ಶರಾವತಿ ಸಂತ್ರಸ್ತರ ಪರ ಕಾಂಗ್ರೆಸ್ ಪಾದಯಾತ್ರೆ ಹೋರಾಟವಲ್ಲ, ಮತಗಳ ಬೇಟೆ: ಸಚಿವ ಆರಗ

ಶಿವಮೊಗ್ಗ: 'ಶರಾವತಿ ಮುಳುಗಡೆ ಸಂತ್ರಸ್ತರ ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ನಡೆಸುತ್ತಿರುವುದು ಮತಗಳ ಬೇಟೆಯೇ ಹೊರತು ಹೋರಾಟವಲ್ಲ' ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಲೇವಡಿ ಮಾಡಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, "60 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಸಂತ್ರಸ್ತರ ಸಮಸ್ಯೆ ಬಗೆಹರಿಸದ ಕಾಂಗ್ರೆಸ್ ಪಕ್ಷ ಅವರ ಪಾಲಿಗೆ ಇದ್ದೂ ಸತ್ತಂತಾಗಿದೆ. ಅವರ ಅಧಿಕಾರ ಅವಧಿಯಲ್ಲಿ ಕೇಂದ್ರದ ಅನುಮತಿ ಪಡೆಯದೇ ಸಂತ್ರಸ್ತರಿಗೆ ಮಂಜೂರಾತಿ ಮಾಡಲು ಅರಣ್ಯ ಭೂಮಿ ಡಿನೋಟಿಫಿಕೇಷನ್ ಮಾಡಿದ್ದಾರೆ. ಅದನ್ನು ಪರಿಶೀಲನೆ ನಡೆಸಿ ನಾವು (ಬಿಜೆಪಿ) ಸರಿಪಡಿಸಲು ಮುಂದಾಗಿದ್ದೇವೆ' ಎಂದು ಹೇಳಿದರು.
ಅರಣ್ಯಭೂಮಿ ಮಂಜೂರಾತಿ ರದ್ದು ಪ್ರಶ್ನಿಸಿ ಈಗ ಸರ್ಕಾರ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಜ್ಞಾನೇಂದ್ರ, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ಸಂತ್ರಸ್ತರಿಗೆ ಮಂಜೂರಾತಿ ಮಾಡಿರುವ ಅರಣ್ಯ ಭೂಮಿಯ ಜಂಟಿ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ ಅನುಮತಿ ಪಡೆದು ಸಂತ್ರಸ್ತರಿಗೆ ಹಕ್ಕುಪತ್ರ ಕೊಡಲಾಗುವುದು ಎಂದರು.
ಮಂಗಳೂರಿನಲ್ಲಿ ಆಟೊದಲ್ಲಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯ ಆರೋಗ್ಯ ಸುಧಾರಿಸಿದ ನಂತರ ಅವನ ಹೇಳಿಕೆ ಪಡೆದು ತನಿಖೆ ತೀವ್ರಗೊಳಿಸಲಾಗುವುದು ಎಂದು ಆರಗ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಆರೋಪಿಯ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಇದರ ಆಧಾರದ ಮೇಲೆ ತನಿಖೆ ನಡೆಸಲಾಗುವುದು ಎಂದರು.
ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ಭಾಗದಲ್ಲಿ ಸಣ್ಣಪುಟ್ಟ ಘರ್ಷಣೆಯ ಘಟನೆಗಳು ನಡೆಯುತ್ತಿವೆ. ಮಹಾರಾಷ್ಟ್ರದ 47 ಗ್ರಾಮಗಳು ಕರ್ನಾಟಕ ಸೇರಲು ಬೇಡಿಕೆ ಇಟ್ಟಿದ್ದು, ಅದನ್ನು ಕಾನೂನಾತ್ಮಕವಾಗಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗುವುದು. ಎಡಿಜಿಪಿಗೆ ಸೂಚನೆ ನೀಡಿ ಗಡಿ ಭಾಗದ ಗ್ರಾಮಗಳಿಗೆ ರಕ್ಷಣೆ ನೀಡಲಾಗುವುದು ಎಂದರು.
ಶರಾವತಿ ಮುಳುಗಡೆ ಸಂತ್ರಸ್ತರ ಬವಣೆ: ಮಧು ಬಂಗಾರಪ್ಪ ನೇತೃತ್ವದಲ್ಲಿ ಪಾದಯಾತ್ರೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.