ಶನಿವಾರ, ಮೇ 28, 2022
21 °C
ಕೃಷಿ ಕಾರ್ಮಿಕರ ಕೊರತೆ: ಯಂತ್ರಕ್ಕೆ ಮೊರೆಹೋದ ಮಲೆನಾಡಿಗರು

ಒಕ್ಕಲು ಯಂತ್ರಕ್ಕೆ ಹೆಚ್ಚಿದ ಬೇಡಿಕೆ

ಹೊಸಕೊಪ್ಪ ಶಿವು Updated:

ಅಕ್ಷರ ಗಾತ್ರ : | |

Prajavani

ಕೋಣಂದೂರು: ಮಲೆನಾಡಿನಲ್ಲಿ ಕೃಷಿ ಕಾರ್ಮಿಕರ ಕೊರತೆಯಿಂದ ಒಕ್ಕಲು ಯಂತ್ರಕ್ಕೆ ಬೇಡಿಕೆ ಹೆಚ್ಚಿದೆ.

ಈ ಬಾರಿ ಸುರಿದ ಅಕಾಲಿಕ ಮಳೆಯಿಂದ ಬಹುತೇಕ ಭತ್ತದ ಗದ್ದೆಗಳ ಫಸಲು ಮಳೆಗೆ ಸಿಲುಕಿದೆ. ಭತ್ತ ಗದ್ದೆಯಲ್ಲಿಯೇ ಉದುರಿದ್ದರೆ, ಕೆಲ ಭತ್ತ ಮೊಳಕೆ ಒಡೆದಿದೆ. ಈ ಎಲ್ಲಾ ಸಂಕಷ್ಟಗಳ ನಡುವೆ ಭತ್ತದ ಫಸಲನ್ನು ರೈತರು ಬಣವೆ ಮಾಡಿದ್ದಾರೆ. ಆದರೆ ಅರ್ಧಂಬರ್ಧ ಒಣಗಿದ ಭತ್ತದ ಫಸಲು ಬಣವೆಯಲ್ಲಿ ಕಪ್ಪು ಬಣ್ಣಕ್ಕೆ ತಿರುಗುವುದರ ಮುನ್ನ ಭತ್ತವನ್ನು
ಬೇರ್ಪಡಿಸಬೇಕಿದೆ.

ಹೀಗಾಗಿ ಭತ್ತದ ಕೊಯ್ಲಿಗೆ ರೈತರು ಒಕ್ಕಲು ಯಂತ್ರವನ್ನು ಆಶ್ರಯಿಸಿದ್ದಾರೆ. ಆದರೆ ಬೇಡಿಕೆಗೆ ತಕ್ಕಂತೆ ಒಕ್ಕಲು ಯಂತ್ರಗಳು ಮಲೆನಾಡಿನ ಭಾಗದಲ್ಲಿ ಲಭ್ಯವಿಲ್ಲ. ಬಯಲು ಸೀಮೆ, ಅರೆ ಮಲೆನಾಡಿನಿಂದ ಬರುವ ಯಂತ್ರಗಳನ್ನೇ ಅವಲಂಬಿಸಿದ್ದಾರೆ.

ಮಲೆನಾಡಿನ ರೈತರಿಗೆ ಒಕ್ಕಲು ಯಂತ್ರವನ್ನು ಖರೀದಿಸುವ ಸಾಮರ್ಥ್ಯ ಇದ್ದರೂ ಅದರೊಟ್ಟಿಗೆ ಭತ್ತದ ಹುಲ್ಲನ್ನು ಕಟ್ಟುವ (ಪಿಂಡಿ) ಮಾಡುವ ಪರಿಣತಿ ವಿರಳ. ಅದಲ್ಲದೆ ಹಗಲು ರಾತ್ರಿ ಎನ್ನದೇ ಕಷ್ಟಪಟ್ಟು ಯಂತ್ರದೊಂದಿಗೆ ಕೆಲಸ ಮಾಡಬೇಕಾದ ಶ್ರಮಿಕ ಕೆಲಸಗಾರರ ಕೊರತೆ ಇದೆ. ಯಂತ್ರದೊಂದಿಗೆ ಕೆಲಸ ನಿರ್ವಹಿಸಲು 8-10 ಜನರ ಅವಶ್ಯಕತೆ ಇರುತ್ತದೆ. ಜೊತೆಗೆ ಹುಲ್ಲಿನ ದೂಳು, ಉರಿ, ತುರಿಕೆಯನ್ನು ಸಹಿಸಿಕೊಳ್ಳುವುದು ಸವಾಲಿನ ಕೆಲಸವೇ ಸರಿ. ಹೀಗಾಗಿ ಬಯಲು ಸೀಮೆಯ ಒಕ್ಕಲು ಯಂತ್ರವನ್ನೇ ಈ ಭಾಗದ ರೈತರು ಅವಲಂಬಿಸಿದ್ದಾರೆ.

ಶಿವಮೊಗ್ಗ, ಹಾವೇರಿ, ಭದ್ರಾವತಿ ಕಡೆಯಿಂದ ಬರುವ ಒಕ್ಕಲು ಯಂತ್ರಗಳು 3 ತಿಂಗಳುಗಳ ಕಾಲ (ಡಿಸೆಂಬರ್, ಜನವರಿ, ಫೆಬ್ರುವರಿ)ಯಲ್ಲಿ ಮಲೆನಾಡಿನಲ್ಲಿ ಸಂಚರಿಸುತ್ತವೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಡಿಸೆಂಬರ್ ತಿಂಗಳ ಮೊದಲಲ್ಲೇ ಈ ಪ್ರಕ್ರಿಯೇ ಆರಂಭವಾಗಿದೆ. ಅಕಾಲಿಕ ಮಳೆಗೆ ಹೆದರಿ ರೈತರು ಒಕ್ಕಲು ಯಂತ್ರದ ಮೂಲಕ ಭತ್ತ ಬೇರ್ಪಡಿಸಿಕೊಳ್ಳುತ್ತಿದ್ದಾರೆ. ಆದರೆ ವಿರಳ ಯಂತ್ರಗಳಿಂದ ಕೆಲವು ರೈತರು ಒಕ್ಕಲು ಮಾಡಲಾಗದೆ ಸುಮ್ಮನಿದ್ದಾರೆ. ವಿಭಕ್ತ ಕುಟುಂಬಗಳಿಂದಾಗಿ ಸಾಂಪ್ರದಾಯಿಕ ಒಕ್ಕಲುತನಕ್ಕೆ ಬೇಕಾದ ಸಾಮಗ್ರಿಗಳಾದ ಎತ್ತು ಮತ್ತಿತರ ಪರಿಕರಗಳನ್ನು ಒದಗಿಸಲಾಗದೆ ರೈತರು ಯಾಂತ್ರೀಕೃತ ಒಕ್ಕಲುತನಕ್ಕೆ ಎದುರು ನೋಡುತ್ತಿದ್ದಾರೆ.

ಗಂಟೆಯೊಂದಕ್ಕೆ ₹ 1200 ನಿಗದಿ ಪಡಿಸಲಾಗಿದೆ. ಜೊತೆಗೆ ಕೆಲವೊಮ್ಮೆ ಕೆಲವು ಬಣವೆಗಳನ್ನು ಗುತ್ತಿಗೆ ಪಡೆದು ಒಕ್ಕಲು ಮಾಡಿಕೊಡುವ ಪರಿಪಾಠವೂ ಇದೆ. ಸಾಂಪ್ರದಾಯಿಕ ಒಕ್ಕಲುತನಕ್ಕೆ ಹೋಲಿಸಿದರೆ ಯಾಂತ್ರೀಕೃತ ಒಕ್ಕಲು ಸ್ವಲ್ಪ ದುಬಾರಿ ಎನಿಸಿದರೂ ಸಮಯದ ಉಳಿತಾಯ ಆಗುತ್ತದೆ ಎನ್ನುತ್ತಾರೆ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ವಿಜೇತ ಮೀನುಮನೆಕೊಪ್ಪ ಶಿವಪ್ಪ.

ಒಕ್ಕಲು ಯಂತ್ರವನ್ನು ಸಾಗಿಸಲು ಟಿಲ್ಲರ್, ಟ್ರ್ಯಾಕ್ಟರ್ ಅವಶ್ಯಕತೆ ಇದೆ. ಒಕ್ಕಲು ಯಂತ್ರಕ್ಕೆ ನವೀನ ತಂತ್ರಜ್ಞಾನಗಳ ಆವಿಷ್ಕಾರದ ಅಗತ್ಯ ಇದೆ. ಈ ನಿಟ್ಟಿನಲ್ಲಿ ಇನ್ನಷ್ಟು ಪ್ರಯೋಗಗಳು ನಡೆದರೆ ಒಕ್ಕಲುತನಕ್ಕೆ ಹೊಸ ಸ್ಪರ್ಶ ಸಿಕ್ಕಂತಾಗುತ್ತದೆ ಎನ್ನುತ್ತಾರೆ ಅವರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು