ಸೋಮವಾರ, ನವೆಂಬರ್ 23, 2020
23 °C
ಒಳನೋಟ

ಧ್ವಂಸ ಮಾಡುತ್ತಿವೆ ಮಲೆನಾಡಿನ ವಾನರ ಸೇನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಬಯಲು ಸೀಮೆಯಲ್ಲಿ ಅತಿವೃಷ್ಟಿ, ಅನಾವೃಷ್ಟಿಗೆ ರೈತರು ನಲುಗಿದರೆ, ಮಲೆನಾಡಿಗರು ಮಂಗಗಳ ಹಾವಳಿಯಿಂದ ಪ್ರತಿ ವರ್ಷವೂ ಕೋಟ್ಯಂತರ ರೂಪಾಯಿ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. 

ಕಾಡಿನ ಉತ್ಪನ್ನಗಳು, ಭತ್ತ, ಸಾಂಪ್ರದಾಯಿಕ ಅಡಿಕೆ ಕೃಷಿಗೆ ಸೀಮಿತವಾಗಿದ್ದ ಮಲೆನಾಡು ಇಂದು ಪ್ರಮುಖ ವಾಣಿಜ್ಯ ಬೆಳೆಗಳ ನೆಲೆಯಾಗಿ ಬದಲಾಗಿದೆ. ಶುಂಠಿ, ರಬ್ಬರ್, ಅಡಿಕೆ ಪ್ರದೇಶಗಳ ವಿಸ್ತರಣೆಗೆ ಲಕ್ಷಾಂತರ ಹೆಕ್ಟೇರ್ ಕಾನು ನಾಶವಾಗಿದೆ. ಇದರಿಂದಾಗಿ ಕಾಡು ಪ್ರಾಣಿಗಳಿಗೆ ನೆಲೆ ಕ್ರಮೇಣ ಕಡಿಮೆಯಾಗುತ್ತಾ ಬಂದಿದೆ. ಪ್ರಮುಖವಾಗಿ ಮಂಗಗಳ ಕಾಟ ಮಿತಿ ಮೀರಿದೆ. ಮಂಗಗಳು ಶೇ 10ರಷ್ಟು ತಿಂದರೆ, ಶೇ 90ರಷ್ಟು ಹಾಳು ಮಾಡುತ್ತವೆ. ಅಡಿಕೆ, ತೆಂಗು, ಬಾಳೆ, ಭತ್ತ, ಕಾಫಿ, ಹಣ್ಣಿನ ಬೆಳೆ, ತರಕಾರಿ ಬೆಳೆಗಳನ್ನು ಧ್ವಂಸ ಮಾಡುತ್ತಿವೆ. ಜಿಲ್ಲೆಯಲ್ಲಿ ಪ್ರತಿ ವರ್ಷ ಮಂಗಗಳ ಹಾವಳಿಗೆ ಆಗುತ್ತಿರುವ ಬೆಳೆ ನಷ್ಟ ₹ 100 ಕೋಟಿಗೂ ಅಧಿಕ.

‘ಸಾಗರ ತಾಲ್ಲೂಕಿನಲ್ಲಿ ಪ್ರತಿ ವರ್ಷ ₹ 3 ಕೋಟಿ ಮೌಲ್ಯದ ಏಲಕ್ಕಿ ಬೆಳೆ, ₹ 2 ಕೋಟಿ ಮೌಲ್ಯದ ಬಾಳೆ, ಶುಂಠಿ ನಾಶ ಮಾಡುತ್ತಿವೆ. ಆನೆಗಳಿಗಿಂತ ಹೆಚ್ಚು ನಾಶ ಈ ಮಂಗಗಳಿಂದ ಆಗುತ್ತಿದೆ’ ಎನ್ನುತ್ತಾರೆ ಕೃಷಿ ಉದ್ಯಮಿ ಪುರುಷೋತ್ತಮ್ ಬೆಳ್ಳಕ್ಕಿ.

ಸಾಹಸ ಮಾಡಿ ಬೆಳೆಸಿದ್ದ ಆ್ಯಪಲ್‌ ಬೇರ್‌ ಧ್ವಂಸ: ತೀರ್ಥಹಳ್ಳಿ ತಾಲ್ಲೂಕು ಬೆಟ್ಟಬಸರವಾನಿಯ ಸ್ನಾತಕೋತ್ತರ ಪದವೀಧರ ಮಂಜುನಾಥ್ ಹಲವು ವರ್ಷಗಳ ಕಾಲ ಜೋರ್ಡಾನ್‌ನಲ್ಲಿ ನೆಲೆಸಿದ್ದರು. ಊರಿಗೆ ಮರಳಿದ ನಂತರ ಮಲೆನಾಡಿನಲ್ಲಿ ಆ್ಯಪಲ್‌ ಬೇರ್‌ ಬೆಳೆಯುವ ಸಾಹಸಕ್ಕೆ ಕೈಹಾಕಿದ್ದರು. ಹೈದರಾಬಾದ್‌ನಿಂದ ಸಸಿ ತಂದು ನೆಟ್ಟು ಪೋಷಿಸಿದ್ದರು. ಫಲ ಕೈಗೆ ಬರುವಷ್ಟರಲ್ಲಿ ತೋಟಕ್ಕೆ ದಾಳಿ ಇಟ್ಟ ವಾನರ ಸೇನೆ ಬಲೆಯನ್ನೂ ಕಿತ್ತೆಸೆದು ಇಡೀ ತೋಟ ಧ್ವಂಸ ಮಾಡಿದ್ದವು.

‘ವಿದೇಶದಲ್ಲಿ ದುಡಿದ ಹಣವೆಲ್ಲ ಆ್ಯಪಲ್‌ ಬೇರ್ ತೊಟಕ್ಕೆ ಹಾಕಿದ್ದೆ. ಒಂದೇ ದಿನದಲ್ಲಿ ಎಲ್ಲವೂ ನಾಶವಾಯಿತು. ಮಂಗಗಳನ್ನು ನಿಯಂತ್ರಿಸುವವರೆಗೂ ಭವಿಷ್ಯದಲ್ಲಿ ಯಾವ ಸಾಹಸಕ್ಕೂ ಕೈಹಾಕುವುದಿಲ್ಲ’ ಎನ್ನುತ್ತಾರೆ ಮಂಜುನಾಥ್.

ರಸ್ತೆ ಬದಿ ಭಿಕ್ಷುಕರಂತೆ ನಿಲ್ಲುವ ಕೋತಿಗಳು: ಅರಣ್ಯದಲ್ಲಿ ಹಣ್ಣು, ಹಂಪಲುಗಳು ಸಿಗದೇ ಪರಿತಪಿಸುವ ಮಂಗಗಳು, ಅಳಿವಿನಂಚಿನಲ್ಲಿರುವ ಲಂಗೂರು ಮತ್ತು ಸಿಂಹಬಾಲದ ಕೋತಿಗಳೂ ರಸ್ತೆಯ ಬದಿ ಬಂದು ನಿಲ್ಲುತ್ತಿವೆ. ಪ್ರವಾಸಿಗರು, ದಾರಿಯ ಪಯಣಿಗರು ಎಸೆಯುವ ಬಾಳೆ ಹಣ್ಣು, ಕಡಲೆಕಾಯಿ ಮತ್ತಿತರ ತಿನಿಸುಗಳಿಗೆ ಜೋತುಬಿದ್ದಿವೆ. ವೇಗವಾಗಿ ಚಲಿಸುವ ವಾಹನದ ಹಿಂದೆ ಓಡಿ ಅವರು ಎಸೆಯುವ ಪದಾರ್ಥ ಬಾಚಿಕೊಳ್ಳುತ್ತವೆ. 

ಮನೆಗಳಿಗೇ ನುಗ್ಗುವ ಮಂಗಗಳು:

ಭದ್ರಾವತಿ ತಾಲ್ಲೂಕು ಕಾಳನಕಟ್ಟೆ ಗ್ರಾಮದಲ್ಲಿ ಕೋತಿಯೊಂದು ಮನೆಯ ಒಳಗೆ ನುಗ್ಗಿ ಕೈಗೆ ಸಿಕ್ಕಿದ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುತ್ತಿತ್ತು. ಕೋಳಿ ಮರಿಗಳನ್ನು ಸಾಯಿಸುವುದು. ಬೀಗ ಹಾಕಿದ ಮನೆಗಳ ಹೆಂಚು ಸರಿಸಿ, ಒಳಗೆ ಹೋಗಿ ಎಲ್ಲ ನಾಶ ಮಾಡುವುದು ಅದರ ನಿತ್ಯದ ಕೆಲಸವಾಗಿತ್ತು. ಈ ಕುರಿತು ‘ಪ್ರಜಾವಾಣಿ’ ಕುಂದು–ಕೊರತೆಯಲ್ಲಿ ಪ್ರಕಟವಾದ ಬರಹ ಗಮನಿಸಿದ ಉಪ ಸಂರಕ್ಷಣಾಧಿಕಾರಿ ಐ.ಎಂ.ನಾಗರಾಜ್‌, ಪಶು ವೈದ್ಯ ಡಾ.ವಿನಯ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಕೋತಿ ಹಿಡಿಯುವಲ್ಲಿ ಈಚೆಗೆ ಯಶಸ್ವಿಯಾದರು.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕು ಸಾಸ್ವೆಹಳ್ಳಿ ಹೋಬಳಿಯ ಭೈರನಹಳ್ಳಿಯಲ್ಲಿ ಮಂಗಗಳ ಕಾಟಕ್ಕೆ ಜನ ಬೇಸತ್ತಿದ್ದಾರೆ. ಮೂರು ತಿಂಗಳಲ್ಲಿ 11ಕ್ಕೂ ಹೆಚ್ಚು ಜನರ ಮೇಲೆ ಮಂಗಗಳು ದಾಳಿ ಮಾಡಿವೆ. ಗ್ರಾಮದ ತಳವಾರ ಮಂಜುನಾಥ ಅವರು ಟ್ರ್ಯಾಕ್ಟರ್‌ನಲ್ಲಿ ಬರುತ್ತಿದ್ದಾಗ ಅವರ ಮೇಲೆ ದಾಳಿ ಮಾಡಿ, ಗಾಯಗೊಳಿಸಿದ್ದವು.

ಶಿವಮೊಗ್ಗದಲ್ಲಿ ಅರಣ್ಯ ನಾಶ ಗರಿಷ್ಠ

ರಾಜ್ಯದಲ್ಲಿ ಒಟ್ಟು ಅರಣ್ಯದ ವಿಸ್ತೀರ್ಣ ಏರಿಕೆಯಾಗಿದ್ದರೂ ಕೆಲವು ಜಿಲ್ಲೆಗಳಲ್ಲಿ ಅರಣ್ಯದ ವಿಸ್ತೀರ್ಣ ಕಡಿಮೆಯಾಗಿದೆ. ಅರಣ್ಯದ ವಿಸ್ತೀರ್ಣ ಅತಿಹೆಚ್ಚು ಕಡಿಮೆಯಾಗಿರುವ ಜಿಲ್ಲೆಗಳಲ್ಲಿ ಶಿವಮೊಗ್ಗ ಮೊದಲ ಸ್ಥಾನದಲ್ಲಿದೆ. ಎರಡು ವರ್ಷದಲ್ಲಿ ಜಿಲ್ಲೆಯಲ್ಲಿ 49 ಚದರ ಕಿ.ಮೀ.ನಷ್ಟು ಅರಣ್ಯದ ವಿಸ್ತೀರ್ಣ ಕಡಿಮೆಯಾಗಿದೆ. ಜಿಲ್ಲೆಯ ದಟ್ಟಾರಣ್ಯದ ವಿಸ್ತೀರ್ಣ 0.05 ಚದರ ಕಿ.ಮೀ.ನಷ್ಟು ಕಡಿಮೆಯಾಗಿದೆ. ಜಿಲ್ಲೆಯಲ್ಲಿ ನೆಡುತೋಪಿನ ವಿಸ್ತೀರ್ಣದಲ್ಲಿ 65 ಚದರ ಕಿ.ಮೀ.ನಷ್ಟು ಇಳಿಕೆಯಾಗಿದೆ.

ರಾಜ್ಯದಲ್ಲಿ ತೀರಾ ದಟ್ಟ ಅರಣ್ಯದ ವಿಸ್ತೀರ್ಣ ಗರಿಷ್ಠ ಪ್ರಮಾಣದಲ್ಲಿ ಕಡಿಮೆಯಾಗಿರುವುದು ಕೊಡಗು ಜಿಲ್ಲೆಯಲ್ಲಿ. ಈ ಅವಧಿಯಲ್ಲಿ ತೀರಾ ದಟ್ಟ ಅರಣ್ಯದ ವಿಸ್ತೀರ್ಣದಲ್ಲಿ 1 ಚದರ ಕಿ.ಮೀ.ನಷ್ಟು ಇಳಿಕೆಯಾಗಿದೆ. ನೆಡುತೋಪಿನ ವಿಸ್ತೀರ್ಣದಲ್ಲಿ 4 ಚದರ.ಕಿ.ಮೀ.ನಷ್ಟು, ಸಾಧಾರಣ ದಟ್ಟ ಅರಣ್ಯದ ವಿಸ್ತೀರ್ಣದಲ್ಲಿ 9.38 ಚದರ ಕಿ.ಮೀ.ನಷ್ಟು ಏರಿಕೆಯಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು