ಗುರುವಾರ , ಮಾರ್ಚ್ 30, 2023
32 °C

ಶಿವಮೊಗ್ಗ: ಇಸ್ತ್ರಿ ಅಂಗಡಿ ಮೂರ್ತಿಯ ಕನ್ನಡ ಪ್ರೀತಿ

ಗಣೇಶ್ ತಮ್ಮಡಿಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ನವೆಂಬರ್‌ ಮಾಸ ಬಂತೆಂದರೆ ಕನ್ನಡದ ಕಂಪು ಹೇಗೆಲ್ಲ ಹರಡಬಹುದು, ಯಾರೆಲ್ಲ ಕ್ರಿಯಾಶೀಲರಾಗಬಹುದು ಎನ್ನಲು ಇಸ್ತ್ರಿ ಅಂಗಡಿಯ ಮಾಲೀಕರೊಬ್ಬರ ಕನ್ನಡ ಪ್ರೇಮ ಮಾದರಿಯಾಗಿದೆ.

ಶಿವಮೊಗ್ಗ ನಗರದ ಸರ್ಕಾರಿ ಬಸ್‌ ನಿಲ್ದಾಣದ ಮುಂಭಾಗದಲ್ಲಿ ಕನ್ನಡ ಕಸ್ತೂರಿ ಹೆಸರಿನ ಇಸ್ತ್ರಿ ಅಂಗಡಿ ಇಟ್ಟುಕೊಂಡಿರುವ ಇವರ ಹೆಸರು ನರಸಿಂಹ ಮೂರ್ತಿ.

ಮಾತೃಭಾಷೆಯ ಮೇಲಿನ ಅಭಿಮಾನ ರಾಜ್ಯೋತ್ಸವದ ದಿನಕ್ಕೆ ಮಾತ್ರ ಸೀಮಿತವಾಗಬಾರದು, ಪ್ರತಿದಿನವೂ, ಪ್ರತಿ ಕ್ಷಣವೂ ಮಾತೃಭಾಷೆಯ ಮೇಲೆ ಅಭಿಮಾನ ಇರಬೇಕು ಎಂಬ ಮಹದಾಸೆಯಿಂದ ಕನ್ನಡದ ಭಾಷಾಭಿಮಾನವನ್ನು ಮುಂದಿನ ಪೀಳಿಗೆಗೆ ತಲುಪಿಸಲು ಶ್ರಮಿಸುತ್ತಿರುವ ಇವರ ಪ್ರಯತ್ನ ಶ್ಲಾಘನೀಯ.

ಇವರ ಇಸ್ತ್ರಿ ಅಂಗಡಿ ಮೂಲಕ ಪಸರಿಸುತ್ತಿದೆ ಕನ್ನಡ. ಶಿವಮೊಗ್ಗದ ನಗರದ ನಿವಾಸಿಗಳಿಗೆ ಇವರು ಬಹು ಚಿರಪರಿಚಿತ.

ಮೂರ್ತಿ ಅವರು ಮಾತೃಭಾಷೆಯ ಮೇಲೆ ಇಟ್ಟಿರುವ ಪ್ರೇಮ ಎಲ್ಲರೂ ನಿಬ್ಬೆರಗಾಗುವಂತೆ ಮಾಡುತ್ತದೆ. ಇವರು, ಕೇವಲ ಬಟ್ಟೆಗಳನ್ನು ಇಸ್ತ್ರಿ ಮಾಡುವುದು ಅಷ್ಟೇ ಅಲ್ಲ. ಭಾಷಾ ಪ್ರೇಮವನ್ನು ಪ್ರತಿಯೊಬ್ಬರಿಗೆ ಸಾರಿ ಹೇಳುತ್ತಾ ಹಲವು ವರ್ಷಗಳಿಂದ ಕನ್ನಡವನ್ನು ಪಸರಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಪುಟ್ಟ ಅಂಗಡಿ ತುಂಬೆಲ್ಲಾ ಜ್ಞಾನಪೀಠ ಪುರಸ್ಕೃತರ ಫೋಟೊಗಳಿವೆ. ಹೀಗಾಗಿ ಶಿವಮೊಗ್ಗದ ಜನ ಇವರನ್ನು ‘ಕನ್ನಡ ಮೂರ್ತಿ’ ಎಂದೇ ಪ್ರೀತಿಯಿಂದ ಕರೆಯುತ್ತಾರೆ.

ಅಂಗಡಿಯಲ್ಲಿ ಕನ್ನಡ ಪುಸ್ತಕಗಳನ್ನು ಇಟ್ಟು ಇತರರಿಗೂ ಓದಲು ಉತ್ತೇಜಿಸುತ್ತಾರೆ. ಕನ್ನಡ ರಾಜ್ಯೋತ್ಸವ, ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆಗಳನ್ನ ತಪ್ಪದೆ ಅಂಗಡಿಯಲ್ಲೇ ಆಚರಿಸಿ ಸಂತಸ ಹಂಚಿಕೊಳ್ಳುತ್ತಾರೆ.

ನಗರಕ್ಕೆ ಸಾಹಿತಿಗಳು, ಕಲಾವಿದರು, ಕನ್ನಡಕ್ಕಾಗಿ ದುಡಿದ ವ್ಯಕ್ತಿಗಳು ಬಂದರೆ ಅವರ ಬಳಿ ತೆರಳಿ ವಂದನೆ ಸಲ್ಲಿಸಿ ಬರುತ್ತಾರೆ. ಗೌರವ ಸಲ್ಲಿಸುವುದನ್ನು ಸಂಪ್ರದಾಯದಂತೆ ಪಾಲಿಸಿಕೊಂಡು ಬಂದಿದ್ದಾರೆ.

ಕನ್ನಡ ಸಾಧಕರ ಹುಟ್ಟುಹಬ್ಬವನ್ನು ಗ್ರಾಹಕರಿಗೆ, ಅಕ್ಕಪಕ್ಕದ ಮಳಿಗೆಯವರಿಗೆ ಸಿಹಿ ಹಂಚುವ ಮೂಲಕ ಆಚರಿಸುತ್ತಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿರುವ ಹೆಸರಾಂತ ಕವಿಗಳನ್ನು ಜನರಿಗೆ ಪರಿಚಯಿಸುತ್ತಾರೆ. ತಮ್ಮ ಕನ್ನಡ ಕಸ್ತೂರಿ ಇಸ್ತ್ರಿ ಅಂಗಡಿಯಲ್ಲಿ ಕನ್ನಡದ ದಿಗ್ಗಜರ ಫೋಟೊಗಳು ರಾರಾಜಿಸುತ್ತಿರುವುದು ಇವರಿಗೆ ಹೆಮ್ಮೆಯ ವಿಚಾರ.

‘ನಾವು ಮಾಡುವ ಕೆಲಸದಲ್ಲೇ ಕನ್ನಡ ಕಾಣಬೇಕು. ಪ್ರೀತಿಸಬೇಕು’ ಎನ್ನುತ್ತಾರೆ ಮೂರ್ತಿ.

ಇತಿಹಾಸ ಪುರುಷರ ಅರಿವು ಮೂಡಿಸುವ ದೇವರಾಜ್‌

ಶಿವಮೊಗ್ಗ: ಜೂನಿಯರ್‌ ರಾಜ್‌ಕುಮಾರ್‌ ಎಂದೇ ಪ್ರಸಿದ್ಧಿ ಪಡೆದ ಶಿವಮೊಗ್ಗದ ಕೆಎಸ್‌ಆರ್‌ಟಿಸಿಯ ನಿವೃತ್ತ ಮುಖ್ಯ ಮೆಕ್ಯಾನಿಕ್‌ ಎಚ್‌. ದೇವರಾಜ್ ಅವರು ಯುವಕರಿಗೆ ಇತಿಹಾಸ ಪುರುಷರ ಅರಿವು ಮೂಡಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.

ಭರಮಪ್ಪ, ಜಯಮ್ಮ ದಂಪತಿಗೆ ಜನಿಸಿದ ದೇವರಾಜ್‌ (58) ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 36 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಶಿವಮೊಗ್ಗದ ಪೆನ್‌ಷನ್‌ ಮೊಹಲ್ಲಾದಲ್ಲಿ ವಾಸವಾಗಿದ್ದಾರೆ.

ಪ್ರತಿವರ್ಷ ಕನ್ನಡ ರಾಜ್ತೋತ್ಸವ ಸಮಯದಲ್ಲಿ ಡಾ.ರಾಜ್‌ಕುಮಾರ್‌ ಅವರ ಪ್ರಮುಖ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ವೇಷಗಳನ್ನು ಧರಿಸಿ ಗಮನ ಸೆಳೆಯುತ್ತಾರೆ. ರಾಜ್ಯೋತ್ಸವದಲ್ಲಿ ಡಾ.ರಾಜ್‌ಕುಮಾರ್‌ ವೇಷಧರಿಸಿ ಕಂಗೊಳಿಸುತ್ತಾರೆ. ಕನ್ನಡ ಭಾಷೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಡಾ.ರಾಜ್‌ಕುಮಾರ್‌ ಅವರ ಮಿಮಿಕ್ರಿ ಮಾಡುವ ಅವರು ಹಲವು ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಇತಿಹಾಸ ಪ್ರಜ್ಞೆಯನ್ನು ಮೂಡಿಸುತ್ತಿದ್ದಾರೆ. 

ಬಹುಮುಖ ಪ್ರತಿಭೆ, ಎಲೆಮರೆ ಕಾಯಿಯಂತೆ ಇರುವ ಇವರು ಪ್ರತಿಭೆಯನ್ನು ಆಟೋಟ ಸ್ಪರ್ಧೆಗಳು, ನಾಟಕ ಹಾಗೂ ಟ್ಯಾಬ್ಲೋಗಳಲ್ಲಿ ತೋರಿಸಿದ್ದಾರೆ. ಕನ್ನಡ ಭಾಷೆ ಬಗ್ಗೆ ಇವರಿಗೆ ಇರುವ ಅಭಿಮಾನವನ್ನು ಮೆಚ್ಚಿ ರಾಜ್ಯ ರಸ್ತೆ ಸಾರಿಗೆ ನಿಗಮ ಎರಡು ಬಾರಿ ಕನ್ನಡ ಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ರಾಜ್ಯಮಟ್ಟದ ಕರುನಾಡ ಸಾಧಕ ಸಿರಿ ಪ್ರಶಸ್ತಿ, ಸಾರಿಗೆ ಸಂಸ್ಥೆಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಮಟ್ಟದ ಸಾಧಕ ಪ್ರಶಸ್ತಿ, ಇತಿಹಾಸ ಪುರುಷ ಸೇರಿ ಹಲವು ಕನ್ನಡ ಪರ ಸಂಘಟನೆಗಳಿಂದ ಸನ್ಮಾನಗಳು ಇವರನ್ನು ಅರಸಿ ಬಂದಿವೆ.

ಕನ್ನಡ ಪ್ರೀತಿಯ ಆದರ್ಶ ಶಿಕ್ಷಕ

ರಿಪ್ಪನ್‌ಪೇಟೆ: ಶಿಕ್ಷಣ ಎಂದರೆ ಅದು ಭವಿಷ್ಯದ ಜೀವನಕ್ಕೆ ದಾರಿ ಹುಡುಕುವುದಷ್ಟೇ ಅಲ್ಲ, ಬದುಕಿನ ಪ್ರಕ್ರಿಯೆ. ಕೇವಲ ಪುಸ್ತಕಕ್ಕೆ ಅಂಟಿಕೊಳ್ಳದೆ ಪಠ್ಯೇತರ ಚಟುವಟಿಕೆಗೂ ಹೆಚ್ಚಿನ ಪ್ರಾಮುಖ್ಯ ನೀಡುವುದು ತಳಲೆ ಶಾಲೆಯ ಮುಖ್ಯ ಶಿಕ್ಷಕ ಬಿ.ಬೋಜಪ್ಪ ಅವರ ಅಭಿರುಚಿ.

ದ್ವಿಚಕ್ರ ವಾಹನದಲ್ಲಿ ಕನ್ನಡ ಬಾವುಟ ಹಾಗೂ ಹೆಗಲಲ್ಲಿ ಕನ್ನಡ ಶಾಲು ರಾರಾಜಿಸುತ್ತವೆ. ಇವರ ಕನ್ನಡ ಪ್ರೇಮ ಗ್ರಾಮೀಣ ಭಾಗದಲ್ಲಿ ಮನೆ ಮಾತಾಗಿದೆ.

ಇವರಲ್ಲಿ ಕನ್ನಡದ ನೆಲ–ಜಲದ ಭಾಷೆಯ ಬಗ್ಗೆ ಅತ್ಯಂತ ಪ್ರೀತಿ, ಪ್ರೇಮ ಕಾಳಜಿ ಇದೆ. ಕನ್ನಡದ ಕಟ್ಟಾ ಅಭಿಮಾನಿ, ಕರ್ನಾಟಕದ ಪ್ರತಿಯೊಬ್ಬ ಕನ್ನಡಿಗನೂ ತಮ್ಮ ಸಹಿಯನ್ನು ಕನ್ನಡದಲ್ಲೇ ಮಾಡಬೇಕು ಎಂದು ಬಯಸುತ್ತಾರೆ. 12 ವರ್ಷಗಳಿಂದ ಕನ್ನಡ ಸಹಿ ಆಂದೋಲನ ಮಾಡುತ್ತ ಈಗಾಗಲೇ ಐದು ಸಾವಿರಕ್ಕೂ ಅಧಿಕ ಸಹಿ ಸಂಗ್ರಹಣೆ ಮಾಡಿದ್ದಾರೆ.

ಶಾಲೆಯಲ್ಲಿ ಶಾಶ್ವತ ದತ್ತಿ ನಿಧಿ ಸ್ಥಾಪನೆ ಮಾಡಿದ್ದಾರೆ. ಅದರಿಂದ ಬರುವ ಬಡ್ಡಿ ಹಣವನ್ನು ಪ್ರತಿವರ್ಷ ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಬಳಸುತ್ತಾರೆ. ಸ್ವರಚಿತ ಕವನ, ನಗೆಹನಿ, ಹಾಡುಗಳು, ಯಕ್ಷಗಾನ, ವೀರಗಾಸೆ ನೃತ್ಯ, ಡೊಳ್ಳು ಕುಣಿತ, ಕೋಲಾಟ, ನಾಟಕ ವಿವಿಧ ಜಾನಪದ ಪ್ರಕಾರಗಳನ್ನು ಶಾಲಾ ಮಕ್ಕಳಿಗೆ ಕಲಿಸುತ್ತಾರೆ. ಇವರ ಈ ಬಹುಮುಖ ಪ್ರತಿಭೆ ಮಕ್ಕಳಿಗೆ ಸ್ಫೂರ್ತಿ.

ಇವರ ಪ್ರತಿಭೆಗೆ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ರಾಜ್ಯಮಟ್ಟದ ಆದರ್ಶ ಶಿಕ್ಷಕ ರತ್ನ ಪ್ರಶಸ್ತಿ, ಬೆಂಗಳೂರು ಸಿದ್ದಯ್ಯಪುರಾಣಿಕ್ ಸ್ಮಾರಕ ರಾಜ್ಯಮಟ್ಟದ ಪ್ರಶಸ್ತಿ, ಕೊಪ್ಪಳ, ಬೆಳಗಾವಿ ಆದರ್ಶ ಶಿಕ್ಷಕ ಪ್ರಶಸ್ತಿ, ಡಾ.ರಾಜಕುಮಾರ್ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಉತ್ತಮ ಶಿಕ್ಷಕರ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ ಸಂದಿವೆ.

ಜನಮನ ಗೆದ್ದ ಹಳ್ಳಿ ಹುಡುಗರ ಕನ್ನಡ ಹಾಡು

ಆನವಟ್ಟಿ: ಸಂಗೀತದ ಹಿನ್ನೆಲೆ ಇಲ್ಲದ ಆನವಟ್ಟಿ, ತಿಮ್ಮಾಪುರ ಹಾಗೂ ಸುತ್ತಲ ಗ್ರಾಮಗಳ ಪ್ರತಿಭಾವಂತ ಯುವಕರ ತಂಡ ಕನ್ನಡ ಪ್ರೇಮ ಮೆರೆಯುವ ವಿಡಿಯೊ ಹಾಡು ಸಿದ್ಧಪಡಿಸಿ ತಾವು ಯಾರಿಗೂ ಕಮ್ಮಿಯಿಲ್ಲ ಎನ್ನುವುದನ್ನು ಸಾಬೀತು ಮಾಡಿದೆ.

ಅಜಯ್ ಬರೆದಿರುವ ಸಾಹಿತ್ಯಕ್ಕೆ, ಪ್ರಕಾಶ್ ರಾಗ ಸಂಯೋಜನೆ ಮಾಡಿ, ಬೆಂಗಳೂರಿನ ರೆಕಾರ್ಡಿಂಗ್ ಸ್ಟುಡಿಯೊದಲ್ಲಿ ಹಾಡಿನ ರೆಕಾರ್ಡಿಂಗ್ ಮುಗಿಸಿದ್ದಾರೆ.

ದೃಶ್ಯ ಚಿತ್ರೀಕರಣದಲ್ಲಿ ಅಮಿತ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಅಲ್ಲಿಯ ತನಕ ಬರುವ ಎಲ್ಲಾ ನೋವು ನಲಿವುಗಳನ್ನು ನುಂಗಿಕೊಂಡು ಸಿದ್ಧಮಾಡಿರುವ ಯುವಕರ ತಂಡದ ‘ನಾನು ಕನ್ನಡಿಗ ಹಾಡು’ ಇಂದು ಎಲ್ಲರ ಮನಸ್ಸು ಗೆದ್ದಿದೆ.

ಅಜಯ್ ದೊಡ್ಡಮನೆ ಅವರು ಕೃಷಿ ಜತೆಗೆ ಹವ್ಯಾಸವಾಗಿ ಸಾಹಿತ್ಯ ರಚನೆ ಮೈಗೂಡಿಸಿಕೊಂಡಿದ್ದಾರೆ. ‘ಬಾರಿಸು ಕನ್ನಡ ಡಿಂಡಿಮವ’ ಹಾಡಿನಿಂದ ಪ್ರೇರಣೆಗೊಂಡು ನಾಡು-ನುಡಿ ಸಂಸ್ಕೃತಿ ಬಿಂಬಿಸುವ ಸಾಹಿತ್ಯ ಕೃಷಿಗೆ ಕೈ ಹಾಕಿದ ಅವರು ಪ್ರಮುಖ ಕವಿಗಳು, ನಾಡಿನ ಕ್ರೀಡೆಗಳು, ಚಿತ್ರರಂಗದವರು, ಮಹಿಳಾ ಸಾಧಕರು, ನಾಡಿನ ವಿವಿಧ ಭಾಗದ ಭಾಷೆಗಳು, ಪ್ರಸಿದ್ಧ ಸ್ಥಳಗಳು, ನಾಡಿನ ಜಾನಪದ ಕಲೆಗಳನ್ನು ಸೊಗಸಾಗಿ ಬಿಂಬಿಸಿದ್ದಾರೆ.

ಈ ಸಾಹಿತ್ಯಕ್ಕೆ ಪ್ರಕಾಶ್ ಕೂಡ್ಲಗಿ ರಾಗ ಸಂಯೋಜನೆ ಮಾಡಿ, ಧ್ವನಿ ನೀಡಿದ್ದಾರೆ. ಇದೇ ಹಾಡಿಗೆ ನೃತ್ಯ ಸಂಯೋಜನೆ ಮಾಡಿರುವ ಎಸ್.ಎ.ಅಮಿತ್ ಜಾನಪದ ಶೈಲಿಯ ಡೊಳ್ಳು ಕುಣಿತ, ಭರತನಾಟ್ಯ ಒಳಗೊಂಡ ವಿವಿಧ ನೃತ್ಯ ಪ್ರಕಾರಗಳನ್ನು ಬಳಸಿ ನೃತ್ಯ ಮಾಡಿದ್ದಾರೆ.

ಚಿತ್ರರಂಗದವರಾದ ಜೋಗಿ ಪ್ರೇಮ್, ವಿ. ನಾಗೇಂದ್ರ ಪ್ರಸಾದ್, ಅನಿರುದ್ಧ, ಪವನ ಶೌರ್ಯ ಅವರು ವಿಡಿಯೊ ಪ್ರೋಮೊವನ್ನು ಮಾಡಲು ಸಹಕರಿಸಿದ್ದಾರೆ. ಅಜಯ್ ದೊಡ್ಡಮನೆ ಹಾಗೂ ಸ್ನೇಹಿತ ಪ್ರಕಾಶ ಕೂಡ್ಲಗಿ ಅವರು ಸಾಹಿತ್ಯವನ್ನು ಹಾಡಿನ ರೂಪದಲ್ಲಿ ಹೊತರಬೇಕು ಎಂಬ ನಿರ್ಧಾರ ಮಾಡಿದಾಗ, ಹಲವು ಸ್ನೇಹಿತರು ಹಾಗೂ ಆನವಟ್ಟಿ ಸುತ್ತಲ ಗ್ರಾಮಗಳ ಕನ್ನಡ ಅಭಿಮಾನಿಗಳು ಕೈಜೋಡಿಸಿದ್ದಾರೆ. ಅವರ ಸಹಕಾರದಿಂದ ಅಂದಾಜು ₹ 3 ಲಕ್ಷ ವೆಚ್ಚದಲ್ಲಿ ಈ ಹಾಡಿನ ವಿಡಿಯೊ ಚಿತ್ರೀಕರಣ ಮಾಡಿ ಬಿಡುಗಡೆ ಮಾಡಿದ್ದಾರೆ.

‘ನಾನು ಕನ್ನಡಿಗ’ ಹಾಡಿನ ಮೂಲಕ ಜನರು ನಮ್ಮ ಪ್ರತಿಭೆ ಗುರುತಿಸಿದ್ದಾರೆ. ಮುಂದೆ ಹಲವು ಸಾಧನೆಗಳನ್ನು ಮಾಡಲು ದಾರಿ ಮಾಡಿಕೊಟ್ಟಿದ್ದಾರೆ ಎನ್ನುತ್ತಾರೆ ಪ್ರಕಾಶ್ ಕೂಡ್ಲಗಿ, ಅಜಯ್ ದೊಡ್ಡಮನೆ, ಎಸ್.ಎ.ಅಮಿತ್ ಹಾಗೂ ಸ್ನೇಹಿತರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು