ಮಂಗಳವಾರ, ಮಾರ್ಚ್ 21, 2023
29 °C
75ಕ್ಕೂ ಹೆಚ್ಚು ಕಂಪನಿಗಳಿಂದ ಕ್ಯಾಂಪಸ್ ಸಂದರ್ಶನ

ಜೆಎನ್ಎನ್‌ಸಿಇ: ಬೇಡಿಕೆಯ ಹೊಸ ಕೋರ್ಸ್‌ಗಳು ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಜೆಎನ್ಎನ್‌ಸಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಹೊಸದಾಗಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮತ್ತು ಮಷಿನ್ ಲರ್ನಿಂಗ್ ಕೋರ್ಸ್ ಪ್ರಾರಂಭಿಸಲಾಗುತ್ತಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಹೇಳಿದರು.

ಎಐಸಿಟಿಇ ಅನುಮೋದನೆ ನಂತರ ಪ್ರಸಕ್ತ ವರ್ಷದಿಂದಲೇ ಪ್ರವೇಶ ಪ್ರಾರಂಭವಾಗಲಿದೆ. ಮೊದಲ ವರ್ಷ 60 ಸೀಟುಗಳು ಲಭ್ಯವಿರುತ್ತವೆ. ಎಐಸಿಟಿಇ ಅನುಮೋದನೆ ನಂತರ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಸೀಟುಗಳನ್ನು  180ಕ್ಕೆ ಹೆಚ್ಚಿಸಲು ಹಾಗೂ ಅನುಮೋದನೆ ದೊರೆತ ಎಂಸಿಎ ಸ್ನಾತಕೋತ್ತರ ಪದವಿ ಪ್ರವೇಶ 60 ಸೀಟುಗಳಿಗೆ ಹೆಚ್ಚಿಸಲಾಗಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.  

ಕಳೆದ ಬಾರಿ ಕೋವಿಡ್ ಮಧ್ಯೆಯೂ  ಜೆಎನ್ಎನ್‌ಸಿ ಎಂಜಿನಿಯರಿಂಗ್ ಕಾಲೇಜಿನ ವಿವಿಧ ವಿಭಾಗಗಳಿಗೆ ಶೇ 79ರಷ್ಟು ವಿದ್ಯಾರ್ಥಿಗಳು ದಾಖಲಾಗಿದ್ದರು. ₹ 8 ಕೋಟಿ ವಿದ್ಯಾರ್ಥಿ ವೇತನ ನೀಡಲಾಗಿದೆ. ಕಂಪ್ಯೂಟರ್ ಸೈನ್ಸ್, ಸಿವಿಲ್ ಎಂಜಿನಿಯರಿಂಗ್ ಪದವಿ ವಿಭಾಗದಲ್ಲಿ ಎರಡು ರ್‍ಯಾಂಕ್, ಒಂದು ಚಿನ್ನದ ಪದಕ ಹಾಗೂ ಎಂಬಿಎ ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಒಂದು ರ್‍ಯಾಂಕ್ ಅನ್ನು ಕಾಲೇಜಿನ ವಿದ್ಯಾರ್ಥಿಗಳು ಪಡೆದಿದ್ದಾರೆ ಎಂದರು.

ಕಾಲೇಜಿನ ಪ್ಲೇಸ್‌ಮೆಂಟ್ ಸೆಲ್ ಮೂಲಕ ಟಿಸಿಎಸ್, ವಿಪ್ರೊ, ಇನ್ಫೊಸಿಸ್, ಆಕ್ಸೆಂಚರ್, ಮೈಂಡ್‌ ಟ್ರೀ, ರೊಬೊಸಾಫ್ಟ್‌ ಸೇರಿ 75ಕ್ಕೂ ಹೆಚ್ಚು ಕಂಪನಿಗಳು ಕ್ಯಾಂಪಸ್ ಸಂದರ್ಶನ ನಡೆಸಿವೆ. ಎಂಜಿನಿಯರಿಂಗ್, ಎಂಸಿಎ, ಎಂಬಿಎ ಸೇರಿ ವಿವಿಧ ವಿಭಾಗಗಳ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾರ್ಷಿಕ ₹ 3.5 ಲಕ್ಷದಿಂದ ₹ 14 ಲಕ್ಷ ವೇತನಕ್ಕೆ ಆಯ್ಕೆಯಾಗಿದ್ದಾರೆ. 2020ರಲ್ಲಿ ಅರ್ಹ ಅಭ್ಯರ್ಥಿಗಳಲ್ಲಿ ಶೇ 65 ಹಾಗೂ 2021ರಲ್ಲಿ ಶೇ 75 ವಿದ್ಯಾರ್ಥಿಗಳು ಕ್ಯಾಂಪಸ್ ನೇಮಕಾತಿ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಕಾಲೇಜಿನ ಎಲ್ಲ ಎಂಜಿನಿಯರಿಂಗ್ ವಿಭಾಗಗಳು ಎನ್‌ಬಿಎ ಅನುಮೋದನೆ ಪಡೆದಿದ್ದು, ಎಐಸಿಟಿ ಅನುಮೋದನೆಯೊಂದಿಗೆ ಯುಜಿಸಿ 2 ಎಫ್ ಮತ್ತು 12ಬಿ ಪ್ರಮಾಣ ಪತ್ರ ಪಡೆದಿದೆ. ಪ್ರತಿಷ್ಠಿತ ಇಂಡಿಯಾ ಟುಡೆ ನಡೆಸುವ ಉತ್ತಮ ಕಾಲೇಜುಗಳ ಸಮೀಕ್ಷೆಯಲ್ಲಿ ಜೆಎನ್‌ಎನ್‌ಸಿಇ ಕಾಲೇಜು ಭಾರತದಲ್ಲಿ 48ನೇ ರ್‍ಯಾಂಕ್‌ ಮತ್ತು ರಾಜ್ಯದಲ್ಲಿ 10ನೇ ರ್‍ಯಾಂಕ್ ಪಡೆದಿದೆ ಎಂದು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷ ಅಶ್ವತ್ಥ ನಾರಾಯಣ ಶೆಟ್ಟಿ, ಸಹ ಕಾರ್ಯದರ್ಶಿ ಅಮರೇಂದ್ರ ಕಿರೀಟಿ, ಖಜಾಂಚಿ ಸಿ.ಆರ್.ನಾಗರಾಜ, ನಿರ್ದೇಶಕ ಶಿವಕುಮಾರ್, ಕುಲಸಚಿವ ಪ್ರೊ.ಹೂವಯ್ಯಗೌಡ, ಕಾಲೇಜಿನ ಪ್ರಾಂಶುಪಾಲ ಡಾ.ಪಿ.ಮಂಜುನಾಥ, ಡಾ.ಎಂ.ಎಂ.ರಜತ್ ಹೆಗಡೆ, ನೃಪತುಂಗ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.