ಹೊಸನಗರ: ಇತಿಹಾಸ ಪ್ರಸಿದ್ದ ತಾಲ್ಲೂಕಿನ ಅಮ್ಮನಘಟ್ಟದ ಶ್ರೀ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಘಟ್ಟದ ಸಮೀಪವಿರುವ ಹಳೇ ಅಮ್ಮನಘಟ್ಟದಲ್ಲಿ ಶ್ರೀ ದೇವಿಗೆ ಕಂಕಣ ಕಟ್ಟುವ ಮೂಲಕ ವಿದ್ಯುಕ್ತ ಚಾಲನೆ ದೊರೆಯಿತು.
ಭಕ್ತರು ಸೋಮವಾರ ಹಳೇ ಅಮ್ಮನಘಟ್ಟಕ್ಕೆ ಮೂರ್ನಾಲ್ಕು ಕಿ.ಮೀ. ಪಾದಸೇವೆಯಲ್ಲಿ ತೆರಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ನೈವೇದ್ಯ ಸಮರ್ಪಿಸಿ, ದೇವಿಗೆ ಕಂಕಣ ಕಟ್ಟಿದರು. ಈ ಕಾಯಕದ ಬಳಿಕವೇ ಹೊಸ ಅಮ್ಮನಘಟ್ಟದಲ್ಲಿ ಜಾತ್ರೆ ನಡೆಸಲು ಅನುಮತಿ ದೊರೆತಂತೆ. ಇದು ಹಲವು ಶತಮಾನದಿಂದ ನಡೆದು ಬಂದ ಇಲ್ಲಿನ ಸಂಪ್ರದಾಯವಾಗಿದೆ.
ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಬಿ. ಸ್ವಾಮಿರಾವ್ ಸಮ್ಮುಖದಲ್ಲಿ ಅರ್ಚಕ ಭಾಸ್ಕರ ಜೋಯ್ಸ್ ಅವರು ದೇವಿಗೆ ಮಾತ್ರವಲ್ಲದೆ ಇಲ್ಲಿನ ಭೋವಿ ಜನಾಂಗದ ಪ್ರಮುಖ ಚತ್ರಳ್ಳಿ ಗಿಡ್ಡಪ್ಪ ಅವರಿಗೆ ಕಂಕಣ ಕಟ್ಟಿದರು.
ಕಂಕಣ ಕಟ್ಟಿದ ಬಳಿಕ ಭೋವಿ ಜನಾಂಗದ ಮುಖಂಡ 25 ದಿನಗಳ ಕಾಲ ದೇವಿಯ ಸನ್ನಿಧಿಯಲ್ಲಿ ತಂಗಿ, ಪೂಜಾ ಸೇವಾಕಾರ್ಯಗಳಲ್ಲಿ ತೊಡಗಬೇಕು. ಕ್ಷೇತ್ರಕ್ಕೆ ಬರುವಾಗ ಆತ ಮನೆ ದೇವರ ಸಂಗಡ ಮಂಗಳವಾದ್ಯದೊಂದಿಗೆ ಕಾಲಿಡಬೇಕು. ಈ ಸಮಯದಲ್ಲಿ ಅನ್ಯ ಆಹಾರ ಸೇವಿಸುವಂತಿಲ್ಲ. ಪಿತೃಪಕ್ಷ ಆರಂಭದಿಂದ ನವರಾತ್ರಿಯ ಅಮಾವಾಸ್ಯೆ ಮುಗಿಯುವ ತನಕ ಅವರು ಹಲವು ನಿಯಮ, ನಿಷ್ಠೆಗೆ ಒಳಪಟ್ಟು ವ್ರತ ಆಚರಣೆ ಅನುಸರಿಸಬೇಕು. ದೇವಿಯ ಜೊತೆಯಲ್ಲಿ ಅವರಿಗೂ ಅರಿಸಿನ ಕೊಂಬಿನ ಕಂಕಣ ಕಟ್ಟುವುದು ಇಲ್ಲಿನ ವಾಡಿಕೆ ಆಗಿದೆ.
ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಸುಧೀರ್ ಭಟ್, ಕೋಡೂರು ವಿಜೇಂದ್ರ ರಾವ್, ಪುಟ್ಟಪ್ಪ, ನೀರೇರಿ ಸಂತೋಷ್, ಪುಷ್ಪಾವತಿ, ಹರೀಶ್ಗೌಡ, ಬೇಳೂರು ಡಾಕಪ್ಪ ಸೇರಿದಂತೆ ನೂರಾರು ಭಕ್ತರು ಇದ್ದರು.