ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೈಲ ಬೆಲೆ ಏರಿಕೆ | ಜನರಿಗೆ ಆರ್ಥಿಕ ಹೊರೆ: ಸಂಸದ ಬಿ.ವೈ. ರಾಘವೇಂದ್ರ

ಸರ್ಕಾರದಿಂದ ಜನರ ಮೇಲೆ ಸೇಡಿನ ರಾಜಕಾರಣ: ಸಂಸದ ರಾಘವೇಂದ್ರ ಆರೋಪ
Published 16 ಜೂನ್ 2024, 16:23 IST
Last Updated 16 ಜೂನ್ 2024, 16:23 IST
ಅಕ್ಷರ ಗಾತ್ರ

ಶಿವಮೊಗ್ಗ: ಲೋಕಸಭೆ ಚುನಾವಣೆಯಲ್ಲಿ 20ಕ್ಕಿಂತಲೂ ಹೆಚ್ಚು ಸೀಟುಗಳಲ್ಲಿ ಗೆಲ್ಲುವ ನಿರೀಕ್ಷೆ ಹೊಂದಿದ್ದ ಕಾಂಗ್ರೆಸ್ಸಿಗೆ ಕೇವಲ 9 ಸ್ಥಾನಗಳು ಲಭಿಸಿದ್ದರಿಂದ ತೈಲ ಬೆಲೆ ಏರಿಕೆ ಮಾಡುವ ಮೂಲಕ ಜನರ ಮೇಲೆ ಆರ್ಥಿಕ ಹೊರೆ ಹೊರಿಸಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ದೂರಿದರು. 

‘ಜನರ ಬಗ್ಗೆ ಹಗುರ ಮಾತು, ಅವಹೇಳನಕಾರಿ ಹೇಳಿಕೆ ಮತ್ತು ಸರ್ಕಾರದ ಯೋಜನೆಗಳನ್ನು ತಮ್ಮ ಕೈಯಿಂದಲೇ ಕೊಟ್ಟಿದ್ದೇವೆ ಎಂಬಂತೆ ಅಹಂಕಾರದಿಂದ ಮಾತನಾಡುತ್ತಿದ್ದ ಕಾಂಗ್ರೆಸ್‌ಗೆ ಮತದಾರರು ಲೋಕಸಭೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಿದ್ದಾರೆ. ಇದೀಗ ಏಕಾಏಕಿ ಬೆಲೆ ಏರಿಕೆ ಮಾಡಿ ಅವರ ಹೊಟ್ಟೆಯ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದ್ದೆ’ ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಮೈಸೂರು ಲೋಕಸಭೆ ಚುನಾವಣೆಯಲ್ಲಿ ಸೋತ ಎಂ.‌ಲಕ್ಷ್ಮಣ ಅವರು ಗ್ಯಾರಂಟಿ ರದ್ದುಗೊಳಿಸುವಂತೆ ಬಹಿರಂಗವಾಗಿ ಹೇಳಿದರು. ಒಂದು ಕೈಯಲ್ಲಿ ಗ್ಯಾರಂಟಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಸಾರಿಗೆ, ಅಗತ್ಯ ವಸ್ತುಗಳು ಮತ್ತು ರೈತರ ಕೃಷಿ ಉತ್ಪನ್ನಗಳ ಬೆಲೆ ಕೂಡ ಏರಿಕೆ ಆಗುವ ಸಾಧ್ಯತೆ ಇದೆ ಎಂದರು.

ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಆದಾಯ ಸಂಗ್ರಹವಾಗುತ್ತಿಲ್ಲ. ಸರ್ಕಾರದ ಮಟ್ಟದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಇದಕ್ಕೆ ಕಾರಣವಾಗಿದೆ. ಅದನ್ನು ತಡೆಗಟ್ಟುವ ಕೆಲಸ ಮಾಡುತ್ತಿಲ್ಲ ಎಂಬುದಕ್ಕೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣವೇ ಸಾಕ್ಷಿಯಾಗಿದೆ ಎಂದು ಆರೋಪಿಸಿದರು. 

ಹಾಲಿನ ದರ, ಆಸ್ತಿ ನೋಂದಣಿ ದರ ಹೀಗೆ ನಾನಾ ರೀತಿಯಲ್ಲಿ ಬೆಲೆ ಏರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ರೀತಿಯಲ್ಲಿ ತೆರಿಗೆ ಹೆಚ್ಚಳ ಮಾಡದೇ ಆಡಳಿತ ನಡೆಸುತ್ತಿದ್ದಾರೆ ಎಂದರು. 

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಅವರು ಪೋಕ್ಸೊ ಪ್ರಕರಣ ಕುರಿತ ಸಿಒಡಿ ವಿಚಾರಣೆಗೆ ಸೋಮವಾರ ಹಾಜರಾಗಲಿದ್ದಾರೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ, ವಿಚಾರಣೆ ಹಾಜರಾಗಿ ಲಿಖಿತ ಉತ್ತರವನ್ನು ನೀಡುವರು ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌. ಅರುಣ್‌, ಭಾನು ಪ್ರಕಾಶ್‌, ರುದ್ರೇಗೌಡ, ಭಾರತಿಶೆಟ್ಟಿ, ಮೋಹನರೆಡ್ಡಿ, ಕೆ.ವಿ. ಅಣ್ಣಪ್ಪ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT