ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೋಗ ಜಲಪಾತ ವೀಕ್ಷಣೆಗೆ ಪ್ರವೇಶ ದರ ಹೆಚ್ಚಳ: ಪ್ರವಾಸಿಗರ ಅಸಮಾಧಾನ

Published : 22 ಆಗಸ್ಟ್ 2024, 15:07 IST
Last Updated : 22 ಆಗಸ್ಟ್ 2024, 15:07 IST
ಫಾಲೋ ಮಾಡಿ
Comments

ಕಾರ್ಗಲ್: ಪ್ರಕೃತಿದತ್ತ ಸೌಂದರ್ಯದ ಕಣಜವಾಗಿರುವ ವಿಶ್ವವಿಖ್ಯಾತ ಜೋಗ ಜಲಪಾತದ ವೀಕ್ಷಣೆಗೆ ಜೋಗ ನಿರ್ವಹಣಾ ಪ್ರಾಧಿಕಾರ ನಿಗದಿಪಡಿಸಿದ್ದ ಪ್ರವೇಶ ಶುಲ್ಕದ ದರವನ್ನು ಹೆಚ್ಚಳ ಮಾಡಲಾಗಿದ್ದು, ಈ ಬಗ್ಗೆ ಸ್ಥಳೀಯರು, ಪ್ರವಾಸಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪರಿಷ್ಕರಿಸಿದ ದರದಂತೆ ಒಂದು ಬಸ್‌ಗೆ ₹ 200 (ಹಳೆ ದರ ₹ 150), ಮಿನಿ ಬಸ್ ₹ 150 (ಹಳೆ ದರ ₹100), ಕಾರು, ಜೀಪ್‌ಗೆ ₹  80 (ಹಳೆ ದರ ₹50), ಆಟೊಗೆ ₹ 40 (ಹಳೆ ದರ ₹30), ದ್ವಿಚಕ್ರ ವಾಹನ ₹ 30 (ಹಳೆ ದರ ₹20), ವಿದೇಶಿ ಪ್ರವಾಸಿಗರಿಗೆ ₹ 100 (ಹಳೆ ದರ ₹50), ಪ್ರವಾಸಿಗರಿಗೆ ₹ 20 (ಹಳೆ ದರ 10), ಕಾಲೇಜು ವಿದ್ಯಾರ್ಥಿಗಳಿಗೆ ₹ 20, ಶಾಲಾ ವಿದ್ಯಾರ್ಥಿಗಳಿಗೆ ₹ 10ರಂತೆ ದರ ನಿಗದಿಪಡಿಸಲಾಗಿದೆ.

‘ಜಲಪಾತ ಪ್ರದೇಶದಲ್ಲಿ ಕ್ಯಾಮೆರಾ ಬಳಸಲು ₹ 100, ಡ್ರೋಣ್ ಕ್ಯಾಮೆರಾ ಬಳಸಿಕೊಳ್ಳಲು ₹ 500 ನಿಗದಿಯಾಗಿದ್ದು, ಅಂಗವಿಕಲರು, ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಸೈನಿಕರು, ಪತ್ರಿಕಾ ವರದಿಗಾರರು ಮತ್ತು ಟಿ.ವಿ ಮಾಧ್ಯಮದವರಿಗೆ ಪ್ರವೇಶ ಉಚಿತವಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳ ಆದೇಶದ ಮೇಲೆ ದರ ನಿಗದಿ ಮಾಡಿ ಫಲಕ ಅಳವಡಿಸಲಾಗಿದೆ’ ಎಂದು ಪ್ರವಾಸೋದ್ಯಮ ಇಲಾಖೆಯ ಜಂಟಿ ಕಾರ್ಯದರ್ಶಿ ಧರ್ಮಪ್ಪನವರು ಮಾಹಿತಿ ನೀಡಿದ್ದಾರೆ.

ವಾಹನಕ್ಕೆ ಪಡೆದ ಶುಲ್ಕವು ವಾಹನದ ಒಳಗಿರುವವರಿಗೆ ಮತ್ತು ಪ್ರವಾಸಿಗರಿಗೆ ಅನ್ವಯಿಸುವುದಿಲ್ಲ. ಪ್ರವಾಸಿಗರು ಪ್ರತ್ಯೇಕವಾಗಿ ಶುಲ್ಕ  ಪಾವತಿಸಬೇಕು. ವಾಹನಗಳಿಗೆ ಟಿಕೆಟ್ ಪಡೆದು 2 ಗಂಟೆಯ ನಂತರ ಹೆಚ್ಚುವರಿ ನಿಲುಗಡೆ ಮಾಡುವುದಿದ್ದಲ್ಲಿ ಪ್ರತ್ಯೇಕ ಶುಲ್ಕ ಪಾವತಿಸಬೇಕಾಗುತ್ತದೆ. ಶಾಲಾ ಕಾಲೇಜು ವಿದ್ಯಾರ್ಥಿಗಳ ಪ್ರವಾಸ ಕಾರ್ಯಕ್ರಮವಾದಲ್ಲಿ ಮುಂಚಿತವಾಗಿ ನಿರ್ವಹಣಾ ಪ್ರಾಧಿಕಾರದ ಅನುಮತಿ ಪಡೆದಲ್ಲಿ ಶೇ 50ರಷ್ಟು ಮಾತ್ರ ಶುಲ್ಕ ಪಾವತಿಸಲು ಅವಕಾಶವಿರುತ್ತದೆ. ಚಲನಚಿತ್ರದ ಚಿತ್ರೀಕರಣ, ಡ್ರೋಣ್ ಬಳಕೆ, ಧಾರಾವಾಹಿ ಚಿತ್ರೀಕರಣ, ಪ್ರೀವೆಡ್ಡಿಂಗ್ ಶೂಟ್, ರಿಯಾಲಿಟಿ ಶೋ ಕಾರ್ಯಕ್ರಮಗಳಿಗೆ ಮುಂಚಿತವಾಗಿಯೇ ಜೋಗ ನಿರ್ವಹಣಾ ಪ್ರಾಧಿಕಾರದ ಪೂರ್ವಾನುಮತಿ ಪಡೆಯಬೇಕು ಎಂದು ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

‘ಜೋಗ ನಿರ್ವಹಣಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ 19 ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದು, ಉದ್ಯೋಗಿಗಳ ಸಂಬಳ ನಿರ್ವಹಣೆ ಪ್ರವೇಶ ಶುಲ್ಕ ಸಂಗ್ರಹದಿಂದ ಸಾಧ್ಯವಾಗುತ್ತಿಲ್ಲ. ಇನ್ನೂ ಹೆಚ್ಚುವರಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಪ್ರವೇಶ ಶುಲ್ಕ ಹೆಚ್ಚಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿ, ತಾಲ್ಲೂಕು ಆಡಳಿತದೊಂದಿಗೆ ಜೋಗ ನಿರ್ವಹಣಾ ಪ್ರಾಧಿಕಾರದ ವತಿಯಿಂದ ಚರ್ಚೆ ನಡೆಸಿ ಪ್ರವೇಶ ಶುಲ್ಕ ಪರಿಷ್ಕರಣೆ ಕಾರ್ಯಕ್ಕೆ ಮುಂದಾಗಿದೆ’ ಎಂದು ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕ ಧರ್ಮಪ್ಪ ತಿಳಿಸಿದ್ದಾರೆ.

ಸ್ಥಳೀಯರ ಅಸಮಾಧಾನ: ‘ಪ್ರಕೃತಿದತ್ತ ಸಹಜ ಸೌಂದರ್ಯ ಸವಿಯಲು ಹಣ ನೀಡುವ ಕ್ರಮ ಜನ ವಿರೋಧಿಯಾಗಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಕೂಡಲೇ ಹಿಂಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಈ ಕ್ರಮ ವಿರೋಧಿಸಿ ಹೋರಾಟ ನಡೆಸಲಾಗುವುದು’ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಎಸ್.ಎಲ್.ರಾಜಕುಮಾರ್ ತಿಳಿಸಿದ್ದಾರೆ.

‘ಜೋಗ ನಿರ್ವಹಣಾ ಪ್ರಾಧಿಕಾರ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದು, ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳ್ಳುವವರೆಗೂ ಈ ಹಿಂದೆ ನಿಗದಿಪಡಿಸಿದ್ದ ದರದಂತೆ ಮುಂದುವರಿಸುವುದು ಒಳಿತು’ ಎಂದು ಆಶ್ರಯ ಸಮಿತಿ ಮಾಜಿ ಅಧ್ಯಕ್ಷ ಬಿ. ಉಮೇಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT