ಶಿವಮೊಗ್ಗ: ಇಲ್ಲಿನ ಕೋಟೆ ಭೀಮೇಶ್ವರ ದೇವಾಲಯದಲ್ಲಿ ಹಿಂದೂ ಮಹಾಸಭಾದಿಂದ ಪ್ರತಿಷ್ಠಾಪಿಸಿದ್ದ ಗಣಪತಿಯ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ವೈಭವದಿಂದ ನೆರವೇರಿತು.

ಬೆಳಿಗ್ಗೆ 11 ಗಂಟೆಗೆ ಆರಂಭವಾಗಿ ಜಡಿ ಮಳೆ, ಮೋಡ ಹಾಗೂ ಬಿಸಿಲಿನ ಹೊಯ್ದಾಟದ ನಡುವೆ ತಡರಾತ್ರಿವರೆಗೂ ಮುಂದುವರೆದ ಗಣಪನ ಮೆರವಣಿಗೆಯಲ್ಲಿ ಭಕ್ತ ಸಾಗರ ಕೇಸರಿ ಬಣ್ಣದಲ್ಲಿ ಮಿಂದೆದ್ದಿತು.

ಭೀಮೇಶ್ವರ ಗುಡಿಯ ಆವರಣದಲ್ಲಿ ಸಂಪ್ರದಾಯದಂತೆ ಮಹಾ ಮಂಗಳಾರತಿ ನೆರವೇರಿಸುವ ಮೂಲಕ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಮೆರವಣಿಗೆಗೆ ವಿದ್ಯುಕ್ತ ಚಾಲನೆ ನೀಡಿದರು. ಈ ವೇಳೆ ಶಾಸಕ ಎಸ್.ಎನ್. ಚನ್ನಬಸಪ್ಪ ಹಾಜರಿದ್ದರು.

ಪೊಲೀಸರ ಬಿಗಿ ಬಂದೋಬಸ್ತ್, ಯುವಜನರ ಕಲರವ, ಮಹಿಳೆಯರು, ಮಕ್ಕಳು, ಹಿರಿಯರು ಎನ್ನದೇ ಭಕ್ತ ಸಮೂಹ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿತು. ಹಿಂದೂಮಹಾಸಭಾ ಗಣಪತಿಯ ಮೂರ್ತಿ ಹೊತ್ತ ಟ್ರ್ಯಾಕ್ಟರ್ನ ಸಾರಥ್ಯ ಹಿರಿಯರಾದ ಧನಂಜಯ ವಹಿಸಿದ್ದರು.

ಅದ್ಧೂರಿ ಮೆರವಣಿಗೆ: ಹಿಂದೂ ಮಹಾಸಭಾ ಗಣಪತಿಯ ಅದ್ದೂರಿ ಮೆರವಣಿಗೆಯಲ್ಲಿ ಯಕ್ಷ ವೇಷಧಾರಿಗಳು, ಬೊಂಬೆ, ಕೀಲು ಕುಣಿತ, ಮಂಗಳ ವಾದ್ಯ, ಚಂಡೆಮೇಳ, ಹುಲಿವೇಷ, ವೀರಗಾಸೆ, ಡೊಳ್ಳು ಕುಣಿತ, ಕಹಳೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ರಂಗು ತಂದವು. ಮೆರವಣಿಗೆಯ ಹಾದಿಯಲ್ಲಿ ವಾದ್ಯಗಳ ಸದ್ದು ಹಾಗೂ ಸಂಗೀತಕ್ಕೆ ತಕ್ಕಂತೆ ಯುವಕ– ಯುವತಿಯರು ಕುಣಿದು ಕುಪ್ಪಳಿಸಿದರು. ಈ ವೇಳೆ ಮೋದಕ ಪ್ರಿಯನ ಶ್ಲಾಘಿಸುವ ಘೋಷಣೆಗಳು ಮುಗಿಲು ಮುಟ್ಟಿದವು.

ರಾಜಬೀದಿ ಉತ್ಸವ ಸಾಗಿಬಂದ ಎಸ್ಪಿಎಂ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿಬಜಾರ್, ಶಿವಪ್ಪನಾಯಕ ವೃತ್ತ, ಅಮೀರ್ ಅಹಮ್ಮದ್ ವೃತ್ತ, ಬಿ.ಎಚ್.ರಸ್ತೆ, ಅಶೋಕವೃತ್ತ, ನೆಹರೂ ರಸ್ತೆ, ಗೋಪಿವೃತ್ತ, ದುರ್ಗಿಗುಡಿ, ಮಹಾವೀರ ವೃತ್ತ, ಬಾಲರಾಜ್ ಅರಸು ರಸ್ತೆ ಸೇರಿದಂತೆ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಕೇಸರಿ ಬಾವುಟ, ಬ್ಯಾನರ್, ಬಂಟಿಂಗ್ಸ್ ರಾರಾಜಿಸಿದವು. ಮೆರವಣಿಗೆ ಅಗಿ ಬಂದ ಹಾದಿಯಲ್ಲಿ ರಂಗೋಲಿ ಹಾಕಿ, ಹೂವು, ಚಿತ್ತಾಕರ್ಷಕ ಬಣ್ಣ ಹಾಕಲಾಗಿತ್ತು. ಮಾರ್ಗದುದ್ದಕ್ಕೂ ಅಪಾರ ಸಂಖ್ಯೆಯ ಜನ ವೀಕ್ಷಿಸಲು ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಗಾಂಧಿ ಬಜಾರ್ ಮುಖ್ಯ ರಸ್ತೆಯನ್ನು ಕೇಸರಿ ತಳಿರು ಸಾಲಿನ ನೆರಳು ಅವರಿಸಿತ್ತು. ಪ್ರವೇಶ ದ್ವಾರದಲ್ಲಿ ದೇವತೆಗಳು ಹಾಗೂ ದಾನವರು ಸೇರಿ ಸಮುದ್ರ ಮಂಥನ ಮಾಡುವ ದೃಶ್ಯ ಸೃಷ್ಟಿಸಲಾಗಿತ್ತು. ಅಮೀರ್ ಅಹ್ಮದ್ ವೃತ್ತದಲ್ಲಿ ಪರಶುರಾಮನ ಬೃಹತ್ ಪ್ರತಿಕೃತಿ, ಶಿವಪ್ಪ ನಾಯಕ ವೃತ್ತದಿಂದ ಕರ್ನಾಟಕ ಸಂಘದ ಕಡೆ ಸಾಗುವ ಹಾದಿಯಲ್ಲಿ ಧರ್ಮಸ್ಥಳ ಹೆಸರಿನ ಮಹಾದ್ವಾರ, ಆಪರೇಷನ್ ಸಿಂಧೂರ ಮಹಾದ್ವಾರ ಸ್ಥಾಪಿಸಿದ್ದರು. ಶುಕ್ರವಾರ ರಾತ್ರಿಯಿಂದಲೇ ಈ ಪ್ರತಿಕೃತಿಗಳ ಮುಂದೆ ಯುವಕ, ಯುವತಿಯರು ಫೋಟೋ, ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಕಂಡುಬಂದಿದ್ದು, ಮೆರವಣಿಗೆ ವೇಳೆಯೂ ಮುಂದುವರೆಯಿತು.

ಮೆರವಣಿಗೆಗೆ ಪೊಲೀಸ್ ಇಲಾಖೆಯಿಂದ ನಗರದ ಎಲ್ಲೆಡೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಪಕ್ಕದ ದಾವಣಗೆರೆ, ಚಿತ್ರದುರ್ಗ, ಹಾವೇರಿಯಿಂದ ಬಂದಿದ್ದ ಎಲ್ಲ ಹಂತದ ಸಾವಿರಕ್ಕೂ ಹೆಚ್ಚು ಪೊಲೀಸರು ಮೆರವಣಿಗೆಯ ಬಂದೋಬಸ್ತ್ ಹೊಣೆ ಹೊತ್ತಿದ್ದರು. ಸಿ.ಸಿ.ಟಿ.ವಿ ಕ್ಯಾಮೆರಾ ಹಾಗೂ ಡ್ರೋಣ್ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಪ್ರತಿ ಹಂತದಲ್ಲೂ ಎಚ್ಚರಿಕೆ ವಹಿಸಲಾಗಿತ್ತು.

ಮೆರವಣಿಗೆ ಸಾಗಿ ಬಂದ ಗಾಂಧಿ ಬಜಾರ್ನ ಸುನ್ನಿ ಮಸೀದಿ ಹಾಗೂ ಆಮೀರ್ ಅಹಮದ್ ವೃತ್ತದ ಬಳಿ ಪೊಲೀಸ್ ವಾಹನಗಳ ಅಡ್ಡ ನಿಲ್ಲಿಸಿ ಆರ್ಎಎಫ್ ತುಕಡಿಯನ್ನು ರಕ್ಷಣೆಗೆ ನಿಯೋಜಿಸಲಾಗಿತ್ತು. ಸೂಕ್ಷ್ಮ ಪ್ರದೇಶಗಳಲ್ಲಿ ಯಾರಿಗೂ ನಿಂತುಕೊಳ್ಳಲು, ಗುಂಪುಗಟ್ಟಲು ಆರ್ಎಎಫ್ ಸಿಬ್ಬಂದಿ ಅವಕಾಶ ನೀಡಲಿಲ್ಲ. ಶಾಲಾ ಕಾಲೇಜುಗಳಿಗೆ, ಕಚೇರಿಗಳಿಗೆ ರಜೆ ನೀಡಿದ್ದರಿಂದ ಮಕ್ಕಳು, ಯುವಜನ ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.