪುಗಳ ಸುರುಳಿ ಬಿಚ್ಚಿಡುತ್ತಾರೆ. ಬುಧವಾರ ತಮ್ಮ ಮನೆಯಲ್ಲಿ ‘ಪ್ರಜಾವಾಣಿ’ಯೊಂದಿಗೆ ತಮ್ಮ ಹೋರಾಟದ ದಿನಗಳ ಮಾಹಿತಿಯನ್ನು ಹಂಚಿಕೊಂಡರು.

1ರಿಂದ 4ನೇ ತರಗತಿವರೆಗೆ ಅಗಸನಹಳ್ಳಿ ದೇವಸ್ಥಾನದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಗುಡ್ಡಪ್ಪ, ಆನವಟ್ಟಿಯ ಅರಳಿಕಟ್ಟೆ ಶಾಲೆಯಲ್ಲಿ 6ನೇ ತರಗತಿ ಪಾಸಾಗಿ, 13ನೇ ವಯಸ್ಸಿನಲ್ಲೇ ಕೆ.ಕೆ.ನಾಯ್ಕ ಅವರ ಜೊತೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡರು.

ಈ ವೇಳೆ ಸಾಗರ ಜೈಲಿನಲ್ಲಿ ಎರಡು ದಿನಗಳ ಕಾಲ ಸೆರೆವಾಸ ಕೂಡ ಅನುಭವಿಸಿದ್ದಾರೆ. ಮುಂದೆ ಸವದತ್ತಿಯಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲೂ ಭಾಗವಹಿಸಿದ್ದಾರೆ. ರಾಜ್ಯದ ಚಳವಳಿಕಾರರು ದೆಹಲಿಯತ್ತ ತೆರಳಿದಾಗ ಗುಡ್ಡಪ್ಪ ಕೂಡ ಹೊರಟು ನಿಲ್ಲುತ್ತಾರೆ. ಹೋಗದಂತೆ ಮನೆಯವರು ಒತ್ತಡ ಹೇರಿದರೂ ಲೆಕ್ಕಿಸದೆ ಬೆಂಗಳೂರಿನ ರಾಮಕೃಷ್ಣ ಲಾಡ್ಜ್‌ನಲ್ಲಿ ತಂಗಿದ್ದರು. ಇನ್ನೂ ಕಿರಿಯರಿದ್ದ ಕಾರಣ ಜೊತೆಗಿದ್ದವರು ಮನವೊಲಿಸಿ ಮನೆಗೆ ವಾಪಸ್ ಕಳುಹಿಸಿದ್ದರು.

ಏಸೂರು ಬಿಟ್ಟರು ಈಸೂರು ಬಿಡಲ್ಲ: ಹೋರಾಟದ ಮುಖಂಡತ್ವ ವಹಿಸಿದವರನ್ನು ಪೊಲೀಸರು ಬಹಳ ಹಿಂಸಿಸುತ್ತಿದ್ದರು. ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನ ಮೈಲಾರಪ್ಪ ಅವರನ್ನು ಹೋರಾಟ ಸಂದರ್ಭದಲ್ಲಿ ಪೊಲೀಸರು ಗುಂಡು ಹಾರಿಸಿ ಕೊಂದ ಘಟನೆ ನೆನೆದು ಗುಡ್ಡಪ್ಪ ಕಣ್ಣಾಲಿಗಳು  ನೆನೆದವು.

ಹೋರಾಟದ ಸಂದರ್ಭದಲ್ಲಿ ಎಲ್ಲರೂ ಪೊಲೀಸರಿಗೆ ಹೆದರುತ್ತಿದ್ದರು. ಸಂಘಟನೆ ಅಷ್ಟೊಂದು ಬಲವಾಗಿ ಬೆಳೆದಿರಲಿಲ್ಲ. ಶಿಕಾರಿಪುರ ತಾಲ್ಲೂಕಿನ ಈಸೂರಿನಲ್ಲಿ ಸಂಘಟನೆ ಬಿಗಿಯಾಗಿತ್ತು. ಪೊಲೀಸರಿಗೆ ಹೆದರಲಿಲ್ಲ, ಬದಲಾಗಿ, ಪೊಲೀಸರೇ ಈಸೂರಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಬೆದರಿದರು. ‘ಏಸೂರು ಬಿಟ್ಟರೂ ಈಸೂರು ಬಿಡೊಲ್ಲ’ ಎಂದು ಘೋಷಣೆ ಕೂಗಿದರು.

ಈಗ ಸರ್ಕಾರ ಶ್ರೀಗಂಧ ಕಡಿಯಲು ವಿಧಿಸಿರುವ ನಿರ್ಬಂಧವನ್ನು ಈಚಲು ಮರ ಕಡಿಯುವುದಕ್ಕೂ ಹೇರಿತ್ತು. ಹೆಂಡಕ್ಕಾಗಿ ಕೆಲವರು ಈಚಲು ಮರ ಕತ್ತರಿಸುತ್ತಿದ್ದರು. ಬ್ರಿಟಿಷ್‌ ಸರ್ಕಾರ ಅದನ್ನು ಆದಾಯವಾಗಿ ಬಳಸಿಕೊಳ್ಳಲು ಈಚಲು ಮರ ಅಷ್ಟೇ ಅಲ್ಲದೆ, ಅದರ ಎಲೆಗಳನ್ನು ಕತ್ತರಿಸುವಂತಿಲ್ಲ ಎಂದು ಫರ್ಮಾನು ಹೊರಡಿಸಿತ್ತು. ಆಗ ಹೋರಾಟ ಸಂಘಟಿಸಿದ್ದನ್ನು ಗುಡ್ಡಪ್ಪ ನೆನಪಿಸಿಕೊಳ್ಳುತ್ತಾರೆ.

ಗುಡ್ಡಪ್ಪ ಅವರ ಕಿವಿ ಈಗ ಮಂದವಾಗಿ ಕೇಳುತ್ತದೆ. ದೃಷ್ಟಿ ಚನ್ನಾಗಿದೆ. ಕಾಯಿಲೆಯಿಂದಾಗಿ ಕಾಲು ಕಳೆದುಕೊಂಡಿದ್ದು, ಕುಟುಂಬದವರು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಇಳಿ ವಯಸ್ಸಿನಲ್ಲೂ ದಿನಪತ್ರಿಕೆ ಓದುವ ಹವ್ಯಾಸ ಇರಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು