ಭಾನುವಾರ, ಅಕ್ಟೋಬರ್ 24, 2021
21 °C

ಸಾಗರ: ‘ದೇಶದ ಬಹುತೇಕ ಸಮಸ್ಯೆಗೆ ಗಾಂಧಿ ಚಿಂತನೆಯಲ್ಲಿದೆ ಪರಿಹಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ಪ್ರಸ್ತುತ ದೇಶ ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳಿಗೆ ಗಾಂಧಿ ಚಿಂತನೆಗಳಲ್ಲಿ ಪರಿಹಾರವಿದೆ ಎಂದು ರಂಗಕರ್ಮಿ ಅಕ್ಷರ ಕೆ.ವಿ. ಹೇಳಿದರು.

ಸಮೀಪದ ಹೆಗ್ಗೋಡಿನಲ್ಲಿ ನೀನಾಸಂ ರಂಗ ಶಿಕ್ಷಣ ಕೇಂದ್ರ ಗಾಂಧಿ ಜಯಂತಿ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಗಾಂಧಿ ಸ್ಮೃತಿ ಕಾರ್ಯಕ್ರಮದಲ್ಲಿ ‘ಗಾಂಧಿ ನಿಮಗೇನು ಗೊತ್ತು’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

ಅಹಿಂಸೆ, ಸತ್ಯ, ಸರಳತೆ ಇವುಗಳಿಗೂ ಸ್ವಾತಂತ್ರ್ಯಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಗಾಂಧಿ ಬಲವಾಗಿ ನಂಬಿದ್ದರು. ಸರಳತೆಯೇ ನಿಜವಾದ ಶ್ರೀಮಂತಿಕೆ ಎಂದು ಅವರು ಪ್ರತಿಪಾದಿಸಿದ್ದರು. ಅಹಿಂಸೆ, ಸತ್ಯ, ಸರಳತೆಯ ಮೌಲ್ಯವಿದ್ದಾಗ ಮಾತ್ರ ಸ್ವಾತಂತ್ರ್ಯದ ಜೊತೆಗೆ ಸ್ವರಾಜ್ಯದ ಕಲ್ಪನೆಯೂ ಸಾಕಾರಗೊಳ್ಳುತ್ತದೆ ಎಂದು ಗಾಂಧಿ ಹೇಳಿದ ಮಾತು ಇಂದಿಗೂ ಪ್ರಸ್ತುತ ಎಂದರು.

‘ಒಂದು ಗ್ರಾಮದಲ್ಲಿ ಯಾವ ಯೋಜನೆ ಇರಬೇಕು, ಇರಬಾರದು ಎಂಬುದನ್ನು ಆಯಾ ಗ್ರಾಮದವರೇ ತೀರ್ಮಾನಿಸುವಂತಾಗಬೇಕು ಎಂದು ಗಾಂಧೀಜಿ ಹೇಳಿದ್ದರಲ್ಲಿ ಸ್ವರಾಜ್ಯದ ಮಂತ್ರ ಅಡಗಿದೆ. ಅದೇ ರೀತಿ ನಮ್ಮ ಅಗತ್ಯಗಳನ್ನು ನಾವೇ ಪೂರೈಸಿಕೊಳ್ಳುವಂತಾಗಬೇಕು ಎಂದು ಹೇಳಿದ ಮಾತಿನಲ್ಲಿ ಸ್ವದೇಶಿಯ ಪರಿಕಲ್ಪನೆ ಇದೆ. ಈ ಮೂಲಕ ಪಾಶ್ಚಿಮಾತ್ಯ ನಾಗರಿಕತೆಯನ್ನು ಸಂಪೂರ್ಣವಾಗಿ ತಿರಸ್ಕರಿಸುವ ಸ್ವಾತಂತ್ರ್ಯ, ಜೀವನ ಕ್ರಮ ನಮ್ಮದಾಗಬೇಕು ಎಂದು ಗಾಂಧಿ ವಿವರಿಸಿದ್ದಾರೆ’ ಎಂದು ನೆನಪಿಸಿದರು.

ನೀನಾಸಂ ರಂಗ ಶಿಕ್ಷಣದ ಕೇಂದ್ರದ ಪ್ರಾಂಶುಪಾಲ ಡಾ.ಎಂ. ಗಣೇಶ್, ಪ್ರಮುಖರಾದ ಟಿ.ಪಿ. ಅಶೋಕ್, ಜಸ್ವಂತ್ ಜಾದವ್, ಬಿ.ಆರ್. ವೆಂಕಟರಮಣ ಐತಾಳ, ಮಂಜು ಕೊಡಗು, ಫಣಿಯಮ್ಮ ಎಚ್.ಎಸ್. ಮಾಧವ ಚಿಪ್ಪಳಿ, ನೀನಾಸಂ ರಂಗ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.