ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷಾತ್ ಸಮೀಕ್ಷೆ – ಶಿವಮೊಗ್ಗ : ಅತಿರಥರಿಲ್ಲದ ಕಣ ಹಿಂದುತ್ವ, ಅಭಿವೃದ್ಧಿಯೇ ಪಾರಮ್ಯ

ನೇಪಥ್ಯಕ್ಕೆ ಸರಿದ ಯಡಿಯೂರಪ್ಪ, ಈಶ್ವರಪ್ಪ, ಕಾಗೋಡು ತಿಮ್ಮಪ್ಪ
Published 5 ಮೇ 2023, 19:37 IST
Last Updated 5 ಮೇ 2023, 19:37 IST
ಅಕ್ಷರ ಗಾತ್ರ

ಶಿವಮೊಗ್ಗ: ಬಿಜೆಪಿಯ ಜೋಡೆತ್ತುಗಳಾದ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ನಾಲ್ಕು ದಶಕಗಳ ನಂತರ ಮೊದಲ ಬಾರಿಗೆ ಕಣದಲ್ಲಿ ಇಲ್ಲ. ಹೀಗಾಗಿ ಜಿಲ್ಲೆಯಲ್ಲಿ ಈ ಬಾರಿ ವ್ಯಕ್ತಿಗತ ವರ್ಚಸ್ಸು ಗೌಣ. ಪಕ್ಷ ರಾಜಕಾರಣ ಮತ್ತು ಹಿಂದುತ್ವದ ಕಾರ್ಯಸೂಚಿಯೇ ಪ್ರಧಾನ.

ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ, ಬಗರ್‌ಹುಕುಂ ಸಾಗುವಳಿದಾರರ ಸಂಕಷ್ಟ, ಅಡಿಕೆಗೆ ಹಳದಿ ರೋಗದ ಬಾಧೆ, ಚುನಾವಣೆ ಘೋಷಣೆ ಮುನ್ನ ಮುನ್ನೆಲೆಗೆ ಬರುತ್ತಿದ್ದವು. ಈಗ ಪಾಕಿಸ್ತಾನ, ಕಾಶ್ಮೀರ, ಪಿಎಫ್‌ಐ, ಬಜರಂಗದಳ ನಿಷೇಧದ ಹೇಳಿಕೆ, ಹರ್ಷನ ಕೊಲೆ, 40 ಪರ್ಸೆಂಟ್ ಕಮಿಷನ್ ವಿಚಾರಗಳೇ ಸದ್ದು ಮಾಡುತ್ತಿವೆ.

ಶಿವಮೊಗ್ಗ ನಗರ ಕ್ಷೇತ್ರವು ಶಾಸಕ ಕೆ.ಎಸ್‌.ಈಶ್ವರಪ್ಪ ರಾಜಕೀಯ ನಿವೃತ್ತಿ ಫಲವಾಗಿ ಕಳೆಗುಂದಿದೆ. ಪುತ್ರನಿಗೆ ಟಿಕೆಟ್ ಸಿಗದಿದ್ದರೂ ‘ಮಾನಸ ಪುತ್ರ’ ಎಸ್.ಎನ್.ಚನ್ನಬಸಪ್ಪಗೆ (ಚನ್ನಿ) ಅವಕಾಶ ಸಿಕ್ಕಿದೆ. ಟಿಕೆಟ್ ಕೈ ತಪ್ಪಿ ಮಂಕಾಗಿದ್ದ ಈಶ್ವರಪ್ಪಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಉತ್ತೇಜಿಸಿದ್ದಾರೆ. ಹೀಗಾಗಿ ‘ಬಿಜೆಪಿಯ ವಿಜಯ ರಥಕ್ಕೆ ನಾನೇ ಸಾರಥಿ’ ಎಂದು ಘೋಷಿಸಿ ಸಕ್ರಿಯರಾಗಿದ್ದಾರೆ.

‘ಈಶ್ವರಪ್ಪ ಶಸ್ತ್ರತ್ಯಾಗ ಮಾಡಿದ್ದಾರೆ. ಅವರಿಗೆ ಹತ್ತಿರವಾಗಿರುವ ಚನ್ನಿಯನ್ನು ಸದೆಬಡಿಯುವೆ’ ಎಂಬ ಉಮೇದಿಯೊಂದಿಗೆ ವಿಧಾನ ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಆಯನೂರು ಮಂಜುನಾಥ್ ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾರೆ. ಹೊಸ ಮುಖ ಎಚ್.ಸಿ.ಯೋಗೀಶ್ (ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ ಪುತ್ರ) ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿ. ಮೂವರೂ ಲಿಂಗಾಯತರು ಎಂಬುದು ವಿಶೇಷ.

ಇಲ್ಲಿ ಮುಸ್ಲಿಮರ ಮತಗಳು ಇಡಿಯಾಗಿ ಧಕ್ಕಿದರೆ ಕಾಂಗ್ರೆಸ್ ಇಲ್ಲವೇ ಜೆಡಿಎಸ್‌ ಅಭ್ಯರ್ಥಿಯ ಗೆಲುವು ನಿಶ್ಚಿತ. ಜಾತಿ ಗೌಣವಾಗಿಸಿ ಹಿಂದುತ್ವದ ನೆಲೆಯಲ್ಲಿ ಬಿಜೆಪಿ ಇಲ್ಲಿ ಮತಬ್ಯಾಂಕ್ ರೂಪಿಸಿಕೊಂಡಿದೆ. ಮುಸ್ಲಿಮರ ಮತಗಳು ಕಾಂಗ್ರೆಸ್–ಜೆಡಿಎಸ್‌ ನಡುವೆ ಹಂಚಿಕೆಯಾದರೆ ಬಿಜೆಪಿಯ ಗೆಲುವು ಸುಲಭ. ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಜೆಡಿಎಸ್ ಸೇರ್ಪಡೆ ಆಗಿರುವುದು ಆಯನೂರು ಉತ್ಸಾಹ ಹೆಚ್ಚಿಸಿದೆ. ಸಾದರ ಲಿಂಗಾಯತ ಒಳಪಂಗಡದ ಮತ ಕ್ರೋಢೀಕರಣದತ್ತ ಎಚ್.ಸಿ.ಯೋಗೀಶ್ ಮುಂದಾಗಿದ್ದಾರೆ. ಟಿಕೆಟ್ ವಂಚಿತರಲ್ಲಿ ಕೆಲವರ ‘ಒಳಪೆಟ್ಟು’ ಕಾಂಗ್ರೆಸ್‌ನ ವೇಗಕ್ಕೆ ತೊಡಕಾಗಿದೆ.

ಶಿವಮೊಗ್ಗ ಗ್ರಾಮೀಣ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಬಿಜೆಪಿಯಿಂದ ಶಾಸಕ ಕೆ.ಬಿ.ಅಶೋಕ ನಾಯ್ಕ, ಜೆಡಿಎಸ್‌ನಿಂದ ಶಾರದಾ ಪೂರ್ಯಾನಾಯ್ಕ, ಕಾಂಗ್ರೆಸ್‌ನಿಂದ ಡಾ.ಶ್ರೀನಿವಾಸ್‌ ಕರಿಯಣ್ಣ (ಮಾಜಿ ಶಾಸಕ ಕರಿಯಣ್ಣ ಪುತ್ರ) ಮರು ಸ್ಪರ್ಧೆ ಮಾಡಿದ್ದಾರೆ.

ಅಭಿವೃದ್ಧಿ ಕಾರ್ಯ, ನರೇಂದ್ರ ಮೋದಿ ವರ್ಚಸ್ಸು ಒರೆಗಿಟ್ಟು ಅಶೋಕ ನಾಯ್ಕ ಪ್ರಚಾರ ನಡೆಸಿದ್ದಾರೆ. ಆಯನೂರು ಮಂಜುನಾಥ್ ಪಕ್ಷಕ್ಕೆ ಬಂದಿರುವುದು ಶಾರದಾ ಪೂರ್ಯಾನಾಯ್ಕ ಉತ್ಸಾಹ ಇಮ್ಮಡಿಯಾಗಿಸಿದೆ. ಒಳಮೀಸಲಾತಿಯ ಕಾರಣಕ್ಕೆ ಬಿಜೆಪಿ ವಿರುದ್ಧ ಮುನಿಸಿಕೊಂಡಿರುವ ಲಂಬಾಣಿ ಹಾಗೂ ಭೋವಿ ಸಮುದಾಯದ ಮತ ಸೆಳೆಯಲು ಕಾಂಗ್ರೆಸ್ ಹಾಗೂ ಜೆಡಿಎಸ್ ಕಸರತ್ತು ನಡೆಸಿವೆ.

ಈಡಿಗ ಸಮುದಾಯ ಪ್ರಾಬಲ್ಯದ ಕ್ಷೇತ್ರ ಸಾಗರ. ಬ್ರಾಹ್ಮಣರು, ಲಿಂಗಾಯತರು ಗಣನೀಯವಾಗಿದ್ದಾರೆ. ಬೇಳೂರು ಗೋಪಾಲಕೃಷ್ಣ ಕಾಂಗ್ರೆಸ್‌ ಟಿಕೆಟ್ ಪಡೆದಾಗ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಉಳಿದ ಆಕಾಂಕ್ಷಿಗಳು ಬಂಡೇಳುತ್ತಾರೆ ಎಂದು ವಿರೋಧಿಗಳು ನಿರೀಕ್ಷಿಸಿದ್ದರು. ಮಗಳು ಮುನಿಸಿಕೊಂಡರೂ (ಡಾ.ರಾಜನಂದಿನಿ) ಸೋದರಳಿಯನನ್ನು (ಗೋಪಾಲಕೃಷ್ಣ) ಬಹಿರಂಗವಾಗಿ ತಬ್ಬಿಕೊಂಡ ಕಾಗೋಡು, ಬೆಂಬಲ ವ್ಯಕ್ತಪಡಿಸಿದರು. ಹೀಗಾಗಿ ಬಿಜೆಪಿಯಿಂದ ಮರು ಆಯ್ಕೆ ಬಯಸಿರುವ ಶಾಸಕ ಹರತಾಳು ಹಾಲಪ್ಪಗೆ ಕ್ಷೇತ್ರದಲ್ಲಿ ಸವಾಲು ಹೆಚ್ಚಿದೆ.

ಕ್ಷೇತ್ರದ ‘ಅಭಿವೃದ್ಧಿ’ಯನ್ನೇ ಮುಂದಿಟ್ಟುಕೊಂಡು ಹಾಲಪ್ಪ ಮತ ಕೇಳುತ್ತಿದ್ದಾರೆ. ಸಂಘಟನೆ ದೃಷ್ಟಿಯಿಂದಲೂ ಬಿಜೆಪಿ ಬಲವಾಗಿದೆ. ಬ್ರಾಹ್ಮಣರು, ಲಿಂಗಾಯತರಿಗೆ ವಿರುದ್ಧವಾಗಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಸಂಸ್ಥೆಯ (ಎಂಡಿಎಫ್) ವಿಚಾರದಲ್ಲಿ ಶಾಸಕ ಹಾಲಪ್ಪ ಹಸ್ತಕ್ಷೇಪ ಮಾಡಿದ್ದರು. ಸಿಗಂದೂರು ಕ್ಷೇತ್ರದ ವಿಚಾರದಲ್ಲೂ ಈಡಿಗ ಸಮುದಾಯದ ಪರ ಗಟ್ಟಿಯಾಗಿ ನಿಲ್ಲಲಿಲ್ಲ ಎಂಬ ಆರೋಪವನ್ನು ಕಾಂಗ್ರೆಸ್ ಮುನ್ನೆಲೆಗೆ ತಂದಿದೆ.

ಆಮ್ ಆದ್ಮಿ ಪಾರ್ಟಿ ಇಲ್ಲಿ ಹೆಚ್ಚು ಸದ್ದು ಮಾಡಿದೆ. ವಕೀಲ ಎಸ್.ದಿವಾಕರ್ ಸ್ಪರ್ಧಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ತೀ.ನಾ. ಶ್ರೀನಿವಾಸ್, ಜೆಡಿಎಸ್‌ನ ಸೈಯದ್‌ ಜಾಕೀರ್‌ ಬಿಜೆಪಿ, ಕಾಂಗ್ರೆಸ್‌ಗೆ ಬಿಸಿ ತು‍ಪ್ಪವಾಗಿದ್ದಾರೆ.

ಸೊರಬ ಕ್ಷೇತ್ರ ಮತ್ತೊಮ್ಮೆ ಸಹೋದರರ ಸವಾಲಿಗೆ ತೆರೆದುಕೊಂಡಿದೆ. ಮಧು ಬಂಗಾರಪ್ಪ ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಶಾಸಕ ಕುಮಾರ್ ಬಂಗಾರಪ್ಪ ಬಿಜೆಪಿ ಅಭ್ಯರ್ಥಿ. ಜೆಡಿಎಸ್‌ನಿಂದ ಬಾಸೂರು ಚಂದ್ರೇಗೌಡ ಸ್ಪರ್ಧಿಸಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ರಾಜು ತಲ್ಲೂರು, ಈಗ ಬಿಜೆಪಿಯಲ್ಲಿದ್ದಾರೆ. ಇದು ಕುಮಾರ್ ಬಲ ಹೆಚ್ಚಿಸಿದ್ದರೂ, ಬಿಜೆಪಿಯ ಭಿನ್ನರ ಬಣ ನಮೋ ವೇದಿಕೆ ಅವರಿಗೆ ಮಗ್ಗಲು ಮುಳ್ಳಾಗಿದೆ. 

ಕ್ಷೇತ್ರದಲ್ಲಿ ಆಗಿರುವ ಅಭಿವೃದ್ದಿ ಪಟ್ಟಿ ಹಿಡಿದು ಕುಮಾರ್ ಮತದಾರರ ಮನೆಬಾಗಿಲಿಗೆ ಹೋಗುತ್ತಿದ್ದಾರೆ. ಬಗರ್‌ಹುಕುಂ ಸಾಗುವಳಿದಾರರು, ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಮುಂದಿಟ್ಟುಕೊಂಡು ಮಧು ಪಾದಯಾತ್ರೆ ಮಾಡಿದ್ದಾರೆ. ಇಲ್ಲಿ ಈಡಿಗ ಸಮುದಾಯದ ಪ್ರಾಬಲ್ಯವಿದ್ದು, ಮಧು  ಹಾಗೂ ಕುಮಾರ್‌ ನಡುವೆ ನೇರ ಹಣಾಹಣಿ ಇದೆ.

ತೀರ್ಥಹಳ್ಳಿಯಲ್ಲಿ ಬಿಜೆಪಿಯಿಂದ ಗೃಹ ಸಚಿವ ಆರಗ ಜ್ಞಾನೇಂದ್ರ, ಕಾಂಗ್ರೆಸ್‌ನಿಂದ ಮಾಜಿ ಸಚಿವ ಕಿಮ್ಮನೆ ರತ್ನಾಕರ ಕಣದಲ್ಲಿದ್ದಾರೆ. ಇದು  ಕೊನೆಯ ಚುನಾವಣೆ ಎಂದು ಮತದಾರರನ್ನು ಇಬ್ಬರೂ ಭಾವನಾತ್ಮಕವಾಗಿ ಸೆಳೆಯುತ್ತಿದ್ದಾರೆ. ಕಳೆದ ಬಾರಿ ಜೆಡಿಎಸ್‌ನಲ್ಲಿದ್ದ ಆರ್‌.ಎಂ. ಮಂಜುನಾಥಗೌಡ ಈ ಬಾರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂಧಾನದ ಫಲವಾಗಿ ಮಂಜುನಾಥಗೌಡ ಕಿಮ್ಮನೆ ಪರ ಚುನಾವಣೆ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಒಕ್ಕಲಿಗ ಸಮುದಾಯದ ಪ್ರಾಬಲ್ಯದ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಕೃಷಿಕ ರಾಜಾರಾಮ್ ಸ್ಪರ್ಧಿಸಿದ್ದಾರೆ.

ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ನಿರ್ಧಾರವೇ ಭದ್ರಾವತಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಚುನಾವಣೆಯ ಅಸ್ತ್ರ. ಕಾಂಗ್ರೆಸ್‌ನಿಂದ ಶಾಸಕ ಬಿ.ಕೆ. ಸಂಗಮೇಶ, ಜೆಡಿಎಸ್‌ನಿಂದ ಶಾರದಾ ಅಪ್ಪಾಜಿಗೌಡ, ಬಿಜೆಪಿಯಿಂದ ಹೊಸ ಮುಖ ಮಂಗೋಟಿ ರುದ್ರೇಶ್ ಕಣದಲ್ಲಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಲಿಂಗಾಯತರು.

ಜೆಡಿಎಸ್ ಈ ಬಾರಿ ಅಪ್ಪಾಜಿಗೌಡ ಇಲ್ಲದೇ ಚುನಾವಣೆ ಎದುರಿಸುತ್ತಿದೆ. ಅವರ ಪತ್ನಿ ಶಾರದಾ ಇಲ್ಲಿ ಅಭ್ಯರ್ಥಿ. ಪತಿಯ ಸಾವಿನ ಅನುಕಂಪ ಹಾಗೂ ಕ್ಷೇತ್ರದಲ್ಲಿನ ಆಡಳಿತ ವಿರೋಧಿ ಅಲೆ ಅವರ ಬೆನ್ನಿಗಿದೆ. ಎದುರಾಳಿ ಅಪ್ಪಾಜಿಗೌಡ ಅಲ್ಲ ಎಂಬುದೇ ಗೆಲುವಿಗೆ ಹಾದಿ ಎಂಬುದು ಕಾಂಗ್ರೆಸ್‌ ಲೆಕ್ಕಾಚಾರ. ಕ್ಷೇತ್ರದ ಮತದಾರರು ಇಲ್ಲಿ ಬಿಜೆಪಿಗೆ ಮೊದಲಿನಿಂದಲೂ ಮಣೆ ಹಾಕಿಲ್ಲ. ಕ್ಷೇತ್ರದಲ್ಲಿ ಒಕ್ಕಲಿಗರು, ಲಿಂಗಾಯತರು ಗಣನೀಯವಾಗಿದ್ದು, ತಮಿಳರು, ಮುಸ್ಲಿಮರ ಮತಗಳು ನಿರ್ಣಾಯಕ.

ವಿಜಯೇಂದ್ರ ಹಾದಿಗೆ ‘ಅನುಕಂಪ’ದ ತೊಡಕು..

ಶಿಕಾರಿ‍ಪುರದಲ್ಲಿ ಬಿ.ವೈ.ವಿಜಯೇಂದ್ರ ಬಿಜೆಪಿ ಅಭ್ಯರ್ಥಿ. ಕಳೆದ ಬಾರಿ ಯಡಿಯೂರಪ್ಪ ವಿರುದ್ಧ ಸೋಲು ಕಂಡಿದ್ದ ಗೋಣಿ ಮಾಲತೇಶ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಟಿಕೆಟ್ ಸಿಗದೇ ನಾಗರಾಜಗೌಡ ಸ್ವತಂತ್ರವಾಗಿ ಕಣಕ್ಕಳಿದಿದ್ದಾರೆ. ವಿಜಯೇಂದ್ರ ಹಾಗೂ ನಾಗರಾಜಗೌಡ ಲಿಂಗಾಯತರು. ಗೋಣಿ ಮಾಲತೇಶ್ ಕುರುಬರು. ಯಡಿಯೂರಪ್ಪ ಕುಟುಂಬದ ರಾಜಕೀಯ ವಿರೋಧಿ ವಿಧಾನಪರಿಷತ್ ಮಾಜಿ ಸದಸ್ಯ ಶಾಂತವೀರಪ್ಪ ಗೌಡ ಸಹೋದರನ ಮಗ ನಾಗರಾಜಗೌಡ. ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾದರ ಲಿಂಗಾಯತ ಸಮುದಾಯ ಇದ್ದರೂ ಕಾಂಗ್ರೆಸ್–ಬಿಜೆಪಿ ಒಳಒಪ್ಪಂದದ ಕಾರಣ ನಾಗರಾಜಗೌಡಗೆ ಟಿಕೆಟ್ ಕೈತಪ್ಪಿದೆ ಎಂಬ ವದಂತಿ ಹರಡಿ ಅದು ‘ಅನುಕಂಪ’ವಾಗಿ ಮಾರ್ಪಟ್ಟಿದೆ. ಹೀಗಾಗಿ ವಿಜಯೇಂದ್ರ ಗೆಲುವಿಗೆ ಹೆಚ್ಚಿನ ಬೆವರು ಹರಿಸುವಂತಾಗಿದೆ. ಕ್ಷೇತ್ರ ಬಿಟ್ಟು ಬೇರೆ ಕಡೆ ಪ್ರಚಾರಕ್ಕೆ ಹೋಗದಂತಾಗಿದೆ. ಶಿಕಾರಿಪುರ ಕ್ಷೇತ್ರದಲ್ಲಿ ಬಂಜಾರ ಬೋವಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಒಳಮೀಸಲಾತಿ ವಿರುದ್ಧದ ಕಿಚ್ಚು ಬೂದಿ ಮುಚ್ಚಿದ ಕೆಂಡವಾಗಿದೆ. 

ನಾಗರಾಜಗೌಡ
ನಾಗರಾಜಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT