ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾ ಜಲಾಶಯ: 12 ದಿನಗಳಂತೆ ನಾಲ್ಕು ಹಂತದಲ್ಲಿ ನಾಲೆಗೆ ನೀರು

ಎಡದಂಡೆ ಕಾಲುವೆಗೆ ಜ.10 ರಿಂದ, ಬಲದಂಡೆ ಕಾಲುವೆಗೆ ಜ.20 ರಿಂದ ನೀರು
Published 7 ಜನವರಿ 2024, 6:47 IST
Last Updated 7 ಜನವರಿ 2024, 6:47 IST
ಅಕ್ಷರ ಗಾತ್ರ

ಶಿವಮೊಗ್ಗ: ಬೇಸಿಗೆ ಹಂಗಾಮಿನಲ್ಲಿ ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ಎಡದಂಡೆ (ಭದ್ರಾವತಿ–ತರೀಕೆರೆ ವಿಭಾಗ) ಕಾಲುವೆಗೆ ಜನವರಿ 10ರಿಂದ ಹಾಗೂ ಬಲದಂಡೆ (ಮಲೇಬೆನ್ನೂರು, ದಾವಣಗೆರೆ ವಿಭಾಗ) ಕಾಲುವೆಗೆ ಜನವರಿ 20ರಿಂದ ನೀರು ಹರಿಸಲು ಶನಿವಾರ ನಡೆದ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯಲ್ಲಿ ತೀರ್ಮಾನಿಸಲಾಯಿತು.

ಇಲ್ಲಿನ ಮಲವಗೊಪ್ಪದ ಭದ್ರಾ ಅಚ್ಚುಕಟ್ಟು ಪ್ರದೇಶ ಪ್ರಾಧಿಕಾರದ (ಕಾಡಾ) ಕಚೇರಿಯಲ್ಲಿ ಐಸಿಸಿ ಅಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಸಭೆ ನಡೆಯಿತು.

ಭದ್ರಾ ಜಲಾಶಯ 71.535 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಜಲಾಶಯದಲ್ಲಿ ಸದ್ಯ 35.370 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಇದರಲ್ಲಿ 13.83 ಟಿಎಂಸಿ ಅಡಿ ಡೆಡ್ ಸ್ಟೋರೇಜ್ ಇದ್ದು, ಬಳಕೆಗೆ ಬರುವುದಿಲ್ಲ. ಉಳಿದ 21.54 ಟಿಎಂಸಿ ಅಡಿ ನೀರಿನ ಸಂಗ್ರಹದಲ್ಲಿ ಕುಡಿಯಲು ಹಾಗೂ ಕೈಗಾರಿಕಾ ಉದ್ದೇಶಕ್ಕೆ 6.90 ಟಿಎಂಸಿ ಅಡಿ ಮೀಸಲಿದೆ.

ಜನವರಿಯಿಂದ ಮೇ ತಿಂಗಳವರೆಗೆ ಜಲಾಶಯದಿಂದ ಆವಿಯಾಗುವ ನೀರಿನ ಪ್ರಮಾಣ 1.91 ಟಿಎಂಸಿ ಅಡಿ ಇದೆ. ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆಗೆ 0.11 ಟಿಎಂಸಿ ಅಡಿ ಹರಿಸಲಾಗುತ್ತಿದ್ದು, ಉಳಿದ 12.62 ಟಿಎಂಸಿ ಅಡಿ ನೀರನ್ನು ಭದ್ರಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ 47 ದಿನಗಳಿಗೆ ಮಾತ್ರ ಹರಿಸಬಹುದು ಎಂಬುದನ್ನು ಐಸಿಸಿ ಸಭೆ ಗಣನೆಗೆ ತೆಗೆದುಕೊಂಡಿತು.

ಲಭ್ಯವಿರುವ ನೀರನ್ನು ಆನ್ ಅಂಡ್ ಆಫ್ ವ್ಯವಸ್ಥೆಯಲ್ಲಿ ಜನವರಿಯಿಂದ ಮೇ ತಿಂಗಳ ಅಂತ್ಯದವರೆಗೆ ತಲಾ 12 ದಿನಗಳ ಕಾಲ ನಾಲ್ಕು ಬಾರಿ ಹರಿಸಿ ದಾವಣಗೆರೆ, ಭದ್ರಾವತಿ, ಮಲೇಬೆನ್ನೂರು ವಿಭಾಗದ 31,739 ಹೆಕ್ಟೇರ್ ತೆಂಗು ಹಾಗೂ ಅಡಿಕೆ ಬೆಳೆಗಳ ರಕ್ಷಣೆಗೆ ಬಳಕೆ ಮಾಡಲು ಐಸಿಸಿ ಸಭೆ ತೀರ್ಮಾನಿಸಿತು.

ಸಭೆಯಲ್ಲಿ ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ, ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ, ತರೀಕೆರೆ ಶಾಸಕ ಶ್ರೀನಿವಾಸ್‌, ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾ, ಮಾಯಕೊಂಡ ಶಾಸಕ ಬಸವಂತಪ್ಪ, ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ, ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ, ಕಾಡಾ ಮುಖ್ಯ ಎಂಜಿನಿಯರ್ ಶಿವಾನಂದ ಬಣಕಾರ್, ಆಡಳಿತಾಧಿಕಾರಿ ಮುರಳೀಧರ ಹಾಜರಿದ್ದರು.

ಶಿವಮೊಗ್ಗದ ಮಲವಗೊಪ್ಪದ ಕಾಡಾ ಕಚೇರಿಯಲ್ಲಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಶನಿವಾರ ಐಸಿಸಿ ಸಭೆ ನಡೆಯಿತು
ಶಿವಮೊಗ್ಗದ ಮಲವಗೊಪ್ಪದ ಕಾಡಾ ಕಚೇರಿಯಲ್ಲಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಶನಿವಾರ ಐಸಿಸಿ ಸಭೆ ನಡೆಯಿತು

ಅಚ್ಚುಕಟ್ಟು ರೈತರ ಹಿತಕ್ಕೆ ಧಕ್ಕೆಯಾಗದಂತೆ ಜಲಾಶಯದಲ್ಲಿ ಬಳಕೆಗೆ ಲಭ್ಯವಿರುವ ಎಲ್ಲ ನೀರನ್ನು ಬಳಸಿಕೊಳ್ಳಲು ಕಾರ್ಯ ಯೋಜನೆ ರೂಪಿಸಿ ರೈತ ಮುಖಂಡರಿಂದ ಸಲಹೆ ಪಡೆದು ಸಭೆ ಈ ತೀರ್ಮಾನ ಕೈಗೊಂಡಿದೆ–ಮಧು ಬಂಗಾರಪ್ಪ ಭದ್ರಾ ಕಾಡಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ

ಮಳೆಗಾಲ ಸ್ವಲ್ಪ ವಿಳಂಬವಾದರೂ ಅಲ್ಲಿಯವರೆಗೆ ನೀರು ಸಿಗುವಂತೆ ಈಗ ಲಭ್ಯವಿರುವ ನೀರಿನ ವಿತರಣೆಗೆ ಯೋಜನೆ ಹಾಕಿಕೊಳ್ಳಲಾಗಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಆದ್ಯತೆ ನೀಡಲಿದ್ದೇವೆ
–ಡಾ.ಆರ್. ಸೆಲ್ವಮಣಿ ಶಿವಮೊಗ್ಗ ಜಿಲ್ಲಾಧಿಕಾರಿ
ಜಿಲ್ಲೆಯ ರೈತರಿಗೆ ಯಾವುದೇ ಕಾರಣಕ್ಕೂ ಭತ್ತ ಬೆಳೆಯದಂತೆ ಸೂಚನೆ ನೀಡಲಾಗಿದೆ. ಜಲಾಶಯದಲ್ಲಿರುವ ನೀರನ್ನು ಕುಡಿಯಲು ಕಬ್ಬು ಅಡಿಕೆ ತೆಂಗು ಸಂರಕ್ಷಣೆಗೆ ಬಳಸಿಕೊಳ್ಳಬಹುದಾಗಿದೆ
–ಡಾ.ವೆಂಕಟೇಶ್‌ ಎಂ.ವಿ ದಾವಣಗೆರೆ ಜಿಲ್ಲಾಧಿಕಾರಿ
ರೈತರಿಗೆ ಮೇ 15ರವರೆಗೆ ನೀರು ಬೇಕು. ಹೀಗಾಗಿ ಭದ್ರಾ ಮೇಲ್ದಂಡೆ ಯೋಜನೆಗೆ ಈಗ ಜಲಾಶಯದಲ್ಲಿರುವ ನೀರು ಹರಿಸುವ ಬದಲು ತುಂಗಾ ನದಿಯಿಂದ ನೀರು ತರಲು ಕ್ರಮ ಕೈಗೊಳ್ಳಬೇಕು
–ಎಚ್.ಆರ್.ಬಸವರಾಜಪ್ಪ ರೈತ ಸಂಘ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ
ಐಸಿಸಿ ತೀರ್ಮಾನಕ್ಕೆ ನಮ್ಮ ಒಪ್ಪಿಗೆ ಇದೆ. ಕಟ್ಟಕಡೆಯ ಅಚ್ಚುಕಟ್ಟುದಾರರವರೆಗೆ ನೀರು ನೀಡುವ ವ್ಯವಸ್ಥೆ ಸಮರ್ಪಕವಾಗಿ ಆಗಬೇಕು. ಅಕ್ರಮವಾಗಿ ನೀರೆತ್ತುವುದನ್ನು ನಿಲ್ಲಿಸಲು ಅಧಿಕಾರಿಗಳನ್ನು ನಿಯೋಜಿಸಬೇಕು
–ಕೆ.ಟಿ.ಗಂಗಾಧರ್ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ
ಭದ್ರಾ ಜಲಾಶಯದಲ್ಲಿ ನೀರಿನ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಬೇಕಿದೆ. 12 ದಿನಗಳಲ್ಲಿ ಕೊನೆಯ ಭಾಗದ ರೈತರಿಗೆ ನೀರು ಸಿಗುವಂತೆ ಮಾಡುವುದು ದೊಡ್ಡ ಸವಾಲು. ಅದರ ಫಲಿತಾಂಶ ಮೊದಲ ಹಂತದಲ್ಲಿ ಗೊತ್ತಾಗಲಿದೆ. ಜಿಲ್ಲಾಡಳಿತ ಆ ಬಗ್ಗೆ ಗಮನಹರಿಸಲಿ
– ತೇಜಸ್ವಿ ಪಟೇಲ್ ರೈತ ಮುಖಂಡ ದಾವಣಗೆರೆ
ಅಕ್ರಮವಾಗಿ ಪಂಪ್‍ಸೆಟ್‍ ಹಾಕಿ ನೀರೆತ್ತುವವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡರೆ ಮಾತ್ರ ಕೊನೆಯ ಭಾಗದ ರೈತರಿಗೆ ನೀರು ಸಿಗಲಿದೆ. ಇಲ್ಲದಿದ್ದರೆ ಕಷ್ಟ
–ಎಚ್‌.ಆರ್‌.ಲಿಂಗರಾಜ ಶಾಮನೂರು ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ

ನಾಲ್ಕು ಹಂತಗಳಲ್ಲಿ ನೀರು ಹರಿವು..

ಬಲದಂಡೆ ಕಾಲುವೆ: ತಲಾ 12 ದಿನಗಳ ಕಾಲ ನಾಲ್ಕು ಹಂತದಲ್ಲಿ ನೀರು ಹರಿಸಲಾಗುತ್ತದೆ. ಪ್ರಸ್ತುತ ಚಳಿಯ ವಾತಾವರಣ ಇರುವ ಕಾರಣ ಬಲದಂಡೆ ನಾಲೆಗೆ ಜನವರಿ 20ರಿಂದ ನೀರು ಹರಿಸಲು ಸಭೆ ತೀರ್ಮಾನ ಕೈಗೊಂಡಿತು. ಜನವರಿ 20ರಿಂದ ಫೆಬ್ರುವರಿ 1ರವರೆಗೆ (12 ದಿನ) ನೀರು. ನಂತರ 20 ದಿನ ಬಿಡುವು. ಮತ್ತೆ ಫೆಬ್ರುವರಿ 21ರಿಂದ ಮಾರ್ಚ್ 4ರವರೆಗೆ ಮಾರ್ಚ್ 25ರಿಂದ ಏಪ್ರಿಲ್ 7ರವರೆಗೆ ಹಾಗೂ ಏಪ್ರಿಲ್ 28ರಿಂದ ಮೇ 9ರವರೆಗೆ ಹೀಗೆ ನಾಲ್ಕು ಹಂತಗಳಲ್ಲಿ ನೀರು ಹರಿಸಲಾಗುತ್ತದೆ. ಎಡದಂಡೆ ಕಾಲುವೆ: ಎಡದಂಡೆ ಕಾಲುವೆ ಭಾಗದ ರೈತರ ಒತ್ತಾಯದ ಕಾರಣ ಜನವರಿ 10ರಿಂದ 22ರವರೆಗೆ ಮೊದಲ ಹಂತದಲ್ಲಿ ನೀರು ಹರಿಸಲಾಗುತ್ತಿದೆ. ಫೆಬ್ರುವರಿ 12ರಿಂದ 24 ಮಾರ್ಚ್ 16ರಿಂದ 28 ಏಪ್ರಿಲ್ 20ರಿಂದ ಮೇ 2ರವರೆಗೆ ನೀರು ಹರಿಸಲಾಗುತ್ತಿದೆ. ನಂತರ ಮಳೆ ಬಂದರೆ ನೀರಿನ ಹರಿವು ಮುಂದುವರೆಯಲಿದೆ ಎಂದು ಕಾಡಾ ಮೂಲಗಳು ತಿಳಿಸಿವೆ.

20 ವರ್ಷಗಳ ನಂತರ ಈ ಪರಿಸ್ಥಿತಿ..

2004ರಲ್ಲಿ ಮಳೆ ಕೊರತೆಯಿಂದ ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ 138.4 ಟಿಎಂಸಿ ಅಡಿಗೆ ಇಳಿದಿತ್ತು. ಆಗ ಜಲಾಶಯದಲ್ಲಿ 10.67 ಟಿಎಂಸಿ ಅಡಿ ನೀರಿನ ಸಂಗ್ರಹವಿತ್ತು. ಆಗಲೂ ಬೇಸಿಗೆ ಬೆಳೆಗೆ ನಾಲ್ಕು ಹಂತಗಳಲ್ಲಿ 47 ದಿನಗಳ ಕಾಲ ನೀರು ಹರಿಸಲಾಗಿತ್ತು. ಈಗ 20 ವರ್ಷಗಳ ನಂತರ ಅದೇ ಪರಿಸ್ಥಿತಿ ತಲೆದೋರಿದೆ. ತುಂಗೆಯಿಂದ ನೀರು ತನ್ನಿ: ‘ಭದ್ರಾ ಮೇಲ್ದಂಡೆ ಯೋಜನೆಯ ಮೂಲ ಒಪ್ಪಂದದಂತೆ ಭದ್ರಾ ಜಲಾಶಯಕ್ಕೆ 19.5 ಟಿಎಂಸಿ ಅಡಿ ನೀರನ್ನು ತುಂಗೆಯಿಂದ ಹರಿಸಿದಲ್ಲಿ ನೀರು ಉಳಿಯುತ್ತದೆ. ಗಾಜನೂರಿನ ತುಂಗಾ ಜಲಾಶಯದಿಂದ ನೀರು ತರುವ ಜವಾಬ್ದಾರಿಯನ್ನು ಸಚಿವ ಮಧು ಬಂಗಾರಪ್ಪ ವಹಿಸಿಕೊಳ್ಳಬೇಕು’ ಎಂದು ರೈತ ಮುಖಂಡ ಕೆ.ಟಿ.ಗಂಗಾಧರ್ ಒತ್ತಾಯಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ ‘ತುಂಗಾದಿಂದ ಭದ್ರಾ ಜಲಾಶಯಕ್ಕೆ ನೀರು ಹರಿಸಲು ಕೆಲವು ತಾಂತ್ರಿಕ ಸಮಸ್ಯೆಗಳಿವೆ. ಅವುಗಳನ್ನು ಸರಿಪಡಿಸಲು ಜಲಸಂಪನ್ಮೂಲ ಸಚಿವರ ಜೊತೆಗೆ ಚರ್ಚಿಸಿ ಶೀಘ್ರ ಕ್ರಮಕ್ಕೆ ಮುಂದಾಗುವೆ’ ಎಂದು ಭರವಸೆ ನೀಡಿದರು.

ಭತ್ತ ಬೆಳೆಯುವುದು ಬೇಡ: ಐಸಿಸಿ ಮನವಿ

‘ಭತ್ತಕ್ಕೆ 90 ದಿನಗಳ ನೀರಿನ ಅಗತ್ಯವಿದೆ. ಈಗ ಲಭ್ಯವಿರುವ ನೀರನ್ನು ದಿನಕ್ಕೆ 0.34 ಟಿಎಂಸಿ ಅಡಿಯಂತೆ 47 ದಿನಗಳ ಕಾಲ ಮಾತ್ರ ಹರಿಸಬಹುದಾಗಿದೆ. ಹೀಗಾಗಿ ಅಚ್ಚುಕಟ್ಟು ಪ್ರದೇಶದ ರೈತರು ಯಾವುದೇ ಕಾರಣಕ್ಕೂ ಭತ್ತ ಬೆಳೆಯಬೇಡಿ’ ಎಂದು ಐಸಿಸಿ ಸಭೆ ಮನವಿ ಮಾಡಿತು. ಆ ನಿಟ್ಟಿನಲ್ಲಿ ನಾಲ್ಕು ಜಿಲ್ಲೆಗಳ ರೈತರಲ್ಲಿ ಜಾಗೃತಿ ಮೂಡಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿತು.

ಕುಡಿಯುವ ನೀರು ಎಲ್ಲೆಲ್ಲಿಗೆ? ಭದ್ರಾ ಜಲಾಶಯದಲ್ಲಿ ಸಂಗ್ರಹವಿರುವುದರಲ್ಲಿ 6.90 ಟಿಎಂಸಿ ಅಡಿ ನೀರನ್ನು ಭದ್ರಾವತಿ ತರೀಕೆರೆ ಚನ್ನಗಿರಿ ಸಂತೇಬೆನ್ನೂರು ಮಾಯಕೊಂಡ ದಾವಣಗೆರೆ ಹರಪನಹಳ್ಳಿ ಚಿತ್ರದುರ್ಗ ನಗರ ಭರಮಸಾಗರ ರಾಣೆಬೆನ್ನೂರು ಹಿರೇಕೆರೂರು ಬ್ಯಾಡಗಿ ಹಾವೇರಿ ನಗರ ಗದಗ–ಬೆಟಗೇರಿ ನಗರ ಮುಂಡರಗಿ ಹಗರಿಬೊಮ್ಮನಹಳ್ಳಿ ಕೂಡ್ಲಿಗಿ ಕೊಟ್ಟೂರು ಸೇರಿದಂತೆ ಮಧ್ಯ ಕರ್ನಾಟಕದ ಹಲವು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಹರಿಸಲು ಸಭೆ ತೀರ್ಮಾನಿಸಿತು. ಫೆಬ್ರುವರಿಯಲ್ಲಿ ಮೈಲಾರಲಿಂಗೇಶ್ವರ ಜಾತ್ರೆಗೆ ನೀರು ಹರಿಸಲು ನಿರ್ಧಾರ ಕೈಗೊಳ್ಳಲಾಯಿತು.

ತಕ್ಷಣ ನೀರು ಹರಿಸಲು ಆಗ್ರಹ:

ರಸ್ತೆ ತಡೆದು ಪ್ರತಿಭಟನೆ ಎಡದಂಡೆ ಹಾಗೂ ಬಲದಂಡೆ ನಾಲೆಗಳಿಗೆ ಒಂದೇ ದಿನ ತಕ್ಷಣ ನೀರು ಹರಿಸಿರಿ ಎಂದು ಒತ್ತಾಯಿಸಿ ಐಸಿಸಿ ಸಭೆಯ ನಂತರ ಕೆಲವು ರೈತರು ಕಾಡಾ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು. ‘ಸಭೆಯ ತೀರ್ಮಾನಕ್ಕೆ ನಮ್ಮ ಆಕ್ಷೇಪವಿದೆ. ನಾಲೆಗೆ ನೀರು ಹರಿಸುವುದು ವಿಳಂಬವಾದಲ್ಲಿ ಬೆಳೆ ಹಾಳಾಗಲಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿ ಕಾಡಾ ಕಚೇರಿ ಎದುರಿನ ಹೆದ್ದಾರಿಯಲ್ಲಿ ವಾಹನಗಳ ತಡೆ ನಡೆಸಿದರು. ಇದರಿಂದ ಮೈಲುಗಟ್ಟಲೇ ವಾಹನಗಳು ಸಾಲುಗಟ್ಟಿದ್ದವು. ಸಭೆ ಮುಗಿಸಿ ಹೊರಟ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ ರೈತ ಮುಖಂಡರಾದ ಎಚ್.ಆರ್.ಬಸವರಾಜಪ್ಪ ಹಾಗೂ ಕೆ.ಟಿ.ಗಂಗಾಧರ್ ಅವರಿಗೂ ಅಡ್ಡಹಾಕಿದರು. ‘ಬರಗಾಲ ಬಂದಿದೆ. ಜಲಾಶಯದಲ್ಲಿ ನೀರಿನ ಸಂಗ್ರಹವಿಲ್ಲ. ಕುಡಿಯುವ ನೀರು ಸಿಗುವುದೇ ಕಷ್ಟ. ಭತ್ತದ ಬೆಳೆಗೆ ನೀರು ಕೊಡುವುದಿಲ್ಲ ಎಂದು ಮೊದಲೇ ತೀರ್ಮಾನಿಸಲಾಗಿದೆ. ಇರುವ ನೀರನ್ನು ಸರಿಯಾಗಿ ಹಂಚುವ ನಿಟ್ಟಿನಲ್ಲಿ ಸಭೆ ತೀರ್ಮಾನ ಕೈಗೊಂಡಿದೆ’ ಎಂದು ಮುಖಂಡರು ಮನವೊಲಿಸಲು ಪ್ರಯತ್ನಿಸಿದರು. ಮಧ್ಯಪ್ರವೇಶಿಸಿದ ಪೊಲೀಸರು ರಸ್ತೆ ತಡೆ ತೆರವುಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT