ಭಾನುವಾರ, ಮೇ 22, 2022
21 °C

ಕೃಷಿಯಲ್ಲಿ ಭದ್ರತೆ ಇಲ್ಲದ ದೇಶ ಅಭದ್ರ: ಡಾ.ಶಿವಮೂರ್ತಿ ಮುರುಘಾ ಶರಣರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಮನುಷ್ಯನ ಜೀವನಕ್ಕೆ ಕೃಷಿಯೇ ಭದ್ರತೆ ಮತ್ತು ಬದ್ಧತೆಯಾಗಿದ್ದು, ಯಾವ ದೇಶದಲ್ಲಿ ಕೃಷಿಗೆ ಭದ್ರತೆ ಇರುತ್ತದೆಯೋ ಆ ದೇಶ ಸಮೃದ್ಧಿಯಾಗಿರುತ್ತದೆ ಎಂದು ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಇಲ್ಲಿನ ನವುಲೆಯಲ್ಲಿರುವ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಮತ್ತು ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೃಷಿ ಮೇಳವನ್ನು ಕಳಸಿಗೆ ಭತ್ತ ತುಂಬುವ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿದರು.

‘ಕೃಷಿ ಪ್ರಧಾನ ಜೀವನದಲ್ಲಿ ನಿರಂತರ ಭದ್ರತೆಯಂತೂ ಇದ್ದೇ ಇರುತ್ತದೆ. ಎಷ್ಟೇ ಆವಿಷ್ಕಾರ, ತಂತ್ರಜ್ಞಾನ ಬಂದರೂ ಆಹಾರವನ್ನು ಉತ್ಪಾದಿಸಲು ಸಾಧ್ಯವಿಲ್ಲ. ಆಹಾರ ಬೆಳೆ ಬೆಳೆಯಬೇಕಾದರೆ ಭೂಮಿ ಬೇಕು. ನಮ್ಮದು ಭೂಮಿ ಆಧಾರಿತ ಬುದುಕು. ಭೂಮಿ ಅಥವಾ ಜಮೀನು ಬಿಟ್ಟರೆ ಬದುಕೇ ಇಲ್ಲ’ ಎಂದರು.

ರಾಗಿ ಇದ್ದರೆ ರೋಗ ದೂರ: ‘ರಾಗಿ ತಿಂದು ನಿರೋಗಿಯಾಗು ಎನ್ನುವ ನುಡಿಯಂತೆ ಮನುಷ್ಯ ಒಮ್ಮೆಯಾದರೂ ರಾಗಿಯಿಂದ ತಯಾರಿಸಿದ ಮತ್ತು ಸಿರಿಧಾನ್ಯಗಳಿಂದ ತಯಾರಿಸಿದ ಪದಾರ್ಥ ಸೇವಿಸಬೇಕು. ಯಾವ ಮನುಷ್ಯ ರಾಗಿಯನ್ನು ಸೇವಿಸುತ್ತಾನೋ ಆತ ರೋಗದಿಂದ ದೂರ ಇರುತ್ತಾನೆ. ಆದರೆ, ಇಂದಿನ ಯಾಂತ್ರಿಕ ಯುಗದಲ್ಲಿ ಇವೆಲ್ಲವೂ ದೂರಾಗಿದೆ. ಕೃತಕ ಜೀವನ ರೋಗಗ್ರಸ್ತವಾಗಿದೆ. ಮಾತು ರಹಿತ ನಡಿಗೆ ಮೌನಕ್ಕೆ, ಧ್ಯಾನಕ್ಕೆ ಸಮ’ ಎಂದು ತಿಳಿಸಿದರು.

ಆಹಾರ ಪದ್ದತಿ ಬದಲಾಗಬೇಕು:‌ ‘ಜೀವನದಲ್ಲಿ ಕಷ್ಟಪಟ್ಟು ಬಿಸಿಲು, ಮಳೆ ಎನ್ನದೇ ಮೈ ಬಗ್ಗಿಸಿ ದುಡಿದು ಬೆಳೆ ಬೆಳೆಯುತ್ತಾನೆ. ದೇಶದಲ್ಲಿ ಕೃಷಿಕರು ಇಲ್ಲದಿದ್ದರೇ ದೇಶವೇ ಉಪನ್ಯಾಸದಿಂದ ಮಲಗಬೇಕಾಗುತ್ತದೆ ಎಂಬುದು ಗಾದೆಯಷ್ಟೇ ರೂಢಿಯಾಗಿದೆ. ಆಧುನಿಕ, ಕೃತಕ ಮತ್ತು ಯಾಂತ್ರೀಕೃತ ಬದುಕಿನಿಂದ ಮುಕ್ತಿ ಹೊಂದಲು ನಾವು ಕಡ್ಡಾಯವಾಗಿ ಜೀವನ ಶೈಲಿಯನ್ನು ಮತ್ತು ಆಹಾರ ಪದ್ದತಿ ಬದಲಾಯಿಸಿಕೊಳ್ಳಬೇಕಿದೆ ಎಂದರು.  

‘ರೈತರು ಒಂದೇ ರೀತಿಯ ಬೆಳೆಯನ್ನು, ಒಂದೇ ರೀತಿಯ ವಾಣಿಜ್ಯ ಬೆಳೆ ಬೆಳೆಯುವುದಕ್ಕಿಂತ ಬಹುಬೆಳೆ ಬೆಳೆಯಬೇಕು. ಆಗ ಒಂದು ಬೆಳೆ ಕೈಕೊಟ್ಟರೆ ಇನ್ನೊಂದು ಬೆಳೆ ಕೈ ಹಿಡಿಯುತ್ತದೆ. ಎಲ್ಲ ರೈತರು ಬಹುಬೆಳೆ ಪದ್ದತಿಯನ್ನು ಅನುಸರಿಸುವುದು ಮುಖ್ಯ’ ಎಂದು ಮುರುಘಾ ಶರಣರು ಹೇಳಿದರು.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ
ಡಾ.ಎಂ.ಕೆ. ನಾಯಕ್ ಅಧ್ಯಕ್ಷತೆ ವಹಿಸಿದ್ದರು.  ರಾಜ್ಯೋತ್ಸವ  ಪ್ರಶಸ್ತಿ ಪುರಸ್ಕೃತ ವಿಜಯಪುರದ ಎಚ್.ವಿ. ಸಜ್ಜನ್‌ ಅವರು ಮಾತನಾಡಿದರು.

ಚಿಕ್ಕಮಗಳೂರಿನ ಬ್ಲಾಕ್ ಗೋಲ್ಡ್ ಲೀಗ್ ಅಧ್ಯಕ್ಷ ಕೆ.ಆರ್. ಕೇಶವ, ಪ್ರಗತಿಪರ ಕೃಷಿಕರಾದ ಕೆ. ಗುಣಪಾಲ್ ಕಡಂಬ ತಾಂತ್ರಿಕತೆ ಮತ್ತು ತಳಿಗಳ ಬಿಡುಗಡೆ ಮಾಡಿದರು. ಶಿಕ್ಷಣ ನಿರ್ದೇಶಕ ಡಾ.ಎಂ. ಹನುಮಂತಪ್ಪ, ಕುಲಸಚಿವ ಡಾ.ಆರ್‌. ಲೋಕೇಶ್, ಡಾ. ಮೃತ್ಯುಂಜಯ ವಾಲಿ, ಡಾ.ಎಂ. ದಿನೇಶ್ ಕುಮಾರ್, ಡಾ.ಎನ್‌. ಶಿವಶಂಕರ್ ಅವರು ತಾಂತ್ರಿಕ ಕೈಪಿಡಿಗಳನ್ನು ಬಿಡುಗಡೆ ಮಾಡಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ. ಕಿರಣ್‌ಕುಮಾರ್ ಅವರೂ ಪಾಲ್ಗೊಂಡಿದ್ದರು.

ವಿವಿಧ ಕೃಷಿ ಮಳಿಗೆಗಳು: ಕೃಷಿ ಮೇಳದಲ್ಲಿ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಸೇರಿ ವಿವಿಧ ಜಿಲ್ಲೆಗಳ ಕೃಷಿ, ತೋಟಗಾರಿಕೆ, ಕೃಷಿ ವಿಜ್ಞಾನ ಕೇಂದ್ರಗಳು, ಪಶುಸಂಗೋಪನೆ, ಕಾನೂನು ಸೇವಾ ಪ್ರಾಧಿಕಾರ ಸೇರಿ ವಿವಿಧ ಇಲಾಖೆಗಳ ಒಟ್ಟು 36 ಮಳಿಗೆಗಳನ್ನು ಸ್ಥಾಪಿಸಲಾಗಿತ್ತು.

ತಂತ್ರಜ್ಞಾನ ಉದ್ಯಾನ, ಭತ್ತ, ರಾಗಿ ಮತ್ತು ಮೆಕ್ಕೆಜೋಳ ತಳಿ ಮತ್ತು ತಂತ್ರಜ್ಞಾನ, ಹವಾಮಾನ ವೈಪರೀತ್ಯ ಚೇತರಿಕೆ ಪ್ರಾತ್ಯಕ್ಷಿಕೆ ಕೇಂದ್ರ, ದ್ವಿದಳ ಧಾನ್ಯ ತಳಿ ಪ್ರಾತ್ಯಕ್ಷಿಕೆ, ವರ್ಜೀನಿಯ ತಂಬಾಕು ಹದಮಾಡುವ ತಂತ್ರಜ್ಞಾನ, ವಿವಿಧ ಮೇವಿನ ಬೆಳೆಗಳು, ರಸಮೇವು ಘಟಕ, ಅಡಿಕೆ ತಳಿ ಹಾಗೂ ತಂತ್ರಜ್ಞಾನ, ಹೈಟೆಕ್‌ ತೋಟಗಾರಿಕೆಗಳ ಮಾಹಿತಿ ಇದ್ದವು.

ಗೋಡಂಬಿ ಕೃಷಿ ತಾಂತ್ರಿಕತೆ, ಸಾಂಬಾರು ಬೆಳೆ ತಳಿ ಹಾಗೂ ತಂತ್ರಜ್ಞಾನ, ಖುಷ್ಕಿ ತೋಟಗಾರಿಕೆ ಪ್ರಾತ್ಯಕ್ಷಿಕೆಗಳು, ಕೃಷಿ, ತೋಟಗಾರಿಕೆ, ಅರಣ್ಯ ಸಮಗ್ರ ಪದ್ಧತಿಗಳು, ಸಾವಯವ ಕೃಷಿ, ಅಣಬೆ ಬೇಸಾಯ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ, ಸಮಗ್ರ ಜಲಾನಯನ ಅಭಿವೃದ್ಧಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ತಂತ್ರಜ್ಞಾನಗಳು, ಜೇನು ಸಾಕಾಣಿಕೆ, ನೀರು ಮತ್ತು ಗೊಬ್ಬರ ನಿರ್ವಹಣೆಗಳ ಮಳಿಗೆಗಳ ಮಾಹಿತಿ ಇದ್ದವು.

ಕೈ ಚಾಲಿತ ಕಾಫಿ ರೇಕಾರ್‌ ಯಂತ್ರ, ಅಡಿಕೆ ಸಿಪ್ಪೆಯಿಂದ ಕಾಂಪೋಸ್ಟ್‌ ತಯಾರಿಕೆ, ಭತ್ತದಲ್ಲಿ ಕಳೆ ತೆಗೆಯುವ ಸುಧಾರಿತ ಕೋನೋ ವೀಡರ್‌, ಈರುಳ್ಳಿ ಬಿತ್ತನೆ ಮಾಡುವ ಸುಧಾರಿತ ಯಂತ್ರಗಳು ಕೃಷಿ ಮೇಳದ ವಿಶೇಷಗಳು.

ಮುರಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಕೃಷಿ ಮೇಳದ ವಿಶೇಷತೆಗಳಾದ ತಂತ್ರಜ್ಞಾನ ಉದ್ಯಾನ, ಭತ್ತ, ರಾಗಿ ಮತ್ತು ಮೆಕ್ಕೆಜೋಳ ತಳಿ ಮತ್ತು ತಂತ್ರಜ್ಞಾನ, ಧ್ವಿದಳ ಧಾನ್ಯ ತಳಿ ಪ್ರಾತ್ಯಕ್ಷಿಕೆ, ಕೃಷಿ ಪರಿಕರಗಳ ಪ್ರದರ್ಶನ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಮತ್ತು ವಿವಿಧ ಇಲಾಖೆಗಳಿಂದ ಸ್ಥಾಪಿಸಿದ್ದ ಮಳಿಗೆಗಳನ್ನು ವೀಕ್ಷಿಸಿದರು.

ಪ್ರಗತಿಪರ ಕೃಷಿಕರಿಗೆ ಸನ್ಮಾನ

ಕೃಷಿ ಮೇಳದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ತೋರಿದ ಪ್ರಗತಿಪರ ಕೃಷಿಕರನ್ನು ಸನ್ಮಾನಿಸಲಾಯಿತು.

ಶಿವಮೊಗ್ಗದ ಪ್ರಗತಿಪರ ರೈತರಾದ ಎಂ.ಪಿ. ಸತೀಶ್‌, ಜಯಲಕ್ಷ್ಮಿ, ದಾವಣಗೆರೆಯ ಟಿ.ವಿ. ರುದ್ರೇಶ್‌, ಸುಮಿತ್ರಮ್ಮ, ಚಿತ್ರದುರ್ಗದ ಪಿ.ಸಿ. ಶ್ರೀನಿವಾಸ, ಸುಮತಿ, ಚಿಕ್ಕಮಗಳೂರಿನ ಕೆ.ಎಚ್‌. ಕುಮಾರಸ್ವಾಮಿ, ಜಿ.ಆರ್‌. ವನಶ್ರೀ, ಕೊಡುಗು ಜಿಲ್ಲೆಯ ಬಿ.ಪಿ. ರವಿಶಂಕರ್‌, ವೀಣಾ ಸುಧೀರ್‌, ಉಡುಪಿಯ ಮಹೇಶ್‌ ಹೆಬ್ಬಾರ್‌, ಸುಜಾತ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲೆಯ ಡಿ. ಅನಿಲ್‌ ಕುಮಾರ್‌, ಎಂ. ಅನಿತಾ ಅವರನ್ನು ಸನ್ಮಾನಿಸಲಾಯಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು