ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸನಗರ: ಅಂದು ಬರಿಗೈಲಿ ಬಂದವರು ಇಂದು 25 ಎಕರೆ ತೋಟದ ಒಡೆಯ!

ಅಡಿಕೆ ಕೃಷಿಯಲ್ಲಿ ಮೇಲ್ಪಂಕ್ತಿ ಸಾಧಿಸಿದ ಮಲ್ಲಯ್ಯಗೌಡ
Last Updated 28 ಜುಲೈ 2021, 6:48 IST
ಅಕ್ಷರ ಗಾತ್ರ

ಹೊಸನಗರ: ದೊಡ್ಡಗೌಡರ ಮನೆಯಲ್ಲಿ ಅಡುಗೆ ಮಾಡಿಕೊಂಡಿದ್ದ ಹುಡುಗ ಇಂದು ಸುಮಾರು 25 ಎಕರೆ ಅಡಿಕೆ ತೋಟದ ಒಡೆಯ. ಮದುವೆ ಮಾಡಿಕೊಟ್ಟ ಅಕ್ಕನ ಜತೆಯಲ್ಲಿ ಬಂದ ಹುಡುಗ ಅವರಿವರ ಮನೆಯಲ್ಲಿ ಚಾಕರಿ ಮಾಡಿಕೊಂಡು ಸ್ವಂತ ಬಲದಿಂದ ಜಮೀನು ಖರೀದಿಸಿ ಅಡಿಕೆ ತೋಟ ಮಾಡಿ ಸೈ ಎನಿಸಿಕೊಂಡಿದ್ದಾರೆ. ತಾಲ್ಲೂಕಿನ ಗೊರಗೋಡು ಮಲ್ಲಯ್ಯಗೌಡ ಅವರ ಯಶೋಗಾಥೆ ಇದು.

ಚಾಮರಾಜನಗರ ಜಿಲ್ಲೆ ಚನ್ನಪ್ಪನಪುರ ಗ್ರಾಮದ ಮಲ್ಲಯ್ಯಗೌಡ ತಮ್ಮ ಅಕ್ಕನ ಜತೆ ಎಳೆಯ ವಯಸ್ಸಿನಲ್ಲಿಯೇ ಬಂದರು. ಮನೆಯಲ್ಲಿ ಬಡತನ ಇದ್ದುದರಿಂದ ಅಕ್ಕನ ಮನೆಯೇ ಆಸರೆಯಾಯಿತು. ಅವರಿವರ ಮನೆಯಲ್ಲಿ ಚಾಕರಿ ಮಾಡಿಕೊಂಡಿದ್ದ ಅವರಿಗೆ ಊರಿನ ದೊಡ್ಡಗೌಡರ ಮನೆಯಲ್ಲಿ ಅಡುಗೆ ಮತ್ತಿತರ ಕೆಲಸ ಕಾಯಂ ಆಯಿತು. ಗೌಡರ ಮನೆ ಪಕ್ಕದ ಗುಡಿಸಲಿನಲ್ಲಿ ತಾಯಿಯೊಂದಿಗೆ ವಾಸವಾಗಿದ್ದ ಗೌಡರಿಗೆ ಅಲ್ಲೇ ಮದುವೆ ಆಯಿತು.

‘ಸ್ವಂತ ಕಾಲಿನ ಮೇಲೆ ನಿಲ್ಲಬೇಕು. ಜಮೀನು, ಮನೆ ಮಾಡಬೇಕು’ ಎಂದು ಕನಸು ಕಂಡಿದ್ದ ಮಲ್ಲಯ್ಯಗೌಡರು ಕೈಸಾಲ ಪಡೆದು ಗೊರದಳ್ಳಿ ಬಳಿ 6 ಸಾವಿರಕ್ಕೆ 3 ಎಕರೆ ಜಮೀನು ಕೊಂಡರು. ನಂತರ ಅದನ್ನು ಮಾರಿ ಗೊರಗೋಡು ಬಳಿ 18 ಸಾವಿರಕ್ಕೆ 9 ಎಕರೆ ಜಮೀನು ಖರೀದಿಸಿ ಹಗಲಿರುಳು ದುಡಿದರು. ಗುಡ್ಡ ಕಡಿದು ತೋಟ ಮಾಡಿದರು.

ಇದ್ದ ಜಮೀನಿನಲ್ಲಿ ಶುಂಠಿ, ಭತ್ತ, ಮೆಣಸು, ತೆಂಗು, ಅಡಿಕೆ ಬೆಳೆದು ಹಂತ ಹಂತವಾಗಿ ಯಶ ಸಾಧಿಸಿದರು. ಈಗ ಸುಮಾರು 25 ಎಕರೆ ಅಡಿಕೆ ತೋಟ ನಿರ್ಮಿಸಿ ನೆಮ್ಮದಿಯ ಬಾಳು ಕಂಡಿದ್ದಾರೆ. ಜೀವನಸ್ಫೂರ್ತಿ, ಆಸಕ್ತಿ, ಶ್ರದ್ಧೆ ಇದ್ದಲ್ಲಿ ಕೃಷಿಯಲ್ಲಿ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಗೌಡರು ಸಾಕ್ಷಿಯಾಗಿದ್ದಾರೆ.

ಕೈಹಿಡಿದ ಶುಂಠಿ: 40 ವರ್ಷದಿಂದ ಶುಂಠಿ ಬೆಳೆಯುತ್ತಿರುವ ಮಲ್ಲಯ್ಯಗೌಡರಿಗೆ ಶುಂಠಿ ಬೆಳೆ ಕೈ ಹಿಡಿದಿದೆ. ಎಕರೆಗಟ್ಟಲೆ ಶುಂಠಿ ಹಾಕಿ ಲೋಡ್‌ಗಟ್ಟಲೆ ಬೆಳೆದು ದಿಢೀರ್ ಮನೆ ಮಾತಾದರು. ಒಂದು ಕ್ವಿಂಟಲ್ ಬೀಜದಲ್ಲಿ 20 ಕ್ವಿಂಟಲ್‌ವರೆಗೂ ಬೆಳೆದು ತೋರಿಸಿದರು. ಆ ಕಾಲದಲ್ಲೇ ಗೌಡರು 100 ಕ್ವಿಂಟಲ್‌ಗೂ ಹೆಚ್ಚು ಶುಂಠಿ ಬೆಳೆಯುತ್ತಿದ್ದರು.

ಕ್ರಮೇಣ ಬ್ಯಾಣದಲ್ಲಿ ಅಡಿಕೆ ಕೃಷಿ ಮಾಡಿ ಅದರಲ್ಲೂ ಸೈ ಎನಿಸಿಕೊಂಡರು. ನೀರಿನ ತೇವಾಂಶದ ಪ್ರದೇಶದಲ್ಲಿ ಮಾತ್ರ ಅಡಿಕೆ ಸೂಕ್ತ ಎಂದು ನಂಬುತ್ತಿದ್ದ ಕಾಲದಲ್ಲಿ ಗೌಡರು ಹಕ್ಕಲಿನಲ್ಲಿ ಅಡಿಕೆ ಸಸಿ ನೆಟ್ಟು ಬೆಳೆಸಿದರು. ಸರಾಸರಿ ಇಳುವರಿ ಪಡೆದರು. ಭತ್ತ, ಶುಂಠಿ, ಮೆಣಸು, ಅಡಿಕೆ ಎಲ್ಲ ತೆರನಾದ ಬೆಳೆ ಬೆಳೆದು ಯಶಸ್ವಿ ರೈತ ಎನಿಸಿಕೊಂಡರು.

82ರ ಇಳಿ ವಯಸ್ಸಿನಲ್ಲೂ ದಿನಕ್ಕೆ ಹತ್ತಾರು ಬಾರಿ ತೋಟ, ಮನೆ ಎಂದು ಸುತ್ತಾಡುವ ಗೌಡರು ಆರೋಗ್ಯಯುತ ಜೀವನ ನಡೆಸುತ್ತಿದ್ದು, ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.

‘ರೈತರಿಗೆ ಕೃಷಿಯಲ್ಲಿ ಆಸಕ್ತಿ ಇರಬೇಕು. ಕಾಟಾಚಾರಕ್ಕೆ ಕೃಷಿ ಮಾಡಿದರೆ ಏನೂ ಫಲವಿಲ್ಲ. ದಿನದ ಹೆಚ್ಚು ಸಮಯ ಕೃಷಿಗೆ ಮೀಸಲಿಟ್ಟರೆ ಮಾತ್ರ ಹೆಚ್ಚಿನ ಫಸಲು ಬೆಳೆಯಲು ಸಾಧ್ಯ’ ಎನ್ನುತ್ತಾರೆ ಮಲ್ಲಯ್ಯಗೌಡ.

ಮಂಗಗಳೂ ಬೇಕು

‘ನಿಮ್ಮಲ್ಲಿ ಮಂಗಗಳ ಕಾಟ ಇಲ್ಲವೇ’ ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸುವ ಗೌಡರು, ‘ಮಂಗಗಳನ್ನು ರೈತರೇ ಸಾಕಬೇಕು. ನಮ್ಮ ಸುತ್ತ ಪ್ರಾಣಿ, ಪಕ್ಷಿ ಸಂಕುಲ ಇರಬೇಕು. ಅವುಗಳಿಂದ ಅಪಾಯವಿಲ್ಲ. ರೈತರು ತಮ್ಮ ತೋಟದಲ್ಲಿ ಹಣ್ಣಿನ ಮರ ನೆಟ್ಟು ಅವುಗಳಿಗೆ ಆಹಾರ ಒದಗಿಸಿದರೆ ಅವು ಫಸಲಿಗೆ ಲಗ್ಗೆ ಇಡುವುದಿಲ್ಲ. ನಾನು ಸುತ್ತಲೂ ಹಣ್ಣಿನ ಮರ ನೆಟ್ಟಿದ್ದೇನೆ. ಹಾಗಾಗಿ ನಮಗೆ ಮಂಗಗಳ ಉಪಟಳ ಅಷ್ಟಿಲ್ಲ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT