ಶುಕ್ರವಾರ, ಆಗಸ್ಟ್ 12, 2022
20 °C
ಮಳೆಗಾಲದಲ್ಲಿ ಸಂಪರ್ಕ ಕಳೆದುಕೊಳ್ಳುವ ಗ್ರಾಮಸ್ಥರು

ಕಾಲ ಬದಲಾದರೂ ನೀಗದ ಕಾಲುಸಂಕ ಸಮಸ್ಯೆ!

ವೆಂಕಟೇಶ ಜಿ.ಎಚ್. Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಮತ್ತೊಂದು ಮಳೆಗಾಲ ಆರಂಭವಾಗಿದೆ. ಕಾಡು, ಬೆಟ್ಟ, ಹಳ್ಳ–ಕೊಳ್ಳಗಳ ಆಚೆ ಜನವಸತಿ ಇರುವ ಮಲೆನಾಡಿನಲ್ಲಿ ಜನರ ಸಂಪರ್ಕಕ್ಕೆ ಕೆಲವೆಡೆ ಕಾಲುಸಂಕಗಳು ನೆರವಾಗಿವೆ. ಮಳೆಗಾಲದಲ್ಲಂತೂ ಕಾಲು ಸಂಕಗಳು ಕಾಡ ನಡುವಿನ ವಾಸಿಗಳಿಗೆ ಜೀವದಾಯಿನಿಯೂ ಹೌದು.

ಆದರೆ ಹೆಚ್ಚಿನ ಕಡೆ ಕಾಲುಸಂಕಗಳು ಇಲ್ಲ. ಇದ್ದರೂ ಅವು ಹಾಳಾಗಿದ್ದು, ಮಳೆಗಾಲದಲ್ಲಿ ತುಂಬಿ ಹರಿಯುವ ಹಳ್ಳ, ಕೊಳ್ಳ, ತೊರೆಗಳನ್ನು ದಾಟುವವರು ಜೀವ ಕೈಯಲ್ಲಿಡಿದುಕೊಳ್ಳಬೇಕಿದೆ. ಜಿಲ್ಲೆಯ ತೀರ್ಥಹಳ್ಳಿ, ಸಾಗರ, ಹೊಸನಗರ ತಾಲ್ಲೂಕುಗಳಲ್ಲಿ ಕಾಲುಸಂಕಗಳಿಗೆ ಬದಲಾಗಿ ಮಿನಿ ಸೇತುವೆ ನಿರ್ಮಿಸಿಕೊಡಿ ಎಂಬುದು ಸ್ಥಳೀಯರ ಬೇಡಿಕೆ. ಕಾಲು ಸಂಕಗಳ ಸ್ಥಿತಿಗತಿಯ ಬಗ್ಗೆ ಈ ವಾರದ ‘ನಮ್ಮ ಜನ ನಮ್ಮ ಧ್ವನಿ’ ಅಂಕಣ ಬೆಳಕು ಚೆಲ್ಲಿದೆ.

₹ 35 ಕೋಟಿ ವೆಚ್ಚದಲ್ಲಿ 634 ಸಂಕ: ಬೈಂದೂರು ಸೇರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 634 ಕಾಲುಸಂಕಗಳ ನಿರ್ಮಾಣಕ್ಕೆ ₹ 35 ಕೋಟಿ ಒದಗಿಸಲು ಕೇಂದ್ರ ಸರ್ಕಾರ ಒಪ್ಪಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಕಾಲುಸಂಕಗಳ ನಿರ್ಮಾಣಕ್ಕೆ ಜಿಲ್ಲಾ ಪಂಚಾಯಿತಿಯಿಂದ ಯೋಜನಾ ವರದಿ ಸಿದ್ಧಪಡಿಸಿ ಪ್ರಸ್ತಾವ ಕಳುಹಿಸಲಾಗಿತ್ತು. ಕಾಲು ಸಂಕ ಮಲೆನಾಡಿನ ಸಾಮಾನ್ಯ ಸಮಸ್ಯೆ. ಅದರ ಗಂಭೀರತೆ ಬಗ್ಗೆ ದೆಹಲಿಗೆ ತೆರಳಿ ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟ ಪರಿಣಾಮ ಅವರು ಅನುದಾನ ನೀಡಲು ಒಪ್ಪಿದರು.

ಮಹಾತ್ಮಗಾಂಧೀಜಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಲುಸಂಕಗಳ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಸಂಸದರು ತಿಳಿಸಿದರು.

ಕುಮಾರಸ್ವಾಮಿ ₹ 100 ಕೋಟಿ ಕೊಟ್ಟಿದ್ದರು..

2018ರಲ್ಲಿ ಆಗುಂಬೆ ಸಮೀಪದ ಕೆಂದಳಬೈಲು 9ನೇ ತರಗತಿ ವಿದ್ಯಾರ್ಥಿನಿ ಅಶಿಕಾ ದೊಡ್ಲು ಹಳ್ಳ ದಾಟುವಾಗ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದರು. ತಾಯಿಯ ಎದುರೇ ಆಕೆ ನೀರಿನಲ್ಲಿ ಕೊಚ್ಚಿ ಹೋಗಿದ್ದರು.

ಆಗ ಶಾಸಕರಾದ ಆರಗ ಜ್ಞಾನೇಂದ್ರ ಹಾಗೂ ಎಚ್. ಹಾಲಪ್ಪ ಹರತಾಳು ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದರು.

ವಿದ್ಯಾರ್ಥಿನಿ ಅಶಿಕಾ ನಿಧನರಾದಾಗ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಾಲುಸಂಕಗಳ ಅಭಿವೃದ್ಧಿಗೆ ₹ 100 ಕೋಟಿ ಅನುದಾನವನ್ನು ನೀಡಿದ್ದರು. ಆಗ ‘ಶಾಲಾ ಸೇತುಬಂಧ’ ಎಂಬ ಯೋಜನೆ ಜಾರಿಗೊಳಿಸಿದ್ದರು. ಅದರ ಫಲವಾಗಿ ಬೇಡಿಕೆ ಇದ್ದ ಅನೇಕ ಕಾಲುಸಂಕ ಪೂರ್ಣಗೊಂಡಿತ್ತು.

ಮಳೆಗಾಲದಲ್ಲಿ ಸಂಪರ್ಕವೇ ಸವಾಲು

ರವಿ ನಾಗರಕೊಡಿಗೆ

ಹೊಸನಗರ: ಮಳೆಗಾಲ ಬಂತೆಂದರೆ ಇಲ್ಲಿ ಕಾಲುಸಂಕಗಳದ್ದೇ ಸಮಸ್ಯೆ. ಸಂಪರ್ಕವೇ ಸವಾಲಾಗಿ ಕಾಡುತ್ತವೆ. ಹೇಳಿಕೇಳಿ ಇದು ಮುಳುಗಡೆಯ ತವರು. ಸಹಜವಾಗಿಯೇ ಹಳ್ಳ, ಕೊಳ್ಳಗಳನ್ನು ಹೊಂದಿರುವ ಇಲ್ಲಿ ಸಂಕಗಳು ಹೆಚ್ಚು. ಹಾಗೇ ಸಮಸ್ಯೆಗಳು ಹೆಚ್ಚು. ಮಳೆ ಸುರಿದರೆ ಸಂಕಗಳ ಸಮಸ್ಯೆಗಳು ಒಮ್ಮೆಲೇ ಎದುರಾಗುತ್ತವೆ.

ನೆರೆ ಬಂತೆಂದರೆ ಜನರ ಓಡಾಟ ಸುಲಭ ಸಾಧ್ಯವಲ್ಲ. ಸಂಕಗಳಲ್ಲಿ ಓಡಾಡಲು ಹೆದರುವ ಸ್ಥಿತಿ ಇದೆ. ಶರಾವತಿ, ಚಕ್ರಾ, ಸಾವೇಹಕ್ಲು, ಮಾಣಿ ಹಿನ್ನೀರು, ಮಾವಿನಹೊಳೆ, ಕೊಡಚಾದ್ರಿ ತಪ್ಪಲು ಸೇರಿ ವಿವಿಧ ಭಾಗಗಳಲ್ಲಿ ಕಾಲುಸಂಕದ ಸಮಸ್ಯೆಗಳು ಸಾಕಷ್ಟು ವರ್ಷದಿಂದಲೂ ಬಾಧಿಸುತ್ತಲೇ ಇದೆ.

ತಾಲ್ಲೂಕಿನ ಯಡೂರು, ನಿಟ್ಟೂರು, ಅಂಡಗದೋದೂರು, ಸುಳುಗೋಡು, ಖೈರಗುಂದ ನಗರ, ಅರಮನೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಲುಸಂಕಗಳ ಅವಶ್ಯಕತೆ ಹೆಚ್ಚಿದೆ. ಮೊದಲೇ ಗುಡ್ಡಗಾಡು, ಮುಳುಗಡೆ ಪ್ರದೇಶವಾದ ಈ ಭಾಗದಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತವೆ. ಮಳೆಗಾಲದಲ್ಲಿ ಊರಿನ ಸಂಪರ್ಕಕ್ಕೆ ಕಾಲುಸಂಕಗಳೇ ಕೊಂಡಿ. ಮರದದಿಮ್ಮಿಗಳ ಸಾರ ಹಾಕಿಕೊಂಡು ಓಡಾಡುವ ಗ್ರಾಮಸ್ಥರ ಪಾಡು ಹೇಳತೀರದು. ಕಾಲುಸಂಕಗಳು ದುಃಸ್ಥಿತಿಗೆ ತಲುಪಿ ಓಡಾಟ ಸಾಧ್ಯವಾಗದ ಕಾರಣ ಹಲವು ಗ್ರಾಮಗಳು ದ್ವೀಪವಾಗಿಯೇ ಉಳಿಯುತ್ತಿವೆ. ನದಿ, ಹಳ್ಳ, ಕೊಳ್ಳ ದಾಟಲು ಕಾಲುಸಂಕವಿಲ್ಲದೆ ಈಜಿ ದಡ ಸೇರುವ ಹರ ಸಾಹಸದಲ್ಲಿ ಪ್ರಾಣಕ್ಕೆ ಸಂಚಕಾರ ತಂದುಕೊಂಡವರೂ ಇದ್ದಾರೆ.

ತಾಲ್ಲೂಕು ಆಡಳಿತವು 65 ಕಾಲು ಸಂಕ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿತ್ತು. ಆದರೆ, ಅದರಲ್ಲಿ 40 ಸಂಕಗಳು ಅಭಿವೃದ್ಧಿಗೊಂಡಿವೆ. ಇನ್ನು 20 ಸಂಕಗಳ ಕಾಮಗಾರಿ ಪ್ರಗತಿಯಲ್ಲಿದೆ. ಮಳೆಗಾಲ ಬಂದರೂ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣಗಳು ಕಂಡುಬರುತ್ತಿಲ್ಲ. ಉಳಿದ 10 ಸಂಕಗಳ ಕಾಮಗಾರಿ ಜಾಗದ ಸಮಸ್ಯೆಯಿಂದಾಗಿ ಆರಂಭವಾಗಿಲ್ಲ. ನಿಟ್ಟೂರು, ಯಡೂರು, ಕರಿಮನೆ, ಅಂಡಗದೋದೂರು ಭಾಗದ ಜನರ ಕಾಲುಸಂಕದ ಕನಸು ನನಸಾಗಿಲ್ಲ.

***

ಗ್ರಾಮಗಳಿಗೆ ವರ ‘ಶಾಲಾ ಸೇತುಬಂಧ’ ಯೋಜನೆ

ಎಂ.ರಾಘವೇಂದ್ರ

ಸಾಗರ: ಕಾಡ ನಡುವಿನ ಗ್ರಾಮಗಳಲ್ಲಿ ಮಳೆ ನೀರು ರಭಸವಾಗಿ ಹರಿಯುತ್ತದೆ. ಬೇಸಿಗೆಯಲ್ಲಿ ಸಾಮಾನ್ಯ ಎನ್ನುವಂತೆ ಕಾಣುವ ಪ್ರದೇಶಗಳೂ ಕೂಡ ಹಳ್ಳ, ಕೊಳ್ಳಗಳಾಗಿ ಪರಿವರ್ತನೆಗೊಳ್ಳುತ್ತವೆ. ಹೀಗಾಗಿ, ವಿದ್ಯಾರ್ಥಿಗಳು ಮಳೆಗಾಲದಲ್ಲಿ ಕೆಲವೊಮ್ಮೆ ತಿಂಗಳ ಕಾಲ ಶಾಲೆಗೆ ಹೋಗುವುದೇ ಅಸಾಧ್ಯ ಎಂಬಂತಾಗುತ್ತದೆ. ಈ ಹಿಂದೆ ಹಳ್ಳ, ಕೊಳ್ಳಗಳಲ್ಲಿ ಹರಿಯುವ ನೀರಿನ ರಭಸದ ಅಂದಾಜು ಇಲ್ಲದೇ ಅದನ್ನು ದಾಟಲು ಹೋಗಿ ಗ್ರಾಮಸ್ಥರು ಅನಾಹುತ ಮಾಡಿಕೊಂಡಿದ್ದಾರೆ.

ಸರ್ಕಾರ ಜಾರಿಗಳಿಸಿದ ‘ಶಾಲಾ ಸೇತುಬಂಧು’ ಯೋಜನೆ ಅನ್ವಯ ಕಾಲುಸಂಕ ಅಗತ್ಯವಿರುವಲ್ಲಿ ಉದ್ಯೋಗಖಾತ್ರಿ ಯೋಜನೆ ಮೂಲಕ ಮೂರು ಅಡಿ ಅಗಲ 12 ಅಡಿ ಉದ್ದದ ಕಿರು ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಇದು ವಿದ್ಯಾರ್ಥಿಗಳ ಜೊತೆಗೆ ಕೃಷಿಕರಿಗೂ ಅನುಕೂಲ ಮಾಡಿಕೊಟ್ಟಿದೆ.

ಕಳೆದ ವರ್ಷ ಸಾಗರ ತಾಲ್ಲೂಕಿನಲ್ಲಿ ಇಂತಹ ಕಾಲುಸಂಕ- ಕಿರುಸೇತುವೆ ನಿರ್ಮಿಸಲು ಖಾತ್ರಿ ಯೋಜನೆಯಡಿ 22,500 ಮಾನವ ದಿನಗಳನ್ನು ವ್ಯಯಿಸಿ, ₹ 1.62 ಕೋಟಿ ಖರ್ಚು ಮಾಡಲಾಗಿದೆ. ಈವರೆಗೆ ತಾಲ್ಲೂಕಿನಲ್ಲಿ 69 ಕಿರು ಸೇತುವೆ ನಿರ್ಮಿಸಲಾಗಿದ್ದು, ಈ ವರ್ಷ 39 ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.

 ***

ಮೂಡುವಳ್ಳಿ: ಕಾಲುಸಂಕದಿಂದ ಮುಕ್ತಿ ಯಾವಾಗ?

ಸಂತೋಷ್ ಕುಮಾರ್‌ ಕಾರ್ಗಲ್‌

ಕಾರ್ಗಲ್: ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿಯ ವಾರ್ಡ್ ನಂ–11 ರ ಹೆನ್ನಿ, ಮೂಡವಳ್ಳಿ, ಹಂಜಕ್ಕಿ ಹಳ್ಳಕ್ಕೆ ಲಾಗಾಯ್ತಿನಿಂದಲೂ ಅಸ್ತಿತ್ವದಲ್ಲಿರುವ ಮರದ ಕಾಲುಸಂಕದಿಂದ ಮುಕ್ತಿ ಎಂದಿಗೆ ಎಂಬುದು ಗ್ರಾಮಸ್ಥರು ಅಳಲು.

ಮೂಡವಳ್ಳಿಯಲ್ಲಿ ಹರಿಯುವ ಹಂಜಕ್ಕಿ ಹಳ್ಳದ ನೀರು ಮಳೆಗಾಲದಲ್ಲಿ ತುಂಬಿ ಹರಿಯುತ್ತಿರುತ್ತದೆ. ಮರದ ಕಾಲು ಸಂಕದ ಮಟ್ಟದಲ್ಲಿ ಹರಿಯುವ ನೀರಿನ ಮೇಲೆ ಗ್ರಾಮಸ್ಥರ ಸಂಚಾರ. ಬದಲಿ ಮಾರ್ಗ ಬಯಸಿದರೆ 4 ಕಿ.ಮೀ. ಬಳಸಿಕೊಂಡು ಹೋಗಬೇಕಿದೆ. ಹೀಗಾಗಿ ಅಪಾಯಕಾರಿ ಆದರೂ ಕಾಲುಸಂಕ ದಾಟುವ ಸ್ಥಿತಿ ಇಲ್ಲಿದೆ. ಇರುವ ಕಾಲು ಸಂಕಕ್ಕೆ ಮೂರು ಮರಗಳನ್ನು ಅಡ್ಡಲಾಗಿ ಇರಿಸಲಾಗಿದೆ. ಸಂಕ ದಾಟುವಾಗ ಆಧಾರವಾಗಿ ಕೈಗೆ ಹಿಡಿಯಲು ಎಡ ಮತ್ತು ಬಲದಲ್ಲಿ ಯಾವುದೇ ಆಸರೆಗಳಿಲ್ಲ.

ಪ್ರತಿ ವರ್ಷ ಮಳೆಗಾಲ ಬಂದಾಗ ಅಧಿಕಾರಿಗಳು, ಜನಪ್ರತಿನಿಧಿಗಳು ಬಂದು, ‘ಮಿನಿ ಸೇತುವೆ ಮಾಡಿಕೊಡುತ್ತೇವೆ’  ಎಂಬ ಆಶ್ವಾಸನೆ ನೀಡುತ್ತಾರೆ. ಅದನ್ನು ಕೇಳಿಕೇಳಿ ಸಾಕಾಗಿ ಹೋಗಿದೆ. ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ಧರಣಿ ಮಾಡುವುದೊಂದೇ ಬಾಕಿ ಇದೆ ಎಂದು ಮೂಡವಳ್ಳಿ ನಿವಾಸಿ ದೊಂಬೆಬೈಲು ದುರ್ಗಪ್ಪ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು