ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಂಡೋಬರಾವ್ ಅಭಿನಂದನಾ ಸಮಾರಂಭದಲ್ಲಿ ಅಮೂಲ್ಯ ಸಿರಿ ಗ್ರಂಥ ಬಿಡುಗಡೆ

Last Updated 19 ಅಕ್ಟೋಬರ್ 2021, 10:00 IST
ಅಕ್ಷರ ಗಾತ್ರ

ಶಿವಮೊಗ್ಗ: ಮ್ಯೂಸಿಯಂ ‘ಅಮೂಲ್ಯ ಶೋಧ’ ಇತಿಹಾಸ ತಜ್ಞ ಖಂಡೋಬರಾವ್ ಅವರ ಇತಿಹಾಸದ ಪ್ರೇಮದ ಸಂಕೇತ ಎಂದು ವಿಧಾನ ಪರಿಷತ್ ಸದಸ್ಯ ಎಸ್‌.ರುದ್ರೇಗೌಡ ಬಣ್ಣಿಸಿದರು.

ಕುವೆಂಪು ರಂಗಮಂದಿರದಲ್ಲಿ ಮಂಗಳವಾರ ಖಂಡೋಬರಾವ್ ಅಭಿನಂದನಾ ಸಮಿತಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಹಾಗೂ ಅಮೂಲ್ಯ ಸಿರಿ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಖಂಡೋಬರಾವ್ ಅವರದು ದೊಡ್ಡ ವ್ಯಕ್ತಿತ್ವ. ಸಂಸ್ಕೃತಿ ಸಂತ. ಅವರ ಸಾಧನೆಯೂ ಉನ್ನತವಾಗಿದೆ. ಅವರ ಕನಸಿನ ಕೂಸು ಅಮೂಲ್ಯ ಶೋಧದ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವರು ಸಂಗ್ರಹಿಸಿದ ನಾಣ್ಯಗಳು, ಪುಸ್ತಕಗಳು, ಹಳೆಯ ಕಾಲದ ಪರಿಕರಗಳು, ಎಲೆಕ್ಟ್ರಿಕ್ ವಸ್ತುಗಳು, ಆಟಿಕೆಗಳು, ಅಡುಗೆ ಮನೆ ಸಾಮಗ್ರಿಗಳು ಇತಿಹಾಸದ ಪುಟಗಳನ್ನು ತೆರೆದಿಡುತ್ತವೆ. ಅವರ ಅಮೂಲ್ಯಶೋಧದ ನಿರ್ವಹಣೆಯತ್ತ ಹೆಚ್ಚಿನ ಗಮನಹರಿಸಬೇಕಿದೆ ಎಂದರು.

ಪ್ರಾಸ್ತಾವಿಕ ಮಾತನಾಡಿದ ನಿವೃತ್ತ ಪ್ರಾಧ್ಯಾಪಕಿ ಪ್ರೊ.ಕಿರಣ್ ಆರ್.ದೇಸಾಯಿ, ಖಂಡೋಬರಾವ್ ಕೇವಲ ಇತಿಹಾಸ ತಜ್ಞರಲ್ಲ, ನಾಣ್ಯ ಸಂಗ್ರಹಕಾರರಲ್ಲ, ಕವಿಗಳಲ್ಲ. ಎಲ್ಲಕಿಂತ ಮಿಗಿಲಾಗಿ ಮಾನವೀಯ‌ ಮನಸ್ಸುಳ್ಳ ಮನುಷ್ಯ. ಪತ್ನಿಯನ್ನು ಬಹಳವಾಗಿ ಪ್ರೀತಿಸುತ್ತಿದ್ದರು. ಅವರ ನೆನಪಿಗಾಗಿ ಅಮೂಲ್ಯವಾದ ಸಿರಿ ಲಕ್ಕಿನಕೊಪ್ಪದಲ್ಲಿ ಅರಳಿ ನಿಂತಿದೆ. ಅವರ ಗಾಢ ಸಂಬಂಧವೇ ಒಂದು ದೊಡ್ಡ ಅಮೂಲ್ಯ ಶೋಧ. ಬದುಕಿನ ಯಶೋಗಾಥೆ ಎಂದು ಬಣ್ಣಿಸಿದರು.

ಬಾರ್ಕೂರು ಮಹಾಸಂಸ್ಥಾನದ ಡಾ.ವಿಶ್ವ ಸಂತೋಷ ಭಾರತಿ ಸ್ವಾಮೀಜಿ, ಇವತ್ತು ಇತಿಹಾಸ ಪುಟ ಸೇರುವ ದಿನ. ಫಸಲು ಬರುವ ತೋಟವನ್ನೇ ತೆಗೆದು ಮ್ಯೂಸಿಯಂ ಮಾಡಿದ್ದಾರೆ. ದೇಶ, ರಾಜ್ಯದ ಆಸ್ತಿ ಮಾಡಿದ್ದಾರೆ. ಮುಂದಿನ ಪೀಳಿಗೆಗೆ ಇತಿಹಾಸದ ಅರಿವು ಮೂಡಿಸುವ ಉದಾರತೆ ತೋರಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದ್ವೇಷಧ ಬದಲು ಸಾಧನೆ ಮಾಡಬೇಕು: ಖಂಡೋಬರಾವ್

ಆಸೆ, ದ್ವೇಷ ಬಿಟ್ಟರೆ ಉನ್ನತ ಸಾಧನೆ ಸಾಧ್ಯ. ಆಸೆ ಬದಲು ಜ್ಞಾನ, ದ್ವೇಷದ ಬದಲು ಸಾಧನೆ ಮಾಡಬೇಕುಸನ್ಮಾನ ಸ್ವೀಕರಿಸಿ ಮಾತನಾಡಿದ ಎಚ್. ಖಂಡೋಬರಾವ್ ಕಿವಿಮಾತು ಹೇಳಿದರು.

‘ನನ್ನ ಬಗ್ಗೆ ಅಭಿಮಾನಿಗಳು, ಗೆಳೆಯರು, ತುಂಬು ಹೃದಯದ ಮಾತನಾಡಿದ್ದಾರೆ. ನನಗೊಂದು ಉನ್ನತ ಸ್ಥಾನ ಕೊಟ್ಟಿದ್ದಾರೆ. ಅಭಿನಂದನಾ ಸ್ಥಾನ ಕೊಟ್ಟಿದ್ದಾರೆ. ನಮ್ಮ ಪರಿವಾರ, ಪತ್ನಿ ಸಂಬಂಧಿಗಳು ವಿಶೇಷವಾಗಿ ಅಭಿನಂದಿಸಿದ್ದಾರೆ. ಎಲ್ಲರ ಪ್ರೀತಿಗೆ ಸದಾ ಋಣಿ’ ಎಂದರು.

‘ಆದರ್ಶದ ಬದುಕು ನಮ್ಮದಾಗಬೇಕು. ಮನುಷ್ಯ ಒಳ್ಳೆಯ ಗುಣ, ನಿರಂತರ ಚಟುವಟಿಕೆ ರೂಢಿಸಿಕೊಂಡರೆ ಉತ್ತಮ ಜೀವನ ಮತ್ತು ಸಂಸ್ಕಾರ ಪಡೆಯಬಹುದು. ಸಾಧನೆಗೆ ಗೆಳೆಯರ ಜತೆಗೆ ಪತ್ನಿ ಬೆನ್ನೆಲುಬಾಗಿದ್ದರು. ಬಯಲು ಸೀಮೆಯ ಹುಡುಗ ನಾನು ಮಲೆನಾಡ ಹುಡುಗಿ ನನ್ನ ಪತ್ನಿ. ನಾನು ಪತ್ನಿಯನ್ನು ತುಂಬಾ ಪ್ರೀತಿಸುತ್ತಿದ್ದೆ. ಅವರು ಮೃತರಾದ ನಂತರ ಅವರಿಗಾಗಿಯೇ ಈ ಅಮೂಲ್ಯ ಶೋಧ ನಿರ್ಮಿಸಿದೆ’ ಎಂದು ಭಾವುಕರಾದರು.

‘ಮನುಷ್ಯನ ಬದುಕು ತುಂಬಾ ಕ್ಷಣಿಕ. ಬದುಕಿನಲ್ಲಿ ಹಲವು ತಪ್ಪು, ಒಪ್ಪುಗಳನ್ನು ಮಾಡುತ್ತೇವೆ. ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಸಂಕಲ್ಪ ಮಾಡಿಕೊಳ್ಳಬೇಕು. ಕಣ್ಣು, ದೇಹ ದಾನ ಮಾಡಬೇಕು. ಸತ್ತ ಮೇಲೆ ಎಲ್ಲೋ ಬೂದಿಯಾಗುವ, ಮಣ್ಣಿನಲ್ಲಿ ಕೊಳೆತು ಹೋಗುವ ಈ ಮನುಷ್ಯ ಆಗಲಾದರೂ ಪ್ರಯೋಜನಕ್ಕೆ ಬರಲಿ.ನನ್ನ ಪತ್ನಿ ಸಾಯುವ ಮೊದಲು ಎರಡೂ ಕಣ್ಣು ದಾನ ಮಾಡಿದ್ದೆವು. ಈಗ ನನ್ನ ದೇಹ ದಾನಕ್ಕೆ ಸಹಿ ಮಾಡಿರುವೆ’ ಎಂದು ವಿವರ ನೀಡಿದರು.

ಅಭಿನಂದನಾ ಗ್ರಂಥ ಕುರಿತು ಸಮಿತಿ ಸಂಚಾಲಕ ಎಂ.ಸಕಲೇಶ್ ಮಾತನಾಡಿದರು. ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಕುವೆಂಪು ವಿಶ್ವವಇದ್ಯಾಲಯದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ, ಅಭಿನಂದನಾ ಸಮಿತಿ ಕಾರ್ಯಾಧ್ಯಕ್ಷ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಬಾಗಲಕೋಟೆಯ ಉದ್ಯಮಿ ಮಾರುತಿ ರಾವ್ ಶಿಂಧೆ, ಸಮಾಜಿಕ ಕಾರ್ಯಕರ್ತಎಸ್.ಬಿ.ಅಶೋಕ್ ಕುಮಾರ್,ರಮೇಶ್ ಬಾಬು ಜಾಧವ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT